ಭಾನುವಾರ, ಅಕ್ಟೋಬರ್ 20, 2019
21 °C
ಕಪ್ಪು ಬಟ್ಟೆ ಪ್ರದರ್ಶನಕ್ಕೆ ಆಕ್ರೋಶ

ನಾಗನಗೌಡ ಕಂದಕೂರ 10% ಶಾಸಕ: ಬಿಜೆಪಿ ಮುಖಂಡ ಸಾಯಬಣ್ಣ ಆರೋಪ

Published:
Updated:
Prajavani

ಯಾದಗಿರಿ: ‘ಶಾಸಕ ನಾಗನಗೌಡ ಕಂದಕೂರ ಗುತ್ತಿಗೆದಾರರನ್ನು ಬೆದರಿಸಿ ತಮ್ಮ ಚೇಲಾಗಳಿಗೆ ಗುತ್ತಿಗೆ ಕಾಮಗಾರಿ ನೀಡುವ ಮೂಲಕ ಶೇಕಡ 10ರಷ್ಟು ಕಮಿಷನ್ ಪಡೆಯುತ್ತಿದ್ದಾರೆ’ ಎಂದು ಬಿಜೆಪಿ ಮುಖಂಡ ಸಾಯಬಣ್ಣ ಬೋರಬಂಡಾ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಬೋಗಸ್ ಬಿಲ್ ಸೃಷ್ಟಿಸಲು ಪ್ರಯತ್ನ ಮಾಡಿ ಹಣ ಕೊಳ್ಳೆ ಹೊಡೆಯುವ ಹುನ್ನಾರ ನಡೆಸಿದ್ದರಿಂದ ಗುರುಮಠಕಲ್ ಕ್ಷೇತ್ರಕ್ಕೆ ನೀಡಿದ್ದ ₹4.5 ಕೋಟಿ ಅನುದಾನವನ್ನು ಬಿಜೆಪಿ ಸರ್ಕಾರ ತಡೆ ಹಿಡಿದಿದೆ. ಅದನ್ನು ಹಿಂತೆಗೆದುಕೊಂಡಿಲ್ಲ. ಅನುದಾನ ಹಿಂತೆಗೆದುಕೊಳ್ಳಲಾಗಿದೆ ಎನ್ನುವುದು ಸುಳ್ಳು ಎಂದು’ ತಿಳಿಸಿದರು.

‘ಮೊನ್ನೆ ಜಿಲ್ಲೆಗೆ ಆಗಮಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಕಪ್ಪು ಬಟ್ಟೆ ಪ್ರದರ್ಶನ ಮಾಡಿರುವುದರಿಂದ ಶರಣಗೌಡ ಕಂದಕೂರ ಸೇರಿದಂತೆ 15 ರಿಂದ 20 ಜನರ ಮೇಲೆ ಪ್ರಕರಣ ದಾಖಲಾಗಿದೆ. ಈ ಬಗ್ಗೆ ನಮ್ಮಲ್ಲಿ ದಾಖಲೆಗಳಿವೆ. ಸೂಕ್ತ ಕಾಲದಲ್ಲಿ ಅದನ್ನು ಬಿಡುಗಡೆ ಮಾಡಲಾಗುವುದು’ ಎಂದು ತಿಳಿಸಿದರು.

‘ಶಾಸಕರ ಮಗನಿಗೆ ಅಧಿಕಾರಿಗಳ ಸಭೆ ಕರೆಯಲು ಯಾವ ಅಧಿಕಾರ ಇದೆ. ಗುರುಮಠಕಲ್ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ವರ್ಗಾವಣೆ ದಂಧೆಯಲ್ಲಿ ತೊಡಗಿಕೊಂಡಿದ್ದಾರೆ. 20 ಕೆರೆ ತುಂಬಿಸುವ ಯೋಜನೆ ಇದೆ ಎಂದು ಹೇಳಿದ್ದೀರಿ. ಆದರೆ, ಈಗ ಏನಾಗಿದೆ. ಇದರ ಬಗ್ಗೆ ಹೋರಾಟ ಮಾಡಿ. ಇದನ್ನು ಬಿಟ್ಟು ಕೆಟ್ಟ ಭಾಷೆ ಬಳಸುವುದು ಸರಿಯಲ್ಲ’ ಎಂದರು.

‘ಸಿಎಂ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ. ಈಗ 83 ಕೆರೆ ತುಂಬಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಇದಕ್ಕೆ ₹500 ಕೋಟಿ ಅನುದಾನ ಬರಲಿದೆ. ಅಲ್ಲದೆ ಭೀಮಾ ಬ್ರಿಡ್ಜ್‌ ಕಂ ಬ್ಯಾರೇಜ್‌ಗಾಗಿ ₹400 ಕೋಟಿ ಬರಲಿದೆ’ ಎಂದರು.

‘ಮೆಡಿಕಲ್ ಕಾಲೇಜುಗೆ ₹600 ಕೋಟಿ ವ್ಯರ್ಥವೆಂದು ಹೇಳಿದ್ದೀರಿ. ಇದು ಈ ಭಾಗದವರಿಗೆ ಅನ್ಯಾಯ ಮಾಡಿದಂತೆ ಆಗುತ್ತದೆ’ ಎಂದರು. 

ಬಿಜೆಪಿ ಮಹಿಳಾ ಘಟಕದ ಉಪಾಧ್ಯಕ್ಷೆ ನಾಗರತ್ನ ಕುಪ್ಪಿ ಮಾತನಾಡಿ, ‘ವಯಸ್ಸಿಗೆ ತಕ್ಕಂತೆ ಶರಣಗೌಡ ಕಂದಕೂರ ಮಾತನಾಡಲಿ. ಜೆಡಿಎಸ್ ಕಾರ್ಯಕರ್ತರಿಗೆ ಪ್ರಚೋದನೆ ನೀಡುವುದನ್ನು ನಿಲ್ಲಿಸಲಿ. ಕಪ್ಪು ಬಟ್ಟೆ ಪ್ರದರ್ಶನ ಮಾಡಿರುವುದು ಅವರ ಅಸಹಾಯಕತೆ ಬಿಂಬಿಸುತ್ತದೆ’ ಎಂದು ಟೀಕಿಸಿದರು.

ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಶರಣಗೌಡ ಬಾಡಿಯಾಳ ಮಾತನಾಡಿ, ’ಟೆಂಡರ್ ಆಗಿದ್ದ ₹90 ಕೋಟಿ ಹಣ ರದ್ದು ಮಾಡಲಾಗಿದೆ. ಯಾವುದೇ ಅನುದಾನ ಕಡಿತ ಮಾಡಿಲ್ಲ. ಜನರಿಗೆ ತಪ್ಪು ಮಾಹಿತಿ ನೀಡುವ ಕೆಲಸ ನಡೆಯುತ್ತಿದೆ. ಬರಿ ಟೆಂಡರ್ ಪ್ರಕ್ರಿಯೆ ಮಾತ್ರ ತಡೆ ಹಿಡಿಯಲಾಗಿದೆ’ ಎಂದು ತಿಳಿಸಿದರು.

‘ಶರಣಗೌಡ ಕಂದಕೂರ ಅಮಾಯಕ ಯುವಕರಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಇದರಿಂದ ಯುವಕರು ಹಾಳಾಗುತ್ತಿದ್ದಾರೆ. ಈ ಬಗ್ಗೆ ಯಾವ ವೇದಿಯಲ್ಲದರೂ ಸಾಬೀತು ಮಾಡುತ್ತೇವೆ. ಇದಕ್ಕೆ ನಮ್ಮ ಬಳಿ ಸಾಕ್ಷಿ ಇದೆ. ನಾವು ಹಗೆತನ ಸಾಧಿಸುವುದಿಲ್ಲ’ ಎಂದು ತಿಳಿಸಿದರು.

ಪಕ್ಷದ ಮುಖಂಡರಾದ ಖಂಡಪ್ಪ ದಾಸನ್, ವೆಂಕಟರಡ್ಡಿ ಅಬ್ಬೆ ತುಮಕೂರು, ಪಕ್ಷದ ಮಾಧ್ಯಮ ವಕ್ತಾರ ಎಸ್.ಪಿ.ನಾಡೇಕರ್ ಹಾಗೂ ಗೋಪಾಲ ದಾಸನಕೇರಿ ಇದ್ದರು.

Post Comments (+)