ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಸಹಕಾರ ಅಗತ್ಯ’

ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡ ಮಾಲೀಕರಿಗೆ ದಂಡ ಮತ್ತು ಜೈಲು ಶಿಕ್ಷೆ: ನ್ಯಾ.ಹೊನೋಲೆ
Published 10 ಮಾರ್ಚ್ 2024, 15:40 IST
Last Updated 10 ಮಾರ್ಚ್ 2024, 15:40 IST
ಅಕ್ಷರ ಗಾತ್ರ

ಯಾದಗಿರಿ: ‘ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ಧತಿಯು ನಿರ್ಮೂಲನೆಗೆ ಸಂಘ-ಸಂಸ್ಥೆಗಳು ಮತ್ತು ಶಿಕ್ಷಣ ಸಂಸ್ಥೆಗಳ ಸಹಕಾರ ಅಗತ್ಯ’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರವೀಂದ್ರ ಹೊನೋಲೆ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪಂಚಾಯಿತಿ, ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಬಾಲಕಾರ್ಮಿಕ ನಿರ್ಮೂಲನಾ ಸೊಸೈಟಿ, ಶಾಲಾ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಕ್ಕಳ ಸಹಾಯವಾಣಿ, ಕರುನಾಡ ಕಾರ್ಮಿಕರ ವೇದಿಕೆ, ಧನ್ವಂತರಿ ಟ್ರಸ್ಟ್ ವತಿಯಿಂದ ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ಕಂದಕೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಕಾನೂನು ಅರಿವು–ನೆರವು ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಿಲ್ಲೆಯಲ್ಲಿ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡ ಮಾಲೀಕರಿಗೆ ದಂಡ ಮತ್ತು ಜೈಲು ಶಿಕ್ಷೆ ಇದೆ ಎಂದು ಎಚ್ಚರಿಕೆ ನೀಡಿದರು.

ಶಿಕ್ಷಣವು ಪ್ರತಿಯೊಬ್ಬ ಮಕ್ಕಳ ಮೂಲಭೂತ ಹಕ್ಕು. ಮಕ್ಕಳ ಸಾಧನೆಗೆ ಬಡತನ ಅಡ್ಡಿಯಾಗಬಾರದು ಎಂದರು.

ಶಿಶು ಯೋಜನಾಭಿವೃದ್ಧಿ ಅಧಿಕಾರಿ ಶರಣಬಸಪ್ಪ ಬೆಳಗುಂಪಿ ಮಾತನಾಡಿ,‘ವಿದ್ಯಾರ್ಥಿಗಳು ಶೈಕ್ಷಣಿಕ ಮನೋಭಾವ ಬೆಳೆಸಿಕೊಳ್ಳಬೇಕು. ಜೀವನದಲ್ಲಿ ನಿಖರವಾದ ಗುರಿ ಇಟ್ಟುಕೊಂಡಲ್ಲಿ ಮಾತ್ರ ಉನ್ನತ ಹುದ್ದೆಗಳನ್ನು ಪಡೆಯಲು ಸಾಧ್ಯ’ ಎಂದು ಹೇಳಿದರು.

ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕ ರಿಯಾಜ್ ಪಟೇಲ್ ವರ್ಕನಳ್ಳಿ ಮಾತನಾಡಿ,‘ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಂಡಲ್ಲಿ ಅಂಥ ಅಂಗಡಿ ಮಾಲೀಕರಿಗೆ ₹20 ಸಾವಿರದಿಂದ ₹50 ಸಾವಿರದವರೆಗೆ ದಂಡ ಮತ್ತು 6 ತಿಂಗಳಿಂದ 2 ವರ್ಷದವರೆಗೆ ಜೈಲು ಶಿಕ್ಷೆ ಅಥವಾ ಎರಡನ್ನೂ ವಿಧಿಸಲಾಗುವುದು. ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಜಿಲ್ಲೆಯಲ್ಲಿ ನಿರಂತರವಾಗಿ ಕಾನೂನು ಅರಿವು ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ತಿಳಿಸಿದರು.

ಗುರುಮಠಕಲ್ ಸಿಪಿಐ ಸಂಜೀವಕುಮಾರ ಮಾತನಾಡಿ,‘ಮಕ್ಕಳ ಹಕ್ಕುಗಳ ರಕ್ಷಣೆ ಪ್ರತಿ ಪಾಲಕರ ಹೊಣೆಯಾಗಿದೆ’ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಂಕರಮ್ಮ ಮ್ಯಾಕಲ್, ಕಂದಕೂರ ಪಿಡಿಒ ಮಹ್ಮದ್ ಅಲಿ, ಮುಖ್ಯಶಿಕ್ಷಕ ಎಸ್.ಎಂ.ಭೂತಲ್, ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಶಂಕರ ಸೋನಾರ್, ಕರುನಾಡು ಕಾರ್ಮಿಕರ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಕಾಶೀನಾಥ ಕಣೀಕಲ್, ಪ್ರಧಾನ ಕಾರ್ಯದರ್ಶಿ ಸಿದ್ದಲಿಂಗರೆಡ್ಡಿ ಮುನಗಲ್, ಕರ್ನಾಟಕ ರಕ್ಷಣಾ ವೇದಿಕೆಯ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಕಾಶೀಂ ಪಟೇಲ್, ಧನ್ವಂತರಿ ಟ್ರಸ್ಟ್‌ನ ಕಾರ್ಯದರ್ಶಿ ಲಲಿತಾ ಕಣೀಕಲ್ ಉಪಸ್ಥಿತರಿದ್ದರು. ಶಿಕ್ಷಕ ನಾಗಪ್ಪ ನಿರೂಪಿಸಿದರು. ಶಿಕ್ಷಕಿ ಮಧುಮತಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT