ಗುರುವಾರ , ಆಗಸ್ಟ್ 11, 2022
21 °C
ಪ್ರಶಿಕ್ಷಣ ವರ್ಗದಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಶರಣಭೂಪಾಲರೆಡ್ಡಿ ಹೇಳಿಕೆ

ಕಾರ್ಯಕರ್ತರ ಶ್ರಮದಿಂದ ಬಿಜೆಪಿಗೆ ಅಧಿಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಣಸಗಿ: ‘ಪ್ರತಿಯೊಬ್ಬ ಕಾರ್ಯಕರ್ತರ ಸನ್ನಡತೆ ಹಾಗೂ ಪರಿಶ್ರಮದಿಂದ ಬಿಜೆಪಿ ಇಂದು ದೇಶದ ಬಹುತೇಕ ರಾಜ್ಯಗಳಲ್ಲಿ ಅಧಿಕಾರದಲ್ಲಿರಲು ಸಾಧ್ಯವಾಗಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಶರಣಭೂಪಾಲರೆಡ್ಡಿ ಹೇಳಿದರು.

ಪಟ್ಟಣದ ಡ್ರೀಮ್ಸ್ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುರಪುರ ಮಂಡಲದ ಪದಾಧಿಕಾರಿಗಳ ಎರಡು ದಿನಗಳ ಪ್ರಶಿಕ್ಷಣ ವರ್ಗದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಜನ ಸಂಘದಿಂದ ಪಕ್ಷವನ್ನು ಸಂಘಟಿಸಿ ಈ ಮಟ್ಟಕ್ಕೆ ತಂದುಕೊಡುವಲ್ಲಿ ಹಲವಾರು ಮಹಾನ್ ನಾಯಕರು ತಮ್ಮ ಜೀವನವನ್ನೇ ಸವೆಸಿದ್ದಾರೆ. ಪ್ರಧಾನಿ ಮೋದಿ ಅವರು ಜನಪರ ಕಾರ್ಯಕ್ರಮ ಹಾಗೂ ಕಾನೂನುಗಳನ್ನು ಜಾರಿಗೆ ತರುವ ಮೂಲಕ ಭಾರತ ಶಕ್ತಿಶಾಲಿ ರಾಷ್ಟ್ರ ಎಂದು ತೋರಿಸುವ ಕಾರ್ಯ ಮಾಡುತ್ತಿದ್ದಾರೆ’ ಎಂದರು.

ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ, ಶಾಸಕ ರಾಜುಗೌಡ ಮಾತನಾಡಿ, ‘ದಿನದ ಬಹುತೇಕ ಸಮಯ ದೇಶಕ್ಕಾಗಿ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೊದಿ ಅವರು ನಮ್ಮೆಲ್ಲರಿಗೂ ಮಾದರಿ ಯಾಗಿದ್ದಾರೆ. ಅವರನ್ನು ನೋಡಿ ಕೆಲಸ ನಿರ್ವಹಿಸೋಣ. ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಹಿತಕ್ಕಾಗಿಯೇ ಸಮಯ ಮೀಸಲಿಡೋಣ’ ಎಂದು ಹೇಳಿದರು.

ಸುರಪುರ ಮಂಡಲ ಅಧ್ಯಕ್ಷ ಮೆಲಪ್ಪ ಗುಳಗಿ ಮಾತನಾಡಿ, ‘ಸುರಪುರ-ಹುಣಸಗಿ ತಾಲ್ಲೂಕಿನಲ್ಲಿಯ ಕಾರ್ಯಕರ್ತರ ಸತತ ಪರಿಶ್ರಮದಿಂದ ಪಕ್ಷದ ಆದೇಶ ಪರಿಪಾನೆಯಲ್ಲಿ ನಮ್ಮ ಮಂಡಲಕ್ಕೆ ಉತ್ತಮ ಸಾಧನೆ
ಮಾಡಿದೆ. ಇನ್ನು ಹೆಚ್ಚು ಸಕ್ರಿಯವಾಗಿ ಪಾಲ್ಗೊಳ್ಳಲು ಇಂತಹ ಪ್ರಶಿಕ್ಷಣ ವರ್ಗ ಅಗತ್ಯವಾಗಿದೆ’ ಎಂದರು.

‘ವ್ಯಕ್ತಿತ್ವ ವಿಕಸನ, ಪಕ್ಷ ಬೆಳೆದು ಬಂದ ದಾರಿ, ಮುಂದಿನ ದಿನಗಳಲ್ಲಿ ಭಾರತ ಸೇರಿದಂತೆ 10 ವಿಷಯಗಳ ಕುರಿತು ಪರಿಣಿತರಿಂದ ವಿಷಯ ಮಂಡನೆ ನಡೆಯಲಿದೆ’ ಎಂದು ಹೇಳಿದರು.

ಸಂಚಾಲಕ ಭೀಮರಾಯ ಜಂಗಳಿ, ವೇಣುಗೋಪಾಲ ಜೇವರ್ಗಿ, ರಾಜಾ ಹನುಮಪ್ಪ ನಾಯಕ ತಾತಾ, ಜಿ.ಪಂ ಸದಸ್ಯ ಬಸವರಾಜ ಸ್ವಾಮಿ ಸ್ಥಾವರಮಠ, ಎಪಿಎಂಸಿ ಅಧ್ಯಕ್ಷ ದೇವಣ್ಣ ಮಲಗಲದಿನ್ನಿ, ಯಲ್ಲಯ್ಯ ನಾಯಕ ವನದುರ್ಗ, ದೇವಿಂದ್ರ ನಾದ, ಗುರು ಕಾಮ, ಎಚ್.ಸಿ.ಪಾಟೀಲ, ಅಮರಣ್ಣ ಹುಡೇದ, ಯಲ್ಲಪ್ಪ ಕುರಕುಂದಿ, ಬಿ.ಎಂ.ಅಳ್ಳಿಕೋಟಿ, ವಿರೇಶ ಚಿಂಚೋಳಿ, ಸಂಗನಗೌಡ ಪಾಟೀಲ ವಜ್ಜಲ, ಮೋತಿಲಾಲ ಚವ್ಹಾಣ, ಭೀಮರಾಯ ಶ್ರೀನಿವಾಸಪುರ, ವಿಠ್ಠಲ ಪವಾರ ಉಪಸ್ಥಿತರಿದ್ದರು.

3ಕ್ಕೆ ಗ್ರಾಮ ಸ್ವರಾಜ್ ಜಿಲ್ಲಾ ಸಮಾವೇಶ

ಹುಣಸಗಿ: ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಗಾಗಿ ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸುವ ನಿಟ್ಟಿನಲ್ಲಿ ಹಾಗೂ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡು ಶ್ರಮಿಸಲು ಇದೇ ಡಿ.3ರಂದು ಗ್ರಾಮ ಸ್ವರಾಜ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಶರಣಭೂಪಾಲರಡ್ಡಿ ಹೇಳಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಒಟ್ಟು 6 ತಂಡಗಳನ್ನು ರಚಿಸಲಾಗಿದೆ. ಈ ಜಿಲಾ ಮಟ್ಟದ ಸಮಾವೇಶವನ್ನು ಶಹಾಪುರದಲ್ಲಿ ಹಮ್ಮಿಕೊಳ್ಳಲಾಗಿದ್ದು, ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ವಿ.ಸೋಮಣ್ಣ, ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಹಾಗೂ ಸಂಸದರಾದ ಡಾ.ಉಮೇಶ ಜಾಧವ ಹಾಗೂ ರಾಜಾ ಅಮರೇಶ್ವರ ನಾಯಕ ಪಾಲ್ಗೊಳ್ಳಲಿದ್ದಾರೆ.

‘ರಾಜ್ಯ ಹಾಗೂ ಕೇಂದ್ರದಲ್ಲಿ ನಮ್ಮದೇ ಸರ್ಕಾರ ಇದ್ದು, ಸರ್ಕಾರದ ಸಾಧನೆಗಳನ್ನು ತಿಳಿಸುವ ಮೂಲಕ ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಗೆಲುವು ಸಾಧಿಸಬೇಕು ಎಂಬ ಉದ್ದೇಶದಿಂದ ಈ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕರ್ತರು ಯಾವ ರೀತಿ ಸನ್ನದ್ಧರಾಗಬೇಕಿದೆ ಎಂದು ರಾಜ್ಯ ನಾಯಕರು ತಿಳಿಸಲಿದ್ದಾರೆ’ ಎಂದರು.

ಶಾಸಕ ರಾಜುಗೌಡ ಮಾತನಾಡಿ, ‘ಕೋವಿಡ್ -19 ದಿಂದಾಗಿ ಎಲ್ಲ ಸುರಕ್ಷತಾ ಕ್ರಮಗಳನ್ನು ಅಳವಡಸಿಕೊಂಡು ಶಕ್ತಿ ಕೇಂದ್ರ, ಮಹಾ ಶಕ್ತಿ ಕೇಂದ್ರದ ಅಪೇಕ್ಷಿತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, 1000 ಜನರಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.