ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಕುಟುಂತಾ ಸಾಗುತ್ತಿರುವ ಕಾಮಗಾರಿ, ಪೂರ್ಣಗೊಳ್ಳದ ರಂಗ ಮಂದಿರ

ಕುಟುಂತಾ ಸಾಗುತ್ತಿರುವ ಕಾಮಗಾರಿ: ಜಿಲ್ಲೆಯಾಗಿ 13 ವರ್ಷಗಳಾಗುತ್ತಿದ್ದರೂ ಸುಸಜ್ಜಿತ ಭವನದ ಕೊರತೆ
Published 9 ಆಗಸ್ಟ್ 2023, 6:35 IST
Last Updated 9 ಆಗಸ್ಟ್ 2023, 6:35 IST
ಅಕ್ಷರ ಗಾತ್ರ

ಯಾದಗಿರಿ: ಕಲೆ, ಕಲಾವಿದರಿಗೆ ನೆಲೆಯೊದಗಿಸಬೇಕಿದ್ದ ರಂಗಮಂದಿರ ಕಟ್ಟಡ ಇನ್ನೂ ಪೂರ್ಣಗೊಂಡಿಲ್ಲ. ಜಿಲ್ಲೆಯಾಗಿ 13 ವರ್ಷಗಳಾಗುತ್ತಿದ್ದರೂ ಸುಸಜ್ಜಿತ ಭವನದ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ.

ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಪರಿಣತಿ ಪಡೆದ ಸಾವಿರಾರು ಕಲಾವಿದರು ಇದ್ದು, ಸಾಂಸ್ಕೃತಿಕ ಕಾರ್ಯಕ್ರಮ ಅಯೋಜನೆಗೆ ಖಾಸಗಿ ಕಲ್ಯಾಣ ಮಂಟಪಗಳ ಮೊರೆ ಹೋಗಬೇಕಾಗಿದೆ. ಅದೂ ದುಬಾರಿ ಬಾಡಿಗೆ ನೀಡಿ ಕಾರ್ಯಕ್ರಮ ನಡೆಸುವ ಅನಿವಾರ್ಯತೆ ಇದೆ.

ನೃತ್ಯ, ಸಂಗೀತ, ರಂಗಭೂಮಿ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶ ಕಲ್ಪಿಸುವ ಸುಸಜ್ಜಿತ ರಂಗ ಮಂದಿರ ಜಿಲ್ಲೆಯಲ್ಲಿ ಇದ್ದರೆ ಕಲಾವಿದರಿಗೆ ಅನುಕೂಲವಾಗಲಿದೆ. ಕಲಾ ಶ್ರೀಮಂತಿಕೆ ಪ್ರದರ್ಶಿಸಲು ಸೂಕ್ತ ವೇದಿಕೆ ಇಲ್ಲದಾಗಿದೆ. ಸರ್ಕಾರಿ ಕಟ್ಟಡ ಇದ್ದರೆ ಕಡಿಮೆ ಖರ್ಚಿನಲ್ಲಿ ಕಾರ್ಯಕ್ರಮ ಮಾಡಬಹುದು. ಆದರೆ, ಇನ್ನೂ ಕಾಲ ಕೂಡಿ ಬಂದಿಲ್ಲ.

ರಂಗಮಂದಿರ ಕಾಮಗಾರಿಗಾಗಿ ಮತ್ತೆ ₹1.40 ಕೋಟಿ ಅನುದಾನ ಮಂಜೂರಾಗಿದೆ. ಕೆಆರ್‌ಐಡಿಎಲ್ ವತಿಯಿಂದ ಕಾಮಗಾರಿ ಮಾಡಲಾಗುತ್ತಿದ್ದು ಈ ವರ್ಷದೊಳಗೆ ‍ಪೂರ್ಣಗೊಳಿಸಲು ಗಡವು ನೀಡಲಾಗಿದೆ.
ಉತ್ತರದೇವಿ ಮಠಪತಿ ಸಹಾಯಕ ನಿರ್ದೇಶಕಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ

7–8 ವರ್ಷಗಳಿಂದ ಕಾಮಗಾರಿ: ಜಿಲ್ಲಾಧಿಕಾರಿ ಕಚೇರಿ ಹಿಂಭಾಗದಲ್ಲಿ ರಂಗಮಂದಿರ ಕಾಮಗಾರಿ ಕಳೆದ ಏಳೆಂಟು ವರ್ಷಗಳಿಂದ ನಡೆಯುತ್ತಿದೆ. ಆದರೆ, ಇಷ್ಟು ವರ್ಷಗಳಾದರೂ ಕಾಮಗಾರಿ ಇನ್ನೂ ಪೂರ್ಣಗೊಳ್ಳದಿರುವುದು ಕಲಾವಿದರ ಬಗ್ಗೆ ಇರುವ ನಿರ್ಲಕ್ಷ್ಯ ತೋರಿಸುತ್ತಿದೆ ಎನ್ನುತ್ತಾರೆ ಕಲಾವಿದರು.

2012–13ರಲ್ಲಿ ರಂಗಮಂದಿರ ಕಟ್ಟಡ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ. 2016ರಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಮೊದಲಿಗೆ ₹2 ಕೋಟಿ ಅನುದಾನ ಮಂಜೂರಾಗಿತ್ತು. ₹1.40 ಕೋಟಿ ಮಾತ್ರ ಬಂದಿತ್ತು. ಹಿಂದಿನ ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರು ₹50 ಲಕ್ಷ ಕಟ್ಟಡಕ್ಕಾಗಿ ಅನುದಾನ ಮಂಜೂರು ಮಾಡಿದ್ದರು. ಈಗ ₹1.40 ಕೋಟಿ ಅನುದಾನ ಬಂದಿದೆ.

ಜಿಲ್ಲಾ ಕೇಂದ್ರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ರಂಗಮಂದಿರ ಕಾಮಗಾರಿ ಇನ್ನೂ ಮುಗಿದಿಲ್ಲ. ಇದರಿಂದ ಕಲಾವಿದರು ಖಾಸಗಿಯಾಗಿ ಅಯೋಜಿಸುವುದರಿಂದ ಸಾವಿರಾರು ರೂಪಾಯಿ ಬಾಡಿಗೆ ವ್ಯಯಿಸಬೇಕಿದೆ
ಸಿದ್ಧರಾಜ ರೆಡ್ಡಿ ಸಾಂಸ್ಕೃತಿಕ ಸಂಘಟಕ

ನಗರದಿಂದ ದೂರ: ನಿರ್ಮಾಣವಾಗುತ್ತಿರುವ ರಂಗಮಂದಿರ ಕಟ್ಟಡವು ನಗರದಿಂದ 2 ಕೀ.ಮೀ. ಅಂತರದಲ್ಲಿದೆ. ಕೆಲವೊಮ್ಮೆ ರಾತ್ರಿ ವೇಳೆಯಲ್ಲಿ ರಂಗಮಂದಿರದಲ್ಲಿ ನಾಟಕ, ಸಭೆಗಳು ಜರುಗುತ್ತವೆ. ಅಂಥ ಸಂದರ್ಭದಲ್ಲಿ ನಗರ ಹೊರವಲಯಕ್ಕೆ ಬರಲು ಸಾರ್ವಜನಿಕರು ಹಿಂದೇಟು ಹಾಕುವ ಸಂಭವವಿದೆ. ಅದಕ್ಕೆ ಬದಲಾಗಿ ನಗರದ ಮಧ್ಯ ಭಾಗದಲ್ಲಿ ಕಟ್ಟಡ ನಿರ್ಮಾಣವಾಗಿದ್ದರೆ ಪ್ರತಿಯೊಬ್ಬರಿಗೆ ಅನುಕೂಲವಾಗುತ್ತಿತ್ತು ಎಂದು ಕಲಾವಿದರು ಅಭಿಪ್ರಾಯಪಡುತ್ತಾರೆ.

ರಂಗಮಂದಿರಕ್ಕೆ ಮೀಸಲಿಟ್ಟ ಅನುದಾನ ಸಮಪರ್ಕವಾಗಿ ಬಾರದ ಕಾರಣ ಕಾಮಗಾರಿ ವಿಳಂಬವಾಗಿದೆ. ಕಾಮಗಾರಿ ನಾಲ್ಕು ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು. ಆದರೆ ಒಳಾಂಗಣಕ್ಕೆ ಯಾವುದೇ ಅನುದಾನವಿಲ್ಲ
ಧನಂಜಯ ಆರ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕೆಆರ್‌ಐಡಿಎಲ್

₹15 ಸಾವಿರ ಬಾಡಿಗೆ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಳ್ಳುವ ಜಯಂತಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ₹15 ಸಾವಿರ ಬಾಡಿಗೆ ನೀಡುವ ಅನಿವಾರ್ಯತೆ ಇದೆ. ಕಳೆದ ಏಳೆಂದು ವರ್ಷಗಳಿಂದ ದುಬಾರಿ ಬಾಡಿಗೆ ನೀಡಿ ಖಾಸಗಿ ಕಟ್ಟಡಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಾ ಬರಲಾಗಿದೆ. ಬಾಡಿಗೆಗೆ ಕೋಟ್ಯಂತರ ವೆಚ್ಚವಾದರೂ ಕಟ್ಟಡ ಕಾಮಗಾರಿ ಪೂರ್ಣಗೊಳಿಸುವ ಗೋಜಿಗೆ ಸಂಬಂಧಿಸಿದವರು ಹೋಗಿಲ್ಲ ಎನ್ನುವುದು ವಿಪರ್ಯಾಸವಾಗಿದೆ. ಇನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲು ಕಲಾವಿದರು ಪರದಾಡುತ್ತಿದ್ದಾರೆ. ಮೈಕ್ ಸೆಟ್‌ ಸೇರಿದಂತೆ ಸೌಂಡ್‌ ಸಿಸ್ಟಂಗಾಗಿ ₹10 ರಿಂದ 15 ಸಾವಿರ ವೆಚ್ಚವಾಗುತ್ತದೆ. ಖಾಸಗಿ ಕಲ್ಯಾಣ ಪಂಟಪದಲ್ಲಿ ಸರಿಯಾದ ವೇದಿಕೆ ಇರುವುದಿಲ್ಲ. ಇದರಿಂದ ಸೌಂಡ್‌ ಸಿಸ್ಟಂ ಸರಿಯಾಗಿ ನಿರ್ವಹಣೆ ಆಗುವುದಿಲ್ಲ. ಇದರಿಂದ ಕಲಾವಿದರ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆಗೆ ಸಂಕಷ್ಟ ಪಡುತ್ತಿದ್ದಾರೆ.

ರಂಗಮಂದಿರದ ಎಲ್ಲ ಕಾಮಗಾರಿಯನ್ನು ಶೀಘ್ರ ಮುಗಿಸಿ ಕಲಾವಿದರಿಗೆ ಅನುಕೂಲ ಮಾಡಿಕೊಡಬೇಕು. ಈಗಾಗಲೇ ನಮ್ಮ ಸಂಘದಿಂದ ಹಲವಾರು ಬಾರಿ ಮನವಿ ಸಲ್ಲಿಸಲಾಗಿದೆ
ಶರಣು ನಾಟೇಕರ್ ಅಧ್ಯಕ್ಷ ವೃತ್ತಿ ರಂಗಭೂಮಿ ಕವಿ ಕಲಾವಿದರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT