ಮಂಗಳವಾರ, 19 ಆಗಸ್ಟ್ 2025
×
ADVERTISEMENT
ADVERTISEMENT

‌ಯಾದಗಿರಿ | ಅಂಗವೈಕಲ್ಯ: ಬಳಕೆಯಾಗದ ಶೇ 5ರ ಅನುದಾನ

Published : 2 ಡಿಸೆಂಬರ್ 2024, 6:17 IST
Last Updated : 2 ಡಿಸೆಂಬರ್ 2024, 6:17 IST
ಫಾಲೋ ಮಾಡಿ
Comments
ಸುರಪುರದಲ್ಲಿ ಈಚೆಗೆ ಎಪಿಡಿ ಸಂಸ್ಥೆಯವರು ಅಂಗವಿಕಲರಿಗೆ ಸ್ವಾವಲಂಬನೆಗಾಗಿ ಮೇಕೆಗಳನ್ನು ವಿತರಿಸಿದರು
ಸುರಪುರದಲ್ಲಿ ಈಚೆಗೆ ಎಪಿಡಿ ಸಂಸ್ಥೆಯವರು ಅಂಗವಿಕಲರಿಗೆ ಸ್ವಾವಲಂಬನೆಗಾಗಿ ಮೇಕೆಗಳನ್ನು ವಿತರಿಸಿದರು
2023-24 ನೇ ಸಾಲಿಗೆ ಜಿಲ್ಲೆಯಲ್ಲಿ ಅರ್ಹ ಅಂಗವಿಕಲರಿಗೆ 165 ಯಂತ್ರಚಾಲಿತ ಬೈಕ್‌ ಅಂಧ ವಿದ್ಯಾರ್ಥಿಗಳಿಗೆ 6 ಟಾಕಿಂಗ್ ಲ್ಯಾಪ್‌ಟಾಪ್ ವಿತರಿಸಲಾಗಿದೆ. ಸರ್ಕಾರಿ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ
ಶರಣಪ್ಪ ಪಾಟೀಲ ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ
ತಾಲ್ಲೂಕಿನಲ್ಲಿ ಅಂಗವಿಕಲರ ಮಾಸಾಶನದ ದುರುಪಯೋಗ ನಡೆಯುತ್ತಿದೆ. ಇದರಲ್ಲಿ ಅಧಿಕಾರಿಗಳು ಶಾಮೀಲಾಗಿರುವ ಶಂಕೆ ಇದೆ. ತನಿಖೆಯಾಗಬೇಕು
ನಾಗೇಂದ್ರ ದೋರಿ ಅಂಗವಿಕಲ ಹಕ್ಕುಗಳ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ಸುರ‍ಪುರ
ಅಂಗವಿಕಲರು ಸಂಘಟಿತರಾಗಿ ಶೇ 5 ರ ಅನುದಾನ ಅಂಗವಿಕಲ ಕಲ್ಯಾಣ ಇಲಾಖೆಯ ಸೌಲಭ್ಯಗಳು ಪಡೆದುಕೊಳ್ಳಬೇಕು. ಈ ಬಗ್ಗೆ ನಮ್ಮ ಕಚೇರಿಯಲ್ಲಿ ಮಾಹಿತಿ ಪಡೆದುಕೊಳ್ಳಿ
ಮಾಳಪ್ಪ ಪುಜಾರಿ ಎಂಆರ್‌ಬ್ಲ್ಯೂ ಸುರಪುರ
ಬೋಗಸ್ ಅಂಗವಿಕಲ ಮಾಸಾಶನ: ಆರೋಪ
ಸುರಪುರ: ತಾಲ್ಲೂಕಿನಲ್ಲಿ 4511 ಅಂಗವಿಕಲರಿದ್ದಾರೆ. ಆದರೆ 6025 ಜನರು ಅಂಗವಿಕಲ ಮಾಸಾಶನ ಪಡೆಯುತ್ತಿದ್ದಾರೆ. ಈ ಕುರಿತು ಅಂಗವಿಕಲ ಹಕ್ಕುಗಳ ಒಕ್ಕೂಟ ಈಚೆಗೆ ಹೋರಾಟ ನಡೆಸಿ ಖೊಟ್ಟಿ ಫಲಾನುಭವಿಗಳ ಪತ್ತೆ ಹಚ್ಚಿ ಕ್ರಮ ಜರುಗಿಸುವಂತೆ ಆಗ್ರಹಿಸಿದೆ. ಇದುವರೆಗೆ 3600 ಅಂಗವಿಕಲರು ಮಾತ್ರ ಯುಡಿಐಡಿ ಗುರುತಿನ ಚೀಟಿ ಪಡೆದುಕೊಂಡಿದ್ದಾರೆ. ಉಳಿದವರಿಗೆ ಈ ಚೀಟಿ ಪಡೆದುಕೊಳ್ಳಲು ಎಂಆರ್‌ಡಬ್ಲ್ಯೂ (ಅಂಗವಿಕಲ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತ) ಎಆರ್‌ಡಬ್ಲ್ಯೂ (ಅಂಗವಿಕಲ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ) ಯುಆರ್‌ಡಬ್ಲ್ಯೂ(ಅಂಗವಿಕಲ ನಗರ ಪುನರ್ವಸತಿ ಕಾರ್ಯಕರ್ತ) ನೆರವಿನ ಹಸ್ತ ನೀಡುತ್ತಿದ್ದಾರೆ. ತಾಲ್ಲೂಕಿನಲ್ಲಿ 23 ಗ್ರಾಮ ಪಂಚಾಯಿತಿಗಳಿದ್ದು 15ನೇ ಹಣಕಾಸು ಯೋಜನೆಯಡಿ ಶೇ 5 ಹಣ ಮೀಸಲಿಡಲು ತಿಳಿಸಲಾಗಿದೆ. ಯಾವ ಪಂಚಾಯಿತಿಯೂ ಈ ಸೌಲಭ್ಯ ನೀಡುತ್ತಿಲ್ಲ. ಈಚೆಗೆ ನಗನೂರ ಗ್ರಾಮ ಪಂಚಾಯಿತಿಯಲ್ಲಿ ಸಾಧನಾ ಸಲಕರಣೆಗಳನ್ನು ಖರೀದಿ ಮಾಡಿ ಇಡಲಾಗಿದೆ. ಆದರೆ ವಿತರಣೆ ಮಾಡಿಲ್ಲ. ಎಪಿಡಿ ಸೇರಿದಂತೆ ಕೆಲ ಸಂಸ್ಥೆಗಳು ತಾಲ್ಲೂಕಿನಲ್ಲಿ ಅಂಗವಿಕಲರ ನೆರವಿಗೆ ನಿಂತಿವೆ.
ನೆರವಿನ ಅಭಯ ನೀಡಿ
ಶಹಾಪುರ: ‘ತಾಲ್ಲೂಕಿನಲ್ಲಿ 5700ಕ್ಕೂ ಹೆಚ್ಚು ಜನ ಅಂಗವಿಕಲರು ಇದ್ದೇವೆ. ಐದು ವರ್ಷದಲ್ಲಿ 332 ತ್ರಿಚಕ್ರ ವಾಹನವನ್ನು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ನೀಡಿದ್ದಾರೆ. ಅಂಗವಿಕಲರಿಗೆ ಸರ್ಕಾರದ ನೆರವಿನ ಯೋಜನೆಗಳನ್ನು ಒದಗಿಸಿದ್ದಾರೆ. ನಮ್ಮ ಪ್ರಮುಖ ಬೇಡಿಕೆ ಈಗಿರುವ ಮಾಸಾಶನ ಸಾಕಾಗುತ್ತಿಲ್ಲ. ಕನಿಷ್ಠ ₹2ಸಾವಿರ ಮಾಡಬೇಕು. ರಾಜ್ಯದ ತುಂಬೆಲ್ಲ ಸಂಚರಿಸಲು ಉಚಿತ ಪಾಸ್‌ ವಿತರಣೆ ಮಾಡಬೇಕು. ಮೀಸಲಾತಿಯನ್ನು ಶೇ 10ಕ್ಕೆ ಹೆಚ್ಚಿಸಬೇಕು’ ಎನ್ನುತ್ತಾರೆ ಶಹಾಪುರ ತಾಲ್ಲೂಕು ಘಟಕದ ಅಧ್ಯಕ್ಷ ಸಾಹೇಬ ಜಾನಿ. ‘ಅಂಗವಿಕಲರಿಗೆ ಸರ್ಕಾರಿ ಕಚೇರಿಗಳಲ್ಲಿ ಸರಿಯಾದ ಮಾಹಿತಿ ನೀಡುವುದಿಲ್ಲ. ತಾತ್ಸಾರ ಮನೋಭಾವದಿಂದ ನೋಡುತ್ತಾರೆ. ಅದರಲ್ಲಿ ಬಸ್‌ನಲ್ಲಿ ಪ್ರಯಾಣಿಸುವಾಗ ನಿರ್ವಾಹಕರು ಕೀಳರಿಮೆಯಿಂದ ನೋಡಿ ಹೋಗಪ್ಪ ಕೂಡು ಎಂಬ ಚುಚ್ಚು ಮಾತು ಮನಸ್ಸಿಗೆ ನೋವುಂಟು ಮಾಡುತ್ತವೆ. ನನ್ನದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವ ಸಂಕಷ್ಟವನ್ನು ನಾವು ಅನುಭವಿಸುತ್ತಿದ್ದೇವೆ’ ಎನ್ನುತ್ತಾರೆ ನೊಂದ ಅಂಗವಿಕಲರು ಒಬ್ಬರು.
ಅನುದಾನ ಸಮರ್ಪಕ ಬಳಕೆಯಾಗಲಿ
ಹುಣಸಗಿ: ಅಂಗವಿಕಲರಿಗೆ ತಾಲ್ಲೂಕಿನಲ್ಲಿ ಅನೇಕರು ಸೌಲಭ್ಯಗಳಿಂದ ವಂಚಿತವಾಗಿದ್ದು ಸೂಕ್ತ ಸೌಲಭ್ಯಗಳು ಸಿಕ್ಕಿಲ್ಲ. ಇದರಿಂದಾಗಿ ಸಾಕಷ್ಟು ಜನರು ತೊಂದರೆ ಅನುಭವಿಸುವಂತಾಗಿದೆ ಎಂಬ ಮಾತುಗಳು ಕೇಳಿಬರುತ್ತವೆ. ಈ ಕುರಿತು ಅಂಗವಿಕಲರ ಹಕ್ಕುಗಳ ಒಕ್ಕೂಟದ ವಿಭಾಗೀಯ ಅಧ್ಯಕ್ಷ ಸಂಗನಗೌಡ ಧನರಡ್ಡಿ ಮಾಹಿತಿ ನೀಡಿ ಮಾತನಾಡಿ ಎಲ್ಲಾ ಇಲಾಖೆಗಳಲ್ಲಿ ಶೇ 5 ರಷ್ಟು ಅನುದಾನ ಸರಿಯಾಗಿ ಬಳಕೆಯಾಗುತ್ತಿಲ್ಲ. ಅದರಲ್ಲಿಯೂ ವಿಶೇಷವಾಗಿ ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿ ಪುರಸಭೆ ನಗರಸಭೆ ಇದರಲ್ಲಿ ಮತ್ತೆ ವಿಶೇಷವಾಗಿ ವಿವಿಧ ಅಭಿವೃದ್ದಿ ನಿಗಮಗಳಲ್ಲಿ ಸರಿಯಾಗಿ ಪಾಲಿಸುತ್ತಿಲ್ಲ ಎಂದು ಆರೋಪಿಸಿದರು. ಕೇವಲ ಕಾಟಾಚಾರಕ್ಕೆ ಮಾತ್ರ ಅಧಿಕಾರಿಗಳು ಸಭೆ ನಡೆಸುತ್ತಾರೆ. ಬಳಿಕ ಸಭೆಯಲ್ಲಿನ ವಿಷಯ ಪಾಲನೆಯಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.
ಪಟ್ಟಣದಲ್ಲಿ ತೃಪ್ತಿದಾಯಕ ಗ್ರಾಮೀಣದಲ್ಲಿ ಬೇಕಿದೆ ಸೌಲತ್ತು
ಗುರುಮಠಕಲ್‌: ತಾಲ್ಲೂಕು ವ್ಯಾಪ್ತಿಯಲ್ಲಿನ ಪಟ್ಟಣದಲ್ಲಿರುವ ಅಂಗವಿಕಲರಿಗೆ ಸಂಬಂಧಿಸಿದಂತೆ ಶೇ 5 ರ ಅನುದಾನ ಬಳಕೆ ಸೇರಿದಂತೆ ಸರ್ಕಾರಿ ಸೌಲಭ್ಯಗಳ ಪೂರೈಕೆಯು ತೃಪ್ತಿದಾಯಕವಾಗಿದೆ. ಆದರೆ ಗ್ರಾಮೀಣ ಭಾಗದಲ್ಲಿ ಇನ್ನೂ ಸೌಲಭ್ಯ ಪೂರೈಕೆ ಮತ್ತು ಜಾಗೃತಿ ಕಾರ್ಯದ ಅವಶ್ಯಕತೆಯಿದೆ. ನೂತನ ತಾಲ್ಲೂಕು ಕೇಂದ್ರದಲ್ಲಿ ಒಂದೆಡೆ ಸರ್ಕಾರಿ ಕಚೇರಿಗಳಿಲ್ಲ. ಇರುವ ಕಚೇರಿಗಳಲ್ಲಿ ಕೆಲವಕ್ಕೆ ಮಾತ್ರ ರ್‍ಯಾಂಪ್‌ ವ್ಯವಸ್ಥೆಯಿದೆ. ತಾಲ್ಲೂಕಿನ ದಂಡಾಧಿಕಾರಿಯೂ ಆಗಿರುವ ತಹಶೀಲ್ದಾರ್ ಕಚೇರಿಗೆ ಈವರೆಗೂ ರ್‍ಯಾಂಪ್‌ ವ್ಯವಸ್ಥೆಯಿಲ್ಲ. ಸಿಡಿಪಿಒ ಮತ್ತು ಕಾರ್ಮಿಕ ನಿರೀಕ್ಷಕರ ಕಚೇರಿಗಳು ಖಾಸಗಿ ಕಟ್ಟಡದಲ್ಲಿನ ಮೊದಲ ಅಂತಸ್ತಿನಲ್ಲಿವೆ. ಕಚೇರಿಗಳಿಗೆ ಮೆಟ್ಟಿಲುಗಳನ್ನು ಹತ್ತಿಕೊಂಡು ಹೋಗುವಷ್ಟು ಶಕ್ತರು ಮಾತ್ರ ಹೋಗಬೇಕು. ಉಳಿದವರು ಬೇಡ ಎನ್ನುವಂತಿದೆ ಎಂದು ಅಂಗವಿಕಲ ಹಣಮಂತು ಅಸಹನೆ ವ್ಯಕ್ತಪಡಿಸಿದರು. ‘ಪಟ್ಟಣ ವ್ಯಾಪ್ತಿಯಲ್ಲಿ 310 ಜನ ಅರ್ಹ ಅಂಗವಿಕಲರಿಗೆ ಸೌಲಭ್ಯ ಸಿಗುತ್ತಿದೆ. ಉಳಿದಂತೆ ಅಲ್ಪಸ್ವಲ್ಪ ಸಮಸ್ಯೆಯಿರುವವರೂ ಇದ್ದಾರೆ. ಈಚೆಗೆ ಕೆವೈಸಿ ಸಮಸ್ಯೆಯಿಂದ ಕೆಲವರ ಪಿಂಚಣಿ ಸಮಸ್ಯೆಯಾಗಿದೆ. ಅಂಥವರ ಸಮಸ್ಯೆಯನ್ನು ಪರಿಹರಿಸುವ ಕೆಲಸ ನಡೆದಿದೆ’ ಎಂದು ಯುಆರ್‌ಡಬ್ಲ್ಯೂ ನಾಗೇಂದ್ರ ನಿಂಗವೋಳ ತಿಳಿಸಿದರು.
ವಿಶ್ವ ಅಂಗವಿಕಲರ ದಿನಾಚರಣೆ ನಾಳೆ
ಯಾದಗಿರಿ: ವಿಶ್ವ ಅಂಗವಿಕಲರ ದಿನಾಚರಣೆ ಡಿಸೆಂಬರ್ 3 ರಂದು ಬೆಳಿಗ್ಗೆ 10.30 ಗಂಟೆಗೆ  ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯ ದಿ.ವಿಶ್ವನಾಥರೆಡ್ಡಿ ಮುದ್ನಾಳ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಶರಣಪ್ಪ ಪಾಟೀಲ ತಿಳಿಸಿದ್ದಾರೆ. ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಮ್ಮಿಕೊಂಡಿದ್ದು ಜಿಲ್ಲೆಯ ಅಂಗವಿಕಲರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಂಘ ಸಂಸ್ಥೆಯವರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಜಿಲ್ಲೆಯಲ್ಲಿರುವ ಅಂಗವಿಕಲರ ಸಂಖ್ಯೆ
ಶಹಾಪುರ: 7409 ಸುರಪುರ: 6974 ಯಾದಗಿರಿ: 7186 ಒಟ್ಟು:21569 ಆಧಾರ: ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT