ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೊಂದವರಿಗೆ ಶೀಘ್ರ ಪರಿಹಾರ ವಿತರಿಸಲು ಜಿಲ್ಲಾಧಿಕಾರಿ ಸೂಚನೆ

ಪರಿಶಿಷ್ಟ ಜಾತಿ, ಪಂಗಡದವರ ಮೇಲಿನ ದೌರ್ಜನ್ಯ ತಡೆ ಸಮಿತಿ ಸಭೆ
Last Updated 25 ನವೆಂಬರ್ 2020, 17:31 IST
ಅಕ್ಷರ ಗಾತ್ರ

ಯಾದಗಿರಿ: ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಮೇಲೆ ದೌರ್ಜನ್ಯ ನಡೆಸಿದ ಪ್ರಕರಣಗಳಲ್ಲಿ ನೊಂದವರಿಗೆ ಪರಿಹಾರ ಧನ ವಿತರಿಸಲು ಈ ಕೂಡಲೇ ಅಗತ್ಯ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಆರ್., ಅವರು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಮೇಲಿನ ದೌರ್ಜನ್ಯ ತಡೆ ಸಮಿತಿ ಸಭೆಯಲ್ಲಿ ಮಾತನಾಡಿದರು.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರ ಮೇಲೆ ದೌರ್ಜನ್ಯ ಪ್ರಕರಣಗಳಲ್ಲಿ ನಿಯಮಾನುಸಾರ ನೀಡಲಾಗುವ ಪರಿಹಾರ ಮೊತ್ತವನ್ನು ಸರ್ಕಾರದ ನಿರ್ದೇಶನದಂತೆ ವಿಳಂಬಕ್ಕೆ ಆಸ್ಪದವಿಲ್ಲದಂತೆ ಕೂಡಲೇ ವಿತರಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಚನ್ನಬಸವ ಅವರಿಗೆ ನಿರ್ದೇಶನ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಚನ್ನಬಸವ ಅವರು 44 ದೌರ್ಜನ್ಯ ಪ್ರಕರಣಗಳಲ್ಲಿ ಪರಿಹಾರ ನೀಡಲು ಅನುದಾನ ಬಿಡುಗಡೆಯಾಗುವಲ್ಲಿ ವಿಳಂಬವಾಗಿದ್ದು, ಇದೀಗ ಬಿಡುಗಡೆಯಾಗಿದೆ. ಕೂಡಲೇ ನೊಂದ ಫಲಾನುಭವಿಗಳಿಗೆ ಪರಿಹಾರ ವಿತರಿಸಲಾಗುವುದು ಎಂದರು.

ಕಂಪ್ಯೂಟರ್ ಹಾಗೂ ಪಂಪ್ ಆಪರೇಟರ್‌ಗಳನ್ನು ನೇಮಕ ಮಾಡುವ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಪರಿಶಿಷ್ಟ ಜಾತಿ ಹಾಗೂ ಪಂಗಡದ ಅಭ್ಯರ್ಥಿಗಳನ್ನು ರೋಸ್ಟರ್ ಆಧಾರದಲ್ಲಿ ಪರಿಗಣಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ನೇಮಕಾತಿ ಸಂದರ್ಭದಲ್ಲಿ ರೋಸ್ಟರ್ ಪದ್ಧತಿ ಪಾಲಿಸಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ತಿಳಿಸಿದರು.

ಜಿಲ್ಲೆಯ 74 ಗ್ರಾಮಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರಿಗೆ ಸ್ಮಶಾನ ಭೂಮಿಯ ಕೊರತೆ ಬಗ್ಗೆ ಈಗಾಗಲೇ ಸರ್ವೆ ಮಾಡಿ ಸಮಾಜ ಕಲ್ಯಾಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಉಪ ನಿರ್ದೇಶಕರು ತಿಳಿಸಿದರು.

ಅಂಬೇಡ್ಕರ್ ಅಭಿವೃದ್ದಿ ನಿಗಮದಿಂದ ವಿವಿಧ ಯೋಜನೆಯಡಿ ಆಯ್ಕೆಯಾಗಿರುವ ಫಲಾನುಭವಿಗಳಿಗೆ ಬ್ಯಾಂಕುಗಳು ಅರ್ಹ ಮೊತ್ತದ ಸಾಲ ಸೌಲಭ್ಯ ಮಂಜೂರು ಮಾಡಬೇಕು. ಅದರ ಹೊರತು ತಮಗಿಷ್ಟ ಬಂದಂತೆ ಸಾಲ ಸೌಲಭ್ಯವನ್ನು ಮಂಜೂರು ಮಾಡುವಂತಿಲ್ಲ. ನಿಯಮಗಳನ್ನು ಉಲ್ಲಂಘಿಸುವ ಬ್ಯಾಂಕುಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಈ ಕುರಿತು ಜಿಲ್ಲಾ ಬ್ಯಾಂಕರ್ ಸಮಿತಿ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಪ್ರಭು, ಅಬಕಾರಿ ಇಲಾಖೆಯ ಅಧಿಕಾರಿಗಳು, ಅಂಬೇಡ್ಕರ್ ಅಭಿವೃದ್ದಿ ನಿಮಗದ ಜಿಲ್ಲಾ ವ್ಯವಸ್ಥಾಪಕರು, ಜಿಲ್ಲಾ ದೌರ್ಜನ್ಯ ತಡೆ ನಾಮ ನಿರ್ದೇಶನ ಸಮಿತಿ ಸದಸ್ಯರಾದ ರಮಾದೇವಿ, ರಮೇಶ್ ದೊರೆ, ನಾಗರಾಜ ದೊಡ್ಡಮನಿ ಸೇರಿದಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಇದ್ದರು.

***
ಅಂತ್ಯ ಸಂಸ್ಕಾರಕ್ಕಾಗಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರಿಗಾಗಿ ಸ್ಮಶಾನ ಭೂಮಿ ಒದಗಿಸಿಕೊಡಬೇಕು. ರುದ್ರಭೂಮಿ ಇಲ್ಲದ ಗ್ರಾಮಗಳನ್ನು ಗುರುತಿಸಿ.
-ಡಾ. ರಾಗಪ್ರಿಯಾ ಆರ್., ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT