ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ। ಜಿಲ್ಲೆಯಲ್ಲಿ 149 ಮಂದಿಗೆ ಏಡ್ಸ್‌ ಪತ್ತೆ

10 ವರ್ಷಗಳಲ್ಲಿ 6,695 ಎಚ್‌ಐವಿ ಸೋಂಕು ಧೃಡ
Last Updated 30 ನವೆಂಬರ್ 2022, 16:08 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ 2022-23 ರಲ್ಲಿ 35,656 ಸಾಮಾನ್ಯ ಅರ್ಥಿಗಳ ಎಚ್‌ಐವಿ ಪರೀಕ್ಷೆ ಮಾಡಲಾಗಿದ್ದು, ಅದರಲ್ಲಿ 149 ಜನರಿಗೆ ಎಚ್‌ಐವಿ ಸೊಂಕು ದೃಢಪಟ್ಟಿದೆ. ಪಾಸಿಟಿವಿಟಿ ರೇಟ್ 0.41 ಇದೆ. ಕಳೆದ ವರ್ಷ 210 ಮಂದಿಗೆ ಸೋಂಕು ಇರುವುದು ಪತ್ತೆಯಾಗಿತ್ತು.

ಪ್ರಸಕ್ತ ವರ್ಷದಲ್ಲಿ 24,132 ಗರ್ಭಿಣಿಯರ ಎಚ್‌ಐವಿ ಪರೀಕ್ಷೆ ಮಾಡಲಾಗಿದ್ದು, ಅದರಲ್ಲಿ 8 ಗರ್ಭಿಣಿಯರಿಗೆ ಎಚ್‌ಐವಿ ಸೋಂಕು ದೃಢಪಟ್ಟಿದೆ. ಎಲ್ಲರೂ ಎಆರ್‌ಟಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಾಸಿಟಿವಿಟಿ ರೇಟ್ 0.03 ಇದೆ.

‘ಸಮಾನಗೊಳಿಸು ಅಂದರೆ ನಮ್ಮೆಲ್ಲರ ಪ್ರಾಮಾಣಿಕ ಪ್ರಯತ್ನದಿಂದ ಅಸಮಾನತೆಗಳನ್ನು ಪರಿಹರಿಸೋಣ ಮತ್ತು ಏಡ್ಸ್‌ ಕೊನೆಗಾಣಿಸೋಣ’ ಎನ್ನುವುದು 2022ರ ಡಿ.1ರ ಏಡ್ಸ್‌ ದಿನಾಚರಣೆಯ ಘೋಷ ವಾಕ್ಯವಾಗಿದೆ. ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆಯ ಮಾಹಿತಿಯ ಪ್ರಕಾರ ಭಾರತವು ಎಚ್‌ಐವಿ ಸೋಂಕು ಪೀಡಿತ ದೇಶಗಳಲ್ಲಿ ಭಾರತವು 3ನೇ ಸ್ಥಾನದಲ್ಲಿದೆ.

ಜಿಲ್ಲೆಯಲ್ಲಿ 2010 ರಿಂದ ಇಲ್ಲಿಯವರೆಗೆ ಕಳೆದ 10 ವರ್ಷಗಳಲ್ಲಿ 4,85,935 ಸಾಮಾನ್ಯ ಅರ್ಥಿಗಳ ಎಚ್‌ಐವಿ ಪರೀಕ್ಷೆ ಮಾಡಲಾಗಿದ್ದು, ಅದರಲ್ಲಿ 6,695 ಎಚ್‌ಐವಿ ಸೋಂಕಿತರು ಧೃಡಪಟ್ಟಿದ್ದಾರೆ. ಪಾಸಿಟಿವಿಟಿ ರೇಟ್ 1.69 ರಷ್ಟಿದೆ. ಅವಧಿಯಲ್ಲಿ 4,33,000 ಗರ್ಭಿಣಿಯರಿಗೆ ಎಚ್‌ಐವಿ ಪರೀಕ್ಷೆ ಮಾಡಲಾಗಿದ್ದು, ಅದರಲ್ಲಿ 296 ಜನ ಎಚ್‌ಐವಿ ಸೋಂಕಿತರು ದೃಢಪಟ್ಟಿದ್ದಾರೆ. ಪಾಸಿಟಿವಿಟಿ ರೇಟ್ 0.07 ರಷ್ಟಿದೆ.

1,833ಎಚ್‌ಐವಿ ಸೋಂಕಿತರು ಸಾವು:

2011 ರಿಂದ ಜಿಲ್ಲೆಯ ಎಆರ್‌ಟಿ ಕೇಂದ್ರದಲ್ಲಿ 5,738 ಜನ ಎಚ್‌ಐವಿ ಸೋಂಕಿತರು ಚಿಕಿತ್ಸೆಗಾಗಿ ನೋಂದಣಿಯಾಗಿದ್ದು, ಅದರಲ್ಲಿ 5,400 ಮಂದಿಗೆ ಎಆರ್‌ ಚಿಕಿತ್ಸೆ ನೀಡಲಾಗಿದೆ. ಅದರಲ್ಲಿ ಪ್ರಸ್ತುತ 3,197 ಮಂದಿ ಎಆರ್‌ಟಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ 1,833 ಎಚ್‌ಐವಿ ಸೋಂಕಿತರು ಸಾವನ್ನಪ್ಪಿದ್ದಾರೆ. ಒಟ್ಟು 299 ಎಚ್‌ಐವಿ ಸೋಂಕಿತ ತಾಯಂದಿರ ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರಲ್ಲಿ 18 ಮಕ್ಕಳಿಗೆ ಎಚ್‌ಐವಿ ಸೋಂಕು ದೃಢಪಟ್ಟಿದೆ. ಆ ಎಲ್ಲಾ 18 ಮಕ್ಕಳಿಗೆ ಎಆರ್‌ಟಿ ಚಿಕಿತ್ಸೆ ನೀಡಲಾಗುತ್ತಿದೆ.

ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ, ಯಾದಗಿರಿಯ ಎಚ್‌ಐವಿ, ಏಡ್ಸ್ ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಒಟ್ಟು 6 ಐಸಿಟಿಸಿ ಕೇಂದ್ರಗಳಿವೆ. 1 ನೋಡಲ್ ಎಆರ್‌ಟಿ ಕೇಂದ್ರವಿದೆ. 5 ಉಪ ಎಆರ್‌ಟಿ ಕೇಂದ್ರಗಳಿವೆ. 2 ಡಿಎಸ್‌ಆರ್‌ಸಿ ಕೇಂದ್ರಗಳು ಮತ್ತು 2 ರಕ್ತ ಶೇಖರಣಾ ಘಟಕಗಳಿವೆ. 2 ರಕ್ತನಿಧಿ ಕೇಂದ್ರಗಳಿವೆ. ಗ್ರಾಮಿಣ ಮಟ್ಟದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಾರು ಒಟ್ಟು 47 ಎಫ್‌ಐಸಿಟಿಸಿ ಪರೀಕ್ಷಾ ಕೇಂದ್ರಗಳಿವೆ. ಖಾಸಗಿ ಆಸ್ಪತ್ರೆಗಳ ಸಹಯೋಗದಲ್ಲಿ 4 ಎಚ್‌ಐವಿ ಪರೀಕ್ಷಾ ಕೇಂದ್ರಗಳಿವೆ.

ಸೇವಾ ಕೇಂದ್ರಗಳಲ್ಲಿ ಬರುವ ಸಾರ್ವಜನಿಕರಿಗೆ ಹಾಗೂ ಎಚ್‌ಐವಿ ಪರೀಕ್ಷಾರ್ಥಿಗಳಿಗೆ ಎಚ್‌ಐವಿ, ಏಡ್ಸ್ ಕುರಿತು ಪರೀಕ್ಷಾ ಪೂರ್ವ ಆಪ್ತಸಮಾಲೋಚನೆ ನೀಡಲಾಗುತ್ತಿದೆ. ಉಚಿತವಾಗಿ ಎಚ್‌ಐವಿ ರಕ್ತ ಪರೀಕ್ಷೆ, ಪರೀಕ್ಷಾ ನಂತರದ ಆಪ್ತಸಮಾಲೋಚನೆ, ಅನುಸರಣಾ ಭೇಟಿಯ ಬಗ್ಗೆ ಸಮಾಲೋಚನೆ, ಸುರಕ್ಷಿತ ಲೈಂಗಿಕತೆಯ ಬಗ್ಗೆ ಹಾಗೂ ಕಾಂಡೋಮ್‌ ಬಳಕೆಯ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಎಚ್‌ಐವಿ ಸೋಂಕಿತರಿಗೆ ಉಚಿತ ಎಆರ್‌ಟಿ ಚಿಕಿತ್ಸಾ ಸೌಲಭ್ಯ, ಲೈಂಗಿಕ, ಗುಪ್ತಾಂಗ ರೋಗಗಳ ಬಗ್ಗೆ ಸಮಾಲೋಚನೆ ಹಾಗೂ ಉಚಿತ ಚಿಕಿತ್ಸೆ, ಗರ್ಭಿಣಿಯರ ಪರೀಕ್ಷೆ ಹಾಗೂ ಎಚ್‌ಐವಿ ಸೋಂಕಿತ ತಾಯಂದಿರ ಮಕ್ಕಳ ಆರೈಕೆ ಮತ್ತು ಅನುಸರಣೆ, ಎಚ್‌ಐವಿ ಸೋಂಕಿತರಿಗೆ ಸಾಮಾಜಿಕ ಸೇವಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.

***

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT