ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಹಾಪುರ: ಪಿ.ಜಿ ಕೇಂದ್ರ ಸ್ಥಾಪನೆಗೆ ಆಗ್ರಹ

ಶಹಾಪುರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕಲಿಕೆಗೆ ಪೂರಕ ವಾತಾವರಣ
Last Updated 14 ಜೂನ್ 2020, 11:00 IST
ಅಕ್ಷರ ಗಾತ್ರ

ಶಹಾಪುರ: ನೂತವಾಗಿ ಅಸ್ತಿತ್ವಕ್ಕೆ ಬರಲಿರುವ ರಾಯಚೂರು ವಿಶ್ವವಿದ್ಯಾಲಯದ ಜೊತೆ ವಡಗೇರಾ ತಾಲ್ಲೂಕಿನ ಖಾನಾಪುರ ಕೆಬಿಜೆಎನ್‌ಎಲ್ ನಿಗಮದ ಕ್ಯಾಂಪಿನ ವಸತಿಗೃಹದಲ್ಲಿ ಸ್ನಾತಕೋತ್ತರ ಶಿಕ್ಷಣ ಕೇಂದ್ರ ಪ್ರಾರಂಭಿಸಲು ಚಿಂತನೆ ನಡೆದಿದೆ. ಅದರ ಬದಲು ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಆವರಣದಲ್ಲಿ ಸ್ನಾತಕೋತ್ತರ ಕೇಂದ್ರ ಸ್ಥಾಪಿಸಿದರೆ ಉನ್ನತ ಶಿಕ್ಷಣ ಪಡೆಯುವ ಹೆಚ್ಚಿನ ವಿದ್ಯಾರ್ಥಿಗಳಿಗೆ ಅನುಕೂಲ ಆಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

‘ಬೀದರ್–ಶ್ರೀರಂಗಪಟ್ಟಣದ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಇಲ್ಲಿನ ಕಾಲೇಜಿನ ಅಧೀನದಲ್ಲಿ 88 ಎಕರೆ ಜಮೀನು ಇದೆ. ಈಗಾಗಲೇ ಕಾಲೇಜಿನಲ್ಲಿ ಬಿಎ, ಬಿಕಾಂ, ಬಿಎಸ್ಸಿ, ಬಿಬಿಎಂ ತರಗತಿಗಳಿವೆ. ಅಲ್ಲದೆ, ಇತಿಹಾಸ, ರಾಜ್ಯಶಾಸ್ತ್ರ, ಗಣಿತಶಾಸ್ತ್ರ, ಎಂ.ಕಾಂ ಸ್ನಾತಕೋತ್ತರ ವಿಭಾಗಗಳು ಇವೆ. ಸುರಪುರ, ಶಹಾಪುರ, ಯಾದಗಿರಿ, ಜೇವರ್ಗಿ ತಾಲ್ಲೂಕಿನ ಹೆಚ್ಚಿನ ವಿದ್ಯಾರ್ಥಿಗಳು ಇಲ್ಲಿ ಜ್ಞಾನಾರ್ಜನೆಗೆ ಬರುತ್ತಿದ್ದಾರೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೂ ಹೆಚ್ಚು ಅನುಕೂಲ ಆಗುವುದರಿಂದ 2,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ’ ಎಂದು ಕಾಲೇಜಿನ ಅಧ್ಯಾಪಕರೊಬ್ಬರು ಮಾಹಿತಿ ನೀಡಿದರು.

‘ಇದೇ ಕಾಲೇಜಿನ ಆವರಣದಲ್ಲಿ ಈಗಾಗಲೇ ಆದರ್ಶ ವಿದ್ಯಾಲಯವಿದೆ. ಕೇಂದ್ರ ಸರ್ಕಾರ ಮಹತ್ವಕಾಂಕ್ಷೆ ಯೋಜನೆ ಅಡಿಯಲ್ಲಿ ಯಾದಗಿರಿ ಜಿಲ್ಲೆಗೆ ರೂಸೊ ಯೋಜನೆ ಅಡಿಯಲ್ಲಿ ಮಾದರಿ ಕಾಲೇಜು ಕಟ್ಟಡದ ಕಾಮಗಾರಿಗೆ ಹಸಿರು ನಿಶಾನೆ ತೋರಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ನಡೆಸುವ ಉದ್ದೇಶದಿಂದ ಸ್ಥಾಪಿಸಲಾಗಿರುವ ಟೌನ್‌ಹಾಲ್ ಕಟ್ಟಡ ಕೆಲಸ ಮುಕ್ತಾಯದ ಹಂತಕ್ಕೆ ಬಂದಿದೆ. ಕಾಲೇಜಿನ ಕಟ್ಟಡಕ್ಕೆ ಹೊಂದಿಕೊಂಡಿರುವ ಜಾಗದಲ್ಲಿ ಸುಮಾರು ₹ 5 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣ ಕಾಮಗಾರಿ ಭರದಿಂದ ಸಾಗಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಕಾಲೇಜು ಆವರಣದ ಸುತ್ತ ಕಾಂಪೌಂಡ್ ನಿರ್ಮಿಸಿ ಹೆಚ್ಚಿನ ಸುರಕ್ಷತೆ ಒದಗಿಸಲಾಗಿದೆ. ವಿದ್ಯಾರ್ಥಿಗಳ ಕಲಿಕೆಗೆ ಪೂರಕ ವಾತಾವರಣ ಇಲ್ಲಿದೆ. ವಿದ್ಯಾರ್ಥಿಗಳಿಗೆ ಹಾಗೂ ಕಾಲೇಜಿನ ಸಿಬ್ಬಂದಿಗೆ ವಸತಿ ಕಲ್ಪಿಸಲು ಭೀಮರಾಯನಗುಡಿಯ ವಸತಿಗೃಹ ಖಾಲಿ ಇದೆ’ ಎನ್ನುತ್ತಾರೆ ಗುಲರ್ಬ ವಿಶ್ವವಿದ್ಯಾಲಯದ ಸೆನೆಟ್ ಮಾಜಿ ಸದಸ್ಯ ಆರ್.ಚನ್ನಬಸ್ಸು ವನದುರ್ಗ.

‘ಈಗಾಗಲೇ 15 ವರ್ಷದಿಂದ ಭೀಮರಾಯನಗುಡಿಯಲ್ಲಿ ಕೃಷಿ ಮಹಾವಿದ್ಯಾಲಯ ಸ್ಥಾಪನೆಯಾಗಿದ್ದು ಕೃಷಿ ಶಿಕ್ಷಣ ಅಭಿವೃದ್ಧಿ ಹೊಂದಲು ನೆರವಾಗಿದೆ. ಸ್ನಾತಕೋತ್ತರ ಕೇಂದ್ರವನ್ನು ಇಲ್ಲಿ ಸ್ಥಾಪಿಸುವುದರಿಂದ ಶೈಕ್ಷಣಿಕ ಉನ್ನತಿ ಸಾಧಿಸಲು ಅನುಕೂಲ ಆಗುತ್ತದೆ. ಇದರ ಬಗ್ಗೆ ಶಾಸಕ ಶರಣಬಸಪ್ಪ ದರ್ಶನಾಪುರ ಗಂಭೀರವಾಗಿ ಚಿಂತನೆ ಮಾಡಿ ಕೇಂದ್ರ ಸ್ಥಾಪನೆಗೆ ಪ್ರಾಮಾಣಿಕ ಯತ್ನ ಮಾಡಬೇಕು’ ಎಂದು ಶಿಕ್ಷಣ ಪ್ರೇಮಿಗಳು, ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT