ಗುರುವಾರ , ಅಕ್ಟೋಬರ್ 6, 2022
22 °C
ಮುಂದುವರಿದ ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆ ಗೊಂದಲ, ನಗರದಲ್ಲಿ ಬೃಹತ್‌ ಜಾಥಾ

ಯಾದಗಿರಿ ಶಾಸಕರ ವಿರುದ್ಧ ಅಹಿಂದ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ನಗರದ ಗಂಜ್ ವೃತ್ತದಲ್ಲಿ ಕಾನೂನು ಬಾಹಿರವಾಗಿ ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆ ಮಾಡುವ ವಿಚಾರವಾಗಿ ಯಾದಗಿರಿ ಶಾಸಕ ವೆಂಕಟರಡ್ಡಿ ಮುದ್ನಾಳ ವಿರುದ್ಧ ಅಹಿಂದ ಸಮುದಾಯದಿಂದ ಸೋಮವಾರ ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

ಮೈಲಾ‍ಪುರ ಆಗಸಿಯಲ್ಲಿ ಜಮಾಯಿಸಿದ ಅಹಿಂದ ಮುಖಂಡರು ಚಕ್ರಕಟ್ಟಾ ಮಾರ್ಗವಾಗಿ ಗಾಂಧಿ ವೃತ್ತದಲ್ಲಿ ಸೇರಿ ಶಾಸಕರ ವಿರುದ್ಧ ಘೋಷಣೆ ಕೂಗಿದರು.

ಅಲ್ಲಿಂದ ಸುಭಾಷ ಚಂದ್ರ ಬೋಸ್‌ ವೃತ್ತದಲ್ಲಿ ಜಮಾಯಿಸಿ, ಬೃಹತ್ ಪ್ರತಿಭಟನೆ ನಡೆಸಿದರು.

ನಗರಸಭೆ ಸದಸ್ಯೆ ಲಲಿತಾ ಅನ‍ಪುರ ಮಾತನಾಡಿ, ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರು ಕಾನೂನು ಉಲ್ಲಂಘಿಸಿ ಸಾರ್ವಜನಿಕ ಸ್ಥಳದಲ್ಲಿ ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆ ವಿಷಯವಾಗಿ ಏಕಮುಖವಾಗಿ ವರ್ತಿಸುತ್ತಿದ್ದಾರೆ. ಸುಪ್ರೀಂ ಕೋರ್ಟ್‌ನ ಆದೇಶವನ್ನು ಸ್ಪಷ್ಟ ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸಾರ್ವಜನಿಕ ಸ್ಥಳದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಬಾರದು ಎಂದು ಕೋರ್ಟ್‌ ಹೇಳಿದೆ. ಆದರೆ, ಶಾಸಕರು ಭೂಮಿ ಪೂಜೆಗೆ ಮುಂದಾಗಿದ್ದಾರೆ. ಅದನ್ನು ಬಿಟ್ಟು ತಮ್ಮ ಸ್ವಂತ ಜಾಗದಲ್ಲಿ ಪುತ್ಥಳಿ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿದರು.

ಶಾಸಕರು ಮೂರ್ತಿ ವಿಷಯದಲ್ಲಿ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಡಿಡಿಯು ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಡಾ.ಭೀಮಣ್ಣ ಮೇಟಿ ಮಾತನಾಡಿ, ಯಾರೇ ಆಗಲಿ ಕಾನೂನಿಗೆ ಗೌರವ ಕೊಡಬೇಕು. ಆದರೆ, ಶಾಸಕರು ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಜತೆಗೆ ಮೂರ್ತಿ ಸ್ಥಾಪನೆ ಮಾಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಕೋರ್ಟ್‌ ಆದೇಶ ಸ್ಪಷ್ಟ ಉಲ್ಲಂಘನೆಯಾಗುತ್ತದೆ ಎಂದರು.

ಅಹಿಂದ ಮುಖಂಡ ಹನುಮೇಗೌಡ ಬೀರನಕಲ್ಲ ಮಾತನಾಡಿ, ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರು ದ್ವೇಷ ರಾಜಕಾರಣದ ಜತೆಗೆ ದರ್ಪ, ದೌರ್ಜನ್ಯ ಮಾಡುತ್ತಿದ್ದಾರೆ. ಇದು ಅವರಿಗೆ ಶೋಭೆ ತರುವುದಿಲ್ಲ. ಅದು ಬಿಟ್ಟು ಕಾನೂನಿಗೆ ಗೌರವ ಕೊಡಬೇಕು ಎಂದು ಒತ್ತಾಯಿಸಿದರು.

ಶಾಸಕರಾಗಿ ಒಂದು ಸಮುದಾಯವನ್ನು ಓಲೈಸುವ ಕೆಲಸ ಮಾಡುತ್ತಿದ್ದಾರೆ. ಎಲ್ಲ ಸಮುದಾಯವನ್ನು ಒಟ್ಟಿಗೆ ಕರೆದೊಯ್ಯವ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದರು.

ಮೌಲಾಲಿ ಅನಪುರ, ಶರಣಪ್ಪ ಮಾನೆಗಾರ, ಸಾಯಿಬಣ್ಣ ಬೋರಬಂಡ, ವಿಜಯಕುಮಾರ ಶಿರಗೋಳ ಸೇರಿದಂತೆ ಹಲವರು ಮಾತನಾಡಿದರು.

ಟ್ರಾಫಿಕ್‌ ಜಾಂ: ಸುಭಾಷ ವೃತ್ತದಲ್ಲಿ ಅಹಿಂದ ಸಮುದಾಯದಿಂದ ಬೃಹತ್‌ ಪ್ರತಿಭಟನೆ ನಡೆದಿದ್ದರಿಂದ ಅರ್ಧಗಂಟೆಗೂ ಹೆಚ್ಚು ಕಾಲ ಟ್ರಾಫಿಕ್‌ ಜಾಂ ಆಯಿತು. ಲಾಲ್‌ಬಹದ್ದೂರ್‌ ಶಾಸ್ತ್ರಿ ವೃತ್ತದಲ್ಲಿ ಬ್ಯಾರಿಕೇಡ್‌ ಹಾಕಿ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಯಿತು. ಪದವಿ ಕಾಲೇಜು ಬಳಿ ಬ್ಯಾರಿಕೇಡಿ ಅಳವಡಿಸಿದ್ದರಿಂದ ಬಸ್‌, ಲಾರಿ, ಬೈಕ್‌ ಸೇರಿದಂತೆ ವಾಹನ ಸವಾರರು ಸುತ್ತುಬಳಸಿ ಸಂಚಾರಿಸಬೇಕಾಯಿತು.

ಬೃಹತ್‌ ಜಾಥಾ: ಮೈಲಾಪುರ ಅಗಸಿಯಿಂದ ಆರಂಭವಾದ ಜಾಥಾದಲ್ಲಿ ಜಿಲ್ಲೆಯ ಎಲ್ಲ ತಾಲ್ಲೂಕುಗಳಿಂದ ಬಂದಿದ್ದ ಜನರು ಭಾಗಿಯಾಗಿದ್ದರು. ಬಸವೇಶ್ವರ, ಅಂಬಿಗರ ಚೌಡಯ್ಯ, ಮಹರ್ಷಿ ವಾಲ್ಮೀಕಿ ಸೇರಿದಂತೆ ಹಲವರ ಶರಣರ ಭಾವಚಿತ್ರ ಮೆರವಣಿಗೆ ಮಾಡಲಾಯಿತು.

ಮುಖಂಡರಾದ ಬಾಷುಮಿಯಾ ವಡಗೇರಾ, ಹಣಮಂತ ಮಡ್ಡಿ, ಸುರೇಶ ಮಡ್ಡಿ, ರಾಮ ಲಕ್ಷ್ಮೀ ರಾಠೋಡ, ವಿಶ್ವನಾಥ, ಸುರೇಶ ಕೋಟಿಮನಿ, ಶಫಿ ತುನ್ನೂರು, ಮಲ್ಲು ಎಂ. ಹಲಗಿ, ಶರಣು ಎಲ್ಹೇರಿ, ಶಂಕರ, ಕತಲಪ್ಪ, ಯಲ್ಲಪ್ಪ ಸೇರಿದಂತೆ ಅಹಿಂದ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು