ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ಎಲ್ಲೆಡೆ ಬಕ್ರೀದ್ ಸಂಭ್ರಮ

ಮನೆಗೆ ಸೀಮಿತವಾದ ಆಚರಣೆ; ಕೋವಿಡ್ ನಿವಾರಣೆ, ಶಾಂತಿ ನೆಲೆಸಲು ಪ್ರಾರ್ಥನೆ
Last Updated 22 ಜುಲೈ 2021, 3:17 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಗುರುವಾರ ಬಕ್ರೀದ್ ಹಬ್ಬವನ್ನು ಸರಳವಾಗಿ ಆಚರಿಸಿದ್ದು, ಬಹುತೇಕ ಹಬ್ಬದ ಸಂಭ್ರಮ ಮನೆಗೇ ಸೀಮಿತವಾಗಿತ್ತು.

ನಗರದ ಮಸೀದಿಗಳಲ್ಲಿ ಸರ್ಕಾರ ಸೂಚಿಸಿದಂತೆ ಶೇ 50ಕ್ಕಿಂತ ಕಡಿಮೆ ಜನರು ಹಬ್ಬದ ವಿಶೇಷ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದು, ಉಳಿದಂತೆ ಮನೆಗಳಿಂದಲೇ ಪ್ರಾರ್ಥನೆ ಸಲ್ಲಿಸಿದರು.

ಬೆಳಿಗ್ಗೆ 6:30ಕ್ಕೆ ನಗರದ ಎಲ್ಲಾ ಮಸೀದಿಗಳಲ್ಲಿಯೂ ಪ್ರಾರ್ಥನೆಯನ್ನು ಮಾಡಲಾಗಿತ್ತು. ನಂತರ ಮನೆಗಳಲ್ಲಿ ಮಸೀದಿಗಳ ಹಜಾನ್ ಕೇಳಿಸಿಕೊಂಡು ಪ್ರಾರ್ಥನೆ ಮಾಡಿದ್ದು, ಹಬ್ಬಕ್ಕೆ ಚಿಣ್ಣರು ಹೊಸ ಬಟ್ಟೆಗಳನ್ನು ಧರಿಸಿ ಸಂಭ್ರಮಿಸಿದರು.

ಸಾದರ್ ದರ್ವಾಜಾ: ಬೆಳಿಗ್ಗೆ 6 ಗಂಟೆಗೆ ಹಬ್ಬದ ಪ್ರಾರ್ಥನೆ ಸಲ್ಲಿಸಿದ ನಂತರ ಮೌಲಾನ ನಿಜಾಮುದ್ಧೀನ್ ಬರ್ಕತಿ ಅವರು ಹಬ್ಬದ ಧಾರ್ಮಿಕ ಸಂದೇಶವನ್ನು
ನೀಡಿದರು.

ಕಳೆದ ವರ್ಷದಿಂದಲೂ ಜಗತ್ತು ಕೋವಿಡ್‌ನಿಂದಾಗಿ ತೀವ್ರ ಸಂಕಷ್ಟವನ್ನು ಎದುರಿಸುವಂತಾಗಿದೆ. ಈ ಸಮಯದಲ್ಲಿ ನಮ್ಮ ಭಾರತವೂ ಸಂಕಷ್ಟದಲ್ಲಿದ್ದು ಜನರು ಭೀತಿಯ ವಾತಾವರಣದಲ್ಲಿ ನೆಲೆಸುವುಂತಾಗಿದೆ. ಅಲ್ಲಾಹು ಕೋವಿಡ್ ತೊಲಗಿಸಿ, ಶಾಂತಿ ನೆಲೆಸುವಂತೆ ಮಾಡಲಿ ಎಂದು ಕೋರಿದರು.

ತ್ಯಾಗವೆಂದರೆ ನಮ್ಮಲ್ಲಿನ ದುರಾಲೋಚನೆಗಳನ್ನು ಬಿಡುವುದು, ದುಶ್ಚಟಗಳಿಂದ ದೂರಾಗುವುದು, ದಾನ ಮಾಡುವುದು, ಬಡವರ ಕುರಿತು ಕಾಳಜಿ ಹಾಗೂ ಜವಾಬ್ದಾರಿಯನ್ನು ಹೊಂದುವುದಾಗಿದೆ. ಈ ಎಲ್ಲಾ ವಿಷಯಗಳೂ ಅಲ್ಲಾಹುವಿನ ಪ್ರೀತಿಗೆ ಕಾರಣವಾಗಲಿವೆ ಎಂದು ತಿಳಿಸಿದರು.

ನಮ್ಮ ತಾಯ್ನೆಲದ ಕಾನೂನನ್ನು ಪಾಲಿಸುವುದು ನಮ್ಮ ಜವಾಬ್ದಾರಿಯಾಗಿದ್ದು, ಕೋವಿಡ್ ಮಾರ್ಗಸೂಚಿಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಿ ಹಾಗೂ ಕೋವಿಡ್ ಲಸಿಕೆಯನ್ನೂ ತಪ್ಪದೇ ಪಡೆದುಕೊಳ್ಳುವಂತೆ ಕರೆ ನೀಡಿದರು.

ಇನಾಯತ್ ಉರ್ ರೆಹಮಾನ್, ಮಹಮ್ಮದ್ ಹುಸೇನ್ ಕೆಂಭಾವಿ, ಅಬ್ದುಲ್ ಅಜೀಜ್ ಸಾಗ್ರಿ, ವಾಸಿಂ ಗುರುಮಠ್ಕಲಿ, ಸಲೀಂ ಶೇಖ್, ನಯೀಂ ಸಾಗ್ರಿ ಇದ್ದರು.

ನಾಯ್ಕಲ್: ಜಿಲ್ಲೆಯ ನಾಯ್ಕಲ್ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ಜಾಮಿಯಾ ಮಸೀದಿಯಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ಪ್ರಾರ್ಥನೆ ಸಲ್ಲಿಸಿದ್ದು, ಮಕ್ಕಳು, ಮಹಿಳೆಯರು ಸೇರಿದಂತೆ ಉಳಿದವರೆಲ್ಲಾ ತಮ್ಮ ಮನೆಗಳಲ್ಲಿಯೇ ಹಬ್ಬದ ಪ್ರಾರ್ಥನೆ ಸಲ್ಲಿಸಿದ್ದಾರೆ.

ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು, ತಮ್ಮ ಮನೆಗಳಿಗೆ ತೆರಳಿದರು. ವಡಗೇರಾ ಠಾಣೆಯ ಪಿಎಸ್.ಐ ಸಿದ್ದರಾಯ ಬಳ್ಳೂರಗಿ, ಎ.ಎಸ್.ಐ ಭೀಮಶೆಟ್ಟಿ, ಠಾಣೆಯ ಸಿಬ್ಬಂದಿ ಹಾಗೂ ಮೀಸಲು ಪಡೆಯಿಂದ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT