ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡ್ರಾಮಿ: ನೀಗದ ಕುಡಿಯುವ ನೀರಿನ ಬವಣೆ

Last Updated 5 ಏಪ್ರಿಲ್ 2022, 21:45 IST
ಅಕ್ಷರ ಗಾತ್ರ

ಯಡ್ರಾಮಿ: ತಾಲ್ಲೂಕಿನಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ.

ತಾಲ್ಲೂಕಿನಲ್ಲಿ ಒಟ್ಟು 275 ಕೊಳವೆ ಬಾವಿಗಳಿದ್ದು, ಅವುಗಳಲ್ಲಿ 20 ನಿರುಪಯುಕ್ತವಾಗಿವೆ. ಕೆಲವು ಕೊಳವೆ ಬಾವಿಗಳಿಗೆ ಮಾತ್ರ ಮೋಟರ್ ಅಳವಡಿಸಲಾಗಿದೆ.

ತಾಲ್ಲೂಕಿನ ವಿವಿಧ ಗ್ರಾಮಗಳ 50 ಬಾವಿಗಳು ಜನರ ಕುಡಿಯುವ ನೀರಿಗೆ ಆಸರೆಯಾಗಿವೆ. 20 ಗ್ರಾಮಗಳಲ್ಲಿ ನೀರು ಶುದ್ಧೀಕರಣ ಘಟಕ ಸ್ಥಾಪಿಸಿದ್ದರೂ ಬಹುತೇಕ ಕಡೆ ಅವು ನಿರುಪಯುಕ್ತವಾಗಿವೆ. ಬಿಳವಾರ ಕೋಣರ ತಾಂಡ, ಜವಳಗಿ, ಕಾಚೂರ, ಆಲೂರ, ಕೋಣಸಿರಸಿಗಿ, ವರವಿ, ಶಿವಪುರ ತಾಂಡ ಸೇರಿದಂತೆ ಬಹುತೇಕ ಕಡೆಗಳಲ್ಲಿ ಘಟಕಗಳು ಸ್ಥಗಿತವಾಗಿವೆ.

ಅಲ್ಲಾಪುರ, ಯಲಗೋಡ, ಮಲ್ಲಾಬಾದ್, ಕರಕಿಹಳ್ಳಿ, ಇಜೇರಿ, ಆಲೂರ ಗ್ರಾಮಗಳಲ್ಲಿ ಪ್ರತಿ ವರ್ಷವೂ ನೀರಿನ ಸಮಸ್ಯೆ ತಲೆದೋರುವುದು ಸಾಮಾನ್ಯವಾಗಿದೆ. ಬೇಸಿಗೆಯಲ್ಲಿಕೆಲವು ಬಾರಿ ಅಧಿಕಾರಿಗಳು ತಾತ್ಕಾಲಿಕವಾಗಿ ನೀರಿನ ವ್ಯವಸ್ಥೆ ಮಾಡಿ ಕೈ ತೊಳೆದುಕೊಳ್ಳುತ್ತಾರೆ ಎಂಬುವುದು ಗ್ರಾಮಸ್ಥರ ಪ್ರಮುಖ ಆರೋಪವಾಗಿದೆ.

ಬಳಬಟ್ಟಿ, ವಡಗೇರಾ, ಹಂಗರಗಾ(ಕೆ), ಇಜೇರಿ, ಸುಂಬಡ, ಅರಳಗುಂಡಗಿ, ಸೈದಾಪುರ ಕೆರೆಗಳಲ್ಲಿ ನೀರಿನ ಮಟ್ಟ ಕಡಿಮೆ ಆಗಿದ್ದು, ಅಂತರ್ಜಲ ಮಟ್ಟ ಕುಸಿದಿದೆ. ಇಜೇರಿ, ಸೈದಾಪುರ ಬಳಬಟ್ಟಿ ಕೆರೆಗೆ ಕಾಲುವೆ ನೀರು ತುಂಬಿಸಲಾಗುತ್ತಿದ್ದರೂ ಗ್ರಾಮಸ್ಥರ ಬಳಕೆಗೆ ಸಿಗುತ್ತಿಲ್ಲ.

ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ತಾಲ್ಲೂಕಿನಲ್ಲಿ ನೀರಿನ ಸಮಸ್ಯೆ ಗಂಭೀರ ಸ್ವರೂಪ ತಾಳುತ್ತದೆ. ಕಾಲುವೆ ನೀರು ಸ್ಥಗಿತಗೊಂಡಾಗ ಅಂತರ್ಜಲ ಮಟ್ಟವೂ ಕಡಿಮೆಯಾಗಿ ಸಮಸ್ಯೆ ಇನ್ನಷ್ಟು ತೀವ್ರಗೊಳ್ಳುತ್ತದೆ. ಬೇಸಿಗೆ ಕೊನೆಗೊಳ್ಳಲು ಇನ್ನೂ ಸಾಕಷ್ಟು ದಿನಗಳು ಇರುವಾಗಲೇ 11ಕ್ಕಿಂತ ಹೆಚ್ಚಿನ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ.

ಗ್ರಾ.ಪಂ ನಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಿ, ಹಂತ ಹಂತವಾಗಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಜನಜೀವನ ಮಿಷನ್ ಯೋಜನೆ ಪೂರ್ಣಗೊಂಡರೆ ನೀರಿನ ಸಮಸ್ಯೆ ದೂರವಾಗಲಿದೆ.

–ಮಹಾಂತೇಶ ಪುರಾಣಿಕ, ತಾ.ಪಂ ಇಒ

ಬಹುತೇಕ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ಕೊಳವೆ ಬಾವಿಗಳ ವ್ಯವಸ್ಥೆ ಸರಿಯಾಗಿಲ್ಲ. ಇದರಿಂದ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗುತ್ತಿದೆ.

–ನಿಜಲಿಂಗ ದೊಡಮನಿ, ಬಿಳವಾರ

ಕುಡಿಯುವ ನೀರಿನ ಸಮಸ್ಯೆ ಇತ್ಯರ್ಥಕ್ಕೆ ಸರ್ಕಾರ ಅನುದಾನ ನೀಡಿ ಸಮರ್ಪಕವಾಗಿ ಬಳಸಲು ಜಿಲ್ಲಾಡಳಿತಕ್ಕೆ ಸೂಚಿಸಿದೆ. ಜಿಲ್ಲಾಧಿಕಾರಿ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು.

–ಈರಣ್ಣ ಭಜಂತ್ರಿ, ಅಧ್ಯಕ್ಷ, ತಾಲ್ಲೂಕು ಹಸಿರು ಸೇನೆ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT