ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ | ಸಂಕಷ್ಟದಲ್ಲಿ ದಾಲ್‌, ರೈಸ್‌ ಮಿಲ್ ಮಾಲೀಕರು

ಗಿರಣಿಗೆ ಬರುತ್ತಿಲ್ಲ ಕಾರ್ಮಿಕರು, ನಷ್ಟದಲ್ಲೇ ನಡೆಯುತ್ತಿರುವ ಮಿಲ್‌ಗಳು
Last Updated 5 ಏಪ್ರಿಲ್ 2020, 7:20 IST
ಅಕ್ಷರ ಗಾತ್ರ

ಯಾದಗಿರಿ:ಅಗತ್ಯ ವಸ್ತುಗಳ ಪೂರೈಕೆ ಪಟ್ಟಿಯಲ್ಲಿರುವ ರೈಸ್‌, ದಾಲ್‌ ಮಿಲ್‌ಗಳು ಕಾರ್ಮಿಕರ ಕೊರತೆ ಎದುರಿಸುತ್ತಿವೆ. ಲಾಕ್‌ಡೌನ್‌ ಪರಿಣಾಮ ಕಾರ್ಮಿಕರು ಮಿಲ್‌ಗಳ ಕಡೆ ಮುಖಮಾಡುತ್ತಿಲ್ಲ. ಅಲ್ಲದೆ ಸಾಗಣೆ ಮಾಡಲು ಲಾರಿಗಳು ಇಲ್ಲದೆ ಮಿಲ್‌ಗಳ ಮಾಲಿಕರು ಸಂಕಷ್ಟದಲ್ಲಿ ಸಿಲುಕಿದ್ದಾರೆ.

ಅಕ್ಕಿ, ಬೆಳೆಯನ್ನು ಸರ್ಕಾರ ಅಗತ್ಯ ಸೇವೆ ಎಂದು ಪರಿಗಣಿಸಿದೆ. ಆದರೆ, ಮಿಲ್‌ಗಳಲ್ಲಿ ಮಾತ್ರ ಕಾರ್ಮಿಕರು ಕೆಲಸ ಮಾಡಲು ಬರುತ್ತಿಲ್ಲ ಎನ್ನುವ ಅಳಲು ಮಿಲ್‌ಗಳ ಮಾಲೀಕರದ್ದಾಗಿದೆ.

ಲಾರಿ, ಕಾರ್ಮಿಕರು ಇಲ್ಲ: ಸರ್ಕಾರವೇನೂ ಆದೇಶ ಮಾಡಿದೆ. ಆದರೆ, ಲಾರಿ ಮತ್ತು ಕಾರ್ಮಿಕರು ಸಿಗುತ್ತಿಲ್ಲ. 10ರಿಂದ 15 ಕಾರ್ಮಿಕರು ರೈಸ್‌ ಮಿಲ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಈಗ ಲಾಕ್‌ಡೌನ್‌ನಿಂದಾಗಿ ಕಾರ್ಮಿಕರು ಕೆಲಸಕ್ಕೆ ಬರುತ್ತಿಲ್ಲ. ಜತೆಗೆ ಹಳ್ಳಿಗಳಿಂದ ಬರಲು ಯಾವುದೇ ವಾಹನ ಸೌಕರ್ಯ ಇಲ್ಲದಿದ್ದರಿಂದ ಸಮಸ್ಯೆ ಅನುಭವಿಸುವಂತಾಗಿದೆ. ನಗರ ಪ್ರದೇಶ ಪ್ರದೇಶಕ್ಕಿಂತ ಹಳ್ಳಿಗಳಲ್ಲಿ ಹೆಚ್ಚು ಕಾರ್ಮಿಕರು ಮಿಲ್‌ಗಳಿಗೆ ಬರುತ್ತಾರೆ. ಆದರೆ, ಈಗ ಸಾರಿಗೆ ವ್ಯವಸ್ಥೆ ಇಲ್ಲದಿದ್ದರಿಂದ ಮತ್ತಷ್ಟು ಸಮಸ್ಯೆಯಾಗಿದೆ.

ಬೇರೆ ಪ್ರದೇಶದಿಂದ ಜಿಲ್ಲೆಗೆ ಲಾರಿಗಳು ಬರಲು ತುಂಬಾ ಸಮಸ್ಯೆ ಎದುರಿಸಬೇಕಾಗಿದೆ. ಲಾರಿ ಮಾಲೀಕರು ಎರಡು ಕಡೆಯ ಬಾಡಿಗೆ ಕೇಳುತ್ತಿದ್ದಾರೆ. ಖಾಲಿ ವಾಹನಗಳು ಬಂದರೆ ಪೊಲೀಸರು ರಸ್ತೆ ಪಕ್ಕ ನಿಲ್ಲಿಸುವಂತೆ ಹೇಳುತ್ತಿದ್ದಾರೆ. ಇದರಿಂದ ಸರಕು ತುಂಬಿದ ವಾಹನಗಳ ಓಡಾಟಕ್ಕೆ ಸಮಸ್ಯೆ ಇಲ್ಲ. ಆದರೆ, ಖಾಲಿ ವಾಹನಗಳಿಗೆ ಬಾಡಿಗೆ ನೀಡುವುದು ದೊಡ್ಡ ತಲೆನೋವಾಗಿದೆ ಎನ್ನುತ್ತಾರೆ ಮಾಲೀಕರು.

ಪ್ಯಾಕಿಂಗ್‌ ಚೀಲಗಳಿಲ್ಲ: ಜಿಲ್ಲೆಗೆ ಹೆಚ್ಚು ಹೈದರಾಬಾದ್ ಮೂಲಕ ಪ್ಯಾಂಕಿಂಗ್‌ ಚೀಲಗಳು ಬರುತ್ತಿದ್ದವು. ಲಾಕ್‌ಡೌನ್‌ ಪರಿಣಾಮ ಚೀಲಗಳು ಖಾಲಿಯಾಗಿದ್ದು, ಸಮಸ್ಯೆ ಉಂಟು ಮಾಡಿದೆ. ಹೊಸ ಚೀಲಗಳು ಇಲ್ಲದೆ ರೈಸ್‌ ಮಾರಾಟ ಮಾಡುವುದು ಹೇಗೆ ಎಂದು ಮಾಲೀಕರು ಚಿಂತಿತರಾಗಿದ್ದಾರೆ.

ಮಷಿನರಿ ಬಿಡಿಭಾಗಗಳು ಸಿಗುತ್ತಿಲ್ಲ. ಒಂದು ವೇಳೆ ಮಿಲ್‌ನಲ್ಲಿ ಸಮಸ್ಯೆ ಕಾಡಿಕೊಂಡರೆ ಬಿಡಿಭಾಗಗಳಿಗೆ ಎಲ್ಲಿಗೆ ಹೋಗಬೇಕು ಎನ್ನುವುದು ಪ್ರಶ್ನೆಯಾಗಿದೆ.‌

ಪೌಲ್ಟ್ರಿ ಫಾರಂ ಬಂದ್‌: ಜಿಲ್ಲೆಯಲ್ಲಿ ಪೌಲ್ಟ್ರಿ ಫಾರಂ ಬಂದ್‌ ಆಗಿದ್ದರಿಂದ ಅಕ್ಕಿ ಹೊಟ್ಟು ಖರೀದಿಸುವವರಿಲ್ಲದಂತಾಗಿದೆ. ಸರ್ಕಾರ ಅವುಗಳನ್ನು ಬಂದ್‌ ಮಾಡಿದ್ದರಿಂದ ದರ ಕಡಿಮೆಯಾಗಿದೆ. ಅಲ್ಲದೆ ಕೇಳುವವರೆ ಇಲ್ಲದಂತಾಗಿದೆ. ಅಕ್ಕಿ ಹೊಟ್ಟು ₹2500ರಿಂದ 2600ಕ್ಕೆ ಮಾರಾಟವಾಗುತ್ತಿತ್ತು. ಈಗ ₹1500ರಿಂದ 1600 ಮಾತ್ರ ಕೇಳುತ್ತಿದ್ದಾರೆ.

8–10 ದಿನದಲ್ಲಿ ಭತ್ತ ಕೊಯ್ಲು: ಇನ್ನೂ 8–10 ದಿನದಲ್ಲಿ ಜಿಲ್ಲೆಯಲ್ಲಿ ಭತ್ತ ಕೊಯ್ಲು ಆರಂಭವಾಗುತ್ತದೆ. ಆದರೆ, ಹೀಗಿರುವಾಗ ರೈಸ್‌ ಇನ್ನೂ ಮಾರಾಟವಾಗಿಲ್ಲ. ಹೊಸ ಭತ್ತವನ್ನು ಇಡಲು ಜಾಗವೂ ಇಲ್ಲದಂತಾಗಿದೆ. ಹೀಗಾಗಿ ಭತ್ತವನ್ನು ಸರ್ಕಾರವೇ ಖರೀದಿ ಕೇಂದ್ರ ಸ್ಥಾಪನೆ ಮಾಡುವ ಮುಖಾಂತರ ಖರೀದಿಸಿ ನಂತರ ಮಿಲ್‌ ಮಾಲೀಕರಿಗೆ ನೀಡಿದರೆ ಅನುಕೂಲವಾಗುತ್ತದೆ ಎನ್ನುತ್ತಾರೆ ರೈಲ್‌ ಮಿಲ್‌ ಮಾಲಿಕರಾದ ಅಬ್ದುಲ್‌ ಹಮೀದ್‌, ವಿಜಯಕುಮಾರ ಡಿಗ್ಗಿ.

ಮುಚ್ಚಿದ ದಾಲ್‌ ಮಿಲ್‌:ಸರ್ಕಾರ ಕೆಲ ನಿರ್ಧಾರಗಳಿಂದ ತೊಗರಿ ಮಿಲ್‌ಗಳು ಬಂದ್‌ ಆಗಿವೆ. ಜಿಲ್ಲೆಯಲ್ಲಿ ಸದ್ಯ 7 ಮಿಲ್‌ ಇದ್ದು, ಇದರಲ್ಲಿ 3 ಮಾತ್ರ ಚಾಲನೆಯಲ್ಲಿವೆ. ಇದ್ದ ಮಿಲ್‌ಗಳಿಗೂ ತೊಗರಿಯೇ ಇಲ್ಲದಂತಾಗಿದೆ.

‘ತೊಗರಿ ಆವಕ ದಾಲ್‌ಮಿಲ್‌ ಮಾರುಕಟ್ಟೆಯಲ್ಲಿ ಇಳಿಮುಖವಾಗಿದೆ. ಸರ್ಕಾರ ಸಂಕಷ್ಟದಲ್ಲಿರುವ ದಾಲ್‌ಮಿಲ್‌ಗಳಿಗೆ ತೊಗರಿ ಕೊಟ್ಟರೆ ಬೇಳೆಕಾಳು ಮಾಡಿ ಸರ್ಕಾರಕ್ಕೆ ಕೊಡಬಹುದು. ಈ ಮೂಲಕ ಸರ್ಕಾರವೂಬೇಳೆಯನ್ನು ಸಾರ್ವಜನಿಕ ವಿತರಣೆ ವ್ಯವಸ್ಥೆ (ಪಿಡಿಎಸ್‌) ಮುಖಾಂತರ ಹಂಚಕೆ ಮಾಡಬಹುದು ಎನ್ನುತ್ತಾರೆ’ ದಾಲ್‌ ಮಿಲ್‌ ಮಾಲಿಕ ವಿಷ್ಣುಕುಮಾರ ವ್ಯಾಸ್‌.

‘ಸರ್ಕಾರದಿಂದಲೇ ಎರಡು ತಿಂಗಳಿಗೆ ಆಗುವಷ್ಟು ಒಮ್ಮೆಲೆ ಅಕ್ಕಿ, ಗೋಧಿ, ಬೇಳೆ ವಿತರಣೆಗೆ ಕ್ರಮ ಕೈಗೊಂಡಿದ್ದು, ಇದರಿಂದ ಅಂಗಡಿ ಮಾಲಿಕರು ಕಷ್ಟ ಅನುಭವಿಸಬೇಕಾಗುತ್ತದೆ. ಕ್ವಿಂಟಲ್‌ ಬೆಳೆ ಮಾರುವವರು 10 ಕೇಜಿ ಮಾರಾಟ ಮಾಡಬಹುದು’ ಎನ್ನುತ್ತಾರೆ ಅವರು.

ರಾಜ್ಯ ಸರ್ಕಾರ ತೆಲಂಗಾಣಮಾದರಿಯಲ್ಲಿ ಭತ್ತ ಖರೀದಿ ಮಾಡಿ ಅಕ್ಕಿ ಗಿರಣಿದಾರರಿಗೆ ಪೂರೈಸಿದರೆ ಅಕ್ಕಿ ಮಾಡಿಕೊಡುತ್ತಾರೆ. ಸಂಕಷ್ಟದಲ್ಲಿರುವವರಿಗೆ ಸರ್ಕಾರ ಅನುಕೂಲ ಮಾಡಿಕೊಡಬೇಕು ಎಂದುಜಿಲ್ಲಾ ವಾಣಿಜ್ಯೋದ್ಯಮಿಗಳ ಸಂಘದ ಅಧ್ಯಕ್ಷಹನುಮಾನದಾಸ ಮುಂದಾಡ ಒತ್ತಾಯಿಸುತ್ತಾರೆ.

ಈಗಾಗಲೇ ಸರ್ಕಾರದ ಅವೈಜ್ಞಾನಿಕ ನೀತಿಯಿಂದಾಗಿ ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿನ ಸುಮಾರು 200 ದಾಲ್‌ ಮಿಲ್‌ಗಳು ಕಳೆದ ಎರಡು ವರ್ಷಗಳಿಂದ ಬಂದ್‌ ಆಗಿವೆ. ಈ ರೀತಿ ಆಗದಂತೆ ಕ್ರಮಕೈಗೊಳ್ಳಬೇಕು ಎಂದು ದಾಲ್‌ ಮಿಲ್‌ ಮಾಲೀಕವಿಷ್ಣುಕುಮಾರ ವ್ಯಾಸ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT