ಯಾದಗಿರಿ: ಜಿಲ್ಲೆಯ ಪ್ರಾಥಮಿಕ ಶಾಲೆಗಳಲ್ಲಿ 2023–24ನೇ ಸಾಲಿನಲ್ಲಿ ಒಂದನೇ ತರಗತಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳ ದಾಖಲಾತಿ ವೇಳೆ ಆಧಾರ್ ಕಾರ್ಡ್ ಮಾಡಿಸದ ಪೋಷಕರು ತೊಂದರೆ ಪಡುತ್ತಿದ್ದಾರೆ.
ವಿದ್ಯಾರ್ಥಿ ಸಾಧನೆಯ ಟ್ರ್ಯಾಕಿಂಗ್ ವ್ಯವಸ್ಥೆ (ಸ್ಯಾಟ್ಸ್)ನಲ್ಲಿ ವಿದ್ಯಾರ್ಥಿಯ ಎಲ್ಲ ವಿವರ ದಾಖಲಿಸಬೇಕಿರುವುದರಿಂದ ಶಿಕ್ಷಕರು ಇದರಿಂದ ಹೈರಾಣಾಗುತ್ತಿದ್ದಾರೆ. ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಶಿಕ್ಷಣ ಇಲಾಖೆಯೇ ಕೆಲ ಮಕ್ಕಳಿಗೆ ಆಧಾರ್ ಕಾರ್ಡ್ ನೆಪ ಒಡ್ಡಿ ದಾಖಲಿಸಿಕೊಳ್ಳದಿರುವುದು ಜಿಲ್ಲೆಯ ಕೆಲ ಶಾಲೆಗಳಲ್ಲಿ ನಡೆದಿದೆ.
ಸೌಲಭ್ಯದಿಂದ ಮಕ್ಕಳು ವಂಚಿತ: ಆಧಾರ್ ಕಾರ್ಡ್ ಜೊತೆಗೆ ಬ್ಯಾಂಕ್ ಖಾತೆಗೆ ಅದನ್ನು ಜೋಡಣೆ ಮಾಡಿಸಬೇಕು. ಕೆಲವರು ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಿಸದ ಕಾರಣ ಸರ್ಕಾರದಿಂದ ಬರುವ ಹಲವು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.
ಸ್ಯಾಟ್ಸ್ ಮೂಲಕ ವಿದ್ಯಾರ್ಥಿಗಳ ಮಾಹಿತಿ ಭರ್ತಿ ಮಾಡಿದರೆ ಸಮವಸ್ತ್ರ, ಬೂಟು, ಟೈ, ಶಿಷ್ಯ ವೇತನ ಇನ್ನಿತರ ಸೌಲಭ್ಯಗಳು ಸಿಗುತ್ತವೆ. ಆದರೆ, ಇದರ ಬಗ್ಗೆ ತಿಳಿವಳಿಕೆ ಇಲ್ಲದ ಪೋಷಕರು ಆಧಾರ್ ಕಾರ್ಡ್ ಮಾಡಿಸದ ಕಾರಣ ಮಕ್ಕಳು ತೊಂದರೆ ಪಡುತ್ತಿದ್ದಾರೆ.
ಆಧಾರ್ ಕೇಂದ್ರಗಳ ಸಿಬ್ಬಂದಿ ಎಡವಟ್ಟು: ಆಧಾರ್ ಕೇಂದ್ರ ಸಿಬ್ಬಂದಿ ಎಡವಟ್ಟಿನಿಂದ ಮಕ್ಕಳ ಹೆಸರುಗಳು ಸರಿಯಾಗಿ ಸ್ಯಾಟ್ಸ್‌ನಲ್ಲಿ ಲಿಂಕ್ ಆಗುತ್ತಿಲ್ಲ. ದಾಖಲಾತಿ ವೇಳೆ ಒಂದು ಹೆಸರು, ಆಧಾರ್ ಕಾರ್ಡ್‌ನಲ್ಲಿ ಒಂದೇ ಅಕ್ಷರ ಇದ್ದರೆ ಲಿಂಕ್ ಆಗುತ್ತಿದೆ. ಒಂದಕ್ಷರ ಬೇರೆಯಾದರೆ ಲಿಂಕ್ ತೆಗೆದುಕೊಳ್ಳುವುದಿಲ್ಲ. ಅಲ್ಲದೇ ಕೆಲ ಆಧಾರ್ ಕೇಂದ್ರದ ಸಿಬ್ಬಂದಿ ವಿದ್ಯಾರ್ಥಿಗಳ ಜನ್ಮ ದಿನಾಂಕದಲ್ಲೂ ವ್ಯಾತ್ಯಾಸ ನಮೂದಿಸಿದ್ದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ.
ಶಿಕ್ಷಕರಿಗೆ ನೋಟಿಸ್ ಶಿಕ್ಷೆ: ಸ್ಯಾಟ್ಸ್‌ನಲ್ಲಿ ಶೇ 100ರಷ್ಟು ಮಕ್ಕಳ ದಾಖಲಾತಿ ಅಪ್‌ಲೋಡ್ ಮಾಡಬೇಕು. ಆದರೆ, ವಿದ್ಯಾರ್ಥಿಗಳ ಜನ್ಮ ದಿನಾಂಕ, ಆಧಾರ್ ಕಾರ್ಡ್ ನೋಂದಣಿ, ಬ್ಯಾಂಕ್ ಖಾತೆಗೆ ಜೋಡಣೆ ಇಲ್ಲದಿರುವುದರಿಂದ ಶೇ 100ರಷ್ಟು ಪ್ರಗತಿ ಆಗುತ್ತಿಲ್ಲ. ಇದರಿಂದ ಮೇಲಧಿಕಾರಿಗಳು ಶಿಕ್ಷಕರಿಗೆ ನೋಟಿಸ್ ನೀಡಿರುವ ಉದಾಹರಣೆಗಳು ಇವೆ.