ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯುಲಗೂರ: ಪವನಸುತನ ಸನ್ನಿಧಿಗೆ ಹರಿದು ಬಂದ ಜನಸಾಗರ

ಯುಲಗೂರ ಆಂಜನೇಯನ ಕಾರ್ತಿಕೋತ್ಸವಕ್ಕೆ ಸಂಭ್ರಮದ ಚಾಲನೆ; ಅಪಾರ ಭಕ್ತರು ಭಾಗಿ
ಚಂದ್ರಶೇಖರ ಕೋಳೇಕರ
Published 3 ಮಾರ್ಚ್ 2024, 5:07 IST
Last Updated 3 ಮಾರ್ಚ್ 2024, 5:07 IST
ಅಕ್ಷರ ಗಾತ್ರ

ಯಲಗೂರ (ನಿಡಗುಂದಿ): ಯುಲಗೂರ ಆಂಜನೇಯನ ಕಾರ್ತಿಕೋತ್ಸವದ ಜಾತ್ರೆಗೆ ಶನಿವಾರ ಚಾಲನೆ ದೊರೆಯಿತು.

ನಸುಕಿನ ಜಾವದಿಂದಲೇ ಪವನಸುತನ ಆರಾಧನೆ, ಪಲ್ಲಕ್ಕಿ ಉತ್ಸವ ಸೇರಿದಂತೆ ನಾನಾ ಧಾರ್ಮಿಕ  ಕಾರ್ಯಕ್ರಮಗಳಿಗೆ ಅಪಾರ ಸಂಖ್ಯೆಯ ಭಕ್ತರು ಸಾಕ್ಷಿಯಾಗಿದ್ದರು.

ಬೆಳಿಗ್ಗೆ ಆಂಜನೇಯ ಮೂರ್ತಿಗೆ ಪಂಚಾಮೃತ ಅಭಿಷೇಕ ನಡೆಯಿತು. ಪವಮಾನ ಹೋಮ, ಮಹಾ ಪೂಜೆ, ದೇವಸ್ಥಾನದ ಆವರಣದಲ್ಲಿ ನಿರಂತರ ಹೋಮ– ಹವನಗಳು ನಡೆದವು.

ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಭಜನಾ ಮಂಡಳಿಗಳು, ಮಹಿಳಾ ಮಂಡಳಗಳ ಭಜನಾ ಮಂಡಳಿ, ಕೋಲಾಟ ತಂಡಗಳು, ಆಂಜನೇಯನ ಭಕ್ತಿ ಗೀತೆ ಹಾಡುತ್ತಾ, ಯಲಗೂರೇಶನ ಭಾವಚಿತ್ರ ಹೊತ್ತು  ಗ್ರಾಮದಾದ್ಯಂತ ನಡೆದ ಶೋಭಾಯಾತ್ರೆಯಲ್ಲಿ ಭಾವಹಿಸಿದ್ದವು.

ಯಲಗೂರದ ವಿದ್ಯಾರ್ಥಿಗಳಿಂದ ವಿಷ್ಣು ಸಹಸ್ರನಾಮ ಪಾರಾಯಣ, ವಿಜಯಪುರದ ಪ್ರಸನ್ನಾಚಾರ್ಯ ಕಟ್ಟಿ ಅವರ ತಂಡದಿಂದ ಸುಮಧ್ವಿಜಯ ಪಾರಾಯಣವೂ ಜರುಗಿತು. ಅನೇಕರು ಕೃಷ್ಣಾ ನದಿಯಲ್ಲಿ ಸ್ನಾನ ಮಾಡಿ, ಅಲ್ಲಿಂದ ದೇವಸ್ಥಾನದ ವರೆಗೆ ದೀಡ್‌ ನಮಸ್ಕಾರ ಹಾಕಿ ಹರಕೆಗಳನ್ನು ತೀರಿಸಿದರು.

ಪಾದಯಾತ್ರೆ:

ನಸುಕಿನ ಜಾವದಿಂದಲೇ ನೂರಾರು ಭಕ್ತರು ನಡೆದುಕೊಂಡೇ ಕಾರ್ತಿಕೋತ್ಸವಕ್ಕೆ ಬಂದಿದ್ದರು. ದಾರಿ ಮಧ್ಯೆ ಯಲಗೂರದ ಚೆನ್ನಿಗಾವಿ ಶೆಟ್ರು ಉಪಾಹಾರ, ಕುಡಿಯುವ ನೀರು, ಮಜ್ಜಿಗೆ ವ್ಯವಸ್ಥೆ, ಯಲಗೂರದ ಗೆಳೆಯರ ಬಳಗದವರು ಭಕ್ತಗೆ ಉಪಾಹಾರದ ವ್ಯವಸ್ಥೆ, ಮತ್ತೊಂದೆಡೆ ಯಲಗೂರ ಅನ್ನದಾಸೋಹ ಸಮಿತಿಯೂ ನಿರಂತರ ಅನ್ನದಾಸೋಹ ಒದಗಿಸಿತು. 7,000ಕ್ಕೂ ಅಧಿಕ ಭಕ್ತರು ಪ್ರಸಾದ ಸ್ವೀಕರಿಸಿದರು ಎಂದು ಅಧ್ಯಕ್ಷ ಶ್ಯಾಮ ಪಾತರದ ತಿಳಿಸಿದರು.

ಸಂಗೀತ ಕಾರ್ಯಕ್ರಮಕ್ಕೆ ಚಾಲನೆ:

ದೇವಸ್ಥಾನದ ಹೊರ ಆವರಣದಲ್ಲಿ ಹಾಕಿದ್ದ ವೇದಿಕೆಯಲ್ಲಿ ಹರಿದಾಸ ಸಾಹಿತ್ಯ ಸಂಗೀತ ವೇದಿಕೆಯ ವತಿಯಿಂದ ಏರ್ಪಡಿಸಲಾದ ಅಹೋರಾತ್ರಿ ಸಂಗೀತ ಕಾರ್ಯಕ್ರಮಕ್ಕೆ ಬೆಂಗಳೂರಿನ ಸಂಗೀತಗಾರ ವಿ.ಬಿ.ಕುಲಕರ್ಣಿ, ನರಸಿಂಹ ಆಲೂರ, ವೆಂಕಟೇಶ ಒಡೆಯರ, ವಿನೋದ ಅಂಬೇಕರ, ಗುರುರಾಜ ಕುಲಕರ್ಣಿ, ಗೋಪಾಲ ಗದ್ದನಕೇರಿ ಚಾಲನೆ ನೀಡಿದರು.

ಉಸ್ತಾದ್ ಶಫೀಕ್ ಖಾನ್ ಸಿತಾರ್ ವಾದನ ಇಂದು: ಮಾರ್ಚ್‌ 3ರಂದು ಬೆಳಿಗ್ಗೆ ಇಲ್ಲಿಯ ತೆಂಗಿನ ತೋಟದ ಬಳಿ ಬೆಳಿಗ್ಗೆ 10.45ಕ್ಕೆ ಉಸ್ತಾದ್ ಶಫೀಕ್ ಖಾನ್ ಅವರ ಸಿತಾರ್ ವಾದನ, ಪಂ.ಮೈಸೂರು ರಾಮಚಂದ್ರಚಾರ್, ರವೀಂದ್ರ ಸೋರಗಾವಿ, ವಿಜಯಕುಮಾರ ಪಾಟೀಲ ಅವರ ಗಾಯನ ನಡೆಯಲಿದೆ. ಸಾಧಕರೊಬ್ಬರಿಗೆ ಭಾನುವಾರ ‘ಯಲಗೂರೇಶ ಅನುಗ್ರಹ ಪ್ರಶಸ್ತಿ’ ನೀಡಲಾಗುತ್ತದೆ.

ದಿಂಡಿನ ರೇಸ್‌ಗೆ ಚಾಲನೆ:

ಯಲಗೂರದಲ್ಲಿ ದಿಂಡಿನ ರೇಸ್‌ಗೆ ಅನ್ನದಾಸೋಹ ಸಮಿತಿಯ ಅಧ್ಯಕ್ಷ ಶ್ಯಾಮ ಪಾತರದ ಚಾಲನೆ ನೀಡಿದರು. ಭೀಮಣ್ಣ ಅವಟಗೇರ, ಪಿಎಸ್ ಐ ಶಿವರಾಜ ಧರಿಗೋಣ, ಶ್ರೀಶೈಲ ಹೂಗಾರ, ಗಂಗಾಧರ ಭಾಂಡವಳಕರ, ಗುಂಡಪ್ಪ ತಳವಾರ ಇದ್ದರು.

ಯಲಗೂರೇಶ್ವರ ಕಾರ್ತಿಕೋತ್ಸವದ ಅಂಗವಾಗಿ ಶನಿವಾರ ಸಂಜೆ ಪಲ್ಲಕ್ಕಿ ಉತ್ಸವ ನಡೆಯಿತು
ಯಲಗೂರೇಶ್ವರ ಕಾರ್ತಿಕೋತ್ಸವದ ಅಂಗವಾಗಿ ಶನಿವಾರ ಸಂಜೆ ಪಲ್ಲಕ್ಕಿ ಉತ್ಸವ ನಡೆಯಿತು
ಆರೋಗ್ಯ ತಪಾಸಣೆ:
ಯಲಗೂರೇಶನ ಕಾರ್ತಿಕೋತ್ಸವದ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ಶನಿವಾರ ಯಲಗೂರೇಶ ದೇವಸ್ಥಾನ ಸಮಿತಿಯಿಂದ ನೇತ್ರ ಮಧುಮೇಹ ಹಾಗೂ ಎಲಬು–ಕೀಲು ರೋಗ  ಉಚಿತ ತಪಾಸಣಾ ಶಿಬಿರ ಜರುಗಿತು. ಕಣಬೂರ ಆಸ್ಪತ್ರೆಯ ನೇತ್ರತಜ್ಞ ಡಾ.ಆನಂದ ಕಣಬೂರ ಮಧುಮೇಹ ತಜ್ಞ ಡಾ.ವಿಜಯೀಂದ್ರ ಕಣಬೂರ ಹಾಗೂ ಎಲಬು ಮತ್ತು ಕೀಲು ತಜ್ಞ ಡಾ.ಸಂದೀಪ ನಾಯಕ ಅವರ ತಂಡ ಭಾಗವಹಿಸಿತ್ತು. 95ಕ್ಕೂ ಹೆಚ್ಚು ಜನರು ಪ್ರಯೋಜನ ಪಡೆದುಕೊಂಡರು. ಶಿಬಿರದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಅನಂತ ಓಂಕಾರ ಗುರುರಾಜ ಪರ್ವತಿಕರ ಚಿನ್ಮಯ ಕಣಬೂರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT