ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ಸಂಭ್ರಮದಲ್ಲಿ ಮಿಂದ ಜನರು

ಆತ್ಮಲಿಂಗೇಶ್ವರ ದೇಗುಲ, ಶಿರಡಿ ಸಾಯಿಬಾಬಾ ಮಂದಿರಗಳಲ್ಲಿ ವಿಶೇಷ ಪೂಜೆ ದಸರಾ ಸಂಭ್ರಮದಲ್ಲಿ ಮಿಂದ ಜನರು
Last Updated 19 ಅಕ್ಟೋಬರ್ 2018, 13:50 IST
ಅಕ್ಷರ ಗಾತ್ರ

ಯಾದಗಿರಿ: ನಗರದಲ್ಲಿ ಗುರುವಾರ ಮತ್ತು ಶುಕ್ರವಾರ ವಿವಿಧ ದೇಗುಲಗಳಲ್ಲಿ ದುರ್ಗಾದೇವಿ, ತುಳಜಾ ಭವಾನಿ, ಮಹಾಲಕ್ಷ್ಮಿ, ಚಾಮುಂಡೇಶ್ವರಿ ದೇವಿಗೆ ಭಕ್ತರು ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ದಸರಾ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಇಲ್ಲಿನ ಸ್ಟೇಷನ್‌ ಬಜಾರ್ ಹಾಗೂ ಗಾಂಧಿ ಬಜಾರ್ ನಗರಗಳಲ್ಲಿ ನವರಾತ್ರಿ ಅಂಗವಾಗಿ ಭವಾನಿ ದೇವಿಮೂರ್ತಿ ಪ್ರತಿಷ್ಠಾಪಿಸಿ ಒಂಬತ್ತು ದಿನಗಳ ಕಾಲ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಗುರುವಾರ ನಾಗರಿಕರು ಮನೆ, ಅಂಗಡಿ–ಮುಂಗಟ್ಟುಗಳಲ್ಲಿ, ಕೆಲಸ ಮಾಡುವ ಕಚೇರಿಗಳಲ್ಲಿ ಆಯುಧ ಪೂಜೆ ಹಮ್ಮಿಕೊಂಡು ಜನರಿಗೆ ಸಿಹಿ ಹಂಚಿ ಸಂಭ್ರಮಿಸಿದರು.

ಆಯುಧ ಪೂಜೆ ಅಂಗವಾಗಿ ನಗರದ ಸುಭಾಷ್‌ ಹಾಗೂ ಮಹಾತ್ಮ ಗಾಂಧಿ ವೃತ್ತಗಳಲ್ಲಿ ಜನಸಂದಣಿ ದಟ್ಟವಾಗಿತ್ತು. ಹೂ, ಹಣ್ಣುಕಾಯಿಗಳ ವ್ಯಾಪಾರ ಜೋರಾಗಿ ನಡೆಯಿತು. ಬಟ್ಟೆ ಅಂಗಡಿಗಳಲ್ಲಿ ಜನರೇ ತುಂಬಿದ್ದರು. ಮಹಿಳೆಯರ ಸಂಭ್ರಮ ಮೇರೆಮೀರಿತ್ತು. ನಗರದ ಬಳೆ ಮತ್ತು ಬಟ್ಟೆ, ಆಭರಣಗಳ ಅಂಗಡಿಗಳಲ್ಲಿ ಮಹಿಳೆಯರ ದಂಡು ಜಮಾಯಿಸಿದ್ದವು.
ಹೊಸ ಉಡುಗೆತೊಟ್ಟ ಮಕ್ಕಳು ಸಂಭ್ರಮಿಸಿದರು.

ಚಕ್ರಕಟ್ಟದಲ್ಲಿ ಭವಾನಿ ದೇವಿಯನ್ನು ಪ್ರತಿಷ್ಠಾಪಿಸಿರುವ ಜೈ ಭವಾನಿ ಹಿಂದೂ ಸೇವಾ ಸಮಿತಿ ನಿತ್ಯ ವಿಶೇಷ ಪೂಜಾ ಕೈಂಕರ್ಯ ನಡೆಸುತ್ತಾ ಬಂದಿದೆ. ಜತೆಗೆ ಭಕ್ತರಿಗೆ ನಿತ್ಯ ಅನ್ನಸಂತರ್ಪಣೆ ಕೂಡ ಹಮ್ಮಿಕೊಂಡಿತ್ತು.

ಶನಿವಾರ ಕೊನೆಯ ದಿನ ಸಂಜೆ 60ಕ್ಕೂಹೆಚ್ಚು ಭಕ್ತರು ತುಳಜಾರಕ್ಕೆ ತೆರಳುತ್ತಾರೆ. ಸಮಿತಿ ವತಿಯಿಂದ ಪಾದಯಾತ್ರೆಗೆ ತೆರಳು ಭಕ್ತರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತದೆ. ಇದು ಪ್ರತಿ ವರ್ಷವೂ ನಡೆಸಲಾಗುತ್ತದೆ ಎಂದು ನಗರಸಭೆ ಮಾಜಿ ಅಧ್ಯಕ್ಷೆ ನಾಗರತ್ನಾ ಮೂರ್ತಿ ಅನಪುರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ನಗರದ ಆತ್ಮ ಲಿಂಗೇಶ್ವರ ದೇವಸ್ಥಾನ: ದಸರಾ ಅಂಗವಾಗಿ ದೇವಿ ಮೂರ್ತಿ ಪ್ರತಿಸ್ಠಾಪನೆ ಮಾಡಲಾಯಿತು. ಒಂಭತ್ತು ದಿನಗಳು ಕಾಲ ದೇವಿ ಪುರಾಣ, ಸಾಯಂಕಾಲ ದಾಂಡಿಯ ಹಾಗೂ ಭಕ್ತರಿಗೆ ನಿರಂತರ ಪ್ರಸಾದ ವ್ಯವಸ್ಥೆ ಮಾಡಲಾಯಿತು.

ಶಿರಡಿ ಸಾಯಿಬಾಬ ಮಂದಿರ: ನಗರದ ಹೃದಯ ಭಾಗದಲ್ಲಿರುವ ಶಿರಡಿ ಸಾಯಿಬಾಬ ಮಂದಿರದಲ್ಲಿ ಸಾಯಿಬಾಬಾ ಅವರ ಶತಮಾನೋತ್ಸವ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಸಮಾದಿ ಪೂಜೆ, ಬಂದ ಭಕ್ತರಿಗೆ ದಾಸೋಹ ಏರ್ಪಡಿಸಲಾಗಿತ್ತು.

ಶುಕ್ರವಾರ ಸಂಜೆ ಭಕ್ತರು ಬನ್ನಿಯನ್ನು ಪರಸ್ಪರ ಹಂಚುವ ಮೂಲಕ ಪ್ರೀತಿಯ ಆಲಿಂಗನದ ಮೂಲಕ ಹಬ್ಬದ ಶುಭಾಷಯ ಕೋರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT