ಗುರುಮಠಕಲ್: ಕಚೇರಿಗಳಲ್ಲಿ ಜನರು ಸರ್ಕಾರದ ಸೇವೆಗಳು ಮತ್ತು ಸೌಲಭ್ಯಗಳನ್ನು ಪಡೆಯಲು ಸಲ್ಲಿಸಿದ ಅರ್ಜಿಗಳನ್ನು ಕಾನೂನಿನನ್ವಯ ಅಗತ್ಯ ಕ್ರಮ ವಹಿಸಿ, ನಿಗದಿತ ಕಾಲಮಿತಿಯಲ್ಲಿ ವಿಲೇ ಮಾಡಬೇಕು. ಅನಗತ್ಯವಾಗಿ ಕೆಲಸವನ್ನು ಬಾಕಿ ಉಳಿಸುವುದು ಅಪರಾಧವಾಗಿದೆ ಎಂದು ಯಾದಗಿರಿ ಜಿಲ್ಲಾ ಲೋಕಾಯುಕ್ತ ಡಿಎಸ್‌ಪಿ ಎನ್.ಎಂ.ಓಲೇಕಾರ ತಿಳಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಶನಿವಾರ ನಡೆದ ಸಾರ್ವಜನಿಕರ ದೂರು, ಕುಂದು-ಕೊರತೆಗಳ ಸ್ವೀಕಾರ ಸಭೆಯಲ್ಲಿ ಅವರು ಮಾತನಾಡಿದರು.
ಜನರಿಗೆ ಸಕಾಲದಲ್ಲಿ ಸೇವೆ ನೀಡಿದರೆ, ನಿಮ್ಮನ್ನು ದೇವರಂತೆ ಕಾಣುತ್ತಾರೆ. ಕಾನೂನಿನನ್ವಯ ಅರ್ಜಿದಾರರು ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ಸೇವೆ ಒದಗಿಸಲು ಸಾಧ್ಯವಿದ್ದರೆ ನಿಗದಿತ ಕಾಲಮಿತಿಯಲ್ಲಿ ಒದಗಿಸಿ, ಕಾನೂನಿನಂತೆ ಅವರಿಗೆ ಸೇವೆ ನೀಡುವ ಅವಕಾಶವಿಲ್ಲವಾದರೆ ಹಿಂಬರಹವನ್ನು ನೀಡಿ, ಕಡತವನ್ನು ವಿಲೇ ಮಾಡಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
‘ಯಾರಾದರೂ ಲೋಕಾಯುಕ್ತ ಹೆಸರಿನಲ್ಲಿ ಕರೆ ಮಾಡಿದರೆ ಭಯಪಡಬೇಡಿ. ಲೋಕಾಯುಕ್ತ ಸಂಸ್ಥೆಯು ಕೇವಲ ಕರೆ ಮೂಲಕ ಯಾರನ್ನೂ ವಿಚಾರಣೆಗೆ ಕರೆಯುವುದಿಲ್ಲ. ನಿಮ್ಮ ಕುರಿತ ದೂರು ಬಂದಿದ್ದರೆ, ಅಗತ್ಯವಾದ ಕಾನೂನು ಪ್ರಕ್ರಿಯೆಗಳನ್ನು ಪಾಲಿಸಿ, ನಿಮಗೆ ನೋಟಿಸ್ ನೀಡಿಯೇ ವಿಚಾರಣೆಗೆ ಕರೆಯಲಾಗುವುದು. ತಪ್ಪು ಮಾಡದವರು ಹೆದರುವ ಅವಶ್ಯಕತೆಯೇ ಇಲ್ಲ’ ಎಂದರು.
ಎಲ್ಲಾ ಕಚೇರಿಗಳಲ್ಲಿ ಭ್ರಷ್ಟಾಚಾರ ನಿಷೇಧ ಸಂಬಂಧ ಲೋಕಾಯುಕ್ತ ಕಚೇರಿಯ ಭಿತ್ತಿಪತ್ರ ಅಳವಡಿಸಬೇಕು. ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಗೆ ಕಡ್ಡಾಯವಾಗಿ ಹಾಜರಾಗಬೇಕು. ಯಾವುದೇ ರೀತಿಯ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲದಂತೆ ಮೇಲಾಧಿಕಾರಿಗಳು ಮುತುವರ್ಜಿ ವಹಿಸಿ, ಕೆಳ ಹಂತದ ಸಿಬ್ಬಂದಿಗೆ ಸೂಕ್ತ ಮಾರ್ಗದರ್ಶನ ಮತ್ತು ನಿರ್ದೇಶನ ನೀಡಬೇಕು ಎಂದು ಹೇಳಿದರು.
ಸಭೆಯಲ್ಲಿ ಒಂದು ತಾಲ್ಲೂಕು ಪಂಚಾಯಿತಿ ಮತ್ತು ಐದು ಕಂದಾಯ ಇಲಾಖೆಗೆ ಸಂಬಂಧಿಸಿದ ಅರ್ಜಿಗಳು ಸ್ವೀಕೃತಗೊಂಡಿದ್ದು, ಕಾನೂನು ವ್ಯಾಪ್ತಿಯಲ್ಲಿ ಅರ್ಜಿಗಳನ್ನು ಶೀಘ್ರ ವಿಲೇ ಮಾಡಲು ಸಂಬಂಧಿತ ಇಲಾಖೆಗಳಿಗೆ ಶಿಫಾರಸ್ಸು ಮಾಡಲಾಯಿತು.
ತಹಶೀಲ್ದಾರ್ ನೀಲಪ್ರಭಾ ಬಬಲಾದ, ಲೋಕಾಯಕ್ತ ಪಿಐ ಹಣಮಂತ ಬಿ.ಸಣ್ಣಮನಿ ಮತ್ತು ಟಿಎಚ್‌ಒ ಡಾ.ಹಣಮಂತರೆಡ್ಡಿ ಮಾತನಾಡಿದರು.
ಗ್ರೇಡ್-2 ತಹಶೀಲ್ದಾರ್ ನರಸಿಂಹಸ್ವಾಮಿ, ಲೋಕಾಯುಕ್ತ ಪಿಐ ಸಿದ್ದರಾಮ ಬಳ್ಳೂರಗಿ, ಪುರಸಭೆ ಮುಖ್ಯಾಧಿಕಾರಿ ಭಾರತಿ ಸಿ.ದಂಡೋತಿ, ತಾಲ್ಲೂಕು ಪಂಚಾಯಿತಿ ಸಹಾಯಕ ಯೋಜನಾ ನಿರ್ದೇಶಕಿ ಭಾರತಿ ಸಜ್ಜನ, ಲೋಕೋಪಯೋಗಿ ಇಲಾಖೆಯ ಎಇಇ ಶ್ರೀಧರ, ಗ್ರಾಮೀಣ ನೀರು ಸರಬರಾಜು ಇಲಾಖೆ ಎಇಇ ಬಸವರಾಜ ಐರೆಡ್ಡಿ, ಪಶುವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ.ಶಶಿಕಾಂತ ಹಜಾರೆ, ಲೋಕಾಯುಕ್ತ ಸಂಸ್ಥೆಯ ಅಮರನಾಥ, ಗಂಗಾಧರ, ಮಲ್ಲಪ್ಪ, ಖಾಸಿಂಸಾಬ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.