ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಹಾನಿ ಸಮೀಕ್ಷೆಗೆ ವಾರದ ಗಡುವು

ಪ್ರಕೃತಿ ವಿಕೋಪ: ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಸಭೆ
Last Updated 10 ಆಗಸ್ಟ್ 2022, 14:55 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲೆಯಲ್ಲಿ ಮಳೆ ಮತ್ತು ಪ್ರವಾಹದಿಂದ ಆಗಿರುವ ಬೆಳೆ, ಮನೆ, ಶಾಲಾ ಕಟ್ಟಡಗಳಿಗೆ ಹಾನಿ ಬಗ್ಗೆ ಕಂದಾಯ, ಕೃಷಿ, ತೋಟಗಾರಿಕೆ, ಶಿಕ್ಷಣ ಇಲಾಖೆಗಳ ಅಧಿಕಾರಿಗಳು ವಾರದೊಳಗೆ ಜಂಟಿ ಸಮೀಕ್ಷೆ ನಡೆಸಿ ಸಮಗ್ರ ವರದಿ ಸಲ್ಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯ್ತಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲೆಯ ಜನ ಪ್ರತಿನಿಧಿಗಳು ಮತ್ತುಅಧಿಕಾರಿಗಳೊಂದಿಗೆ ನಡೆದ ಅತಿವೃಷ್ಟಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು.

ಮಳೆಯಿಂದಾಗಿ ಬೆಳೆ ಹಾನಿ ಅನುಭವಿಸಿದ ರೈತರಿಗೆ ಅನ್ಯಾಯವಾಗಬಾರದು. ಸೂಕ್ತ ಪರಿಹಾರಕ್ಕೆ ಕ್ರಮ ವಹಿಸಬೇಕು ಎಂದರು.

ಜಿಲ್ಲೆಯಲ್ಲಿ ಸಮೃದ್ಧ ಮಳೆಯಾಗಿದೆ. ಬಿತ್ತನೆ ಮಾಡುವ ರೈತರಿಗೆ ಬೀಜದ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಕೊರತೆ ಇರುವ ಬೀಜಗಳ ದಾಸ್ತಾನಿಗೆ ಗಮನ ಹರಿಸಬೇಕು. ರೈತರ ಬೇಡಿಕೆಯಂತೆ ಕಡಲೆ ಮತ್ತು ತೊಗರಿ ಬೀಜಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಒದಗಿಸಬೇಕು
ಎಂದು ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ವಿಜಯಪುರ ತಾಲ್ಲೂಕಿನಲ್ಲಿ 99 ಮನೆಗಳಿಗೆ ಹಾನಿಯಾಗಿತ್ತು. ಈ ಪೈಕಿ ಈಗಾಗಲೇ 78 ಮನೆಗಳಿಗೆ ಪರಿಹಾರ ಕಲ್ಪಿಸಲಾಗಿದೆ. 17 ಮನೆಗಳಿಗೆ ಪರಿಹಾರ ಕೊಡುವುದು ಬಾಕಿ ಇದೆ ಎಂದು ಜಿಲ್ಲಾಧಿಕಾರಿ ವಿಜಯಮಹಾಂತೇಶ ಸಭೆಗೆ ತಿಳಿಸಿದರು.

ಯಾವುದೇ ಮನೆಗಳು ಬಿಟ್ಟು ಹೋಗದಂತೆ ಸರ್ವೆ ಮಾಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಜಿಲ್ಲಾ ಪಂಚಾಯ್ತಿ ಸಿಇಓ ರಾಹುಲ್‌ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಎಚ್.ಡಿ.ಆನಂದಕುಮಾರ, ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕಳಸದ ಇದ್ದರು.

****

ಸಿಡಿಲು ಬಡಿದು ಸಾವು: ಪರಿಹಾರ ವಿತರಣೆ

ವಿಜಯಪುರ: ಆಗಸ್ಟ್ 3ರಂದು ಸಿಡಿಲು ಬಡಿದು ಮೃತಪಟ್ಟ ತಾಳಿಕೋಟೆ ತಾಲ್ಲೂಕಿನ ಹುಣಸ್ಯಾಳ ಗ್ರಾಮದ ಜೈನಾಬಿ ನಜೀರ್ ಅಹ್ಮದ್ ಸಿಪಾಯಿ ಅವರ ಕುಟುಂಬದವರಿಗೆ ₹ 5 ಲಕ್ಷ ಪರಿಹಾರ ಮೊತ್ತವನ್ನು ಸಚಿವ ಉಮೇಶ ಕತ್ತಿ ನೀಡಿದರು.

ಘಟನೆಯಲ್ಲಿ ಸಾವಿಗೀಡಾಗಿದ ಎಮ್ಮೆಗೆ ₹ 30 ಸಾವಿರ ಪರಿಹಾರ ಧನವನ್ನು ಮಾಲೀಕರಿಗೆ ವಿತರಿಸಲಾಯಿತು.

