ಗುರುವಾರ , ಮಾರ್ಚ್ 30, 2023
32 °C
ಬೆಳಕಿನ ಹಬ್ಬ ದೀಪಾವಳಿಗೆ ಸಿದ್ಧತೆ, ವಿವಿಧ ಶೈಲಿಯ ಹಣತೆಗಳು

ದೀಪಾವಳಿ; ಹಣತೆ, ಪಟಾಕಿ ಭರ್ಜರಿ ಮಾರಾಟ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಬೆಳಕಿನ ಹಬ್ಬ ದೀಪಾವಳಿ ಮತ್ತೆ ಬಂದಿದ್ದು, ಹಣತೆ, ಪಟಾಕಿ ಭರ್ಜರಿ ಮಾರಾಟವಾಗುತ್ತಿದೆ. ನಗರ ಸೇರಿದಂತೆ ಜಿಲ್ಲೆಯ ವಿವಿಧ ಕಡೆ ಹಣತೆಗಳ ಮಾರಾಟಕ್ಕೆ ಇಡಲಾಗಿದೆ.

ನವೆಂಬರ್ 3ರಂದು ನರಕ ಚತುರ್ದಶಿ, 4ರಂದು ದೀಪಾವಳಿ ಅಮಾವಾಸ್ಯೆ, 5ರಂದು ದೀಪಾವಳಿ ಪಾಡ್ಯ ಇದೆ. ಹೀಗಾಗಿ ಮೂರು ದಿನ ಸೇರಿದಂತೆ ಈ ವಾರವೆಲ್ಲ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದೆ.

ವಿವಿಧ ಕಡೆ ಹಣತೆ ಮಾರಾಟ: ನಗರದ ವಿವಿಧ ಕಡೆ ಹಣತೆಗಳನ್ನು ಮಾರಾಟಕ್ಕೆ ಇಡಲಾಗಿದೆ. ಮೆಥೋಡಿಸ್ಟ್‌ ಚರ್ಚ್‌ ಮುಂಭಾಗ, ಲೋಕೋಪಯೋಗಿ ಇಲಾಖೆ ಕಚೇರಿ ಸಮೀಪ, ವಿದ್ಯಾಮಂಗಲ ಕಾರ್ಯಾಲಯ ಮುಂಭಾಗ, ಗಾಂಧಿ ವೃತ್ತ ಸೇರಿದಂತೆ ವಿವಿಧ ಕಡೆ ಹಣತೆಗಳ ಮಾರಾಟ ನಡೆಯುತ್ತಿದೆ.

₹60ಗೆ ಡಜನ್‌ ಹಣತೆಗಳು: ನಗರದ ವಿವಿಧ ಕಡೆ ಹಣತೆಗಳ ದರದಲ್ಲಿ ವ್ಯಾತ್ಯಾಸವಿದೆ. ಚರ್ಚ್‌ ಮುಂಭಾಗದ ರಸ್ತೆ ಬಳಿ ₹60ಗೆ 12 ಹಣತೆಗಳು ಮಾರಾಟ ಮಾಡಲಾಗಿದೆ. ಸಣ್ಣ ಗಾತ್ರದ ಹಣತೆ, ದೊಡ್ಡ ಗಾತ್ರದ ಹಣತೆಗಳು ಇವೆ. ದೊಡ್ಡ ಗಾತ್ರದು ₹20ಕ್ಕೆ ಒಂದು ಮಾರಾಟಕ್ಕೆ ಇಡಲಾಗಿದೆ.

‘ಕಳೆದ ಬಾರಿ ಕೋವಿಡ್‌ ಕಾರಣದಿಂದ ದೀಪಾವಳಿ ಹಬ್ಬಕ್ಕೆ ಹಣತೆಗಳು ಹೆಚ್ಚು ಮಾರಾಟವಾಗಿರಲಿಲ್ಲ. ಈಗ ಎರಡು ದಿನಗಳಿಂದ ಬೇಡಿಕೆ ಹೆಚ್ಚಾಗಿದೆ. ಬುಧವಾರ, ಗುರುವಾರ ಮತ್ತಷ್ಟು ಹಣತೆಗಳು ಮಾರಾಟವಾಗುತ್ತವೆ. ಕಳೆದ ಬಾರಿಗಿಂತ ಈ ಬಾರಿ ಮಾರಾಟದಲ್ಲಿ ಚೇತರಿಕೆ ಕಂಡಿದೆ’ ಎನ್ನುತ್ತಾರೆ ಹಣತೆ ವ್ಯಾಪಾರಿ ವಿಜಯಲಕ್ಷ್ಮೀ ಕುಂಬಾರ.

ಸ್ಥಳೀಯ ಮಣ್ಣಿನ ಹಣತೆಗಳ ಜೊತೆಗೆ ಮಹಾರಾಷ್ಟ್ರದ ಸೊಲ್ಲಾಪುರದಿಂದಲೂ ಹಣತೆಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಗ್ರಾಹಕರು ತಮಗೆ ಇಷ್ಟವಾದ ಹಣತೆಗಳನ್ನು ಖರೀದಿ ಮಾಡುತ್ತಿದ್ದಾರೆ.

13 ಪಟಾಕಿ ಮಳಿಗೆಗಳು: ನಗರದ ಎಪಿಎಂಸಿ ಸಮೀಪದ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರಿಗೆ ಸೇರಿದ ಖಾಲಿ ಜಾಗದಲ್ಲಿ ಪಟಾಕಿ ಮಾರಾಟ ಮಳಿಗೆಗಳನ್ನು ಹಾಕಲಾಗಿದೆ. 13 ಜನ ಪಟಾಕಿ ಮಾರಾಟಗಾರರು ಪರವಾನಗಿ ಪಡೆದುಕೊಂಡಿದ್ದು, ಸದ್ಯ 12 ಮಳಿಗೆಗಳಲ್ಲಿ ಪಟಾಕಿ ಮಾರಾಟ ನಡೆಯುತ್ತಿದೆ.

ಹಸಿರು ಪಟಾಕಿ ಮಾರಾಟ: ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಹಸಿರು ಪಟಾಕಿಗಳನ್ನು ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಹೆಚ್ಚು ಶಬ್ದವಿಲ್ಲದ, ಹೊಗೆ ಸೂಸದ ಪಟಾಕಿಗಳಿಗೆ ಹಸಿರು ಪಟಾಕಿ ಎನ್ನಲಾಗುತ್ತಿದೆ. ಅಲ್ಲದೇ ಹಲವು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪಟಾಕಿ ಅಂಗಡಿಯಲ್ಲಿ ಅವಘಡ ಸಂಭವಿಸದಂತೆ ಅಗ್ನಿನಿರೋಧಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಸುರಸುರ ಬತ್ತಿ ₹10ರಿಂದ 60, ಹೂವಿನ ಬತ್ತಿ ₹30ರಿಂದ 80, ಗಿಮ್ಮಿ ಚಕ್ಕರ್ ₹60ರಿಂದ 120, ಮಿರ್ಚಿ ಪಟಾಕಿ ₹30ಗೆ ಒಂದು ಪಾಕೀಟು, ಆಕಾಶ ಬಾಣ ₹150 ಇದೆ.

‘ಸೋಮವಾರದಿಂದ ಮಳಿಗೆ ಹಾಕಿಕೊಂಡಿದ್ದೇವೆ. ಅಧಿಕಾರಿಗಳು ಬಂದು ಸುರಕ್ಷತಾ ಕ್ರಮಗಳನ್ನು ಪರಿಶೀಲನೆ ಮಾಡಿದ್ದಾರೆ. ಹಬ್ಬದ ದಿನ ಹೆಚ್ಚು ಪಟಾಕಿ ಮಾರಾಟವಾಗುತ್ತವೆ. ಎಲ್ಲರೂ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡುತ್ತಿದ್ದೇವೆ’ ಎನ್ನುತ್ತಾರೆ ಪಟಾಕಿ ವ್ಯಾಪಾರಿ ವಿಶ್ವನಾಥ ನೀಲಂಗೆ.

***

ದೀಪಾವಳಿ ಹಬ್ಬಕ್ಕಾಗಿ ಹಣತೆಗಳನ್ನು ಸಿದ್ಧ ಮಾಡಿಟ್ಟುಕೊಳ್ಳಲಾಗಿದ್ದು, ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಮಾರಾಟವಾಗುತ್ತಿದೆ

- ವಿಜಯಲಕ್ಷ್ಮಿ ಕುಂಬಾರ, ಹಣತೆ ವ್ಯಾಪಾರಿ

***

ಈ ಬಾರಿ ಎಲ್ಲ ಕಡೆ ಹಸಿರು ಪಟಾಕಿ ಮಾರಾಟ ಮಾಡಲಾಗುತ್ತಿದೆ. ₹10 ನಿಂದ 500 ರ ತನಕ ಪಟಾಕಿಗಳು ಲಭ್ಯವಿದ್ದು, ಮಾರಾಟವಾಗುತ್ತಿದೆ

- ವಿಶ್ವನಾಥ ನೀಲಂಗೆ, ಪಟಾಕಿ ವ್ಯಾಪಾರಿ

***

ಸರ್ಕಾರದ ನಿರ್ದೇಶನದಂತೆ ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅನುಮತಿ ನೀಡಲಾಗಿದೆ. ಹೆಚ್ಚು ಸದ್ದು ಮಾಡುವ ಪಟಾಕಿಗಳ ನಿಯಂತ್ರಣಕ್ಕೆ ಅಧಿಕಾರಿಗಳನ್ನು ನೇಮಿಸಲಾಗಿದೆ

- ಸಣ್ಣ ವೆಂಕಟೇಶ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು