ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆ ಹಾಡಿಗೆ ಒಲಿದ ಜಾನಪದ ಪ್ರಶಸ್ತಿ

ಹಾಡುಗಳನ್ನೇ ಬದುಕನ್ನಾಗಿಸಿಕೊಂಡಿರುವ ಬಸಲಿಂಗಮ್ಮ ಶಾಂತಪ್ಪ ಗೋಗಿ
Last Updated 4 ಜನವರಿ 2021, 16:57 IST
ಅಕ್ಷರ ಗಾತ್ರ

ಶಹಾಪುರ: 2020ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಯು ತಾಲ್ಲೂಕಿನ ಗೋಗಿ ಗ್ರಾಮದ ಬಸಲಿಂಗಮ್ಮ ಶಾಂತಪ್ಪ ಗೋಗಿ ಅವರಿಗೆ ಒಲಿದು ಬಂದಿದೆ.

70ರ ಇಳಿ ವಯಸ್ಸಿನಲ್ಲಿಯೂ ತನ್ನ ಸೊಗಸಾದ ಅಪ್ಪಟ ಕಲ್ಯಾಣ ಕರ್ನಾಟಕ ಭಾಷೆಯ ಸೊಗಡು ತುಂಬಿಕೊಂಡಿರುವ ಬಸಲಿಂಗಮ್ಮ ಅವರು ಹಾಡು ಎಂದರೆ ಇಷ್ಟಗಲ ಬಾಯಿ ತೆರೆದು ಸಂಭ್ರಮಿಸುತ್ತಾರೆ. ಮದುವೆ ಹಾಡು ವಿಭಾಗದಲ್ಲಿ ಅವರಿಗೆ ಪ್ರಶಸ್ತಿ ಒಲಿದಿದೆ.

‘ಸುರಪುರ ತಾಲ್ಲೂಕಿನ ತೀರ್ಥ ಗ್ರಾಮ ನನ್ನ ತವರು ಮನೆ. ಅತ್ಯಂತ ಹಿಂದುಳಿದ ಸವಿತಾ (ಹಡಪದ) ಸಮಾಜದ ಮಗಳಾಗಿರುವೆ. 10ನೇ ವಯಸ್ಸಿಗೆ ಮದುವೆಯಾದೆ. ಮೂವರು ಗಂಡು ಮಕ್ಕಳು ಹಾಗೂ ನಾಲ್ವರು ಹೆಣ್ಣು ಮಕ್ಕಳನ್ನು ಹೆತ್ತು ತುಂಬು ಕುಟುಂಬ ಹೊಂದಿರುವೆ. ತಾಯಿಯಿಂದ ನಾನು ಜಾನಪದ ಹಾಡುಗಳನ್ನು ಬಳುವಳಿಯಾಗಿ ಪಡೆದುಕೊಂಡೆ. ಹಾಡು ಎಂದರೆ ನನಗೆ ಎಲ್ಲಿಲ್ಲದ ಖುಷಿ, ಆನಂದ ನೀಡುತ್ತದೆ. ಕೂಲಿ ಕೆಲಸಕ್ಕೆ ತೆರಳಿದಾಗಲೂ ಅಲ್ಲಿನ ಕೆಲಸದ ಜೊತೆಗೆ ಹಾಡುತ್ತಲೇ ಸಂಭ್ರಮಿಸುತ್ತಿದ್ದೆ. ನೋವು, ಸಂಕಟ ಎದುರಾದರೂ ನನಗೆ ಹಾಡು ದಿವ್ಯ ಔಷಧಿ ಹಾಗೂ ಮಂತ್ರವಾಗಿದೆ’ ಎನ್ನುತ್ತಾರೆ ಬಸಲಿಂಗಮ್ಮ.

ಮದುವೆ ಶಾಸ್ತ್ರದ ಹಾಡುಗಳು, ಸೋಬಾನೆ, ಸೀಮಂತ, ಜೋಗುಳ, ಬೀಸುವ, ಕುಟ್ಟುವ, ಗೌರಿ ಹೀಗೆ ವಿವಿಧ ಪ್ರಕಾರದ ಹಾಡುಗಳನ್ನು ಹಾಡುತ್ತೇನೆ. ಸುಮಾರು 100ಕ್ಕೂ ಹೆಚ್ಚು ಹಾಡುಗಳು ನೆನಪಿನ ಆಳದಲ್ಲಿಯೇ ಇವೆ. ಕೇವಲ 2ನೇ ತರಗತಿ ಅಭ್ಯಾಸ ಮಾಡಿರುವೆ. ಅಕ್ಷರದ ಜ್ಞಾನ ನನಗಿಲ್ಲ. ಡಾ.ಶೈಲಜಾ ಬಾಗೇವಾಡಿ ಅವರು ನನ್ನ ಹಾಡುಗಳನ್ನು ಅಕ್ಷರದ ರೂಪದಲ್ಲಿ ಇಳಿಸಿ ಅದಕ್ಕೊಂದು ಚೌಕಟ್ಟು ನಿರ್ಮಿಸಿದರು. ಈ ಪ್ರಶಸ್ತಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

ಡಾ.ಶೈಲಜಾ ಬಾಗೇವಾಡಿ ಅವರು ಬರೆದ ‘ಗೋಗಿ ಬಸಲಿಂಗಮ್ಮನವರ ಜನಪದ ಹಾಡುಗಳು’ ಪುಸ್ತಕಕ್ಕೆ 2018ನೇ ಸಾಲಿನ ಗುಲಬರ್ಗಾ ವಿವಿ ಪ್ರಸಾಂಗಣದ ರಾಜ್ಯೋತ್ಸವ ಪ್ರಶಸ್ತಿ, ಜನಪದ ಒಡತಿ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳು ಒಲಿದಿವೆ. ಬಸಲಿಂಗಮ್ಮ ಅವರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ ಲಭಿಸಿರುವುದು ಸಗರನಾಡಿನ ಜನತೆಗೆ ಖುಷಿ ನೀಡಿದೆ. ಅಲ್ಲದೆ ಪ್ರಸಕ್ತ ವರ್ಷ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಗೋಗಿ ಗ್ರಾಮದ ಶಿಲಾ ಶಾಸನಗಳ ಸಂಶೋಧಕ ಡಿ.ಎನ್.ಅಕ್ಕಿ ಅವರಿಗೆ ಲಭಿಸಿರುವುದನ್ನು ಇಲ್ಲಿ ಸ್ಮರಿಸಬೇಕು.

2009ರಲ್ಲಿ ಶಾಂತಪ್ಪ ಗೋಗಿ ಅವರಿಗೆ ಸಂಗೀತ ಹಾಗೂ ನಾಟಕಕ್ಕಾಗಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಒಲಿದಿತ್ತು. ಈಗ ಅವರ ಪತ್ನಿ ಬಸಲಿಂಗಮ್ಮ ಅವರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

***

ಬಸಲಿಂಗಮ್ಮ ಜನಪದ ಖಣಿಯಾಗಿದ್ದಾರೆ. ಇಳಿವಯಸ್ಸಿನಲ್ಲೂ 108 ನುಡಿಗಳ ಹಾಡನ್ನು ಹಾಡುತ್ತಾರೆ ಎಂದರೆ ತಮಾಷೆಯಲ್ಲ. ಒಗಟು ಹೇಳುವುದರಲ್ಲೂ ನಿಸ್ಸೀಮರು

- ಡಾ.ಶೈಲಜಾ ಬಾಗೇವಾಡಿ, ಉಪನ್ಯಾಸಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT