ದಾವಣಗೆರೆ: ತುಂಗಭದ್ರಾ ನದಿ ದಡದ ಉದ್ದಕ್ಕೂ ಆಚೀಚೆ, ಹೆಜ್ಜೆಹೆಜ್ಜೆಗೂ ಎದುರಾಗುವ ಇಟ್ಟಿಗೆ ಭಟ್ಟಿಗಳು.. ಕೆಸರು, ಕಲ್ಲಿದ್ದಲಿನ ಕೆಲಸದಲ್ಲಿ ತೊಡಗಿರುವ ಕಾರ್ಮಿಕರು... ಸಾಲಾಗಿ ಜೋಡಿಸಿಟ್ಟ ಬೆಂಕಿಪೊಟ್ಟಣದ ರೀತಿಯಲ್ಲಿ ಕಾಣುವ, ನೆಲದ ಮೇಲೆ ವಿಶಾಲವಾಗಿ ಹರಡಿಕೊಂಡಿರುವ, ಬೆಂಕಿಯಲ್ಲಿ ಬೆಂದು, ಕೆಂಪಾಗಿ ಪಳಪಳನೆ ಹೊಳೆಯುವ ಇಟ್ಟಿಗೆಗಳನ್ನು ತುಂಬಿಕೊಂಡು ದೂರದ ನಗರ, ಪಟ್ಟಣಗಳತ್ತ ತೆರಳಲು ಸಜ್ಜಾಗಿರುವ ಟ್ರ್ಯಾಕ್ಟರ್ ಹಾಗೂ ಟ್ರಿಪ್ಪರ್ಗಳು...

ಜಿಲ್ಲೆಯ ಹರಿಹರ ತಾಲ್ಲೂಕಿನ ಗುತ್ತೂರು, ಹರ್ಲಾಪುರ, ಕರ್ಲಹಳ್ಳಿ, ಸಾರಥಿ, ದೀಟೂರು, ಚಿಕ್ಕಬಿದರಿ, ಹರಗನಹಳ್ಳಿ, ಪಾಮೇನಹಳ್ಳಿ, ಕುರುಬರಹಳ್ಳಿ, ರಾಜನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಊರುಗಳಲ್ಲಿ ಕಂಡುಬರುವ ಇಟ್ಟಿಗೆ ಉದ್ಯಮದ ವಿಶಾಲ ನೋಟವಿದು.

ಹರಿಹರ ತಾಲ್ಲೂಕು ಹಾಗೂ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಗ್ರಾಮಗಳಿಗೆ ಹೊಂದಿಕೊಂಡಂತೆ ವಿಶಾಲವಾಗಿ ಹರಿಯುವ ತುಂಗಭದ್ರಾ ನದಿಯ ದಡದ ಸಮೀಪದಲ್ಲಿ ಇಟ್ಟಿಗೆ ಉದ್ಯಮವು ದೊಡ್ಡಮಟ್ಟದಲ್ಲಿ ಬೇರುಬಿಟ್ಟಿದೆ. ನದಿದಡ ಹಾಗೂ ಸುತ್ತಮುತ್ತಲಿನ ಭಾಗದಲ್ಲಿ ದೊರೆಯುವ ಕೆಂಪು ಮಣ್ಣು ಇಟ್ಟಿಗೆ ತಯಾರಿಕೆಗೆ ಸೂಕ್ತವಾಗಿರುವ ಕಾರಣಕ್ಕೆ ಈ ಉದ್ಯಮವು ವಿವಿಧ ಹಳ್ಳಿಗಳಲ್ಲಿ ವಿಸ್ತರಿಸಿಕೊಂಡಿದೆ.

ಗುತ್ತೂರು ಗ್ರಾಮವು ಇಟ್ಟಿಗೆ (ಬ್ರಿಕ್ಸ್) ಉದ್ಯಮದ ಹಬ್ ಆಗಿ ಪರಿವರ್ತನೆಗೊಂಡಿದೆ. ಈ ಗ್ರಾಮದಲ್ಲಿ ಇಟ್ಟಿಗೆ ತಯಾರಿಕೆಗೆ 50ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ಗ್ರಾಮದ ಬಹುಪಾಲು ಜನರು ಇಟ್ಟಿಗೆ ಉದ್ಯಮವನ್ನೇ ಮುಖ್ಯ ಉದ್ಯೋಗವನ್ನಾಗಿ ಮಾಡಿಕೊಂಡಿದ್ದಾರೆ. ಇಟ್ಟಿಗೆ ಭಟ್ಟಿಯ ಕಣಜವೆಂದೇ ಗುತ್ತೂರು ಖ್ಯಾತಿ ಗಳಿಸಿದೆ.

ತುಂಗಭದ್ರಾ ನದಿ ದಡದ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರತೀ ವರ್ಷ ನೂರಾರು ಇಟ್ಟಿಗೆಗಳನ್ನು ಭಟ್ಟಿಗಳಲ್ಲಿ ಸುಡಲಾಗುತ್ತಿದೆ. ಇಲ್ಲಿ ತಯಾರಾಗುವ ಕೋಟ್ಯಂತರ ಇಟ್ಟಿಗೆಗಳನ್ನು ದಾವಣಗೆರೆ, ಚಿತ್ರದುರ್ಗ, ವಿಜಯನಗರ, ಶಿವಮೊಗ್ಗ, ಹಾವೇರಿ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಗೆ ಪೂರೈಸಲಾಗುತ್ತಿದೆ. ಮಧ್ಯ ಕರ್ನಾಟಕದಲ್ಲಿ ‘ಹರಿಹರ ಇಟ್ಟಿಗೆ’ಯು ತನ್ನದೇ ಆದ ಬ್ರ್ಯಾಂಡ್ ಅನ್ನು ಸೃಷ್ಟಿಸಿಕೊಂಡಿದೆ. ಇಲ್ಲಿ ಕೋಟ್ಯಂತರ ರೂಪಾಯಿ ವಹಿವಾಟು ನಡೆಯುತ್ತಿದೆ.

ಸಾವಿರಾರು ಕಾರ್ಮಿಕರಿಗೆ ಉದ್ಯೋಗ...

ಹರಿಹರ ತಾಲ್ಲೂಕಿನ ವಿವಿಧೆಡೆ ನಡೆಯುತ್ತಿರುವ ಇಟ್ಟಿಗೆ ತಯಾರಿಕೆ ಉದ್ಯಮವು ಸಾವಿರಾರು ಕಾರ್ಮಿಕರಿಗೆ ಉದ್ಯೋಗ ಒದಗಿಸಿದೆ. ಸ್ಥಳೀಯ ಕಾರ್ಮಿಕರು ಮಾತ್ರವಲ್ಲದೇ ವಿಜಯಪುರ, ಹಾವೇರಿ, ಗದಗ, ಬಾಗಲಕೋಟೆ, ಕಲಬುರಗಿ ಸೇರಿದಂತೆ ಇನ್ನಿತರ ಜಿಲ್ಲೆಗಳಿಂದಲೂ ಕೆಲ ತಿಂಗಳ ಮಟ್ಟಿಗೆ ಇಲ್ಲಿಗೆ ಬಂದು ಇಟ್ಟಿಗೆ ತಯಾರಿಕೆ ಕಾಯಕದಲ್ಲಿ ತೊಡಗುತ್ತಾರೆ. ವಿಜಯಪುರ ಜಿಲ್ಲೆಯ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬಂದು ಕೆಲಸ ಮಾಡುತ್ತಿದ್ದಾರೆ. ಕೆಲ ವರ್ಷಗಳಿಂದ ಜಾರ್ಖಂಡ್ ಹಾಗೂ ಒಡಿಶಾ ರಾಜ್ಯಗಳ ಕಾರ್ಮಿಕರೂ ಇಟ್ಟಿಗೆ ತಯಾರಿಕೆಯ ಕೆಲಸಕ್ಕೆಂದು ವಲಸೆ ಬರುತ್ತಿದ್ದಾರೆ.

ಕಾರ್ಮಿಕರಿಗೆ ಇಟ್ಟಿಗೆ ಭಟ್ಟಿಗಳ ಮಾಲೀಕರು ಇಟ್ಟಿಗೆ ತಯಾರಿಕೆ ಕೆಲಸ ಆರಂಭಿಸುವ ಒಂದು ವರ್ಷದ ಮೊದಲೇ ಲಕ್ಷಾಂತರ ರೂಪಾಯಿ ಮುಂಗಡವಾಗಿ ಹಣ ನೀಡುವುದು ವಾಡಿಕೆಯಾಗಿದೆ. ಇಟ್ಟಿಗೆ ತಯಾರಿಸುವ ಕೆಲಸ ಆರಂಭವಾದಾಗ ತಕ್ಷಣಕ್ಕೆ ಕಾರ್ಮಿಕರು ಸಿಗುವುದಿಲ್ಲ. ಇದೇ ಕಾರಣಕ್ಕೆ ಬಡ್ಡಿ ರಹಿತವಾಗಿ ಲಕ್ಷಾಂತರ ರೂಪಾಯಿ ಮುಂಗಡ ನೀಡಿ, ಕಾರ್ಮಿಕರನ್ನು ಕೆಲಸಕ್ಕೆಂದು ನಿಯೋಜಿಸಿಕೊಳ್ಳುತ್ತಾರೆ.

ಇಟ್ಟಿಗೆ ತಯಾರಿಕೆ ಕೆಲಸ ಶುರುವಾಗುವ ಒಂದು ವಾರದ ಮೊದಲು ಕಾರ್ಮಿಕರು ಬರಲು ಭಟ್ಟಿಗಳ ಮಾಲೀಕರು ವಾಹನದ ವ್ಯವಸ್ಥೆಯನ್ನೂ ಮಾಡುತ್ತಾರೆ. ಇಲ್ಲವೇ ಪ್ರಯಾಣದ ವೆಚ್ಚವನ್ನು ಭರಿಸುತ್ತಾರೆ. ಕಾರ್ಮಿಕರು ಉಳಿದುಕೊಳ್ಳಲು ಸಣ್ಣ ಗೂಡುಗಳಂತಹ ತಾತ್ಕಾಲಿಕ ಮನೆಗಳ ವ್ಯವಸ್ಥೆಯನ್ನು ಕಲ್ಪಿಸುವ ಜವಾಬ್ದಾರಿಯೂ ಮಾಲೀಕರದ್ದಾಗಿದೆ.

ಇಟ್ಟಿಗೆ ತಯಾರಕರು ಕೆಲವರು ಭಟ್ಟಿಯಿಂದಲೇ ಇಟ್ಟಿಗೆಗಳನ್ನು ಮಾರಾಟ ಮಾಡಿದರೆ, ಇನ್ನೂ ಕೆಲವರು ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಇನ್ನಿತರ ನಗರಗಳಿಗೆ ಟ್ರ್ಯಾಕ್ಟರ್ ಹಾಗೂ ಟಿಪ್ಪರ್ಗಳಲ್ಲಿ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಾರೆ. ಕೆಲವು ಮಧ್ಯವರ್ತಿಗಳು ಇಟ್ಟಿಗೆ ವ್ಯಾಪಾರವನ್ನೇ ವೃತ್ತಿಯನ್ನಾಗಿಸಿಕೊಂಡಿದ್ದಾರೆ.

‘ಹೊಳೆಯ ದಡ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ದೊರೆಯುವ ಕೆಂಪು ಮಣ್ಣು ಇಟ್ಟಿಗೆ ತಯಾರಿಕೆಗೆ ಸೂಕ್ತವಾಗಿದೆ. ಇಲ್ಲಿನ ನೀರು, ಮಣ್ಣು ಹಾಗೂ ಕಲ್ಲಿದ್ದಲು ಬಳಸಿ ತಯಾರಿಸಿದ ಇಟ್ಟಿಗೆ ಸುಡುವ ವಿಧಾನದ ಕಾರಣಕ್ಕೆ ಇಟ್ಟಿಗೆಗಳು ಗಟ್ಟಿ ಮತ್ತು ಗುಣಮಟ್ಟದಿಂದ ಕೂಡಿರುತ್ತವೆ. ಇದೇ ಕಾರಣಕ್ಕೆ ಹರಿಹರದ ಇಟ್ಟಿಗೆಗೆ ಹಲವು ವರ್ಷಗಳಿಂದ ತನ್ನದೇ ಆದ ಬ್ರ್ಯಾಂಡ್ ಸೃಷ್ಟಿಯಾಗಿದೆ. ಬೇರೆ ಇಟ್ಟಿಗೆಗಳಿಗಿಂತ ಹರಿಹರದ ಇಟ್ಟಿಗೆಗೆ ಮೌಲ್ಯ ಹೆಚ್ಚು’ ಎನ್ನುತ್ತಾರೆ ಗುತ್ತೂರು ಗ್ರಾಮದ ಇಟ್ಟಿಗೆ ಭಟ್ಟಿ ಮಾಲೀಕ ಕೆ.ಸಿ.ಬೀರಪ್ಪ.

ಕೆಲವು ವರ್ಷಗಳಿಂದ ಎದುರಾದ ಸವಾಲು...

ಮಣ್ಣು ದೊರೆಯದ್ದರಿಂದ ಈಚೆಗೆ ಮಣ್ಣಿನ ದರವೂ ದುಬಾರಿಯಾಗಿದೆ. ಇಟ್ಟಿಗೆ ತಯಾರಿಕೆ ವೆಚ್ಚವೂ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ. ಈ ಎಲ್ಲಾ ಕಾರಣಕ್ಕೆ ಇಟ್ಟಿಗೆ ಭಟ್ಟಿಗಳ ಮಾಲೀಕರಿಗೂ ಸಂಕಷ್ಟ ಎದುರಾಗಿದೆ. ಲಭ್ಯತೆ ಹಾಗೂ ದರ ವ್ಯತ್ಯಾಸದ ಕಾರಣಕ್ಕೆ ಮಾರುಕಟ್ಟೆಯಲ್ಲಿ ಸಿಮೆಂಟ್ ಇಟ್ಟಿಗೆಗೆ ಬೇಡಿಕೆಯೂ ಹೆಚ್ಚುತ್ತಲಿದೆ. ಸಾಲ ಮಾಡಿ, ಲಕ್ಷಾಂತರ ರೂಪಾಯಿ ಬಂಡವಾಳ ಹೂಡುವ ಇಟ್ಟಿಗೆ ಭಟ್ಟಿ ಮಾಲೀಕರು, ನಿಗದಿತ ಸಮಯದಲ್ಲಿ ಇಟ್ಟಿಗೆ ಮಾರಾಟವಾಗದಿದ್ದರೆ, ಬಡ್ಡಿಯ ಹೊರೆಯಿಂದ ಸಂಕಷ್ಟಕ್ಕೆ ಸಿಲುಕುವ ಅಪಾಯವನ್ನೂ ಎದುರಿಸುತ್ತಿದ್ದಾರೆ.

‘2–3 ವರ್ಷದಿಂದ ಮಣ್ಣಿನ ಇಟ್ಟಿಗೆಯ ಮಾರುಕಟ್ಟೆ ಕುಸಿದಿದೆ. ಮುಂಗಡವಾಗಿ ಹಣ ಪಡೆಯುವ ಬೇರೆ ಜಿಲ್ಲೆಗಳ ಕೆಲವು ಕಾರ್ಮಿಕರು ಕೆಲಸಕ್ಕೆ ಬರುವುದಿಲ್ಲ, ಮುಂಗಡವಾಗಿ ಪಡೆದ ಹಣವನ್ನೂ ವಾಪಸ್ ನೀಡುವುದಿಲ್ಲ. ಇದಲ್ಲದೇ ಬೃಹತ್ ಕಟ್ಟಡಗಳಿಗೆ ಸಿಮೆಂಟ್ ಇಟ್ಟಿಗೆಗಳನ್ನು ಇತ್ತೀಚೆಗೆ ಹೆಚ್ಚಾಗಿ ಬಳಸಲಾಗುತ್ತಿದೆ. ಇದು ಮಣ್ಣಿನ ಇಟ್ಟಿಗೆ ಉದ್ಯಮದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಗುತ್ತೂರು ಸೇರಿದಂತೆ ಹರಿಹರದ ಸುತ್ತಮುತ್ತಲಿನ ಹಲವು ಗ್ರಾಮಗಳ ಜನರ ಆದಾಯವು ಇಟ್ಟಿಗೆ ಉದ್ಯಮವನ್ನೇ ಅವಲಂಬಿಸಿದೆ. ಇಲ್ಲಿನ ಸ್ಥಳೀಯರ ಪೈಕಿ ಹೆಚ್ಚಿನವರಿಗೆ ಬೇರೆ ಕೆಲಸ ಗೊತ್ತಿಲ್ಲ. ಇಟ್ಟಿಗೆ ಉದ್ಯಮವನ್ನೇ ಹೆಚ್ಚು ಅವಲಂಬಿಸಿದ್ದೇವೆ’ ಎನ್ನುತ್ತಾರೆ ಹರಿಹರದ ಇಟ್ಟಿಗೆ ಭಟ್ಟಿಯ ಮಾಲೀಕ ಡಿ.ಪಿ.ಚಂದ್ರಪ್ಪ.

‘ಪ್ರತಿ ವರ್ಷ ನವೆಂಬರ್ನಿಂದ ಏಪ್ರಿಲ್ವರೆಗೆ ಇಟ್ಟಿಗೆ ತಯಾರಿಕೆ ಕೆಲಸ ನಡೆಯುತ್ತದೆ. ಇಟ್ಟಿಗೆಗಳನ್ನು ಭಟ್ಟಿ ಒಟ್ಟಿ ಕಲ್ಲಿದ್ದಲು ಬಳಸಿ ಸುಡಲಾಗುತ್ತದೆ. ಒಂದು ಸಾವಿರ ಸೀಲ್ (ನಂಬರ್) ಇಟ್ಟಿಗೆಗಳ ತಯಾರಿಕೆಗೆ ₹ 6,000 ಖರ್ಚಾಗುತ್ತದೆ. ಒಂದು ಸಾವಿರ ಇಟ್ಟಿಗೆಗಳನ್ನು ₹ 7,000 ದಂತೆ ಭಟ್ಟಿಯಲ್ಲೇ ಮಾರಾಟ ಮಾಡುತ್ತೇವೆ. ಬೇರೆ ನಗರ, ಪಟ್ಟಣಗಳಿಗೆ ನಾವೇ ಇಟ್ಟಿಗೆಗಳನ್ನು ಪೂರೈಸುವುದಾದರೆ ವಾಹನದ ಬಾಡಿಗೆ ಹಾಗೂ ಕೂಲಿಯನ್ನು ಹೆಚ್ಚುವರಿಯಾಗಿ ಪಡೆಯುತ್ತೇವೆ’ ಎಂದು ಕೆ.ಸಿ. ಬೀರಪ್ಪ ತಿಳಿಸುತ್ತಾರೆ.

‘ಮಣ್ಣು ಅಕ್ರಮ’ದ ದೂರು.

‘ಹರಿಹರ ತಾಲ್ಲೂಕಿನ ತುಂಗಭದ್ರಾ ನದಿ ಮತ್ತು ನದಿ ದಡದಲ್ಲಿ ನಿಯಮ ಉಲ್ಲಂಘಿಸಿ ನಡೆಸುತ್ತಿರುವ ಮಣ್ಣು ಮತ್ತು ಮರಳಿನ ಅಕ್ರಮ ಗಣಿಗಾರಿಕೆಯನ್ನು ತಡೆದು ನದಿ ಪರಿಸರವನ್ನು ರಕ್ಷಿಸಬೇಕು’ ಎಂದು ಪರಿಸರ ಸಂರಕ್ಷಣಾ ವೇದಿಕೆಯ ಮುಖಂಡರು ಒತ್ತಾಯಿಸುತ್ತಾರೆ.

‘ತುಂಗಭದ್ರಾ ನದಿಯು ಹರಿಹರ ತಾಲ್ಲೂಕಿನಲ್ಲಿ ಅಂದಾಜು 35 ಕಿ.ಮೀ. ಉದ್ದದಷ್ಟು ಹರಿಯುತ್ತಿದೆ. ಈ ನದಿ ಮತ್ತು ನದಿ ದಡವು ಗಿಡ, ಮರ, ಹಸಿರು ಹಾಸಿನೊಂದಿಗೆ ಉತ್ತಮ ಪರಿಸರವನ್ನು ಹೊಂದಿದೆ. ಆದರೆ, ಈಚೆಗೆ ಕೆಲವು ವರ್ಷಗಳಿಂದ ಅವ್ಯಾಹತ, ಅವೈಜ್ಞಾನಿಕವಾಗಿ ಅಕ್ರಮ ಮಣ್ಣು ಮತ್ತು ಮರಳು ಗಣಿಗಾರಿಕೆ ನಡೆಯುತ್ತಿರುವುದು ಆತಂಕಕಾರಿಯಾಗಿದೆ’ ಎನ್ನುತ್ತಾರೆ ವೇದಿಕೆಯ ಸಂಚಾಲಕ ಬಿ.ಮಗ್ದುಮ್.

‘ಇಟ್ಟಿಗೆ ಭಟ್ಟಿಗೆ ಬೇಕಾದ ಕೆಂಪು ಮಣ್ಣು ಇರುವ ಈ ನದಿ ದಡದಲ್ಲಿ ಮಣ್ಣು ಗಣಿಗಾರಿಕೆ ಅವ್ಯಾಹತವಾಗಿ ನಡೆದು ಹತ್ತಾರು ಗ್ರಾಮಗಳ ಪಟ್ಟಾ ಹಾಗೂ ಸರ್ಕಾರಿ ಜಮೀನುಗಳಲ್ಲಿ 15ರಿಂದ 20 ಅಡಿಗಳ ಆಳದವರೆಗೆ ಕಂದಕಗಳು ಉಂಟಾಗಿವೆ. ಪರಿಣಾಮ ಹಲವು ಸ್ಮಶಾನಗಳು, ರಸ್ತೆ, ವಿದ್ಯುತ್ ಕಂಬಗಳು, ಮಠ, ಮಂದಿರಗಳಿಗೆ ಗಂಡಾಂತರ ಎದುರಾಗಿದೆ’ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.