ಮುಳುಗಡೆ ಗ್ರಾಮಕ್ಕೆ ಭೇಟಿ: ಡೋಣಿ ನದಿ ನೀರಿನಿಂದ ಮುಳುಗಡೆಯಾಗುವ ತಾಳಿಕೋಟೆ ತಾಲ್ಲೂಕಿನ ಬೋಳುವಾಡ ಗ್ರಾಮಕ್ಕೆ ತೆರಳಿದ ಸಚಿವರು, ಅಲ್ಲಿನ ಸ್ಥಿತಿಗತಿ ಪರಿಶೀಲಿಸಿದರು. ಅಲ್ಲಿನ ಸರ್ಕಾರಿ ಶಾಲೆಯ ದುಸ್ಥಿತಿಯ ಬಗ್ಗೆ ಮುಖ್ಯ ಶಿಕ್ಷಕ ಎಸ್. ಎಂ. ಕುಪ್ಪಸ್ತ, ಶಿಕ್ಷಕಿ ಎಸ್. ಬಿ. ಪಾಟೀಲ ಅವರಿಂದ ಮಾಹಿತಿ ಪಡೆದರು.

***

ಅತಿವೃಷ್ಟಿ: ಪರಿಹಾರ ವಿತರಣೆ

ವಿಜಯಪುರ: ಜಿಲ್ಲೆಯಲ್ಲಿ ಈವರೆಗೆ 267 ಮನೆಗಳಿಗೆ ಎಸ್‌ಡಿಆರ್‌ಎಫ್ ಮಾರ್ಗಸೂಚಿಯನುಸಾರ ₹ 16.14 ಲಕ್ಷ ಪರಿಹಾರ ವಿತರಿಸಲಾಗಿದೆ. ಮಾನವ ಜೀವಹಾನಿ ಪ್ರಕರಣಗಳಿಗೆ ₹ 10 ಲಕ್ಷ ಪರಿಹಾರ ಧನ ನೀಡಲಾಗಿದೆ ಎಂದು ಸಚಿವ ಉಮೇಶ ಕತ್ತಿ ತಿಳಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂನ್ 1ರಿಂದ ಆಗಸ್ಟ್ 9ರವರೆಗೆ 16 ಜಾನುವಾರು ಮೃತಪಟ್ಟಿದ್ದು, ಸಣ್ಣ ಜಾನುವಾರುಗಳಿಗೆ ₹3 ಸಾವಿರ ಮತ್ತು ದೊಡ್ಡ ಜಾನುವಾರುಗಳಿಗೆ ₹ 25 ಸಾವಿರ ಮತ್ತು ₹ 35 ಸಾವಿರ ಸೇರಿ ಇದುವರೆಗೆ ₹ 2.64 ಲಕ್ಷ ರೂ ಪರಿಹಾರ ಧನ ವಿತರಿಸಲಾಗಿದೆ ಎಂದು ತಿಳಿಸಿದರು.

ಪ್ರವಾಹ ಮತ್ತು ಅತಿವೃಷ್ಟಿಯಿಂದಾಗಿ ಸಜ್ಜಿ, ತೊಗರಿ, ಸೂರ್ಯಕಾಂತಿ, ಹತ್ತಿ, ಕಬ್ಬು, ಹೆಸರು, ಮೆಕ್ಕೆಜೋಳ ಮತ್ತು ಉದ್ದು ಸೇರಿ ಒಟ್ಟು ಅಂದಾಜು 11,236 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆಗಳಿಗೆ ಹಾನಿಯಾಗಿದೆ ಎಂದರು.

ಅತಿವೃಷ್ಟಿ ಮತ್ತು ಪ್ರವಾಹದಿಂದಾಗಿ ಬಬಲೇಶ್ವರ ಮತ್ತು ತಿಕೋಟಾ ತಾಲ್ಲೂಕುಗಳಲ್ಲಿ ಅಂದಾಜು 236 ಹೆಕ್ಟೇರ್ ನಷ್ಟು ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದೆ ಎಂದು ತಿಳಿಸಿದರು.

88 ಅಂಗನವಾಡಿ ಕಟ್ಟಡಗಳಿಗೆ ಹಾನಿಯಾಗಿದೆ. 46 ವಿದ್ಯುತ್ ಕಂಬಗಳು ಹಾನಿಗೀಡಾಗಿವೆ. 597 ಕಿ.ಮೀ ನಷ್ಟು ಗ್ರಾಮೀಣ ರಸ್ತೆಗಳಿಗೆ ಹಾನಿಯಾಗಿದೆ ಎಂದು ಹೇಳಿದರು.

ಜಿಲ್ಲೆಯ ತಹಶೀಲ್ದಾರ್‌ ಪಿಡಿ ಖಾತೆಯಲ್ಲಿ ₹5.78 ಕೋಟಿ ಅನುದಾನ ಲಭ್ಯವಿದೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT