ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಡಗೇರಾ: ಹೆಸರಿಗಷ್ಟೇ ತಾಲ್ಲೂಕು, ಅಭಿವೃದ್ಧಿ ಮರೀಚಿಕೆ

ಮೂರು ವರ್ಷ ಕಳೆದರೂ ಆರಂಭವಾಗಿಲ್ಲ ಸರ್ಕಾರಿ ಕಚೇರಿ, ಅಧಿಕಾರಿಗಳ ನಿರ್ಲಕ್ಷ್ಯ, ಜನಪ್ರತಿನಿಧಿಗಳ ಮೌನ
Last Updated 5 ನವೆಂಬರ್ 2020, 15:22 IST
ಅಕ್ಷರ ಗಾತ್ರ

ವಡಗೇರಾ: ವಡಗೇರಾ ತಾಲ್ಲೂಕು ಘೋಷಣೆಯಾಗಿ ಮೂರು ವರ್ಷಗಳ ಕಳೆದರೂ ಒಂದೂ ಇಲಾಖೆ ಕಾರ್ಯ ಆರಂಭಿಸಿಲ್ಲ. ಇದರಿಂದ ಜನ ಬೇಸತ್ತಿದ್ದು, ಹೊಸ ತಾಲ್ಲೂಕು ಕೇವಲ ನಾಮಕಾವಸ್ಥೆ ಎನ್ನುವಂತಾಗಿದೆ.

ಈಗಲೂ ಪ್ರತಿಯೊಂದು ಕಾರ್ಯಕ್ಕೂ ಸಾರ್ವಜನಿಕರು ಹಳೆಯ ತಾಲ್ಲೂಕು ಕೇಂದ್ರಕ್ಕೆ ಹೋಗಬೇಕು. ಈ ತಾಲ್ಲೂಕು ಅಭಿವೃದ್ಧಿ ಆಗಬೇಕಾದರೆ ಮತ್ತು ಎಲ್ಲಾ ಇಲಾಖೆಗಳು ಕಾರ್ಯನಿರ್ಹಿಸಬೇಕಾದರೆ ಶಾಸಕರು ಆಸಕ್ತಿ ತೋರಿಸಬೇಕು ಎಂಬ ಜನರ ಕೂಗು ಇನ್ನೂ ಆಡಳಿತ ವರ್ಗಕ್ಕೆ ಕೇಳಿಸಿಲ್ಲ.

ಯಾದಗಿರಿ ಜಿಲ್ಲೆಯಲ್ಲಿ ಗುರುಮಠಕಲ್, ಹುಣಸಗಿ, ವಡಗೇರಾ ಒಟ್ಟಿಗೆ ಘೋಷಣೆ ಮಾಡಲಾಗಿದೆ. ಗುರುಮಠಕಲ್ ಮತ್ತು ಹುಣಸಗಿಯ ತಾಲ್ಲೂಕು ಕೇಂದ್ರದಲ್ಲಿ ಈಗಾಗಲೇ ಪಟ್ಟಣ ಪಂಚಾಯಿತಿ ಮತ್ತು ಎಲ್ಲಾ ಇಲಾಖೆಗಳು ಆರಂಭವಾಗಿವೆ. ಆದರೆ ವಡಗೇರಾದಲ್ಲಿ ಮಾತ್ರ ಇನ್ನೂ ಗ್ರಾಮ ಪಂಚಾಯಿತಿ ಆಡಳಿತ ಇದೆ. ಅದಕ್ಕೆ ಮತ್ತೆ ಗ್ರಾಮ ಪಂಚಾಯತಿ ಚುನಾವಣಾ ಮೀಸಲು ಅಧಿಸೂಚನೆ ಹೊರಡಿಸಿದ್ದಾರೆ. ಇದು ಪಟ್ಟಣ ಪಂಚಾಯಿತಿ ಮಾಡಲು ಎಲ್ಲ ಯೋಗ್ಯತೆ ಇದ್ದರೂ ಸಹ ಮೇಲ್ದರ್ಜೆಗೆ ಏರಿಸಲು ವಿನಾಕಾರಣ ತಡಮಾಡುತ್ತಿರುವುದು ಏಕೆ ಎನ್ನುವುದು ಪಟ್ಟಣ ನಿವಾಸಿಗಳ ಪ್ರಶ್ನೆ.

ಹೊಸ ತಾಲ್ಲೂಕು ಕೇಂದ್ರದಲ್ಲಿ ಯಾವುದೇ ಸೇವೆ ಸಿಗದಿರುವುದರಿಂದ ಹಳೆಯ ತಾಲ್ಲೂಕು ಕೇಂದ್ರ ಸುಮಾರು 50 ಕಿ.ಮೀ ದೂರದಲ್ಲಿರುವ ಶಹಾಪುರ ಕೇಂದ್ರಕ್ಕೆ ಅಲೆಯಬೇಕು. ಉಪನೋಂದಣಿ, ಕಂದಾಯ ಇಲಾಖೆಯ ಹಳೆ ದಾಖಲೆಗಳ, ಸಮಾಜ ಕಲ್ಯಾಣ, ಶಿಕ್ಷಣ ಇಲಾಖೆ ಸೇರಿದಂತೆ ಇತರೆ ಇಲಾಖೆಯ ಸೇವೆಗಾಗಿ ಇನ್ನೂ ಹಳೆಯ ಕೇಂದ್ರವನ್ನೆ ಅವಲಂಬಿಸಿದ್ದಾರೆ. ಇದರಿಂದ ಸಾರ್ವಜನಿಕರಿಗೆ ವೆಚ್ಚದ ಹೊರೆ ಬೀಳುತ್ತಿದೆ.

ಸ್ವಚ್ಛತೆ, ಶಿಸ್ತು ಮಾಯ: ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮಾಲಿನ್ಯವೇ ಸ್ವಾಗತಿಸುತ್ತೆ. ಪಟ್ಟಣದಲ್ಲಿ ನೂತನ ತಾಲ್ಲೂಕು ಕೇಂದ್ರದಲ್ಲೂ ಸ್ವಚ್ಛತೆ ಎನ್ನುವುದು ಮರೀಚಿಕೆ ಆಗಿದೆ. ಪ್ರತಿಯೊಂದು ವಾರ್ಡ್‌ನಲ್ಲಿ ಚರಂಡಿಗಳು ಹೂಳು ತುಂಬಿ ಗಬ್ಬು ನಾರಿದರೂ ಗ್ರಾಮ ಪಂಚಾಯಿತಿ ಆಡಳಿತ ಮಾತ್ರ ತಲೆ ಕೆಡಸಿಕೊಳ್ಳುತ್ತಿಲ್ಲ. ಪಂಚಾಯಿತಿ ಕಚೇರಿಯ ಪಕ್ಕದಲ್ಲಿಯೇ ಸ್ವಚ್ಛತೆ ಕಾಣುತ್ತಿಲ್ಲ. ಇನ್ನೂ ವಾರ್ಡ್‌ಗಳಲ್ಲಿ ಯಾವಾಗ ಸ್ವಚ್ಛತೆ ಮಾಡುತ್ತಾರೆ ಎಂಬುದು ಪಟ್ಟಣದ ನಿವಾಸಿಗಳು ದೂರು.

‘ನಮ್ಮ ತಾಲ್ಲೂಕನ್ನು ರಾಜ್ಯ ಸರ್ಕಾರ ಸಂಪೂರ್ಣ ಮರೆತುಬಿಟ್ಟಿದೆ. ಸ್ಥಳೀಯ ಶಾಸಕರೂ ಮರೆತಿದ್ದಾರೆ. ತಮ್ಮದೆ ಸರ್ಕಾರ ಆಡಳಿತದಲ್ಲಿ ಇದ್ದರೂ ತಾಲ್ಲೂಕು ಅಭಿವೃದ್ಧಿ ಅಗುತ್ತಿಲ್ಲ. ಶಾಸಕರು ವಿಶೇಷ ಕಾಳಜಿ ತೋರಿ ನಮ್ಮ ಭಾಗವನ್ನು ಅಭಿವೃದ್ಧಿ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಬೇಕಾಗುತ್ತದೆ’ ಎಂದು ಪಟ್ಟಣದ ಮುಖಂಡ ಬಸವರಾಜ ಸೊನ್ನದ್ ಹೇಳಿದರು.

ಪಟ್ಟಣ ಪಂಚಾಯಿತಿಗಾಗಿ ಮತ್ತು ಎಲ್ಲಾ ಇಲಾಖೆಗಳನ್ನು ಕೂಡಲೇ ಆರಂಭಿಸಬೇಕು ಎಂದು ಮೂರು ವರ್ಷಗಳಿಂದ ಸತತವಾಗಿ ಹೋರಾಟ, ಮನವಿ ಮಾಡಿಕೊಂಡು ಬಂದರು ಸಹ ಅಧಿಕಾರಿಗಳು ಮತ್ತು ಸರ್ಕಾರ ಕ್ಯಾರೇ ಎನ್ನದೆ ನಮಗೆ ವಂಚನೆ ಮಾಡುತ್ತಿದ್ದಾರೆ. ಹೀಗೇ ಮುದುವರಿದರೆ ಹೋರಾಟ ಅನಿವಾರ್ಯ ಎಂದು ಅಂಬೇಡ್ಕರ್ ಸ್ವಾಭಿಮಾನ ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ಗುರುನಾಥ ನಾಟೇಕಾರ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT