ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಪುರ: ಕುರುಬ ಸಮಾಜದ ಬೃಹತ್ ಪ್ರತಿಭಟನೆ

ಪರಿಶಿಷ್ಟ ಪಂಗಡ ಮೀಸಲಾತಿಗೆ ಆಗ್ರಹ
Published 4 ಜನವರಿ 2024, 16:26 IST
Last Updated 4 ಜನವರಿ 2024, 16:26 IST
ಅಕ್ಷರ ಗಾತ್ರ

ಸುರಪುರ: ಗೊಂಡ ಕುರುಬ, ಜೇನು ಕುರುಬ, ಕಾಡು ಕುರುಬದ ಪರ್ಯಾಯ ಪದವೇ ಕುರುಬ ಎಂದು ಪರಿಗಣಿಸಿ ತಮ್ಮ ಸಮುದಾಯವನ್ನು ಪರಿಶಿಷ್ಟ (ಎಸ್ಟಿ) ಪಂಗಡಕ್ಕೆ ಸೇರಿಸುವಂತೆ ಒತ್ತಾಯಿಸಿ ಕುರುಬ ಸಮಾಜದವರು ಗುರುವಾರ ನಗರದ ಗಾಂಧಿವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ತಿಂಥಣಿ ಕನಕ ಗುರುಪೀಠದ ಸಿದ್ದರಾಮಾನಂದಪುರಿ ಸ್ವಾಮೀಜಿ ಮಾತನಾಡಿ, ‘ಕುರುಬ ಸಮುದಾಯಕ್ಕೆ ಬುಡಕಟ್ಟು ಜನಾಂಗದ ಪರಂಪರೆ ಇದೆ. ಈ ಕುರಿತು ಕುಲಶಾಸ್ತ್ರೀಯ ಅಧ್ಯಯನ ವರದಿಯಲ್ಲಿ ಮಾಹಿತಿ ನೀಡಲಾಗಿದೆ. ಗೊಂಡ, ಆದಿಗೊಂಡ, ಜೇನು, ಕಾಡು ಕುರುಬ ಇವೆಲ್ಲವು ಕುರುಬರ ಪರ್ಯಾಯ ಪದಗಳು. ಕುರುಬರೇ ಗೊಂಡರು ಎಂದು ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿದೆ. ಆದರೆ ಕೇಂದ್ರ ಸರ್ಕಾರ ನಮ್ಮ ನ್ಯಾಯಯುತ ಬೇಡಿಕೆಗೆ ಸ್ಪಂದಿಸುತ್ತಿಲ್ಲ’ ಎಂದು ಆರೋಪಿಸಿದರು.

‘ಮೀಸಲಾತಿಗೆ ಒತ್ತಾಯಿಸಿ ದಶಕಗಳಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ. ಕೇಂದ್ರ ಸರ್ಕಾರದ ಮೊಂಡುತನ ಖಂಡಿಸಿ ಬೀದಿಗಿಳಿದಿದ್ದೇವೆ. ಈ ಕಿಚ್ಚು ಸುನಾಮಿಯಂತೆ ರಾಜ್ಯದಾದ್ಯಂತ ಹಬ್ಬಿಕೊಳ್ಳಲಿದೆ. ಸಮುದಾಯದವರೆಲ್ಲರೂ ಒಗ್ಗಟ್ಟಾಗಿ ಕುರುಬರ ಶಕ್ತಿ ಏನೆಂಬುದು ಗೊತ್ತುಪಡಿಸಬೇಕಿದೆ. ಮೀಸಲಾತಿ ಸಿಗುವವರೆಗೆ ಹೋರಾಟ ನಿಲ್ಲುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

ಅಗತೀರ್ಥ ರೇವಣಸಿದ್ದೇಶ್ವರ ಮಠದ ಶಾಂತಮಯ ಸ್ವಾಮೀಜಿ ಮಾತನಾಡಿ, ‘ಮೀಸಲಾತಿ ವಿಷಯದಲ್ಲಿ ನಿರಂತರವಾಗಿ ಅನ್ಯಾಯ ಆಗುತ್ತಿದೆ. ಚುನಾವಣೆ ಪೂರ್ವದಲ್ಲಿ ನೀಡಿದ ಭರವಸೆಯಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರ ನಡೆದುಕೊಳ್ಳಬೇಕು. ನಾವು ಯಾವುದೇ ಸಮುದಾಯದ ಹಕ್ಕು ಕಸಿದುಕೊಳ್ಳುತ್ತಿಲ್ಲ. ಮೊಟಕುಗೊಳಿಸುವಂತೆ ಒತ್ತಾಯಿಸುತ್ತಿಲ್ಲ. ಸಂವಿಧಾನ ಬದ್ದವಾಗಿ ನಮ್ಮ ಹಕ್ಕು ಪ್ರತಿಪಾದಿಸುತ್ತಿದ್ದೇವೆ. ಕೇಂದ್ರ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದರು.

ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಣ್ಣ ಐಕೂರ, ನಿಂಗಣ್ಣ ಚಿಂಚೋಡಿ, ರಂಗನಗೌಡ ಪಾಟೀಲ ದೇವಿಕೇರಿ, ಭೀಮರಾಯ ಮೂಲಿಮನಿ, ಮಲ್ಲು ದಂಡಿನ, ಮಲ್ಲಯ್ಯ ಕಮತಗಿ ಮಾತನಾಡಿದರು.
ಪ್ರಧಾನಿಯವರಿಗೆ ಬರೆದ ಮನವಿಯನ್ನು ತಹಶೀಲ್ದಾರ್ ಕೆ. ವಿಜಯಕುಮಾರ ಅವರಿಗೆ ಸಲ್ಲಿಸಿದರು.

ಕೆಂಚಪ್ಪ ಪೂಜಾರಿ, ಸಾಯಿಬಣ್ಣ ಮತ್ತ್ಯಾ, ಸಕ್ರೆಪ್ಪ ಮುತ್ತ್ಯಾ, ತಾಲ್ಲೂಕು ಘಟಕದ ಅಧ್ಯಕ್ಷ ಕಾಳಪ್ಪ ಕವಾತಿ, ಗೌರವಾಧ್ಯಕ್ಷ ಬೀರಲಿಂಗ ಮಗ್ಗದ, ಮುಖಂಡರಾದ ಗದ್ದೆಪ್ಪ ಪೂಜಾರಿ, ಪರಮಣ್ಣ ಹಾಲಭಾವಿ, ಕೃಷ್ಣ ಬಾದ್ಯಾಪುರ, ಗಾಳೆಪ್ಪ ಹಾದಿಮನಿ, ಹಯ್ಯಾಳಪ್ಪ ಮಾಲಗತ್ತಿ, ನಂದಣ್ಣ ವಾರಿ, ಮಲ್ಲಣ್ಣ ಬೋವಿ ಇತರರು ಉಪಸ್ಥಿತರಿದ್ದರು.

ಪೊಲೀಸರೊಂದಿಗೆ ಮಾತಿನ ಚಕಮಕಿ:

ಬೆಳಿಗ್ಗೆ ತಾಲ್ಲೂಕಿನ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಕುರುಬ ಸಮಾಜದವರು ನಗರದ ವೇಣುಗೋಪಾಲಸ್ವಾಮಿ ದೇವಸ್ಥಾನದಿಂದ ಗಾಂಧಿವೃತದವರೆಗೆ ಮೆರವಣಿಗೆ ನಡೆಸಿದರು. ಅರಮನೆ ಮಾರ್ಗದಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಯಿತು. ಗಾಂಧಿವೃತ್ತದಲ್ಲಿ ದಿಢೀರ್ ರಸ್ತೆತಡೆ ನಡೆಸಿದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದು ತಳ್ಳಾಟ ನೂಕಾಟ ನಡೆಯಿತು. ರಸ್ತೆ ತಡೆ ತೆರವುಗೊಳಿಸಲು ಪೊಲೀಸರು ಹರಸಾಹಸಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT