ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೋರನಹಳ್ಳಿ ಆತ್ಮಹತ್ಯೆ ಪ್ರಕರಣ: ಚಂದ್ರಕಲಾಗೆ ನಗರಸಭೆಯಲ್ಲಿ ಉದ್ಯೋಗ

ಆದೇಶ ಪತ್ರ ನೀಡಿದ ಜಿಲ್ಲಾಧಿಕಾರಿ
Last Updated 6 ಜುಲೈ 2021, 3:31 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ಶಹಾಪುರ ತಾಲ್ಲೂಕಿನ ದೋರನಹಳ್ಳಿಯಲ್ಲಿ ಇತ್ತೀಚೆಗೆ ಒಂದೇ ಕುಟುಂಬದ ಆರು ಜನ ಆತ್ಮಹತ್ಯೆ ಮಾಡಿಕೊಂಡ ಘಟನೆಯ ನಂತರ ಆ ಕುಟುಂಬದಲ್ಲಿ ಬದುಕುಳಿದ ಏಕೈಕ ಮಗಳು ಚಂದ್ರಕಲಾ ಅವರಿಗೆ ಜಿಲ್ಲಾಡಳಿತವು ಶಹಾಪುರ ನಗರಸಭೆಯಲ್ಲಿ ಉದ್ಯೋಗ ನೀಡಿದೆ.

ದೋರನಹಳ್ಳಿ ಗ್ರಾಮದ ರೈತ ಭೀಮರಾಯ ಶಿವಪ್ಪ ಸುರಪುರ ದಂಪತಿ ನಾಲ್ಕು ಮಕ್ಕಳ ಸಮೇತ ಜೂನ್ 28ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆಯ ಬಳಿಕ ಮೃತ ಭೀಮರಾಯನ ಕುಟುಂಬದ ಸದಸ್ಯರಲ್ಲಿ ಉಳಿದ ಏಕೈಕ ಮಗಳು ಚಂದ್ರಕಲಾ ಅವರಿಗೆ ಶಹಾಪುರ ನಗರಸಭೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಸಿಪಾಯಿ ಹುದ್ದೆಗೆ ನೇಮಿಸಿ ಆದೇಶ ಪತ್ರವನ್ನು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್ ಅವರು ಸೋಮವಾರ ಶಹಾಪುರ ತಹಶೀಲ್ದಾರ್‌ ಕಚೇರಿಯ ಸಭಾಂಗಣದಲ್ಲಿ ನೀಡಿದರು.

ಚಂದ್ರಕಲಾ ಅವರಿಗೆ ಸಾಂತ್ವನ ತಿಳಿಸಿದ ಜಿಲ್ಲಾಧಿಕಾರಿ, ಜಿಲ್ಲಾಡಳಿತ ಅಗತ್ಯವಿರುವ ಎಲ್ಲ ನೆರವು ನೀಡಲಿದೆ. ಯಾವುದೇ ಕಾರಣಕ್ಕೂ ಧೈರ್ಯಗೆಡದೆ ಜೀವನದಲ್ಲಿ ಉತ್ಸಾಹದಿಂದ ಮುಂದೆ ಬರುವಂತೆ ಧೈರ್ಯ ನುಡಿದರು.

ಈ ವೇಳೆ ಉಪವಿಭಾಗಾಧಿಕಾರಿ ಪ್ರಶಾಂತ ಹನಗಂಡಿ, ಶಹಾಪುರ ತಹಶೀಲ್ದಾರ ಜಗನ್ನಾಥರೆಡ್ಡಿ, ಶಹಾಪುರ ನಗರಸಭೆ ಪೌರಾಯುಕ್ತ ರಮೇಶ ಪಟ್ಟೇದಾರ, ಶಹಾಪುರ ಸಿಪಿಐ ಚೆನ್ನಯ್ಯ ಎಸ್ ಹಿರೇಮಠ ಇದ್ದರು.

***

ವಾರದ ನಂತರ ಅಂತ್ಯ ಸಂಸ್ಕಾರಕ್ಕೆ ಹಣ ಬಿಡುಗಡೆ

ಶಹಾಪುರ: ತಾಲ್ಲೂಕಿನ ದೋರನಹಳ್ಳಿ ಗ್ರಾಮದಲ್ಲಿ ನಾಲ್ಕು ಮಕ್ಕಳ ಸಮೇತ ಭೀಮರಾಯ ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿದಂತೆ ಸೋಮವಾರ ತಾಲ್ಲೂಕು ಆಡಳಿತದಿಂದ ಅಂತ್ಯ ಸಂಸ್ಕಾರದ ವೆಚ್ಚವನ್ನು ಪ್ರತಿ ಸದಸ್ಯರಿಗೆ ₹5ಸಾವಿರದಂತೆ ₹30 ಸಾವಿರ ಹಣವನ್ನು ಮೃತ ಭೀಮರಾಯ ಸುರಪುರ ಅವರ ಮಗಳು ಚಂದ್ರಕಲಾ ಅವರಿಗೆ ನೀಡಲಾಯಿತು ಎಂದು ತಹಶೀಲ್ದಾರ ಜಗನ್ನಾಥರಡ್ಡಿ ತಿಳಿಸಿದ್ದಾರೆ.

ನಾಚಿಗೇಡು ಸಂಗತಿ

‘ವಾರದ ಹಿಂದೆ ಮೃತಪಟ್ಟ ಆರು ಜನರಿಗೆ ಅಂತ್ಯ ಸಂಸ್ಕಾರದ ವೆಚ್ಚವನ್ನು ಅಂತ್ಯಕ್ರಿಯೆ ನಡೆಸುವಾಗ ನೀಡಬೇಕಾದ ತಾಲ್ಲೂಕು ಆಡಳಿತ ವಾರದ ನಂತರ ನೀಡಿರುವುದು ನಾಚಿಗೇಡು ಸಂಗತಿಯಾಗಿದೆ. ಯಾವ ಸಂದರ್ಭದಲ್ಲಿ ತುರ್ತು ನೆರವು ನೀಡಬೇಕು ಎಂಬುವುದನ್ನು ತಾಲ್ಲೂಕು ಆಡಳಿತ ಸೋತಿದೆ. ಅಂತ್ಯ ಸಂಸ್ಕಾರಕ್ಕೂ ಹಣಕಾಸಿನ ಮುಗ್ಗಟ್ಟು ತಾಲ್ಲೂಕು ಆಡಳಿತಕ್ಕೆ ಬಂದಿದೆ’ ಎಂದು ಅಖಂಡ ಕರ್ನಾಟಕ ರೈತ ಸಂಘದ ಸಂಚಾಲಕ ಮಲ್ಲಣ್ಣ ಪರಿವಾಣ ಗೋಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT