ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ | ತಾಂಡಾದಲ್ಲಿ ‘ಅಕ್ಷರ ಕ್ರಾಂತಿ’

ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ 13 ವಿದ್ಯಾರ್ಥಿಗಳು
Published 22 ಮೇ 2024, 23:30 IST
Last Updated 22 ಮೇ 2024, 23:30 IST
ಅಕ್ಷರ ಗಾತ್ರ

ಶಹಾಪುರ: ಅದೊಂದು ಪುಟ್ಟ ತಾಂಡಾ. ಬಸ್ಸಿನ ಮುಖ ನೋಡದ, ರಸ್ತೆ ಸಂಪರ್ಕ ಸಮರ್ಪಕವಾಗಿ ಇಲ್ಲದ ಗಂಗುನಾಯಕ ತಾಂಡಾದಲ್ಲಿ ಸದ್ದಿಲ್ಲದೇ ‘ಅಕ್ಷರದ ಕ್ರಾಂತಿ’ ನಡೆಯುತ್ತಿದೆ. ತಾಂಡಾದಲ್ಲಿ ಸರ್ಕಾರಿ ಕೋಟಾದಲ್ಲಿ 11 ವಿದ್ಯಾರ್ಥಿಗಳು ಎಂಬಿಬಿಎಸ್, ಇಬ್ಬರು ಬಿಎಚ್‌ಎಂಎಸ್ ಅಭ್ಯಾಸ ಮಾಡುತ್ತಿದ್ದಾರೆ. ಒಬ್ಬರು ಈಗಾಗಲೇ ತಾಲ್ಲೂಕಿನ ಶಿರವಾಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಾಗಿ ಕೆಲಸವನ್ನೂ ಮಾಡುತ್ತಿದ್ದಾರೆ.

ಶಹಾಪುರ ತಾಲ್ಲೂಕಿನ ಗಂಗುನಾಯಕ ತಾಂಡಾದ ಸುರೇಶ ರಾಠೋಡ ಅವರ ಹಿರಿಯ ಪುತ್ರ ಡಾ.ರಾಜು ರಾಠೋಡ ಅವರು ಶಿರವಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಾಗಿದ್ದಾರೆ. ಮತ್ತಿಬ್ಬರು ಮಕ್ಕಳ ಪೈಕಿ ವಿಜಯ ಅವರು ವೈದ್ಯಕೀಯ ಪದವಿ ಪಡೆದು, ಎಂ.ಡಿ ಮಾಡುತ್ತಿದ್ದರೆ, ಕುಮಾರ್‌ ಪಶು ವೈದ್ಯಕೀಯ ಕೋರ್ಸ್ ಮಾಡುತ್ತಿದ್ದಾರೆ. ಸುರೇಶ್‌ ಅವರ ತಮ್ಮ ನೂರು ರಾಠೋಡ ಅವರ ‌ಮಗ ದೇವರಾಜ ಎಂಬಿಬಿಎಸ್‌ 4ನೇ ಸೆಮಿಸ್ಟರ್‌ ಓದುತ್ತಿದ್ದಾರೆ. ತಾಂಡಾದ ಮಕ್ಕಳು ಎಲ್ಲ ಕಷ್ಟಗಳನ್ನು ಮೆಟ್ಟಿ ‘ಬಡತನದಲ್ಲಿ ಅರಳಿದ ಕುಸುಮ’ಗಳಾಗಿ ಹೊರ ಹೊಮ್ಮುತ್ತಿದ್ದಾರೆ. ಅಲ್ಲದೇ ತಾಂಡಾದ 14 ಜನರು ವಿವಿಧ ಹುದ್ದೆಗಳಲ್ಲಿ ಸರ್ಕಾರಿ ಸೇವೆ ಮಾಡುತ್ತಿರುವುದು ವಿಶೇಷ. ತಾಂಡಾದ ಒಟ್ಟು ಜನಸಂಖ್ಯೆ 500 ಇದ್ದು, 120 ಮನೆಗಳಿವೆ. 1ರಿಂದ 5ನೇ ತರಗತಿಯವರೆಗೆ ಪ್ರಾಥಮಿಕ ಶಾಲೆ ಇದೆ. 6ನೇ ತರಗತಿಗೆ ತಾಂಡಾದಿಂದ 5 ಕಿ.ಮೀ ದೂರದ ಗೋಗಿ ಗ್ರಾಮಕ್ಕೆ ತೆರಳಬೇಕು.

‘371(ಜೆ) ವರ’

‘ಕಲ್ಯಾಣ ಕರ್ನಾಟಕದ ಜನರ ಮಕ್ಕಳ ಪಾಲಿಗೆ ಸಂವಿಧಾನದ ಕಲಂ 371(ಜೆ) ವಿಶೇಷ ಸ್ಥಾನಮಾನದ ಮೀಸಲಾತಿ ವರವಾಗಿದೆ. ವೈದ್ಯಕೀಯ ಕೋರ್ಸ್ ಆಯ್ಕೆಯಲ್ಲಿ ವಿಶೇಷ ಸ್ಥಾನಮಾನದಿಂದ ನಮ್ಮ ಮಕ್ಕಳು ಆಯ್ಕೆಯಾಗಿ ವೈದ್ಯರಾಗುತ್ತಿದ್ದಾರೆ ಎಂದು ಹೇಳಲು ಖುಷಿಯಾಗುತ್ತದೆ’ ಎನ್ನುತ್ತಾರೆ ತಾಂಡಾದ ಮಕ್ಕಳ ಪಾಲಕರು.

ಸೌಲಭ್ಯ ಇಲ್ಲ ಎಂದು ಮನೆಯಲ್ಲಿ ಕುಳಿತುಕೊಳ್ಳಬಾರದು. ಅದನ್ನು ಮೆಟ್ಟಿ ನಿಲ್ಲಬೇಕು. ಹೊಲದಲ್ಲಿ ನಮಗಾಗಿ ದುಡಿಯುತ್ತಿರುವ ತಂದೆ–ತಾಯಿ ಕಷ್ಟ ಅರ್ಥ ಮಾಡಿಕೊಂಡು ಸಾಧಿಸಬೇಕು
ಡಾ.ರಾಜು ರಾಠೋಡ, ಪ್ರಾಥಮಿಕ ಆರೋಗ್ಯ ಕೇಂದ್ರ, ಶಿರವಾಳ
ಗಂಗುನಾಯಕ ತಾಂಡಾ

ಗಂಗುನಾಯಕ ತಾಂಡಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT