ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಸುರಪುರ: ಮಿಶ್ರ ಬೆಳೆಯಿಂದ ಉತ್ತಮ ಸಂಪಾದನೆ

ಗುತ್ತಿಗೆದಾರಿಕೆ ಬಿಟ್ಟು ತೋಟಗಾರಿಕೆಯತ್ತ ವಾಲಿ ಅನನ್ಯ ಯಶ ಕಂಡ ಶರಣಗೌಡ
Published 25 ಮೇ 2024, 7:40 IST
Last Updated 25 ಮೇ 2024, 7:40 IST
ಅಕ್ಷರ ಗಾತ್ರ

ಸುರಪುರ: ಉಪ ಜೀವನಕ್ಕೆ ಗುತ್ತಿಗೆದಾರಿಕೆ (ಸಿವಿಲ್ ಕಾಂಟ್ರ್ಯಾಕ್ಟರ್‌) ಮಾಡುತ್ತಿದ್ದ ತಾಲ್ಲೂಕಿನ ಬಂಡೋಳಿ ಗ್ರಾಮದ ಶರಣಗೌಡ ಪರಮಣ್ಣಗೌಡ ಪೊಲೀಸ್ ಪಾಟೀಲ ಅವರು ಈಗ ತೋಟಗಾರಿಕೆ ಕೃಷಿ ಮಾಡುತ್ತಿದ್ದು ಪ್ರಗತಿಪರ ರೈತರಾಗಿ ಹೊರಹೊಮ್ಮಿದ್ದಾರೆ.

ಬೀದರ್‌– ಬೆಂಗಳೂರು ರಾಜ್ಯ ಹೆದ್ದಾರಿಯ ತಿಂಥಣಿ ಬ್ರಿಜ್ ಹತ್ತಿರ ಅನತಿ ದೂರದಲ್ಲಿ ಇರುವ ಅವರ 8 ಎಕರೆ ಜಮೀನು ಉತ್ತಮ ರಸ್ತೆ ಸಂಪರ್ಕ ಹೊಂದಿದೆ. ಕೃಷ್ಣಾ ನದಿ ಅರ್ಧ ಕಿ.ಮೀ ಅಂತರದಲ್ಲಿರುವುದು ವರವಾಗಿದೆ.

ಕಳೆದ ನಾಲ್ಕು ವರ್ಷಗಳಿಂದ ಕೃಷಿ ಮಾಡುತ್ತಿರುವ ಶರಣಗೌಡ, 3 ಎಕರೆಯಲ್ಲಿ 2500 ಪಪ್ಪಾಯಿ, 1200 ದಾಳಿಂಬೆ ಗಿಡ ಬೆಳೆಸಿದ್ದಾರೆ. ಕಳೆದ ವರ್ಷ ಪಪ್ಪಾಯಿ ಮಾರಾಟದಿಂದ ₹ 10 ಲಕ್ಷ ಲಾಭ ಮಾಡಿಕೊಂಡಿದ್ದಾರೆ. ಹೊಲಕ್ಕೆ ಬಂದು ಪಪ್ಪಾಯಿ ಖರೀದಿಸಿ ಸ್ಥಳದಲ್ಲೇ ಹಣ ನೀಡುವುದರಿಂದ ಮಾರುಕಟ್ಟೆ ತೊಂದರೆ ಆಗಿಲ್ಲ.

ದಾಳಿಂಬೆ ಕಟಾವಿಗೆ ಬಂದಿದೆ. 15 ಗುಂಟೆಯಲ್ಲಿ ಪಿಂಕ್ ಡ್ರ್ಯಾಗನ್ ಬೆಳೆದಿದ್ದಾರೆ. ಇನ್ನೆರಡು ತಿಂಗಳಲ್ಲಿ ಫಲ ಬರುತ್ತದೆ. ಮಾರ್ಚ್ ತಿಂಗಳಲ್ಲಿ 3 ಎಕರೆ ಕಲ್ಲಂಗಡಿ ಬೆಳೆದು ₹ 5 ಲಕ್ಷ ಸಂಪಾದಿಸಿದ್ದಾರೆ.

ಮಾವು, ಸೀತಾಫಲ, ತೆಂಗು, ನೇರಳೆ, ಲಿಂಬೆ, ಬಾಳೆ, ಬಾರೆ, ಚಿಕ್ಕು ಹಣ್ಣಿನ ಗಿಡಗಳು ಚೆನ್ನಾಗಿ ಬೆಳೆದು ನಿಂತಿವೆ. ಮಲೆನಾಡಿನ ಹಣ್ಣು ಹಲಸಿನ ಗಿಡವೂ ಹುಲುಸಾಗಿ ಬೆಳೆದಿದ್ದು ಹಣ್ಣುಗಳು ಬಿಟ್ಟಿವೆ.

ಕೃಷ್ಣಾ ನದಿಯಿಂದ ಪೈಪ್‍ಲೈನ್ ಮಾಡಿದ್ದಾರೆ. ತೋಟದಲ್ಲಿ ಇರುವ ಬಾಯಿಯಲ್ಲಿ ನೀರಿನ ಸೆಲೆ ಸಮೃದ್ಧವಾಗಿದೆ. ಹೀಗಾಗಿ ನೀರಿನ ಕೊರತೆ ಇಲ್ಲ. ಈ ಬಾರಿ ಬಿಸಿಲಿನ ಪ್ರಖರತೆ ಹೆಚ್ಚಿದ್ದರಿಂದ ಸ್ವಲ್ಪ ಹಾನಿಯೂ ಸಂಭವಿಸಿದೆ.

ತೋಟಗಾರಿಕೆ ಇಲಾಖೆ ನೆರವಿನಿಂದ ತುಂತುರು, ಹನಿ ನೀರಾವರಿ ಅಳವಡಿಸಿದ್ದಾರೆ. ತೋಟದಲ್ಲೇ ಮನೆ ಮಾಡಿದ್ದು ಎಲ್ಲ ಸೌಲಭ್ಯ ಮಾಡಿಕೊಂಡಿದ್ದಾರೆ. ಇದರಿಂದ ಕೃಷಿಯತ್ತ ಹೆಚ್ಚು ನಿಗಾ ವಹಿಸಲು ಸಾಧ್ಯವಾಗಿದೆ. ಮನೆಗಾಗಿ ಸಾವಯವ ತರಕಾರಿಯನ್ನು ಬೆಳೆದುಕೊಳ್ಳುತ್ತಾರೆ.

ನಾರಾಯಣಪುರ ಜಲಾಶಯದಿಂದ ಹೆಚ್ಚಿನ ನೀರನ್ನು ಹರಿಬಿಟ್ಟಾಗ ಉಂಟಾಗುವ ಪ್ರವಾಹ ತೋಟವನ್ನು ಬಲಿ ತೆಗೆದುಕೊಳ್ಳುವ ಆತಂಕದ ಅರಿವು ಶರಣಗೌಡ ಅವರಿಗೆ ಇದೆ. ಊರಲ್ಲಿಯೂ ಮತ್ತು ಸರ್ಕಾರ ನಿರ್ಮಿಸಿರುವ ನವಗ್ರಾಮದಲ್ಲಿಯೂ ಅವರ ಮನೆ ಇದೆ. ಕೃಷಿಯಲ್ಲೇ ಸುಖ ಕಾಣುತ್ತಿರುವ ಶರಣಗೌಡ ಮಕ್ಕಳ ಶಿಕ್ಷಣಕ್ಕೂ ಆದ್ಯತೆ ನೀಡಿದ್ದಾರೆ. ತೋಟಗಾರಿಕೆಯಿಂದ ಬಂದ ಲಾಭದಲ್ಲಿ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲು ಸಾಧ್ಯವಾಗಿದೆ. ಪುತ್ರ ಬಿಎಎಂಎಸ್, ಪುತ್ರಿ ಎಂಬಿಬಿಎಸ್ ಓದುತ್ತಿದ್ದಾರೆ. ಇನ್ನಿಬ್ಬರು ಪುತ್ರಿಯರು ಅಭ್ಯಾಸ ಮಾಡುತ್ತಿದ್ದಾರೆ.

ಕೃಷಿಯಲ್ಲಿ ಇರುವ ನೆಮ್ಮದಿ ಎಲ್ಲಿಯೂ ದೊರಕುವುದಿಲ್ಲ. ಹೊಲದಲ್ಲಿ ದುಡಿಯುವುದರಿಂದ ಉತ್ತಮ ಆರೋಗ್ಯವೂ ಲಭಿಸುತ್ತದೆ. ಭೂಮಿ ತಾಯಿ ಒಂದು ವರ್ಷ ಲಾಭ ಕೊಡದಿದ್ದರೆ ಮರುವರ್ಷ ಖಂಡಿತ ಕೈ ಹಿಡಿಯುತ್ತಾಳೆ.
–ಶರಣಗೌಡ ಪಾಟೀಲ, ರೈತ

ಗುತ್ತಿಗೆದಾರ ರೈತನಾದ ಬಗೆ

ಶರಣಗೌಡ ಟೆಂಡರ್ ಕೆಲಸಗಳನ್ನು ಪಡೆದು ಕಾಂಟ್ರ್ಯಾಕ್ಟರ್ ವೃತ್ತಿ ಮಾಡುತ್ತಿದ್ದರು. ವಿಪರೀತ ನೀರು ಬಳಸಿ ಭೂಮಿ ಸವಳು ಜವಳಾಗುತ್ತಿರುವುದು ಅವರ ಮನಸ್ಸಿಗೆ ನಾಟಿತು. ರೈತ ಕುಟುಂಬದಿಂದ ಬಂದ ಅವರು ಭೂಮಿಯನ್ನು ಮುಂದಿನ ಪೀಳಿಗೆಗೆ ಉಳಿಸಬೇಕೆಂದು ರೈತರಾದರು. ಕಳೆದ ಮೂರು ದಶಕಗಳಿಂದ ಅವರ ಭೂಮಿಯಲ್ಲಿ ಭತ್ತ ಬೆಳೆಯಲಾಗುತ್ತಿತ್ತು. ಭತ್ತದ ಗದ್ದೆ ಕೆಡಿಸಲು ಅವರ ಬಂಧುಗಳು ನೆರೆ ರೈತರು ಬೇಡ ಎಂದರು. ಹೀಯಾಳಿಕೆಯ ಮಾತುಗಳನ್ನು ಆಡಿದರು. ಆದರೆ ಯಾವುದಕ್ಕೂ ಹಿಂಜರಿಯದೆ 4 ವರ್ಷದ ಹಿಂದೆ ತೋಟಗಾರಿಕೆ ಮಾಡಿ ಭತ್ತಕ್ಕಿಂತ ಅಧಿಕ ಲಾಭ ಪಡೆದು ಪ್ರಗತಿಪರ ರೈತ ಎನಿಸಿಕೊಂಡಿದ್ದಾರೆ. ಉಳಿದ ರೈತರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT