ಸುರಪುರ: ತಾಲ್ಲೂಕಿನ ಚಿಕ್ಕನಳ್ಳಿ ಗ್ರಾಮದಲ್ಲಿ ಮಂಗಳವಾರ ಹೊಸದಾಗಿ 10 ಜನರಲ್ಲಿ ವಾಂತಿಭೇದಿ ಕಾಣಿಸಿಕೊಂಡಿದೆ. ಕಡಿಮೆ ಪ್ರಮಾಣದ ಲಕ್ಷಣಗಳು ಇದ್ದರಿಂದ ಎಲ್ಲರಿಗೂ ಮಾತ್ರೆ ನೀಡಿ ಮನೆಗೆ ಕಳಿಸಲಾಗಿದೆ.
ರೋಗ ನಿಯಂತ್ರಣದಲ್ಲಿದ್ದು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 3–4 ಮಕ್ಕಳ ಚಿಕಿತ್ಸೆ ಮುಂದುವರಿಸಲಾಗಿದೆ. ಸುರಪುರ ಆಸ್ಪತ್ರೆಯಲ್ಲಿ 3 ಜನ ಬಂಗಾಲಿ ಕಾರ್ಮಿಕರು ಸೇರಿದಂತೆ 6 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.
‘ರಾಯಚೂರಿನಲ್ಲಿ ದಾಖಲಾಗಿದ್ದ ಇಬ್ಬರು ಮತ್ತು ಯಾದಗಿರಿಯಲ್ಲಿ ದಾಖಲಾಗಿದ್ದ ಒಬ್ಬರ ಚಿಕಿತ್ಸೆ ಮುಂದುವರಿದಿದೆ. ಎಲ್ಲರ ಆರೋಗ್ಯ ಸ್ಥಿರವಾಗಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಾಜಾ ವೆಂಕಪ್ಪನಾಯಕ ತಿಳಿಸಿದ್ದಾರೆ.
ಸಿಇಒ ಭೇಟಿ
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗರಿಮಾ ಪನ್ವಾರ್ ಮತ್ತು ಜಿಲ್ಲಾ ಆರೋಗ್ಯಾಧಿಕಾರಿ ಹಿರೇಗೌಡರ್ ಮಂಗಳವಾರ ಚಿಕ್ಕನಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ವಿಚಾರಿಸಿದರು.
‘ಶಾಲೆಯಲ್ಲಿ ಶೌಚಾಲಯ ಕಾಮಗಾರಿ ಬುಧವಾರವೇ ಆರಂಭವಾಗಬೇಕು. ಗ್ರಾಮದಲ್ಲೂ ಸಾರ್ವಜನಿಕ ಶೌಚಾಲಯಕ್ಕೆ ಶೀಘ್ರ ಪ್ರಸ್ತಾವ ಸಲ್ಲಿಸಬೇಕು’ ಎಂದು ಸಿಇಒ ಸೂಚಿಸಿದರು. ಶಾಲೆಯ ಸುತ್ತಲಿನ ಪರಿಸ್ಥಿತಿ ಪರಿಶೀಲಿಸಿದ ಅವರು, ‘ಶಾಲೆಯ ಸುತ್ತಲೂ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಮಕ್ಕಳಿಗೆ ಶುದ್ಧವಾದ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು’ ಎಂದು ತಿಳಿಸಿದರು.
ಗ್ರಾಮಸ್ಥರ ಅಸಹಕಾರ
‘ಗ್ರಾಮದಲ್ಲಿ ಚರಂಡಿ ನಿರ್ಮಿಸಲು ಗ್ರಾಮಸ್ಥರ ಅಸಹಕಾರ ಇದೆ’ ಎಂದು ಗ್ರಾಮ ಪಂಚಾಯಿತಿ ಸಿಬ್ಬಂದಿ ಸಿಇಒಗೆ ಮಾಹಿತಿ ನೀಡಿದರು. ಗ್ರಾಮಸ್ಥರೊಂದಿಗೆ ಚರ್ಚಿಸಿದ ಸಿಇಒ ‘ನಿಮ್ಮ ಊರು ನೈರ್ಮಲ್ಯದಿಂದ ಇರುತ್ತದೆ. ಎಲ್ಲರ ಸಹಕಾರ ಇರಬೇಕು. ಚರಂಡಿ ನಿರ್ಮಿಸಲು ಸಹಕಾರ ನೀಡಿ’ ಎಂದು ಮನವೊಲಿಸಿದರು.
‘ನೀರಿನಲ್ಲಿ ಹಾಲೋಜಿನ ಮಾತ್ರೆ ಹಾಕಿ ತಿಳಿಯಾದ ಮೇಲೆ ಕುಡಿಯಿರಿ. ನೀರನ್ನು ಕಾಯಿಸಿ, ಸೋಸಿರಿ. ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಿ’ ಎಂದು ಮನವಿ ಮಾಡಿದರು.
‘ಗ್ರಾಮದಲ್ಲಿ ಸಾರ್ವಜನಿಕ ಮೂರು ಕೊಳವೆಬಾವಿಗಳಿವೆ. ಅವುಗಳ ನೀರಿನ ಮಾದರಿ ಮತ್ತು ಎರಡು ವೈಯಕ್ತಿಕ ಕೊಳವೆಬಾವಿಯ ನೀರಿನ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗಿದೆ. ಬುಧವಾರ ವರದಿ ಕೈಸೇರಲಿದೆ’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಸಜ್ಜನ್ ತಿಳಿಸಿದರು. ‘ಸ್ಥಗಿತಗೊಂಡಿದ್ದ ನೀರು ಶುದ್ಧೀಕರಣ ಘಟಕ ದುರಸ್ತಿ ಮಾಡಲಾಗಿದ್ದು ಬುಧವಾರದಿಂದ ಸಾರ್ವಜನಿಕ ಸೇವೆಗೆ ತೆರೆಯಲಾಗುವುದು’ ಎಂದು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.