ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಿರಿಯರನ್ನು ತಾತ್ಸಾರದಿಂದ ಕಾಣದಿರಿ’

ವಿಶ್ವ ಹಿರಿಯ ನಾಗರಿಕರ ದಿನಾಚರಣೆ, ಕ್ರೀಡಾಕೂಟ ಆಯೋಜನೆ
Last Updated 24 ಸೆಪ್ಟೆಂಬರ್ 2019, 14:26 IST
ಅಕ್ಷರ ಗಾತ್ರ

ಯಾದಗಿರಿ: ಹಿರಿಯ ನಾಗರಿಕರನ್ನು ತಾತ್ಸಾರದಿಂದ ಕಾಣದೆ ಅವರನ್ನು ಗೌರವಿಸಬೇಕು. ಅವರ ಅನುಭವ ಪಡೆಯಲು ಯತ್ನಿಸಬೇಕು’ ಎಂದು ಜಿಲ್ಲಾ ವಿಲಕಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಶರಣಪ್ಪ ಪಾಟೀಲ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ನಡೆದ ‘ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಹಾಗೂ ಕ್ರೀಡಾಕೂಟ‘ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಹಿರಿಯರ ಮನಸ್ಸಿಗೆ ನೊಂವುಂಟು ಮಾಡದೇ ಅವರನ್ನು ಗೌರವದಿಂದ ಕಾಣಬೇಕು. ವಯಸ್ಸಾಗಿದೆ ಎಂದು ಮಕ್ಕಳು, ತಂದೆ-ತಾಯಿಗಳ ಮಾನಸಿಕ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳದೇ ಅವರನ್ನು ಕಡೆಗಣಿಸುವುದು ಹಿರಿಯರು ಮನೆ ತೊರೆಯುತ್ತಿರುವುದಕ್ಕೆ ಕಾರಣವಾಗುತ್ತಿದೆ. ಇಂದು ಬಹುತೇಕ ಹಿರಿಯ ನಾಗರಿಕರು ಮನಃಶಾಂತಿಗಾಗಿ ಅನಾಥಾಶ್ರಮ ಸೇರುತ್ತಿದ್ದಾರೆ. ಹೀಗಾಗಿ ಹಿರಿಯನಾಗರಿಕರಿಗೆ ಅವರ ಹಕ್ಕುಗಳು ಮತ್ತು ಸೌಲಭ್ಯಗಳನ್ನು ಒದಗಿಸಲು ಇಲಾಖೆ ಸದಾ ಸಿದ್ದವಾಗಿದೆ’ ಎಂದರು.

‘ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆ ಅವಶ್ಯಕವಾಗಿದ್ದು, ದೇಹವು ಚೈತನ್ಯದಿಂದ ಕೂಡಿರಲು ಆಟಗಳಲ್ಲಿ ಭಾಗವಹಿಸಬೇಕು. ಉಲ್ಲಾಸ ಹೆಚ್ಚುವುದರೊಂದಿಗೆ ಸಂತೋಷದಿಂದ ಇರಬಹುದು. ಎಂದು ತಿಳಿಸಿದ ಅವರು, ಹಿರಿಯ ನಾಗರಿಕರು ಉತ್ಸಾದಿಂದ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕು’ ಎಂದು ಹೇಳಿದರು.

ನಿವೃತ್ತ ಅಂಚೆ ಪಾಲಕ ರಾಮಮೋಹನ ಮಾತನಾಡಿ, ‘ಸಾಮಾನ್ಯವಾಗಿ ಹಿರಿಯರನ್ನು ಎಲ್ಲರೂ ಕಡೆಗಣನೆ ಮಾಡುತ್ತಾರೆ. ಆದರೆ, ಇಂದು ಹಿರಿಯ ನಾಗರಿಕರ ಇಲಾಖೆಯ ಕಾರ್ಯಕ್ರಮದಲ್ಲಿ ನಮ್ಮನ್ನು ಗಣನೆಗೆ ತೆಗೆದುಕೊಂಡು ನಮಗಾಗಿಯೇ ಕಾರ್ಯಕ್ರಮ ಆಯೋಜನೆ ಮಾಡಿರುವುದು ಒಳ್ಳೆಯ ಬೆಳವಣಿಗೆ. ಇಲಾಖೆಯಿಂದ ಹಿರಿಯ ನಾಗರಿಕರನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು’ ಎಂದರು.

ಕಾರ್ಯಕ್ರಮದ ನಂತರ ಕ್ರೀಡಾಕೂಟ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ನಿವೃತ್ತ ಶಿಕ್ಷಣಾಧಿಕಾರಿ ಸೂಗಪ್ಪ ಪಾಟೀಲ, ಅಜೀತ್‌ ದೋಖಾ, ನಾಗರೆಡ್ಡಿ ಯರಗೋಳ, ನಿವೃತ್ತ ಪಿಎಸ್‍ಐ ಪ್ರಭುಲಿಂಗಯ್ಯ ಹಿರೇಮಠ, ಆರ್.ವಿಶ್ವನಾಥರೆಡ್ಡಿ ಅಬ್ಬೆತುಮಕೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT