ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೇರಿಯಾ ವಿರೋಧಿ ಮಾಸಾಚರಣೆ

ಸ್ವಚ್ಛತೆ ಕಾಪಾಡಿ ಸೊಳ್ಳೆಗಳಿಂದ ಹರಡುವ ರೋಗಗಳಿಂದ ದೂರವಿರಿ -ಡಾ.ಸೂರ್ಯಪ್ರಕಾಶ
Last Updated 29 ಜೂನ್ 2019, 15:46 IST
ಅಕ್ಷರ ಗಾತ್ರ

ಯಾದಗಿರಿ: ಮಲೇರಿಯಾ, ಚಿಕೂನ್‍ಗುನ್ಯಾ, ಡೆಂಗಿ, ಮೆದುಳು ಜ್ವರ ಹಾಗೂ ಆನೆಕಾಲು ರೋಗಗಳು ಸೊಳ್ಳೆ ಕಡಿತದಿಂದ ಹರಡುತ್ತವೆ. ಮನೆಯ ಸುತ್ತಮುತ್ತ ಪರಿಸರದಲ್ಲಿ ಸ್ವಚ್ಛತೆ ಕಾಪಾಡುವ ಮೂಲಕ ಈ ರೋಗಗಳಿಂದ ದೂರವಿರಬಹುದು ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಸೂರ್ಯಪ್ರಕಾಶ ಎಂ.ಕಂದಕೂರ ಸಲಹೆ ನೀಡಿದರು.

‌ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣ ಅಧಿಕಾರಿಗಳ ಕಾರ್ಯಾಲಯದ ವತಿಯಿಂದ ಹಮ್ಮಿಕೊಂಡಿದ್ದ ‘ಮಲೇರಿಯಾ ವಿರೋಧಿ ಮಾಸಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಿಂತ ನೀರಿನ ತಾಣಗಳು ಸೊಳ್ಳೆ ಉತ್ಪತ್ತಿಯ ಕೇಂದ್ರವಾಗಿರುತ್ತವೆ. ಆದ್ದರಿಂದ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರವಹಿಸಬೇಕು. ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತೆ ನೋಡಿಕೊಳ್ಳಬೇಕು. ಗ್ರಾಮಗಳಲ್ಲಿನ ತಗ್ಗುಗಳನ್ನು ಮಣ್ಣಿನಿಂದ ಮುಚ್ಚಿಸಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.

‘ಮಲೇರಿಯಾ ಒಂದು ಪ್ರಾಥಮಿಕ ಕಾಯಿಲೆಯಾಗಿದ್ದು, ಅನಾಫಿಲೀಸ್ ಎಂಬ ಹೆಣ್ಣು ಸೊಳ್ಳೆಯು ಒಬ್ಬರಿಂದ ಒಬ್ಬರಿಗೆ ಈ ರೋಗವನ್ನು ಹರಡುತ್ತದೆ. ಜ್ವರ, ಚಳಿ, ತಲೆನೋವು, ವಾಂತಿ, ಮೈ-ಕೈ ನೋವು ರೋಗದ ಲಕ್ಷಣಗಳಾಗಿವೆ. ಯಾವುದೇ ಜ್ವರ ಕಂಡುಬಂದಲ್ಲಿ ಸಾರ್ವಜನಿಕರು ಹತ್ತಿರದ ಆರೋಗ್ಯ ಸಂಸ್ಥೆಗೆ ಹೋಗಿ ಮಲೇರಿಯಾ ಪರೀಕ್ಷೆ ಮಾಡಿಸಿ, ತ್ವರಿತವಾಗಿ ಚಿಕಿತ್ಸೆ ಪಡೆದುಕೊಳ್ಳಬೇಕು. ಮಲೇರಿಯಾ ರೋಗದ ಚಿಕಿತ್ಸೆಗೆ ಅಗತ್ಯವಾದ ಔಷಧಿಗಳು ಸರ್ಕಾರಿ ಆಸ್ಪತ್ರೆ, ಚಿಕಿತ್ಸಾಲಯ, ಪ್ರಾಥಮಿಕ ಆರೋಗ್ಯ ಕೇಂದ್ರ, ಉಪ ಕೇಂದ್ರಗಳಲ್ಲಿ ಉಚಿತವಾಗಿ ನೀಡಲಾಗುವುದು’ ಎಂದು ಮಾಹಿತಿ ನೀಡಿದರು.

‘ಆನೆಕಾಲು ರೋಗಕ್ಕೆ ಕಾರಣವಾಗುವ ವೈರಸ್ ಮನುಷ್ಯನ ರಕ್ತದಲ್ಲಿ ಮಾತ್ರ ಜೀವಿಸುತ್ತದೆ. ಸರ್ಕಾರದ ವತಿಯಿಂದ ಪ್ರತಿ ವರ್ಷ ನೀಡಲಾಗುವ ಡಿಇಸಿ ಮಾತ್ರೆಗಳನ್ನು ಐದು ವರ್ಷಗಳ ವರೆಗೆ ತೆಗೆದುಕೊಂಡರೆ ಈ ರೋಗ ಬರದಂತೆ ಎಚ್ಚರಿಕೆ ವಹಿಸಬಹುದು. ಸೊಳ್ಳೆಯ ಪರದೆ, ಮುಲಾಮು, ಲಿಕ್ವಿಡೆಟರ್, ಬೇವಿನ ಮರದ ಸೊಪ್ಪಿನ ಹೊಗೆ ಮಾಡುವುದರಿಂದ ಸೊಳ್ಳೆ ಕಡಿತದಿಂದ ತಪ್ಪಿಸಿಕೊಂಡು ರೋಗಗಳಿಂದ ದೂರ ಇರಬಹುದು. ವೃದ್ಧರು, ಗರ್ಭಿಣಿಯರು, ಬಾಣಂತಿಯರು, ಸಣ್ಣಮಕ್ಕಳು ಹಗಲು ಹೊತ್ತಿನಲ್ಲಿ ವಿಶ್ರಾಂತಿ ಪಡೆಯುವಾಗ ಸೊಳ್ಳೆ ಪರದೆ ತಪ್ಪದೇ ಬಳಸಬೇಕು’ ಎಂದು ಹೇಳಿದರು.

ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ನೆಹರೂ ರಾಠೋಡ್, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಹಣಮಂತರೆಡ್ಡಿ, ಹಿರಿಯ ಆರೋಗ್ಯ ಸಹಾಯಕರಾದ ಪರಮರೆಡ್ಡಿ ಕಂದಕೂರ, ಶರಣಯ್ಯ, ಸಮಾಲೋಚಕ ಬಸವರಾಜ ಕಾಂತಾ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT