ಶಹಾಪುರ: ಕೂಲಿ ಕೆಲಸಕ್ಕಾಗಿ ಜಿಲ್ಲೆಯ ಜನತೆ ದೂರದ ಮುಂಬೈ, ಪುಣೆ, ಬೆಂಗಳೂರಿಗೆ ತೆರಳಿದ್ದಾರೆ. ಆದರೆ ವಿಚಿತ್ರವೆಂದರೆ ದೂರದ ಪಶ್ಚಿಮ ಬಂಗಾಳ, ಬಿಹಾರ, ಮಹಾರಾಷ್ಟ್ರ, ತೆಲಂಗಾಣದ ಸೇರಿದಂತ ನೆರೆ ರಾಜ್ಯದ ಜನತೆ ಕೃಷ್ಣಾ ಅಚ್ಚುಕಟ್ಟು ಪ್ರದೇಶಕ್ಕೆ ಭತ್ತ ನಾಟಿಯ ಕೂಲಿ ಕೆಲಸಕ್ಕೆ ಮಹಿಳೆಯರು ಹಾಗೂ ಯುವಕರು ತಂಡೋಪ ತಂಡವಾಗಿ ಆಗಮಿಸಿ ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ.
ನಮ್ಮವರು ಕೂಲಿ ಅರಿಸಿ ಅತ್ತ ತೆರಳಿದರೆ ಇತ್ತ ನೆರೆ ರಾಜ್ಯದವರು ತುತ್ತಿನ ಚೀಲ ತುಂಬಿಸಿಕೊಳ್ಳಲು ಇಲ್ಲಿಗೆ ಲಗ್ಗೆ ಹಾಕಿದ್ದಾರೆ. ಕಾಲುವೆ ನೀರು ಕೂಲಿ ಕಾರ್ಮಿಕರಿಗೆ ಆಶ್ರಯ ತಾಣವಾಗಿ ಮಾರ್ಪಟ್ಟಿರುವುದು ವಿಶೇಷ.
ಇಲ್ಲಿನ ಜಮೀನು ಖರೀದಿಸಿರುವ ಆಂಧ್ರವಲಸಿಗರು ಕೆಲ ದಲ್ಲಾಳಿಗಳ ಮೂಲಕ ಕೂಲಿ ಕಾರ್ಮಿಕರನ್ನು ಕರೆ ತರುತ್ತಾರೆ. ಆಯಾ ಗ್ರಾಮದ ಪ್ರದೇಶದ ಬಯಲು ಜಾಗದಲ್ಲಿ ತಾತ್ಕಾಲಿಕ ಪ್ಲಾಸ್ಟಿಕ್ ಹೊದಿಕೆಯ ಗುಡಿಸಲು ನಿರ್ಮಿಸಿಕೊಡುತ್ತಾರೆ. ಬೆಳಿಗ್ಗೆ ಭತ್ತ ನಾಟಿಗೆ ತೆರಳಿದರೆ ಬರುವುದು ಮತ್ತೆ ಸಂಜೆ ಕತ್ತಲಿನಲ್ಲಿ ಗುಡಿಸಲು ಸೇರುತ್ತಾರೆ. ದಲ್ಲಾಳಿಗಳೇ ನೇರವಾಗಿ ಅವರಿಗೆ ಕೆಲಸ ನೀಡುತ್ತಾರೆ. ಭತ್ತ ನಾಟಿಗೆ ಎಕರೆಗೆ ₹5ಸಾವಿರ ನಿಗದಿ ಮಾಡಿದ್ದಾರೆ. ದಿನಾಲು 10 ಎಕರೆ ಭತ್ತ ನಾಟಿ ಮಾಡುತ್ತಾರೆ. ಒಂದು ತಂಡದಲ್ಲಿ ಸುಮಾರು 50 ಜನ ಮಹಿಳಾ ಮತ್ತು ಪುರುಷ ಕೂಲಿ ಕಾರ್ಮಿಕರಿರುತ್ತಾರೆ. ಎರಡು ತಿಂಗಳ ಕೆಲಸ ನಿರ್ವಹಿಸಿ ಮತ್ತೆ ತಮ್ಮ ಊರಿಗೆ ಹೋಗುತ್ತಾರೆ ಎಂದು ಕೊಂಗಂಡಿ ಗ್ರಾಮದ ರೈತ ಮುಖಂಡ ಹೇಮರಡ್ಡಿ ಸೂಗೂರಾಳ ತಿಳಿಸಿದರು.
ಕೂಲಿ ಕಾರ್ಮಿಕರಲ್ಲಿ ಒಬ್ಬ ವ್ಯಕ್ತಿಯನ್ನು ಅಡುಗೆ ಮಾಡಿಕೊಳ್ಳಲು ನೇಮಿಸಿಕೊಂಡಿರುತ್ತವೆ. ನಿಗದಿತ ಸಮಯಕ್ಕೆ ಊಟವನ್ನು ಭತ್ತ ನಾಟಿ ಮಾಡುವ ಜಮೀನಿಗೆ ತೆರಳಿ ಊಣಬಡಿಸುತ್ತಾನೆ. ನಮ್ಮದು ಎಷ್ಟು ಶ್ರಮವೆಂದರೆ ಮಳೆ, ಚಳಿ ಎನ್ನದೆ ಬೆಳಗಿನ ಜಾವ ಆರು ಗಂಟೆಗೆ ಗದ್ದೆಯ ನೀರಿನಲ್ಲಿ ಇಳಿಯುತ್ತೇವೆ. ಕೆಲಸವೊಂದು ಬಿಟ್ಟು ನಮ್ಮದು ಬೇರೆ ಯಾವುದರ ಕಡೆಗೂ ಗಮನವಿರುವುದಿಲ್ಲ ಎನ್ನುತ್ತಾರೆ ಮಹಾರಾಷ್ಟ್ರದ ಕೂಲಿ ಕಾರ್ಮಿಕ ರಮೇಶ.
ಬರದ ದವಡೆಯಲ್ಲಿ ಸಿಲುಕಿದ ರೈತರಿಗೆ ನೀರುಣಿಸುವ ಉದ್ದೇಶದಿಂದ ಜನ್ಮ ತಾಳಿದ ನಾರಾಯಣಪುರ ಜಲಾಶಯವು ರೈತರ ಬದುಕಿನಲ್ಲಿ ಹಸಿರು ಮೂಡಿಸಿದೆ. ರೈತರು ಶ್ರಮಿಸಿ ದುಡಿಯುವುದರಿಂದ ಆರ್ಥಿಕ ಚಿತ್ರಣವೇ ಬೇರೆಯಾಗಿದೆ. ಅದಕ್ಕಾಗಿ ಕೃಷ್ಣೆ ನಮ್ಮ ಪಾಲಿನ ಜೀವನಾಡಿಯಾಗಿದ್ದಾಳೆ ಎನ್ನುತ್ತಾರೆ ನಮ್ಮ ರೈತರು.
ಕೃಷ್ಣೆ ನೀರು ರೈತರ ಆರ್ಥಿಕ ಚಿತ್ರಣದ ಮಗ್ಗಲು ಬದಲಾಯಿಸಿದೆ. ಕೂಲಿ ಹರಸಿ ಬರುವ ಕಾರ್ಮಿಕರಿಗೆ ಅನ್ನ ನೀಡುವ ಕಲ್ಪವೃಕ್ಷವಾಗಿದೆ.
- ಭಾಸ್ಕರರಾವ ಮುಡಬೂಳ ಐಸಿಸಿ ಮಾಜಿ ಸದಸ್ಯ
ಎರಡು ತಿಂಗಳಲ್ಲಿ ಭತ್ತ ಮಾಡಿ ನಾವು ₹50 ಸಾವಿರ ಕೂಲಿ ಹಣ ಸಂಪಾದನೆ ಮಾಡಿಕೊಂಡು ತೆರಳುತ್ತೇವೆ. ನಂತರ ಮಹಾರಾಷ್ಟ್ರದಲ್ಲಿ ಕಬ್ಬ ಕತ್ತರಿಸುವ ಕೆಲಸದಲ್ಲಿ ನಿರತರಾಗುತ್ತೇವೆ.
-ರಮೇಶ ಮಹಾರಾಷ್ಟ್ರ ಕೂಲಿ ಕಾರ್ಮಿಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.