ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರ್ಮಿಕ ಇಲಾಖೆಯಲ್ಲಿ ಭ್ರಷ್ಟಾಚಾರ: ಆರೋಪ

ಕಟ್ಟಡ, ಕಲ್ಲು ಕ್ವಾರಿ ಸಂಘಟನೆಯಿಂದ ಪ್ರತಿಭಟನೆ
Published 19 ಜೂನ್ 2024, 15:43 IST
Last Updated 19 ಜೂನ್ 2024, 15:43 IST
ಅಕ್ಷರ ಗಾತ್ರ

ಸುರಪುರ: ಕಾರ್ಮಿಕರ ಮಕ್ಕಳ ಶೈಕ್ಷಣಿಕ ಧನ ಸಹಾಯ ಸೇರಿದಂತೆ ಇತರ ಬೇಡಿಕೆಗಳಿಗೆ ಒತ್ತಾಯಿಸಿ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘಟನೆಯವರು ಬುಧವಾರ ಗಾಂಧಿವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಗೋಪಾಲಸ್ವಾಮಿ ದೇವಸ್ಥಾನದಲ್ಲಿ ಗಾಂಧಿವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ನೇತೃತ್ವ ವಹಿಸಿದ್ದ ಎಐಟಿಯುಸಿ ಜಿಲ್ಲಾ ಘಟಕದ ಅಧ್ಯಕ್ಷ ದೇವಿಂದ್ರಪ್ಪ ಪತ್ತಾರ ಮಾತನಾಡಿ, ‘ಕಾರ್ಮಿಕ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು’ ಎಂದು ಆಗ್ರಹಿಸಿದರು.

‘ಕಾರ್ಮಿಕರ ಗುರುತಿನ ಚೀಟಿ ನವೀಕರಣಕ್ಕೆ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಕಾರ್ಮಿಕರು ಹೊಸ ದಾಖಲೆಗಳನ್ನು ತರುವುದು ಅಸಾಧ್ಯವಾದದ್ದು. ಇದರಿಂದ ಗುರುತಿನ ಚೀಟಿ ನವೀಕರಣ ಮಾಡದೆ ಗೊಂದಲಕ್ಕೆ ಒಳಗಾಗಿದ್ದಾರೆ’ ಎಂದು ದೂರಿದರು.

‘ಕಾರ್ಮಿಕರ ಮಕ್ಕಳಿಗೆ ನೀಡುತ್ತಿದ್ದ ಶೈಕ್ಷಣಿಕ ಸಹಾಯಧನ ಶೇ. 25 ಕ್ಕೆ ಇಳಿಸಿರುವುದು ಖಂಡನೀಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಟ್ಟಡ ಕಾರ್ಮಿಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ದೇವಿಂದ್ರಪ್ಪ ಗುಡಾಳಕೇರಿ ಮಾತನಾಡಿ, ‘ಹಿಂದಿನ ಬಿಜೆಪಿ ಸರ್ಕಾರ ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಅನುಕೂಲಕ್ಕಾಗಿ ಲ್ಯಾಪ್‌ಟ್ಯಾಪ್, ಟ್ಯಾಬ್, ಶಾಲಾ ಕಿಟ್ ವಿತರಣೆ ಮಾಡಿತ್ತು. ಕಾಂಗ್ರೆಸ್ ಸರ್ಕಾರ ಯಾವುದೇ ಕಿಟ್ ನೀಡುತ್ತಿಲ್ಲ’ ಎಂದು ಆರೋಪಿಸಿದರು.

ಹಲವು ಬೇಡಿಕೆಗಳ ಮನವಿ ಪತ್ರವನ್ನು ಶಾಸಕ ರಾಜಾ ವೇಣುಗೋಪಾಲನಾಯಕ, ತಹಶೀಲ್ದಾರ್ ಕೆ. ವಿಜಯಕುಮಾರ, ಕಾರ್ಮಿಕ ನಿರೀಕ್ಷಕ ಗಂಗಾಧರ ಅವರಿಗೆ ಸಲ್ಲಿಸಿದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಭೀಮರಾಯ ಕದರಾಪುರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಿಮ್ಮಯ್ಯ ತಳವಾರ, ಪ್ರಮುಖರಾದ ಚಾಂದಪಾಶ ಗೋಗಿ, ನಿಂಗಪ್ಪ ಗುಡಿಮನಿ, ರಾಮು ರಾಠೋಡ್, ಮರೆಪ್ಪ ದೇಸಾಯಿ, ಮಹಿನೋದ್ದೀನ್, ಹರಿಸಿಂಗ ಪವ್ಹಾರ್, ಮಹಿಬೂಬಸಾಬ ಖಾನಾಪುರ, ಅಯ್ಯಪ್ಪ ವಗ್ಗಾಲಿ, ಮಹಮ್ಮದ್ ಖದೀರ್, ಖದೀರ್ ಗುತ್ತೇದಾರ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT