ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ ಜಿಲ್ಲೆಯಲ್ಲಿ ಕೋವಿಡ್‌ ತಡೆಗೆ ವ್ಯವಸ್ಥೆ

ಕೋವಿಡ್ ನಿಯಂತ್ರಣ ಕುರಿತು ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್. ಶಂಕರ್ ಭರವಸೆ
Last Updated 11 ಮೇ 2021, 4:01 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣ ನಿಟ್ಟಿನಲ್ಲಿ ಸೋಂಕಿತರಿಗೆ ಅಗತ್ಯವಿರುವ ಆಮ್ಲಜನಕ, ರೆಮ್‍ಡಿಸಿವಿರ್ ಮಾತ್ರೆ ಸೇರಿದಂತೆ ಎಲ್ಲಾ ವ್ಯವಸ್ಥೆ ಮಾಡುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಮಾತನಾಡುವುದಾಗಿ ತೋಟಗಾರಿಕೆ ಮತ್ತು ರೇಷ್ಮೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್. ಶಂಕರ್ ಭರವಸೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕೋವಿಡ್-19 ನಿಯಂತ್ರಣ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮಾತನಾಡಿದರು.

ಆಮ್ಲಜನಕ, ರೆಮ್‍ಡಿಸಿವಿರ್, ಬೆಡ್ ವ್ಯವಸ್ಥೆಗಳ ಕುರಿತಂತೆ ರಾಜ್ಯಮಟ್ಟದಲ್ಲಿ ನೇಮಕ ಮಾಡಲಾಗಿರುವ ನಾಲ್ವರು ನೋಡಲ್ ಸಚಿವರಿಗೂ ವರದಿ ಸಲ್ಲಿಸಿ ತಕ್ಷಣ ಜಿಲ್ಲೆಯಲ್ಲಿನ ಸಮಸ್ಯೆ ಹೋಗಲಾಡಿಸುವುದಾಗಿ ಹೇಳಿದರು.

ಜಿಲ್ಲಾಧಿಕಾರಿ ರಾಗಪ್ರಿಯಾ ಆರ್. ಮಾತನಾಡಿ, ಕೆಂಭಾವಿ ಪ್ರಾಥಮಿಕ ಆರೋಗ್ಯ ಕೇಂದ್ರ, ‌5 ಸಮುದಾಯ ಆರೋಗ್ಯ ಕೇಂದ್ರ ಹಾಗೂ ಎರಡು ತಾಲ್ಲೂಕು ಆಸ್ಪತ್ರೆಗಳಿಗೆ ಮಂಗಳವಾರದೊಳಗೆ ಆಮ್ಲಜನಕ ಪೂರೈಸಲಾಗುವುದು ಎಂದು ಮಾಹಿತಿ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಇಂದುಮತಿ ಕಾಮಶೆಟ್ಟಿ ಮಾತನಾಡಿ, ಜಿಲ್ಲೆಯಲ್ಲಿನ ಆಸ್ಪತ್ರೆಗಳಿಗೆ ರೆಮ್‍ಡಿಸಿವಿರ್ ಮತ್ತು ಆಮ್ಲಜನಕಕ್ಕೆ ಎಷ್ಟು ಬೇಡಿಕೆ ಸಲ್ಲಿಸುತ್ತಾರೋ ಅಷ್ಟು ನೀಡಲಾಗುತ್ತದೆ ಎಂದು ತಿಳಿಸಿದರು. ವಿವಿಧ ಖಾಲಿ ಹುದ್ದೆಗಳನ್ನು ತುಂಬಲು ಕ್ರಮಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

‘ತಾಲ್ಲೂಕು ಆಸ್ಪತ್ರೆಗಳಲ್ಲಿ ಆಮ್ಲಜನಕ ಪೂರೈಕೆ ಮಾಡುತ್ತಿಲ್ಲ. ಅಲ್ಲಿ ವ್ಯವಸ್ಥೆ ಮಾಡಿದರೆ, ಜಿಲ್ಲಾಸ್ಪತ್ರೆಗೆ ಬರುವ ಸೋಂಕಿತರ ಸಂಖ್ಯೆ ಕಮ್ಮಿಯಾಗಲಿದೆ’ ಎಂದು ಶಹಾಪುರ ಶಾಸಕ ಶರಣಬಸಪ್ಪ ದರ್ಶನಾಪುರ ಹಾಗೂ ಸುರಪುರ ಶಾಸಕ ರಾಜೂಗೌಡ ಸಲಹೆ ನೀಡಿದರು.

‘ಅಧಿಕಾರಿಗಳು ತಮ್ಮ ತಮ್ಮ ಕರ್ತವ್ಯ ಅರಿತು ಕೆಲಸ ಮಾಡಬೇಕು. ಕೋವಿಡ್ ನಿಯಂತ್ರಣ ನಿಟ್ಟಿನಲ್ಲಿ ಶ್ರಮಿಸಬೇಕು’ ಎಂದು ಕರೆ ನೀಡಿದರು.

ಸಚಿವ ಶಂಕರ್‌ ಮಾತನಾಡಿ, ಲಾಕ್‍ಡೌನ್‌ನ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಮಾಸ್ಕ್ ಧರಿಸದೇ ಇರುವವರು ಹಾಗೂ ರಸ್ತೆಯಲ್ಲಿ ಸುಮ್ಮನೆ ಓಡಾಡುವರಿಗೆ ದಂಡ ವಿಧಿಸಿ ಎಂದು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ನಿಜಶರಣ ಅಂಬಿಗರ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ ಚಿಂಚಿನಸೂರ, ಯಾದಗಿರಿ ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ, ಜಿಲ್ಲಾ ಪಂಚಾಯಿತಿ ಸಿಇಒ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕ ಕಿಶೋರ್ ಬಾಬು ಇದ್ದರು.

ಆಮ್ಲಜನಕ ಉತ್ಪಾದನಾ ಘಟಕ ಆರಂಭಿಸಿ

ಜಿಲ್ಲಾ ಕೋವಿಡ್-19 ಆಸ್ಪತ್ರೆಗೆ ಅಗತ್ಯ ಆಮ್ಲಜನಕ ಪೂರೈಕೆಗೆ ಕ್ರಮಕೈಗೊಳ್ಳುತ್ತಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಮಂಜೂರಾಗಿರುವಆಮ್ಲಜನಕಉತ್ಪಾದನಾ ಘಟಕವನ್ನು ಶೀಘ್ರ ಆರಂಭಿಸುವಂತೆ ತೋಟಗಾರಿಕೆ ಮತ್ತು ರೇಷ್ಮೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್. ಶಂಕರ್ ಜಿಲ್ಲಾಡಳಿತಕ್ಕೆ ಸೂಚಿಸಿದರು.

ನಗರದ ಜಿಲ್ಲಾ ಕೋವಿಡ್ ಆಸ್ಪತ್ರೆ ಮತ್ತು ಲಿಕ್ವಿಡ್ ಮೆಡಿಕಲ್ ಆಮ್ಲಜನಕ ಪ್ಲಾಂಟ್ (ಎಲ್‍ಎಂಓ) ವೀಕ್ಷಿಸಿ ಅವರು ಮಾತನಾಡಿದರು.

ನೂತನ ಆಮ್ಲಜನಕ ಉತ್ಪಾದನಾ ಘಟಕದಿಂದ ಒಂದು ನಿಮಿಷಕ್ಕೆ 500 ಲೀಟರ್ ಅಕ್ಸಿಜನ್ ಉತ್ಪಾದನೆಯಾಗುತ್ತಿದ್ದು, ಇದರಿಂದ ಕೊರತೆ ನೀಗಲಿದೆ. ಶೀಘ್ರ ಈ ಘಟಕ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕೆಂದು ಹೇಳಿದರು.

ಜಿಲ್ಲಾಧಿಕಾರಿ ರಾಗಪ್ರಿಯಾ ಮಾತನಾಡಿ, ಪ್ರಸಕ್ತ ಇರುವ ಎಲ್‍ಎಂಓ ಪ್ಲಾಂಟ್‍ನಲ್ಲಿ ಅಗತ್ಯಕ್ಕೆ ತಕ್ಕಂತೆ ಆಮ್ಲಜನಕ ಪೂರೈಕೆಯಾಗುತ್ತಿಲ್ಲ. ಕೂಡಲೇ ಪೂರ್ಣ ಪ್ರಮಾಣದ ಆಮ್ಲಜನಕ ಪೂರೈಕೆ ಮಾಡಬೇಕೆಂದು ಮನವಿ ಮಾಡಿದರು.

ಜಂಬೋ ಸಿಲಿಂಡರ್ ಸಂಗ್ರಹಗಾರವನ್ನು ಸಚಿವರು ವೀಕ್ಷಿಸಿದರು. ಈ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ, 96 ಜಂಬೋ ಸಿಲಿಂಡರ್‌ಗಳಿದ್ದು, ಇವುಗಳನ್ನು ಬ್ಯಾಕಪ್‍ಗಾಗಿ ಬಳಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಸುರಪುರ ಶಾಸಕ ರಾಜೂಗೌಡ, ನಿಜಶರಣ ಅಂಬಿಗರ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ ಚಿಂಚಿನಸೂರ, ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ, ಎಂಎಲ್‍ಸಿ ಶಶಿಲ್ ನಮೋಶಿ, ಯಾದಗಿರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಚಂಡ್ರಿಕಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಇಂದುಮತಿ ಕಾಮಶೆಟ್ಟಿ, ಜಿಲ್ಲಾ ಸರ್ಜನ್(ಪ್ರಭಾರ) ಸಂಜೀವ್ ಕುಮಾರ್ ರಾಯಚೂರಕರ, ಜಿಲ್ಲಾ ಅಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಡಾ.ನೀಲಮ್ಮ, ಜಿಲ್ಲಾಸ್ಪತ್ರೆಯ ಕ್ವಾಲಿಟಿ ಮ್ಯಾನೇಜರ್ ಪ್ರಸಾದ್ ಇದ್ದರು.

* ಹೊಸದಾಗಿ ಜಿಲ್ಲೆಗೆ ಬಂದಿದ್ದೇನೆ. ಮಾಹಿತಿ ಕಲೆ ಹಾಕುತ್ತಿದ್ದು, ಮುಂದಿನ ವಾರ ಮತ್ತೆ ಜಿಲ್ಲೆಗೆ ಭೇಟಿ ನೀಡುತ್ತಿದ್ದೇನೆ. ಎಲ್ಲರೂ ನನಗೆ ಸಹಕಾರ ನೀಡಬೇಕು.

-ಆರ್. ಶಂಕರ್,ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT