ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುಮಠಕಲ್‌ನ ಚಂಡರಕಿಯಲ್ಲಿ ಸಿಎಂ ಗ್ರಾಮ ವಾಸ್ತವ್ಯ ನಡೆದರೂ ನೀಗಲಿಲ್ಲ ಸಮಸ್ಯೆ

ಚಂಡರಕಿ: ಮುಖ್ಯಮಂತ್ರಿ ಗ್ರಾಮ ವಾಸ್ತವ್ಯಕ್ಕೀಗ ಒಂದು ವರ್ಷ ಪೂರ್ಣ
Last Updated 21 ಜೂನ್ 2020, 19:30 IST
ಅಕ್ಷರ ಗಾತ್ರ

ಗುರುಮಠಕಲ್: ಕಳೆದ ವರ್ಷ ಜೂನ್‌ 21ರಂದು ಇಡೀ ರಾಜ್ಯದ ಗಮನವನ್ನು, ಆಡಳಿತ ಯಂತ್ರದ ಓಟವನ್ನು ತನ್ನೆಡೆಗೆ ಸೆಳೆದಿದ್ದ ಚಂಡರಕಿ ಗ್ರಾಮದಲ್ಲಿ ಅಂದು ಏನೆಲ್ಲಾ ಅಭಿವೃದ್ಧಿ ಹೊಂದಬಹುದೆಂಬ ನಿರೀಕ್ಷೆಗಳೊಡನೆ ಸಂಭ್ರಮಿಸಿದ್ದ ಗ್ರಾಮಸ್ಥರು ಇದೀಗ ವಾಸ್ತವ್ಯದ ಒಂದು ವರ್ಷ ಪೂರ್ಣಗೊಂಡ ನಂತರವೂ ತಮ್ಮ ಸಮಸ್ಯೆಗಳು ಯಥಾವತ್ತಾಗಿವೆ ಎನ್ನುವ ಬೇಸರದಲ್ಲಿದ್ದಾರೆ.

ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಸ್ತವ್ಯ ಮಾಡಿದ್ದ ಚಂಡರಕಿ ಗ್ರಾಮದಲ್ಲಿ 'ಅಭಿವೃದ್ಧಿಯ ಪರ್ವ ಇನ್ನೇನು ಆರಂಭಗೊಂಡಿದೆ. ಮುಂದಿನ ದಿನಗಳಲ್ಲಿ ಗ್ರಾಮವು ಆದರ್ಶ ಗ್ರಾಮವಾಗಿ ನಮ್ಮೆಲ್ಲಾ ಸಮಸ್ಯೆಗಳು ಶಾಶ್ವತವಾಗಿ ಕೊನೆಗೊಳ್ಳಲಿವೆ ಎನ್ನುವ ನಿರೀಕ್ಷೆಯಿತ್ತು. ಆದರೆ, ಎರಡು ರಸ್ತೆಗಳು, ಕಟ್ಟಡಗಳಿಗೆ ಸುಣ್ಣ-ಬಣ್ಣ, ಸಿ.ಎಂ. ವಾಸ್ತವ್ಯ ಮಾಡಿದ್ದ ಶಾಲೆಯಲ್ಲಿ ಟೈಲ್ಸ್ ಅಳವಡಿಕೆ ಬಿಟ್ಟರೆ ನಮ್ಮ ಯಾವ ಬೇಡಿಕೆಗಳೂ ಈಡೇರಿಲ್ಲ' ಎನ್ನುವುದು ಗ್ರಾಮಸ್ಥರ ಅಳಲು.

ಗುರುಮಠಕಲ್‌ ಸಮೀಪದಚಂಡರಕಿಗ್ರಾಮದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದಿದ್ದರಿಂದ
ರಸ್ತೆ ಮೇಲೆ ನೀರು ಹರಿಯುತ್ತಿದೆ

ಮುಖ್ಯಮಂತ್ರಿ ವಾಸ್ತವ್ಯ ಮಾಡಿದ ಶಾಲೆ ಹಾಗೂ ಇತರ ಶಾಲೆಗಳಲ್ಲಿ ಶೌಚಾಲಯ, ಸ್ಮಾರ್ಟ್ ಕ್ಲಾಸ್, ತಡೆಗೋಡೆ, ಊಟದ ಕೋಣೆ, ಸೇರಿದಂತೆ ಶಾಲೆಗಳಿಗೆ ಅವಶ್ಯವಿರುವ ಕಾಮಗಾರಿಗಳು ಈಗಾಗಲೇ ಟೆಂಡರ್ ಹಂತದಲ್ಲಿವೆ. ಇನ್ನು ಯಾನಾಗುಂದಿಗೆ ಸಂಪರ್ಕ ಕಲ್ಪಿಸುವ ಬುರಗಪಲ್ಲಿ ರಸ್ತೆ, ಗ್ರಾಮದಲ್ಲಿನ ಮುಖ್ಯ ರಸ್ತೆ ಹಾಗೂ ಇತರೆ ಭಾಗಗಳಲ್ಲಿ ಚಿಕ್ಕ ರಸ್ತೆಗಳ ಕಾಮಗಾರಿಗಳು ಜರುಗಿವೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದರು.

ಗ್ರಾಮದಲ್ಲಿ ನೀರು, ಸ್ವಚ್ಛತೆ ಹಾಗೂ ವಿದ್ಯುತ್ ಸಮಸ್ಯೆಗಳಿಗೆ ಮಾತ್ರ ಇನ್ನೂ ಮುಕ್ತಿ ಸಿಕ್ಕಿಲ್ಲ. ಎಷ್ಟು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಉಪಯೋಗವಾಗಿಲ್ಲ. ಗ್ರಾಮದಲ್ಲಿನ ಕೆಲವು ವಿದ್ಯುತ್ ಕಂಬಗಳಲ್ಲಿ ವಿದ್ಯುತ್ ಹರಿಯುತ್ತಿರುತ್ತದೆ. ಚಿಕ್ಕಮಕ್ಕಳು ಆಟವಾಡುವಾಗ ಕಂಬಗಳನ್ನು ಹಿಡಿದರೆ ಏನು ಗತಿ? ಎನ್ನುವುದು ಗ್ರಾಮಸ್ಥರ ಅಳಲಾಗಿದೆ.

ಬೇಸಿಗೆಯಲ್ಲಿ ಖಾಸಗಿ ಕೊಳವೆ ಬಾವಿಗಳನ್ನು ಪಡೆದು ನೀರನ್ನು ಸರಬರಾಜು ಮಾಡಿದ್ದೇನೋ ಸರಿ. ಆದರೂ, ನೀರಿನ ಸಮಸ್ಯೆಗೆ ಶಾಶ್ವತವಾದ ಪರಿಹಾರವಂತೂ ಸಿಕ್ಕಿಲ್ಲ. ಈಗ ಸಮಸ್ಯೆ ಮರುಕಳಿಸುವ ಲಕ್ಷಣಗಳಿವೆ. ಪಂಚಾಯತಿ ವತಿಯಿಂದ ಕೊರೆಸಿದ ಕೊಳವೆಬಾವಿಯಿಂದ ನೀರು ಸರಬರಾಜನ್ನು ಸದಸ್ಯರೊಬ್ಬರರೇ ನಿಲ್ಲಿಸಿದ್ದಾರೆ. ಇಂಥ ಹಲವು ಸಮಸ್ಯೆಗಳಿವೆ ಎನ್ನುವುದು ಸ್ಥಳೀಯರಾದ ನಾರಾಯಣ, ಶರಣಪ್ಪ, ರಾಮು ಅವರ ದೂರಾಗಿದೆ.

ನಾಡದೊರೆಯ ವಾಸ್ತವ್ಯದಿಂದ ತಮ್ಮ ಗ್ರಾಮದ ಎಲ್ಲಾ ಸಮಸ್ಯೆಗಳೂ ಕೊನೆಗೊಳ್ಳುತ್ತವೆ ಎನ್ನುವ ಗ್ರಾಮಸ್ಥರ ನಿರೀಕ್ಷೆಗಳೀಗ ಬತ್ತುತ್ತಿರುವುದು ಕಂಡು ಬಂದಿತು.

***

ಮುಖ್ಯಮಂತ್ರಿಗಳು ಬಂದಾಗ ನಮ್ಮ ಓಣಿಗೆ ರಸ್ತೆ ನಿರ್ಮಿಸಲೆಂದು ಜಲ್ಲಿಯನ್ನು ತಂದಿದ್ದರು. ನಂತರ ಮತ್ತೆ ಅದನ್ನು ಕೊಂಡೊಯ್ದಿದ್ದಾರೆ. ಅವರು ಬಂದು ಹೋಗುವ ಮಾರ್ಗದ ಅಭಿವೃದ್ಧಿ ಮಾತ್ರ ಆಗಿದೆ

– ವೆಂಕಟೇಶ ಚೇಗುಂಟ, ಗ್ರಾಮದ ಯುವಕ

***

ನೀರಿಗಾಗಿ ನಾವು ಅಲವತ್ತುಕೊಳ್ಳುವುದಕ್ಕೆ ಕೊನೆಯೆ ಇಲ್ಲವೇನೋ? ಯಾರು ಬಂದು ಹೋದರೂ ನಮ್ಮ ಕಷ್ಟ ಮಾತ್ರ ಕರಗದ ಬೆಟ್ಟದಂತಿವೆ
– ನರಸಮ್ಮ ಪೆದ್ದಗಿದ್ಯೆ, ಗ್ರಾಮಸ್ಥರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT