ವಿಜಾಪುರ: ‘ಕೃಷ್ಣಾ ಮೇಲ್ದಂಡೆ ನೀರಾವರಿ ಯೋಜನೆಗಳಿಗೆ ಆಗಿನ ಮುಖ್ಯಮಂತ್ರಿ ಅಗತ್ಯದಷ್ಟು ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಎರಡು ಬಾರಿ ನೀರಾವರಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ನಾನು ಪ್ರಧಾನಿಯಾಗಿದ್ದಾಗ ಅಧಿಕಾರ ಕಳೆದುಕೊಳ್ಳುವ ಅಪಾಯವಿದ್ದರೂ ಹೊಸ ಯೋಜನೆ ರೂಪಿಸಿ ನೀರಾವರಿಗೆ ಅನುದಾನ ಕೊಟ್ಟೆ.

ಆದರೂ, ನನ್ನನ್ನು ಉತ್ತರ ಕರ್ನಾಟಕದ ವಿರೋಧಿ ಎಂದು ಕರೆಯುತ್ತಿರುವುದಿಂದ ವ್ಯಥೆಯಾಗುತ್ತಿದೆ’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಬುಧವಾರ ಕಣ್ಣೀರಿಟ್ಟರು. ಸಿಂದಗಿ ತಾಲ್ಲೂಕಿನ ಗೋಲಗೇರಿ ಗ್ರಾಮದಲ್ಲಿ ಗುತ್ತಿಬಸವಣ್ಣ ಏತ ನೀರಾವರಿ ರೈತ ಹಿತರಕ್ಷಣಾ ಸಮಿತಿಯವರು ತಮ್ಮ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಸಚಿವ ಎಂ.ಸಿ. ಮನಗೂಳಿ ಅವರ ಪ್ರತಿಮೆಗಳ ಅನಾವರಣ ಸಮಾರಂಭದಲ್ಲಿ ದೇವೇಗೌಡರು ಮಾತನಾಡಿದರು.

‘ನೀರಾವರಿ ಸಚಿವ, ಮುಖ್ಯಮಂತ್ರಿ, ಪ್ರಧಾನಿಯಾಗಿ ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳಿಗೆ ಅತಿಹೆಚ್ಚು ಆದ್ಯತೆ–ಅನುದಾನ ನೀಡಿದ್ದೇನೆ. ಈ ಭಾಗದ ಯೋಜನೆಗಳ ಅನುಷ್ಠಾನಕ್ಕೆ ನನ್ನ ಒತ್ತಾಸೆಯೇ ಕಾರಣ. ನನ್ನ ಸೂಚನೆಯ ಮೇರೆಗೆ ಕುಮಾರಸ್ವಾಮಿ ಬೆಳಗಾವಿಯಲ್ಲಿ ವಿಧಾನಮಂಡಲದ ಅಧಿವೇಶನ ನಡೆಸಿದ್ದರು’ ಎಂದು ಹೇಳಿದರು.

‘ನೀರಾವರಿಗೆ ಹಣ ಕೊಡಿ ಎಂದು ಮುಖ್ಯಮಂತ್ರಿ ಆಗಿದ್ದ ರಾಮಕೃಷ್ಣ ಹೆಗಡೆ ಅವರೊಂದಿಗೆ ಜಗಳ ಮಾಡಿದರೆ ನನ್ನನ್ನು ಬ್ರಾಹ್ಮಣರ ವಿರೋಧಿ ಎಂದರು. ದೇವೇಗೌಡ ಹೇಳಿದಷ್ಟು ಹಣ ಕೊಡಲು ನಮ್ಮಲ್ಲಿ ಅಕ್ಷಯ ಪಾತ್ರೆ ಇಲ್ಲ. ಹಣ ಮರದಲ್ಲಿ ಬೆಳೆಯುವುದಿಲ್ಲ ಎಂದು ಅಪಹಾಸ್ಯ ಮಾಡಿದರು’ ಎಂದರು.

‘ರಾಜ್ಯದ ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಹಣ ಕೊಡಬಾರದು ಎಂಬ ಗಾಡ್ಗಿಳ್ ನಿಯಮ ಪಾಲಿಸಲಾಗುತ್ತಿತ್ತು. ನಾನು ಪ್ರಧಾನಿಯಾಗುತ್ತಿದ್ದಂತೆಯೇ ಕರುಣಾನಿಧಿ, ಚಂದ್ರಬಾಬು ನಾಯ್ಡು ಅವರ ಬೆದರಿಕೆ ಲೆಕ್ಕಿಸದೇ ರಾಜ್ಯದ ನೀರಾವರಿ ಯೋಜನೆಗಳಿಗೆ ಕೇಂದ್ರದಿಂದ ಅನುದಾನ ನೀಡುವ ಯೋಜನೆ ಜಾರಿಗೊಳಿಸಿದೆ. ಆಲಮಟ್ಟಿಯ ಜಲಾಶಯವನ್ನು 524.256 ಮೀಟರ್ ಎತ್ತರದ ವರೆಗೆ ನಿರ್ಮಿಸಲು ಅನುಮೋದನೆ ನೀಡಿದೆ. ಉತ್ತರ ಕರ್ನಾಟಕದ ಈ ಯೋಜನೆಗಳಿಗಾಗಿ ಪ್ರಧಾನಿ ಹುದ್ದೆ ತ್ಯಾಗಕ್ಕೂ ನಾನು ಸಿದ್ಧನಾಗಿದ್ದೆ’ ಎಂದು ಹೇಳಿಕೊಂಡರು.

ಗುಜರಾತ್ ಅಭಿವೃದ್ಧಿ ನರೇಂದ್ರ ಮೋದಿಯಿಂದ ಆಗಿದ್ದಲ್ಲ. ಭಾಕ್ರಾ–ನಂಗಲ್ ಯೋಜನೆ ಅರ್ಧಕ್ಕೆ ನಿಂತಿತ್ತು. ‘ಇಂದಿರಾ ಗಾಂಧಿ ನಾಲೆ’ಯ ಕಾಮಗಾರಿ ಹರಿಯಾಣದವರೆಗೆ ಬಂದು ಸ್ಥಗಿತಗೊಂಡಿತ್ತು. ನಾನು ಪ್ರಧಾನಿಯಾಗಿದ್ದಾಗ ನೀಡಿದ ಅನುದಾನದಿಂದಲೇ ಆ ಕಾಮಗಾರಿ ಪೂರ್ಣಗೊಂಡು ಗುಜರಾತ್ ಅಭಿವೃದ್ಧಿಗೆ ಕಾರಣವಾಯಿತು’ ಎಂದು ಹೇಳಿದರು.

‘ಕೆಲವರು ನನ್ನನ್ನು ಉತ್ತರ ಕರ್ನಾಟಕದ ವಿರೋಧಿ ಎಂದು ಬಿಂಬಿಸಿದರೂ, ಈ ಭಾಗದ ರೈತರು ನನ್ನ ಪ್ರತಿಮೆ ಸ್ಥಾಪಿಸುವ ಮೂಲಕ ರಾಜ್ಯಕ್ಕೆ ಹೊಸ ಸಂದೇಶ ನೀಡಿದ್ದಾರೆ’ ಎಂದು ಶ್ಲಾಘಿಸಿದರು. ‘ನಾನು ಜೀವನದ ಕೊನೆಯ ಘಟ್ಟದಲ್ಲಿ ಬಂದು ನಿಂತಿದ್ದೇನೆ. ಎಲ್ಲ ಘಟನಾವಳಿಗಳನ್ನೂ ಆತ್ಮಕಥನದಲ್ಲಿ ದಾಖಲಿಸುತ್ತೇನೆ’ ಎಂದರು.

‘ಬಸವಣ್ಣನವರಿಗೆ ಲಿಂಗಾಯತ ಎಂಬ ಹಣೆ ಪಟ್ಟಿ ಅಂಟಿಸಿದಂತೆ, ದೇವೇಗೌಡರಿಗೆ ಉತ್ತರ ಕರ್ನಾಟಕದ ವಿರೋಧಿ ಎಂಬ ಹಣೆ ಪಟ್ಟಿ ಅಂಟಿಸಿದ್ದಾರೆ’ ಎಂದು ಕಡೂರು ಶಾಸಕ ವೈ.ಎಸ್.ವಿ. ದತ್ತ ವಿಷಾದಿಸಿದರು.‘ಕಾವೇರಿಯಂತೆ ಕೃಷ್ಣೆಯ ವಿಷಯದಲ್ಲಿಯೂ ದೇವೇಗೌಡರು ದಂಡನಾಯಕನಾಗಿ ಹೋರಾಡಿದ್ದಾರೆ’ ಎಂದು ಗದಗ ತೋಂಟದಾರ್ಯ ಸ್ವಾಮೀಜಿ ಹೇಳಿದರು. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇತರರು ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.