ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಗ್ರಂಥಪಾಲಕರಿಲ್ಲದೆ ಮುಚ್ಚಿದ ಗ್ರಂಥಾಲಯ

ಸೈದಾಪುರ, ಶಿರವಾಳ, ಚಪೆಟ್ಲಾದಲ್ಲಿಲ್ಲ ಗ್ರಂಥಾಲಯ ಮೇಲ್ವಿಚಾರಕರು
Last Updated 19 ಮಾರ್ಚ್ 2021, 4:14 IST
ಅಕ್ಷರ ಗಾತ್ರ

ಯಾದಗಿರಿ: ಸಾರ್ವಜನಿಕರಿಗೆ ಮತ್ತು ಓದುಗರಿಗೆ ಅನುಕೂಲವಾಗಲು ತೆರೆಯಲಾದ ಗ್ರಂಥಾಲಯಕ್ಕೆ ಮೇಲ್ವಿಚಾರಕರು ಇಲ್ಲದೆ ಬೀಗ ಹಾಕಲಾಗಿದೆ.

ಜಿಲ್ಲೆಯ 120 ಗ್ರಾಮ ಪಂಚಾಯಿತಿಗಳಲ್ಲಿ 117 ಕಡೆ ಗ್ರಂಥಾಲಯ ಮೇಲ್ವಿಚಾರಕರ ಹುದ್ದೆ ಭರ್ತಿ ಇದೆ. ಜಿಲ್ಲೆಯ ಮೂರು ಕಡೆ ಗ್ರಂಥಾಪಾಲಕರ ಹುದ್ದೆ ಖಾಲಿ ಇವೆ. ಯಾದಗಿರಿ ತಾಲ್ಲೂಕಿನ ಸೈದಾಪುರ, ಗುರುಮಠಕಲ್‌ ತಾಲ್ಲೂಕಿನ ಚಪೆಟ್ಲಾ, ಶಹಾಪುರ ತಾಲ್ಲೂಕಿನ ಶಿರವಾಳದಲ್ಲಿ ಹುದ್ದೆಗಳು ಖಾಲಿ ಇವೆ.

ಸೈದಾಪುರ ಗ್ರಾಮದಲ್ಲಿ ಕಳೆದ ಒಂದೂವರೆ ವರ್ಷದಿಂದ ಗ್ರಂಥಾಲಯಕ್ಕೆ ಬೀಗ ಹಾಕಲಾಗಿದೆ. ಶಿರವಾಳದಲ್ಲಿ 6–8 ತಿಂಗಳಿಂದ ನೇಮಕಾತಿ ಗೊಂದಲ ಉಂಟಾಗಿದೆ. ಚಪೆಟ್ಲಾದಲ್ಲಿ ಪಂಪ್‌ ಆಪರೇಟರ್‌ ತಾತ್ಕಾಲಿಕವಾಗಿ ಮೇಲ್ವಿಚಾರಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಒಂದೂವರೆ ವರ್ಷದಿಂದ ಬೀಗ:ಯಾದಗಿರಿ ತಾಲ್ಲೂಕಿನ ಸೈದಾಪುರ ಗ್ರಾಮದಲ್ಲಿ ಗ್ರಂಥಪಾಲಕರಿಲ್ಲದೆ ಸುಮಾರು ಒಂದೂವರೆ ವರ್ಷದಿಂದ ಬೀಗ ಹಾಕಿದೆ. ಹೆಸರಿಗೆ ಮಾತ್ರ ಗ್ರಂಥಾಲಯವಾಗಿದ್ದು, ಒಳಗಡೆ ನೋಡಿದರೆ ಪುಸ್ತಕಗಳು ಇರದೆ ದೂಳು ಹಿಡಿದಿರುವ ಕುರ್ಚಿ, ಮೇಜುಗಳು ಕಾಣ ಸಿಗುತ್ತವೆ. ಇದು ಇಲ್ಲಿನ ಸಾರ್ವಜನಿಕ ಗ್ರಂಥಾಲಯದ ದುಸ್ಥಿತಿಯಾಗಿದೆ.

ಪಟ್ಟಣದ ರೈಲು ನಿಲ್ದಾಣದ ಪಕ್ಕದಲ್ಲಿರುವ ಸಾರ್ವಜನಿಕ ಗ್ರಂಥಾಲಯವು ನಿರ್ವಹಣೆ ಮಾಡುವ ಗ್ರಂಥಪಾಲಕರು ಇಲ್ಲದೇ ಪಾಳು ಬಿದ್ದ ಬಂಗಲೆಯಾಗಿದೆ. ಸೈದಾಪುರ ಪಂಚಾಯಿತಿಗೆ ತಕ್ಷಣವೇ ಗ್ರಂಥಪಾಲಕರನ್ನು ಅನುಕಂಪದ ಆಧಾರದ ಮೇಲೆ ನೇಮಕ ಮಾಡದೇ ಸೂಕ್ತ ನಿಯಮಗಳನ್ನು ಅನುಸರಿಸಿ ಖಾಲಿ ಇರುವ ಹುದ್ದೆಗೆ ನೇಮಕ ಮಾಡುವಂತೆ ಆದೇಶ ನೀಡಿದ್ದರೂ ರಾಜಕೀಯ ಪ್ರಭಾವದಿಂದ ಅಭಿವೃದ್ಧಿ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಅಲ್ಲದೇ ಕಟ್ಟಡ ಶಿಥಿಲಾವಾಸ್ಥೆಯಲ್ಲಿ ಇದೆ.

ಕಟ್ಟಡದ ಸುತ್ತಮುತ್ತಲು ಪ್ರದೇಶವನ್ನು ಆಹಾರ ತಿಂಡಿಗಳ ಮತ್ತು ಮಾಂಸಹಾರಿ ಬೀದಿ ವ್ಯಾಪಾರಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದ ಆ ಕಡೆ ಯಾರು ಹೋಗದೆ ಗ್ರಂಥಾಲಯದ ಕಟ್ಟಡವು ಪಾಳು ಬಿದ್ದಿರುವ ಸ್ಥಿತಿಯಲ್ಲಿದೆ. ಅಲ್ಲದೆ ಸೈದಾಪುರ ಪಟ್ಟಣ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಪ್ರಾಥಮಿಕ, ಪ್ರೌಢ, ಪದವಿ ಸೇರಿದಂತೆ ವೃತ್ತಿ ಶಿಕ್ಷಣ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಇದ್ದಾರೆ. ಅವರುಗಳ ಅನುಕೂಲಕ್ಕೆ ತಕ್ಕಂತೆ ಗ್ರಂಥಾಲಯವನ್ನು ಸ್ಥಳಾಂತರ ಮಾಡಿ ಬಡ ಹಾಗೂ ಹಿಂದುಳಿದ ಮಕ್ಕಳಿಗೆ ಸೌಲಭ್ಯ ದೊರಕುವಂತಾಗಬೇಕು. ಇದನ್ನು ಪರಿಗಣಿಸಿ ನಾಗರಿಕರ ಹಿತದೃಷ್ಟಿಯಿಂದ ಸ್ಥಳಾಂತರ ಮಾಡಿ, ಗ್ರಂಥಪಾಲಕರನ್ನು ನೇಮಕ ಮಾಡುವಂತೆ ಪಂಚಾಯಿತಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಬದಲಾಗುತ್ತಿದ್ದಾರೆ. ಹೊರತು ಗ್ರಂಥಾಲಯ ಮಾತ್ರ ಯಾವುದೇ ಬದಲಾವಣೆಯಾಗದೆ ಉಳಿದಿದೆ.

‘ಸೈದಾಪುರ ಪಟ್ಟಣದಲ್ಲಿರುವ ಸಾರ್ವಜನಿಕ ಗ್ರಂಥಾಲಯದ ನಿರ್ವಹಣೆ ಮಾಡಬೇಕಾದ ಗ್ರಂಥಪಾಲಕ ಇಲ್ಲದೆ ಸುಮಾರು ಒಂದೂವರೆ ವರ್ಷದಿಂದ ಕಟ್ಟಡಕ್ಕೆ ಬೀಗ ಹಾಕಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮತ್ತು ಲಿಖಿತ ದೂರು ನೀಡಿದರೂ ಗಮನಹರಿಸುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ, ಸ್ಪರ್ಧಾರ್ಥಿಗಳಿಗೆ ಸಮಸ್ಯೆ ಆಗಿದೆ. ಶೀಘ್ರ ಇತ್ತ ಅಧಿಕಾರಿಗಳು ಗಮನ ಹರಿಸಬೇಕು’ ಎನ್ನುತ್ತಾರೆ ಸೈದಾಪುರ ಕರವೇ ತಾಲ್ಲೂಕು ಸಂಘಟನಾ ಕಾರ್ಯದರ್ಶಿ ಬಸವರಾಜ ನಾಯಕ.

ಪುಸ್ತಕಗಳಿಲ್ಲದ ಗ್ರಂಥಾಲಯ
ಜಿಲ್ಲೆಯ ಬಹುತೇಕಗ್ರಂಥಾಲಯಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾಗುವ ಪುಸ್ತಕಗಳೇ ಇಲ್ಲ. ಅಲ್ಲದೆ ಜ್ಞಾನಾರ್ಜನೆಗೆ ಬೇಕಾಗುವ ಪುಸ್ತಕಗಳು ಇಲ್ಲ. ಇದರಿಂದ ಓದುಗರಿಗೆ ತೊಂದರೆಯಾಗುತ್ತಿದೆ. ಗ್ರಂಥಾಲಯ ಮೇಲ್ವಿಚಾರಕ ಇದ್ದ ಕಡೆಯೂ ವರ್ತಮಾನ ಪತ್ರಿಕೆಗಳು ಸಿಗುತ್ತಿಲ್ಲ.

ಇನ್ನು ಶೈಕ್ಷಣಿಕ ಕೇಂದ್ರವಾದ ಸೈದಾಪುರ ಪಟ್ಟಣಕ್ಕೆ ನಿತ್ಯ ನೂರಾರು ವಿದ್ಯಾರ್ಥಿಗಳು ಆಗಮಿಸುತ್ತಾರೆ. ಆದರೆ, ಓದುಗ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಹೆಸರಿಗೆ ಮಾತ್ರ ಸಾರ್ವಜನಿಕ ಗ್ರಂಥಾಲಯವನ್ನು ಸ್ಥಾಪನೆ ಮಾಡಲಾಗಿದೆ. ಆದರೆ, ಬೆರಳಣಿಕೆಯ ಪುಸ್ತಕಗಳು ಕೊಳೆಯುತ್ತಿವೆ. ಇಲ್ಲಿನ ನಾಗರಿಕರು ಗ್ರಂಥಾಲಯ ಮತ್ತು ಗ್ರಾಮ ಪಂಚಾಯಿತಿಅಧಿಕಾರಿಗಳ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT