ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬ್ರಿಜ್ ಕಂ ಬ್ಯಾರೇಜ್ ಗೇಟ್‌ಗಳಿಗೆ ತುಕ್ಕು: ಸಮರ್ಪಕ ನಿರ್ವಹಣೆ ಕೊರತೆ ಆರೋಪ

ಅಧಿಕಾರಿಗಳಿಂದ ಸಮರ್ಪಕ ನಿರ್ವಹಣೆ ಕೊರತೆ: ರೈತರ ಆರೋಪ
ವಾಟ್ಕರ್ ನಾಮದೇವ
Published 18 ಮೇ 2024, 7:26 IST
Last Updated 18 ಮೇ 2024, 7:26 IST
ಅಕ್ಷರ ಗಾತ್ರ

ವಡಗೇರಾ: ತುಕ್ಕು ಹಿಡಿದ ಗೇಟ್‌ಗಳು, ಸರಿಯಾದ ನಿರ್ವಹಣೆ ಇಲ್ಲದ ಬ್ರಿಜ್ ಕಂ ಬ್ಯಾರೇಜ್‌, ಉದಾಸೀನತೆ ತೋರಿದ ಅಧಿಕಾರಿಗಳಿಂದಾಗಿ ಬೇಸಿಗೆ ಬೆಳೆಗಳನ್ನು ಬೆಳೆಯಬೇಕಾದ ರೈತರು ಆರ್ಥಿಕ ನಷ್ಟವನ್ನು ಅನುಭವಿಸಿದ್ದಾರೆ.

ತಾಲ್ಲೂಕಿನ ಕಂದಳ್ಳಿ ಗ್ರಾಮದಿಂದ ಅನತಿ ದೂರದಲ್ಲಿರುವ ಹಿರೇನೂರ, ಆನೂರ(ಬಿ) ಗ್ರಾಮದ ಹತ್ತಿರ ಭೀಮಾ ನದಿಗೆ ಅಡ್ಡಲಾಗಿ ಕಟ್ಟಿರುವ ಬ್ರೀಜ್ ಕಂ ಬ್ಯಾರೇಜ್ ಕಥೆ ಇದು.

ರೈತರಿಗೆ ಬೇಸಿಗೆ ಕಾಲದ ಬೆಳೆಗಳನ್ನು ಬೆಳೆಯಲು ಹಾಗೂ ನದಿಯಲ್ಲಿ ನೀರು ಸಂಗ್ರಹವಾಗಲಿ ಎಂಬ ಉದ್ದೇಶದಿಂದ ಆಗಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು 2004ರ ಫೆಬ್ರುವರಿ 3ರಂದು ಈ ಬ್ರಿಜ್ ಕಂ ಬ್ಯಾರೇಜ್‌ ಅನ್ನು ಉದ್ಘಾಟಿಸಿದ್ದರು. ಅಂದಿನಿಂದ ಯಾದಗಿರಿ ಹಾಗೂ ಗುರುಮಠಕಲ್ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಸಾವಿರಾರು ಎಕರೆ ಜಮೀನುಗಳಿಗೆ ಬಹಳ ಉಪಯೋಗವಾಗಿತ್ತು.

ಈ ಭಾಗದ ರೈತರು ಕಂದಳ್ಳಿ ಬ್ಯಾರೇಜ್‌ನಿಂದ ನೀರನ್ನು ಪಡೆದು ಶೇಂಗಾ, ಹತ್ತಿ, ಭತ್ತ, ಹೈಬ್ರೀಡ್ ಜೋಳ, ಹೆಸರು ಹಾಗೂ ಇನ್ನಿತರ ಬೆಳೆಗಳನ್ನು ವರ್ಷದಲ್ಲಿ ಎರಡು ಸಲ ಬೆಳೆದಿದ್ದರು. ಆದರೆ ಈ ವರ್ಷ ಒಂದೇ ಬೆಳೆ ಬೆಳೆದು ಆರ್ಥಿಕವಾಗಿ ನಷ್ಟ ಅನುಭವಿಸಿದ್ದಾರೆ. ನದಿಯಲ್ಲಿ ನೀರು ಸಂಗ್ರಹವಾಗದಿವುದೇ ಇದಕ್ಕೆ ಕಾರಣ.

ತುಕ್ಕು ಹಿಡಿದ ಗೇಟ್‌ಗಳು: ಭೀಮಾ ನದಿಗೆ ಅಡ್ಡಲಾಗಿ ಹಾಕಿರುವ ಗೇಟ್‌ಗಳು ಸಂಪೂರ್ಣವಾಗಿ ತುಕ್ಕು ಹಿಡಿದಿರುವುದರಿಂದ ಮತ್ತು ಅವುಗಳಿಗೆ ರಂದ್ರ ಬಿದ್ದಿರುವುದರಿಂದ ನದಿಯಲ್ಲಿ ಸಂಗ್ರಹವಾದ ನೀರು ರಂದ್ರಗಳ ಮುಖಾಂತರ ಹರಿದು ಪೋಲಾಗಿದೆ. ಇದರಿಂದಾಗಿ ನೀರು ಇಲ್ಲದಂತಾಗಿದೆ.

ಸಮರ್ಪಕ ನಿರ್ವಹಣೆ ಕೊರತೆ: ಗೇಟ್‌ಗಳನ್ನು ದುರಸ್ತಿ ಮಾಡಲು, ಗಿರೀಸ್ ಹಚ್ಚಲು ಹಾಗೂ ರಬ್ಬರ್‌ ಅಳವಡಿಸಲು ಇನ್ನಿತರ ಕೆಲಸ ಕಾರ್ಯಗಳಿಗಾಗಿ ಪ್ರತಿ ವರ್ಷ ಭೀಮಾ ಬ್ರೀಜ್ ಕಂ ಬ್ಯಾರೇಜ್ ನಿರ್ವಹಣೆಗಾಗಿ ಸರ್ಕಾರದಿಂದ ಸುಮಾರು ₹8 ಲಕ್ಷದಿಂದ ₹10 ಲಕ್ಷ ಅನುದಾನ ಬರುತ್ತದೆ. ಆದರೆ ಆ ಅನುದಾನ ಎಲ್ಲಿಗೆ ಹೋಗುತ್ತದೆ ಎಂದು ರೈತರು ಪ್ರಶ್ನಿಸುತ್ತಾರೆ.

‘ಒಂದು ವೇಳೆ ಅಧಿಕಾರಿಗಳು ಸರಿಯಾಗಿ ನಿರ್ವಹಣೆ ಮಾಡಿದ್ದರೆ ಗೇಟ್‌ಗಳು ಏಕೆ ತುಕ್ಕು ಹಿಡಿಯುತ್ತಿದ್ದವು? ಅವುಗಳಿಗೆ ಏಕೆ ರಂದ್ರ ಬೀಳುತ್ತಿದ್ದವು?’ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ರೈತರಿಂದ ನಿರ್ವಹಣೆ

ಈ ಬೇಸಿಗೆಯಲ್ಲಿ ಚಿಗಾನೂರ, ಕಂದಳ್ಳಿ, ಬಿಳ್ಹಾರ, ಅರ್ಜುಣಗಿ, ಮಾಚನೂರ ಹಾಗೂ ಇನ್ನಿತರ ಗ್ರಾಮಗಳ ರೈತರು ಸುಮಾರು ₹40 ಸಾವಿರದಿಂದ ₹50 ಸಾವಿರ ಸಂಗ್ರಹ ಮಾಡಿ ಗೇಟ್‌ಗಳಿಗೆ ಪ್ಲಾಸ್ಟಿಕ್ ಚೀಲಗಳು ಹಾಗೂ ತಾಡಪತ್ರಿಗಳನ್ನು ಗೇಟ್‌ಗಳಿಗೆ ಅಡ್ಡಲಾಗಿ ಕಟ್ಟಿ ನೀರು ಸಂಗ್ರಹಿಸಲು ಪ್ರಯತ್ನಸಿದ್ದಾರೆ. ಆದರೆ ಅವರ ಪ್ರಯತ್ನಕ್ಕೆ ಫಲ ಸಿಕ್ಕಿಲ್ಲ.

‘ಕಂದಳ್ಳಿ ಬ್ರಿಜ್ ಕಂ ಬ್ಯಾರೇಜ್‌ಗೆ ಕೂಡಲೇ ವಿದ್ಯುತ್ ಚಾಲಿತ ಗೇಟ್‌ಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕು’ ಎಂದು ಯಾದಗಿರಿ ಹಾಗೂ ಗುರುಮಠಕಲ್ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ರೈತರು ಆಗ್ರಹಿಸಿದ್ದಾರೆ.

ಕಳೆದ ಮೂರು ತಿಂಗಳ ಹಿಂದೆ ವಿದ್ಯುತ್ ಚಾಲಿತ ಗೇಟ್‌ಗಳನ್ನು ಅಳವಡಿಸುವ ಸಲುವಾಗಿ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ. ಅದು ಅನುಮೋದನೆಗೊಂಡು ಬಂದ ತಕ್ಷಣ ಕಾಮಗಾರಿ ಆರಂಭಿಸಲಾಗವುದು.
ನರೇಂದ್ರ, ಎಇಇಸಣ್ಣ ನೀರಾವರಿ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT