ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಾರಾಧ್ಯರ ವೈಭವದ ರಥೋತ್ಸವ

ವಿಶ್ವಾರಾಧ್ಯ ಮಹಾರಾಜ ಕೀ ಜೈ, ಗಂಗಾಧರ ಮಹಾರಾಜ ಕೀ ಜೈ ಘೋಷಣೆ; ಅದ್ಧೂರಿ ರಥಕ್ಕೆ ಉತ್ತುತ್ತಿ, ಬಾಳೆಹಣ್ಣು ಎಸೆದ ಭಕ್ತ ಸಮೂಹ
Last Updated 29 ಫೆಬ್ರುವರಿ 2020, 10:26 IST
ಅಕ್ಷರ ಗಾತ್ರ

ಯಾದಗಿರಿ: ತಾಲ್ಲೂಕಿನ ಸುಕ್ಷೇತ್ರ ಅಬ್ಬೆತುಮಕೂರಿನ ಸಿದ್ದಿ ಪುರುಷ ವಿಶ್ವಾರಾಧ್ಯರ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಸಂಜೆ ಲಕ್ಷಾಂತರ ಭಕ್ತರ ಮಧ್ಯೆ ರಥೋತ್ಸವ ಜರುಗಿತು.

ಸಿದ್ಧ ಸಂಸ್ಥಾನ ಆವರಣದಲ್ಲಿ ಲಕ್ಷಾಂತರ ಭಕ್ತರು ವಿಶ್ವಾರಾಧ್ಯರ ರಥೋತ್ಸವ ಕಣ್ಣು ತುಂಬಿಕೊಂಡಿದರು.ಭಕ್ತ ಸಮೂಹ ತಂಡೋಪ ತಂಡವಾಗಿ ಅಬ್ಬೆತುಮಕೂರಿನೆಡೆಗೆ ಧಾವಿಸಿ ಬಂದಿದ್ದರು.

ಪೀಠಾಧಿಪತಿ ಡಾ.ಗಂಗಾಧರ ಸ್ವಾಮೀಜಿ ಸಂಜೆ 6.30ಕ್ಕೆ ರಥವನ್ನೇರಿ ಚಾಲನೆ ನೀಡುವುದೇ ತಡ, ಭಕ್ತ ವೃಂದ ‘ವಿಶ್ವಾರಾಧ್ಯ ಮಹಾರಾಜ ಕೀ ಜೈ’, 'ಗಂಗಾಧರ ಮಹಾರಾಜ ಕೀ ಜೈ' ಎಂಬ ಮುಗಿಲು ಮುಟ್ಟವ ಜಯಘೋಷ ಮಾಡುತ್ತಾ ರಥ ಎಳೆದು ಸಂಭ್ರಮಿಸಿದರು.

ನೆರೆದ ಭಕ್ತ ಸಮೂಹ ಉತ್ತುತ್ತಿ, ಬಾಳೆಹಣ್ಣುಗಳನ್ನು ರಥದ ಮೇಲೆ ಎಸೆದು ಭಕ್ತಿಯಿಂದ ನಮಿಸಿ ಇಷ್ಟಾರ್ಥಗಳನ್ನು ಈಡೇರಿಸುವಂತೆ ಆರಾಧ್ಯ ದೈವ ವಿಶ್ವಾರಾಧ್ಯರಲ್ಲಿ ಬೇಡಿಕೊಂಡರು.

ಜಾತ್ರೆಗೆ ರಾಜ್ಯ ಮಾತ್ರವಲ್ಲದೆ ನೆರೆಯ ಆಂಧ್ರ–ತೆಲಂಗಾಣ, ಮಹಾರಾಷ್ಟ್ರಗಳಿಂದಲೂ ಅಸಂಖ್ಯಾತ ಭಕ್ತರು ಆಗಮಿಸಿ ದರ್ಶನಾಶೀರ್ವಾದ ಪಡೆದರು.ತೇರಿನ ಉತ್ಸವ ಮುಗಿಯುತ್ತಲೇ ಆಗಮಿಸಿದ ಭಕ್ತರ ದಂಡು ತಮ್ಮ ಉಪವಾಸ ವೃತ ಮುಗಿಸಿ ದಾಸೋಹ ಮಹಾಮನೆಯಲ್ಲಿ ಪ್ರಸಾದ ಸ್ವೀಕರಿಸಿದರು.

‌ಭಕ್ತರ ದಂಡನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಿತ್ತು. ಮುಂಜಾಗೃತ ಕ್ರಮವಾಗಿ ಅಗ್ನಿಶಾಮಕ ವಾಹನಗಳ ವ್ಯವಸ್ಥೆಯನ್ನು ಮಾಡಲಾಗಿತ್ತು. ಆರೋಗ್ಯ ಇಲಾಖೆಯ ಸಿಬ್ಬಂದಿಯೂ ಭಕ್ತರಿಗೆ ಪ್ರಥಮ ಚಿಕಿತ್ಸೆಗಾಗಿ ಸಿದ್ಧತೆ ಮಾಡಿಕೊಂಡಿತ್ತು.

ಶುಕ್ರವಾರ ಬೆಳಗ್ಗೆ ವಿಶ್ವರಾಧ್ಯರ ಕರ್ತೃ ಗದ್ದುಗೆಗೆ ಗೋರಟಾ ಸಂಗೀತ ಬಳಗದವರಿಂದ ವಿಶೇಷ ರುದ್ರಾಭಿಷೇಕ ಜರುಗಿತು. ದುಧನಿಯ ಶಂಕರ ಮೇತ್ರೆ ಮತ್ತು ಅವರ ಪರಿವಾರದವರಿಂದ ರಥೋತ್ಸವಕ್ಕೆ ಮಹಾಪೂಜೆ ಮತ್ತು ರಥಾಂಗ ಹೋಮ ನೆರವೇರಿತು. ತರುವಾಯ ಶ್ರೀಗಳು ತೇರಿಗೆ ಕಳಸ ಆರೋಹಣ ಮಾಡಿದರು.

ನಿರಂತರ 11 ದಿನಗಳಿಂದ ನಡೆದುಕೊಂಡು ಬಂದ ವಿಶ್ವಾರಾಧ್ಯರ ಪುರಾಣ ಮಹಾಮಂಗಲ ಮತ್ತು ಪಲ್ಲಕ್ಕಿ ಉತ್ಸವದ ನಂತರ ಗುರುವಾರ ಸಂಜೆ ಮಠದ ಕೈಲಾಸ ಕಟ್ಟೆಯ ಹತ್ತಿರ ಪೀಠಾಧಿಪತಿ ಡಾ. ಗಂಗಾಧರ ಸ್ವಾಮೀಜಿ ನೂರಾರು ಸಾಧು ಸಂತರ ಮಧ್ಯೆ ಧುನಿ ಪೂಜೆ ನೆರವೇರಿಸುವುದರೊಂದಿಗೆ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.

ಮಠದ ಭಕ್ತರಾದ ಠಾಣಗುಂದಿಯ ವಿಶ್ವಪ್ರಸಾದ ರಾಠೋಡ ಹಾಗೂ ಅಬ್ಬೆತುಮಕೂರಿನ ಮಲ್ಲಿಕಾರ್ಜುನ ಟೇಲರ್ ಪೀಠಾಧಿಪತಿ ಡಾ. ಗಂಗಾಧರ ಸ್ವಾಮೀಜಿಯರಿಗೆ ತುಲಾಭಾರ ಸೇವೆ ನೆರವೇರಿಸಿದರು.

ಸ್ವಾಮೀಜಿ ಮತ್ತು ಗಣ್ಯರ ದಂಡು

ಕಡಗಂಚಿಯ ವೀರಭದ್ರ ಸ್ವಾಮೀಜಿ, ಬಾಲೆ ಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ, ನಿಲೋಗಲ್‍ನ ಪಂಚಾಕ್ಷರಿ ಸ್ವಾಮೀಜಿ, ಪಾಳಾದ ಗುರುಮೂರ್ತಿ ಸ್ವಾಮೀಜಿ, ದೋರನಹಳ್ಳಿಯ ಶಿವಲಿಂಗ ರಾಜೇಂದ್ರ ಸ್ವಾಮೀಜಿ, ಶಹಾಪುರದ ಗುರುಪಾದ ಸ್ವಾಮೀಜಿ, ಶೀರ್ಷಾಡದ ಮುರುಘೇಂದ್ರ ಸ್ವಾಮೀಜಿ, ಸೇಡಂನ ಸದಾಶಿವ ಸ್ವಾಮೀಜಿ, ಶಹಾಪುರ ಕಾಳಹಸ್ತೇಂದ್ರ ಸ್ವಾಮೀಜಿ, ಹುಕ್ಕೇರಿಯ ಚಂದ್ರಶೇಖರ ಸ್ವಾಮೀಜಿ, ದೇವಾಪುರದ ಶಿವಮೂರ್ತಿ ಸ್ವಾಮೀಜಿ, ಗಬ್ಬೂರಿನ ಬೂದಿ ಬಸವ ಸ್ವಾಮೀಜಿ, ದೇವದುರ್ಗದ ಕಪಿಲ ಸಿದ್ದರಾಮ ಸ್ವಾಮೀಜಿ, ಹಲಕರ್ಟಿಯ ಮುನೀಂದ್ರ ಸ್ವಾಮೀಜಿ, ಮಾಜಿ ಶಾಸಕರಾದ ಡಾ.ಎ.ಬಿ.ಮಾಲಕರೆಡ್ಡಿ, ಡಾ.ವೀರಬಸವಂತರಡ್ಡಿ ಮುದ್ನಾಳ, ಗುರುಪಾಟೀಲ ಶಿರವಾಳ, ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಚೆನ್ನಾರಡ್ಡಿ ಪಾಟೀಲ ತುನ್ನೂರ, ವಾಲ್ಮೀಕಿ ನಾಯಕ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜಶೇಖರ ಪಾಟೀಲ ವಜ್ಜಲ್, ಬೆಳಗಾವಿ ಜಿಪಂ ಅಧ್ಯಕ್ಷ ಆಶಾ ಐಹೊಳೆ, ಮುಖಂಡರಾದ ಚಂದ್ರಶೇಖರ ಸಾಹು ಆರಬೋಳ, ಕೇದಾರಲಿಂಗಯ್ಯ ಹಿರೇಮಠ, ಶರಣಪ್ಪಗೌಡ ಮಲ್ಹಾರ, ಶಿವಶಂಕ್ರಪ್ಪ ಎಸ್ ಸಾಹುಕಾರ, ಡಾ.ಶರಣಭೂಪಾಲರೆಡ್ಡಿ ನಾಯ್ಕಲ್, ಚೆನ್ನಪ್ಪಗೌಡ ಮೋಸಂಬಿ, ಡಾ.ಸುಭಾಶ್ಚಂದ್ರ ಕೌಲಗಿ, ಡಾ.ವೀರೇಶ ಜಾಕಾ, ಎಸ್.ಎನ್.ಮಿಂಚನಾಳ, ವೀರಣ್ಣ ಪ್ಯಾರಸಾಬಾದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT