ಕಾಳೆಬೆಳಗುಂದಿ(ಸೈದಾಪುರ): ಸಮೀಪದ ಕಾಳೆಬೆಳಗುಂದಿಯ ಬಂಡೆ ರಾಚೋಟೇಶ್ಚರ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಸೇರಿದ್ದ ಸಾವಿರಾರು ಭಕ್ತರ ಜೈ ಘೋಷಣೆಗಳ ಮಧ್ಯೆ ಅದ್ದೂರಿ ರಥೋತ್ಸವ ನಡೆಯಿತು.
ಗ್ರಾಮದ ಹೊರವಲಯದ ಬಂಡೆ ರಾಚೋಟೇಶ್ವರ ದೇವಸ್ಥಾನದ ಬಳಿ ಶ್ರಾವಣ ಮಾಸದ ನಾಲ್ಕನೇ ಮಂಗಳವಾರ ಮಧ್ಯಾಹ್ನ ರಥೋತ್ಸವ ಜರುಗಿತು. ರಥೋತ್ಸವಕ್ಕೆ ಸೈದಾಪುರ, ಕೂಡ್ಲೂರು, ಕಣೇಕಲ್, ಮಾಧ್ವಾರ, ನೀಲಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳು ಸೇರಿದಂತೆ ನೆರೆಯ ತೆಲಂಗಾಣ, ಮಹಾರಾಷ್ಟ್ರ, ಆಂಧ್ರದಿಂದಲೂ ಭಕ್ತರು ಆಗಮಿಸಿದ್ದರು.
ಬಂಡೆ ಮೇಲೆ ಊಟ ಸವಿದ ಭಕ್ತರು: ಜಾತ್ರೆಗೆ ಆಗಮಿಸಿದ ಭಕ್ತರು ರಥೋತ್ಸವದ ನಂತರ ಬಡವ ಶ್ರೀಮಂತ ಎನ್ನದೆ ಕಲ್ಲುಬಂಡೆ ಮೇಲೆ ಗುಂಪುಗುಂಪಾಗಿ ಕುಳಿತುಕೊಂಡು ಸಾಮೂಹಿಕವಾಗಿ ಊಟ ಸವಿದರು. ಮನೆಯಿಂದ ಸಿದ್ಧಪಡಿಸಿಕೊಂಡು ಬುಟ್ಟಿಯಲ್ಲಿ ತಂದಿದ್ದ ಹೋಳಿಗೆ, ಕಡಬು, ಹಪ್ಪಳ-ಸೆಂಡಿಗೆ, ಬದನೆಕಾಯಿ, ಪುಂಡಿಪಲ್ಯ, ಜೋಳ–ಸಜ್ಜೆ ರೊಟ್ಟಿ, ಚಪಾತಿ, ಅನ್ನ ಸಾಂಬಾರು ಸೇರಿದಂತೆ ವಿಶಿಷ್ಟ ಖಾದ್ಯಗಳನ್ನು ಬಂಡೆಯ ಮೇಲೆ ಹಾಕಿಕೊಂಡು ಸೇವಿಸಿದರು. ಈ ಸಂಭ್ರಮದಲ್ಲಿ ಕುಟುಂಬದವರು, ಸ್ನೇಹಿತರು ಹಾಗೂ ನೆರೆಹೊರೆಯವರು ಪಾಲ್ಗೊಂಡಿದ್ದರು. ಈ ಕಾರಣಕ್ಕಾಗಿಯೇ ಇದನ್ನು ಬಂಡೆ ಜಾತ್ರೆ ಎಂತಲೂ ಕರೆಯುತ್ತಾರೆ.
‘ಕುಟುಂಬ ಸಮೇತರಾಗಿ ಬರುವ ಸಾವಿರಾರು ಜನ ಕಲ್ಲು ಬಂಡೆಯ ಮೇಲೆ ಊಟ ಮಾಡಿ ತಮ್ಮ ಹರಕೆ ತೀರಿಸುತ್ತಾರೆ. ಬಂಡೆಯ ಮೇಲೆ ಊಟ ಮಾಡುವುದರಿಂದ ಕಾಯಿಲೆ ಬರುವುದಿಲ್ಲ. ಆರೋಗ್ಯ ವೃದ್ಧಿಸುತ್ತದೆ. ಜೊತೆಗೆ ಮಕ್ಕಳಾಗದವರು ದೇವರಲ್ಲಿ ಬೇಡಿಕೊಂಡು ದೇವಸ್ಥಾನ ಬಳಿ ಚಿಕ್ಕದಾದ ಕಲ್ಲಿನ ಮನೆ, ಗುಡಿ ಕಟ್ಟಿ ಹೋಗುತ್ತಾರೆ. ಇದರಿಂದ ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ನಂತರ ದೇವಸ್ಥಾನಕ್ಕೆ ಬಂದು ದೇವರ ಆಶೀರ್ವಾದ ಪಡೆದು ಆ ಮನೆ ಬೀಳಿಸಿ ಹೋಗುತ್ತಾರೆ’ ಎಂದು ಭಕ್ತರಾದ ಮಲ್ಲು ಮೇಸ್ತ್ರಿ ಮಾಧ್ವಾರ ಹೇಳುತ್ತಾರೆ.
ಪುಂಡಿ ಪಲ್ಯೆ ವಿಶೇಷ ಖಾದ್ಯ: ಶ್ರಾವಣ ಮಾಸದಲ್ಲಿ ರಾಚೋಟೇಶ್ವರ ಭಕ್ತರು ಒಂದು ತಿಂಗಳು ಕಾಲ ಪುಂಡಿ ಪಲ್ಲೇ ಸೇವನೆ ಮಾಡುವುದಿಲ್ಲ. ಹೀಗಾಗಿ ಜಾತ್ರೆ ದಿನವಾಗಿದ್ದರಿಂದ ಇಲ್ಲಿಗೆ ಬರುವ ಪ್ರತಿಯೊಬ್ಬರೂ ಪುಂಡಿ ಪಲ್ಯೆ ಅಡುಗೆ ಮಾಡಿಕೊಂಡು ಬಂದು ಇಲ್ಲಿ ಸೇವನೆ ಮಾಡುವುದು ವಿಶೇಷ ಆಚರಣೆಯಾಗಿದೆ.
ಬಂಡೆ ಮೇಲೆ ಊಟ ಮಾಡಿದ ಭಕ್ತರು ಅದನ್ನು ಸ್ವಚ್ಛಗೊಳಿಸುವುದಿಲ್ಲ. ಪ್ರತಿ ವರ್ಷ ಸಂಜೆ ವೇಳೆಗೆ ಮಳೆ ಬಂದು ಬಂಡೆಗಳನ್ನು ಸ್ವಚ್ಛಗೊಳಿಸುತ್ತದೆ ಎನ್ನುವ ನಂಬಿಕೆ ಒಂದೆಡೆಯಾದರೆ, ವರ್ಷಕ್ಕೊಮ್ಮೆ ಜಾತ್ರೆಯಲ್ಲಿ ಬಂಡೆ ಮೇಲೆ ಊಟ ಮಾಡುವುದರಿಂದ ಕಾಯಿಲೆಗಳು ಬರುವುದಿಲ್ಲ ಎನ್ನುವುದು ಭಕ್ತರ ದೃಢ ನಂಬಿಕೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.