ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೀಮಾ ನದಿಗೆ 1.18 ಲಕ್ಷ ಕ್ಯುಸೆಕ್ ನೀರು ಬಿಡುಗಡೆ

Last Updated 22 ಸೆಪ್ಟೆಂಬರ್ 2020, 1:23 IST
ಅಕ್ಷರ ಗಾತ್ರ

ಶಹಾಪುರ/ವಡಗೇರಾ: ಮಹಾರಾಷ್ಟ್ರದಲ್ಲಿ ಮುಂದುವರಿದ ಮಳೆ ಹಾಗೂ ಇನ್ನಿತರ ಕಡೆ ಆಗುತ್ತಿರುವ ಮಳೆಯಿಂದ ಭೀಮಾ ನದಿಗೆ ಹೆಚ್ಚಿನ ಪ್ರಮಾಣ ನೀರು ಹರಿದು ಬರುತ್ತಲಿದೆ. ಸದ್ಯಕ್ಕೆ ಭೀಮಾ ನದಿಗೆ 1.18 ಲಕ್ಷ ಕ್ಯುಸೆಕ್ ನೀರು ಬಿಡುಗಡೆಯಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ತಾಲ್ಲೂಕಿನ ಹುರಸಗುಂಡಗಿ ಗ್ರಾಮದ ಬಳಿ ನಿರ್ಮಿಸಿರುವ ಸನ್ನತಿ ಬ್ರಿಜ್ ಕಂ ಬ್ಯಾರೇಜಿನ 27 ಗೇಟ್‌ಗಳ ಮೂಲಕ ನದಿಗೆ ನೀರು ಬಿಡಲಾಗುತ್ತಿದೆ ಎಂದು ತಹಶೀಲ್ದಾರ್ ಜಗನಾಥರಡ್ಡಿ ತಿಳಿಸಿದ್ದಾರೆ.

ಭಾನುವಾರ ನದಿಯಲ್ಲಿ 64 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿತ್ತು. ಈಗ ಪ್ರವಾಹ ಅಧಿಕವಾಗಿದೆ. ತಾಲ್ಲೂಕಿನ 10 ಹಾಗೂ ವಡಗೇರಾ ತಾಲ್ಲೂಕಿನ 14 ಹಳ್ಳಿಗಳ ನದಿ ದಂಡೆಯ ಗ್ರಾಮಸ್ಥರು ಎಚ್ಚರವಾಗಿರಬೇಕು. ಸುರಕ್ಷಿತ ಸ್ಥಳಕ್ಕೆ ತೆರಳಬೇಕು. ಜನ, ಜಾನುವಾರುಗಳನ್ನು ನದಿಯಲ್ಲಿ ಇಳಿಯದಂತೆ ಆಯಾ ಗ್ರಾಮದಲ್ಲಿ ಡಂಗೂರ ಸಾರಿ ದಿನಾಲು ಎಚ್ಚರಿಕೆ ನೀಡಲಾಗುತ್ತದೆ. ಸದ್ಯಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಅವರು
ವಿವರಿಸಿದರು.

ಭೀಮಾ ನದಿಯ ಪ್ರವಾಹ ಏರುಮುಖವಾಗಿರುವುದರಿಂದ ನದಿ ದಂಡೆಯ ತಗ್ಗು ಪ್ರದೇಶದ ಜಮೀನುಗಳಿಗೆ ನೀರು ನುಗ್ಗಿದೆ. ಬೆಳೆದು ನಿಂತ ಭತ್ತ, ಹತ್ತಿ ಬೆಳೆ ಸಂಕಷ್ಟಕ್ಕೆ ಸಿಲುಕುವ ಭೀತಿ ರೈತರನ್ನು ಕಾಡುತ್ತಲಿದೆ. ಅಲ್ಲದೆ ತಗ್ಗು ಪ್ರದೇಶದ ಗ್ರಾಮಗಳಿಗೆ ನೀರು ಒಕ್ಕರಿಸುವ ಹೆದರಿಕೆ ಜನತೆಯನ್ನು ಕಾಡುತ್ತಲಿದೆ. ನದಿಯ ದಂಡೆಯ ಬಳಿ ಸ್ಥಾಪಿಸಿರುವ ವಿದ್ಯುತ್ ಪೈಪು, ವಿದ್ಯುತ್ ಪರಿವರ್ತಕ ಯಂತ್ರ (ಟಿ.ಸಿ) ಮಳೆಯಿಂದ ಹಾಗೂ ಹೆಚ್ಚು ನೀರು ಸಂಗ್ರಹದಿಂದ ಹಾನಿಯಾಗುತ್ತವೆ. ಅಲ್ಲದೆ ವಿದ್ಯುತ್ ಕಂಬ ಹಾಗೂ ವೈರ್ ಕಳಚಿ ಬೀಳುವ ಭೀತಿ ಎದುರಾಗಿದೆ. ಕುಡಿಯುವ ನೀರು ವಿದ್ಯುತ್ ಸ್ಥಗಿತ ಮುಂತಾದ ಒಂದಿಲ್ಲ ಒಂದು ಸಮಸ್ಯೆಗಳು ಎದುರಾಗಿವೆ ಎಂದು ಭೀಮಾ ನದಿ ದಂಡೆಯ ಜನತೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT