ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಗಳನ್ನು ಅರಣ್ಯೀಕರಣಗೊಳಿಸಿ, ಅಭಿವೃದ್ಧಿಪಡಿಸಿ: ಡಾ.ರಾಗಪ್ರಿಯಾ

ಕರ್ನಾಟಕ ಕೆರೆ ಸಂರಕ್ಷಣಾ ಮತ್ತು ಅಭಿವೃದ್ಧಿ ಪ್ರಾಧಿಕಾರದ ಜಿಲ್ಲಾ ಮಟ್ಟದ ಸಭೆಯಲ್ಲಿ ಜಿಲ್ಲಾಧಿಕಾರಿ ಸೂಚನೆ
Last Updated 1 ಏಪ್ರಿಲ್ 2022, 15:29 IST
ಅಕ್ಷರ ಗಾತ್ರ

ಯಾದಗಿರಿ: ‘ಜಿಲ್ಲೆಯಲ್ಲಿನ ಸಣ್ಣ ನೀರಾವರಿ ಇಲಾಖೆಯ 71 ಹಾಗೂ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿನ 268 ಸೇರಿ ಒಟ್ಟು 339 ಕೆರೆಗಳನ್ನು ಅರಣ್ಯೀಕರಣಗೊಳಿಸಿ ಅಭಿವೃದ್ಧಿಪಡಿಸಬೇಕು’ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕರ್ನಾಟಕ ಕೆರೆ ಸಂರಕ್ಷಣಾ ಮತ್ತು ಅಭಿವೃದ್ಧಿ ಪ್ರಾಧಿಕಾರದ ಜಿಲ್ಲಾ ಮಟ್ಟದ ಸಭೆಯಲ್ಲಿ ಅವರು ಮಾತನಾಡಿದರು.

ಸಣ್ಣ ನೀರಾವರಿ ಇಲಾಖೆಯ ಕೆರೆಗಳ ಅಭಿವೃದ್ಧಿಗೆ ಬರುವ ಅನುದಾನದಲ್ಲಿ ಸಣ್ಣ ನೀರಾವರಿ ಕೆರೆಗಳಿಗೆ ಬೇಲಿ (ಫೆನ್ಸಿಂಗ್) ನಿರ್ಮಾಣ ಮಾಡಬೇಕು ಎಂದರು.

ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಕಾನೂನು ಮತ್ತು ಅಧಿನಿಯಮಗಳನ್ವಯ ಸದಸ್ಯರು ತಮ್ಮ ಜವಾಬ್ದಾರಿ ನಿರ್ವಹಿಸಿ, ಎಲ್ಲಾ ಕೆರೆಗಳ ಸರ್ವೆ ಮಾಡಿಸಿ ಹದ್ದುಬಸ್ತು ಮಾಡಲು ಜಿಲ್ಲಾಧಿಕಾರಿ ಸೂಚಿಸಿದರು.

ಸಣ್ಣ ನೀರಾವರಿಯ 71 ಕೆರೆಗಳಿಗೆ ಬೇಲಿ (ಫೆನ್ಸಿಂಗ್) ಅಳವಡಿಸಲು ಸುಮಾರು ₹1,323.89 ಲಕ್ಷ ಅಂದಾಜು ಮೊತ್ತದ ಅನುದಾನ ಬಿಡುಗಡೆ ಮಾಡಲು ಸರ್ಕಾರಕ್ಕೆ ಕೋರಲಾಗಿದೆ ಎಂದು ಸಂಬಂಧಿಸಿದ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಪಂಚಾಯತ್ ರಾಜ್ ವ್ಯಾಪ್ತಿಯಲ್ಲಿನ 268 ಕೆರೆಗಳ ಸರ್ವೆ ಹಾಗೂ ಹದ್ದುಬಸ್ತು ಕಾಮಗಾರಿಗಳನ್ನು ಕೈಗೆತ್ತಿಕೊಂಡು ಶೀಘ್ರದಲ್ಲಿ ಪೂರ್ಣಗೊಳಿಸಲು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಯಾವ ಕೆರೆಗಳಲ್ಲಾದರೂ ಅನಧಿಕೃತವಾಗಿ ಕಟ್ಟಡಗಳನ್ನು ನಿರ್ಮಿಸಲಾಗಿದೆಯೇ ಎಂದು ಪರಿಶೀಲಿಸಿ ವರದಿ ನೀಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

2018-19 ಹಾಗೂ 2019-20 ನೇ ಸಾಲಿನಲ್ಲಿ ಜಿಲ್ಲಾಡಳಿತ ಹಾಗೂ ಭಾರತ ಜೈನ್ ಸಂಘದ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯಲ್ಲಿ 25 ಕೆರೆಗಳಿಂದ ಸುಮಾರು 16,95,582 ಕ್ಯುಬಿಕ್‌ ಮೀಟರ್ ಹೂಳು ತೆಗೆಯಲಾಗಿದೆ. 2019-20 ರ ಸಾಲಿನಲ್ಲಿ ಕೆರೆ ಸಂಜೀವಿನಿ ಕಾರ್ಯಕ್ರಮದಲ್ಲಿ ಜಿಲ್ಲೆಯ 31 ಕೆರೆಗಳಿಂದ ಹೂಳು ತೆಗೆಯುವ ಸುಮಾರು ₹105 ಲಕ್ಷಗಳ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

2020-21 ನೇ ಸಾಲಿನಲ್ಲಿ ಜಿಲ್ಲೆಯ ಸುಮಾರು 169 ಕೆರೆಗಳ ಹಾಗೂ 2021-22 ನೇ ಸಾಲಿನಲ್ಲಿ ಸುಮಾರು 133 ಕೆರೆಗಳ ಹೂಳು ತೆಗೆಯಲಾಗಿದೆ. 2021-21 ನೇ ಸಾಲಿನಲ್ಲಿ ಸುಮಾರು 144 ಹಳ್ಳಗಳ ಹಾಗೂ 2021-22 ನೇ ಸಾಲಿನಲ್ಲಿ 742 ಹಳ್ಳಗಳ ಹೂಳೆತ್ತುವ ಕಾಮಗಾರಿಗಳನ್ನು ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೈಗೆತ್ತಿಕೊಂಡು ಪೂರ್ಣಗೊಳಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಮರೇಶ ಆರ್ ನಾಯ್ಕ, ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಉಪವಿಭಾಗಾಧಿಕಾರಿ ಶಾ ಆಲಂ ಹುಸೇನ್, ನಗರಸಭೆ ಆಯುಕ್ತ ಬಕ್ಕಪ್ಪ, ಯಾದಗಿರಿ ತಹಶೀಲ್ದಾರ ಚನ್ನಮಲ್ಲಪ್ಪ ಘಂಟಿ, ವಡಗೇರಾ ತಹಶೀಲ್ದಾರ್‌ ಸುರೇಶ ಅಂಕಲಗಿ ಹಾಗೂ ಗುರುಮಠಕಲ್ ತಹಶೀಲ್ದಾರ್‌ ಶರಣಬಸವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT