ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರಿಗೆ ನೌಕರರ ಮುಂದುವರಿದ ಮುಷ್ಕರ; ಬಸ್‌ ಕಾರ್ಯಾಚರಣೆ ಗೊಂದಲ

ಕ್ರಮಕ್ಕೆ ಮುಂದಾದ ಇಲಾಖೆ
Last Updated 13 ಡಿಸೆಂಬರ್ 2020, 16:41 IST
ಅಕ್ಷರ ಗಾತ್ರ

ಯಾದಗಿರಿ: ತಮ್ಮ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ಇಲಾಖೆ ನೌಕರರು ನಡೆಸುತ್ತಿರುವ ಮುಷ್ಕರ ಜಿಲ್ಲೆಯಲ್ಲಿ ಎರಡನೇ ದಿನಕ್ಕೆ ಕಾಲಿಟ್ಟಿದೆ. ಬಸ್‌ ಬಂದ್‌ನಿಂದ ಪ್ರಯಾಣಿಕರು ಪರದಾಡಿದರು.

ಭಾನುವಾರ ಬೆಳಿಗ್ಗೆ ಕೇಂದ್ರ ಬಸ್‌ ನಿಲ್ದಾಣದಲ್ಲಿ ಜಮಾಯಿಸಿದ ಸಾರಿಗೆ ನೌಕರರು ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್, ರಾಷ್ಟ್ರಪಿತ ಮಹಾತ್ಮ ಗಾಂಧಿಜೀ ಭಾವಚಿತ್ರ ಸತ್ಯಾಗ್ರಹ ಮಾಡಿದರು.

ಬೆಳಿಗ್ಗೆ 11 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಸತ್ಯಾಗ್ರಹ ನಡೆಸಿದ ನೌಕರರು ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.

ಸಂಜೆ ವೇಳೆ ಬಸ್‌ ಕಾರ್ಯಾಚರಣೆ ಬಗ್ಗೆ ಗೊಂದಲ ಉಂಟಾಗಿದ್ದು, ಇದು ಕೆಲ ಕಾಲ ಸಂದಿಗ್ಧ ಸ್ಥಿತಿಗೆ ತಂದಿತ್ತು. ನಂತರ ಕೇಂದ್ರ ಬಸ್‌ ನಿಲ್ದಾಣದಲ್ಲಿ ಜಮಾಯಿಸಿದ ಸಾರಿಗೆ ಇಲಾಖೆ ನೌಕರರು ಮುಷ್ಕರ ಮುಂದುವರೆಸುತ್ತೇವೆ ಎಂದು ತಿಳಿಸಿದ್ದಾರೆ.

ದುಪ್ಪಟು ದರ ವಸೂಲಿ:ಬಸ್‌ ಸಂಚಾರ ಸ್ಥಗಿತಗೊಂಡಿದ್ದರಿಂದ ಇದನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ವಾಹನಗಳ ಚಾಲಕರು ಪ್ರಯಾಣಿಕರಿಂದ ದುಪ್ಪಟ್ಟು ದರ ವಿಧಿಸಿ ವಸೂಲಿ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಕೇಂದ್ರ ಬಸ್‌ ನಿಲ್ದಾಣ, ಹಳೆ ಬಸ್‌ ನಿಲ್ದಾಣ ಸೇರಿದಂತೆ ವಿವಿಧೆಡೆ ಖಾಸಗಿ ವಾಹನಗಳು ಪ್ರಯಾಣಿಕರನ್ನು ಕರೆದೊಯ್ಯುವ ದೃಶ್ಯ ಕಂಡು ಬಂದಿತು.

ಸಂತೆಗೆ ತಟ್ಟಿದೆ ಬಿಸಿ:ಜಿಲ್ಲೆಯ ಹುಣಸಗಿ ಪಟ್ಟಣದ ಭಾನುವಾರ ವಾರದ ಸಂತೆಗೆ ಬಸ್‌ ಮುಷ್ಕರ ಬಿಸಿ ತಟ್ಟಿದೆ. ಬೇರೆ ಬೇರೆ ಭಾಗದಿಂದ ಬರುತ್ತಿದ್ದ ವ್ಯಾಪಾರಿಗೆ ತೊಂದರೆ ಉಂಟು ಮಾಡಿದೆ. ಭಾನುವಾರ ರಜಾ ದಿನವಾಗಿದ್ದರಿಂದ ಅಷ್ಟೇನು ಪರಿಣಾಮ ಬೀರಿಲ್ಲ. ಆದರೆ, ಅನಿವಾರ್ಯ ಕಾರಣಗಳಿಂದ ತೆರಳುವವರಿಗೆ ಖಾಸಗಿ ವಾಹನಗಳಿಗೆ ದುಬಾರಿ ಬೆಲೆ ತೆತ್ತು ತೆರಳುತ್ತಿದ್ದರು.

ರೋಗಿಗಳ ಪರದಾಟ:ಬಸ್‌ ಸಂಚಾರ ಎರಡು ದಿನಗಳಿಂದ ಸ್ಥಗಿತಗೊಂಡಿದ್ದರಿಂದ ರಾಯಚೂರು, ಕಲಬುರ್ಗಿ ಆಸ್ಪತ್ರೆಗೆ ತೆರಳುವವರು ಪರದಾಡಿದರು.

ಚುನಾವಣಾ ಕಾರ್ಯದಲ್ಲಿದ್ದ ಸರ್ಕಾರಿ ನೌಕರರು ತಮ್ಮ ಸ್ವತಂ ವಾಹನಗಳಲ್ಲಿ ತೆರಳಿದ್ದಾರೆ. ಇನ್ನುಳಿದಂತೆ ಖಾಸಗಿ ವಾಹನಗಳಲ್ಲಿ ದುಪ್ಪಟ್ಟು ಬೆಲೆ ಪ್ರಯಾಣಿಕರು ಪ್ರಯಾಣಿಸಿದ್ದಾರೆ.

‘ಜಿಲ್ಲೆಯ ನಾಲ್ಕು ಘಟಕದ ಸಿಬ್ಬಂದಿ ಮುಷ್ಕರದಲ್ಲಿ ನಿರತರಾಗಿದ್ದರಿಂದ ಗೈರಾಗಿದ್ದಾರೆ. ಅವರನ್ನು ಮನವೊಲಿಸುವ ಕಾರ್ಯ ಮುಂದುವರಿಸಿದ್ದೇವೆ. ಯಾರಾದರೂ ಸಿಬ್ಬಂದಿ ಬಂದರೆ ಬಸ್‌ ಕಾರ್ಯಾಚರಣೆ ಮಾಡಲು ಸಿದ್ಧತೆ ನಡೆಸಿದ್ದೇವೆ. ಆದರೆ, ಬರುತ್ತಿಲ್ಲ. ಎಲ್ಲ ಡಿಪೊಗಳಿಗೆ ಭೇಟಿ ನೀಡುತ್ತಿದ್ದೇವೆ’ ಎಂದು ಎನ್‌ಇಕೆಆರ್‌ಟಿಸಿ ವಿಭಾಗೀಯ ಸಂಚನಾಧಿಕಾರಿ ರಮೇಶ ಪಾಟೀಲ ತಿಳಿಸಿದರು.‌

ಮಾಜಿ ಎಂಎಲ್‌ಸಿ ಬೆಂಬಲ
ಯಾದಗಿರಿಯ ಕೇಂದ್ರ ಬಸ್‌ ನಿಲ್ದಾಣ ಬಳಿ ಸಾರಿಗೆ ನೌಕರರು ನಡೆಸುತ್ತಿದ್ದ ಮುಷ್ಕರದಲ್ಲಿ ವಿಧಾನ ಪರಿಷತ್‌ ಮಾಜಿ ಸದಸ್ಯ ಚನ್ನಾರೆಡ್ಡಿ ಪಾಟೀಲ ತುನ್ನೂರು ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು.

‘ವಿವಿಧ ಬೇಡಿಕೆಗೆ ರಾಜ್ಯದ ವಿವಿಧೆಡೆಮೂರು ದಿನಗಳಿಂದ ನಡೆಸುತ್ತಿರುವ ಮುಷ್ಕರ ನ್ಯಾಯ ಸಮ್ಮತವಾಗಿದ್ದು, ಕೂಡಲೇ ಸರ್ಕಾರ ಅವರ ಮನವಿಗೆ ಸ್ಪಂದಿಸಬೇಕು. ಹಲವಾರು ವರ್ಷಗಳಿಂದ ತಮ್ಮ ಬೇಡಿಕೆಗಳು ಈಡೇರಿಸಲುಸರ್ಕಾರದ ಮಾತು ಕೇಳಿಕೊಂಡು ಬಂದಿದ್ದರು. ಆದರೆ, ಇಲ್ಲಿಯವರೆಗೆ ಪೂರ್ಣಗೊಳ್ಳದ ಕಾರಣ ಮುಷ್ಕರದ ಹಾದಿ ಹಿಡಿದಿದ್ದಾರೆ. ಹೀಗಾಗಿ ಅವರ ಬೇಡಿಕೆಗಳನ್ನು ಈಡೇರಿಸಬೇಕು’ ಎಂದು ಆಗ್ರಹಿಸಿದರು.

***

ಈಗಾಗಲೇ ನೌಕರರನ್ನು ಕರ್ತವ್ಯಕ್ಕೆ ಹಾಜರಾಗಲು ಮನವೊಲಿಸಿದ್ದೇವೆ.ಸೋಮವಾರ ಬೆಳಿಗ್ಗೆ ಹಾಜರಾಗದಿದ್ದರೆ ಚಾಲಕ, ನಿರ್ವಾಹಕರ ಮೇಲೆ ಕ್ರಮ ಕೈಗೊಳ್ಳುತ್ತೇವೆ.
-ಎಂ.ಪಿ.ಶ್ರೀಹರಿಬಾಬು, ವಿಭಾಗೀಯ ನಿಯಂತ್ರಣಾಧಿಕಾರಿ

***

ಬೆಂಗಳೂರಿನ ಕಾರ್ಮಿಕರ ಸಂಘಟನೆಗಳಿಂದ ಮುಷ್ಕರ ಸ್ಥಗಿತಗೊಳಿಸಲು ಸೂಚನೆ ಬರುವವರೆಗೂ ಬಸ್‌ ಕಾರ್ಯಾಚರಣೆ ಮಾಡುವುದಿಲ್ಲ. ಮುಷ್ಕರದಲ್ಲಿ ಪಾಲ್ಗೊಳ್ಳುತ್ತೇವೆ.
-ಹೆಸರೇಳಲು ಇಚೈಸದ ಸಾರಿಗೆ ಇಲಾಖೆ ನೌಕರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT