ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ಕಣ್ಣಾಮುಚ್ಚಾಲೆ; ಒಣಗುತ್ತಿವೆ ಗದ್ದೆ

ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ; ವಡಗೇರಾ ಭಾಗದ ರೈತರ ಆರೋಪ
Last Updated 3 ಆಗಸ್ಟ್ 2021, 4:01 IST
ಅಕ್ಷರ ಗಾತ್ರ

ವಡಗೇರಾ: ‘ತಲಿಗುಂಬ ನೀರು ಇದ್ದರೂ ನಮ್ಮ ಗದ್ದಿಗಳಿಗೆ ನೀರು ಇಲ್ಲದಂಗಾ ಆಗ್ಯಾದ. ಕರೆಂಟ್ ಏಳು ಗಂಟೆ ಕೊಡ್ತೀವಿ ಅಂತಾರ. ಆದ್ರ ಅದ್ರಾಗ ನೂರ ಸಾರಿ ತೆಗಿತಾರ, ಹಾಕುತಾರ. ಇದರಿಂದ ನಮ್ಮ ಗದ್ದೆಗಳಿಗೆ ನೀರು ಬಿಡಾಕಾ ಆಗವಲ್ದು. ಇದಕ್ಕೆ ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ‘ ಎನ್ನುತ್ತಾರೆ ರೈತರು.

ಇದು ತಾಲ್ಲೂಕಿನ ಕಂದಳ್ಳಿ, ಅರ್ಜುಣಗಿ, ಬಿಳ್ಹಾರ, ಬೂದಿನಾಳ, ಮಾಚನೂರು, ಬೆನಕನಹಳ್ಳಿ, ಶಿವನೂರು ಜೋಳದಡಗಿ ಸೇರಿದಂತೆ ಇತರೆ ಗ್ರಾಮದ ರೈತರು ಹೇಳುವ ಸಾಮಾನ್ಯ ದೂರು ಆಗಿದೆ.

ಒಂದು ಕಡೆ ನದಿ ತುಂಬಿ ಪ್ರವಾಹ ಉಂಟಾದರೆ, ಇನ್ನೊಂದು ಕಡೆ ನೂರಾರು ಎಕರೆ ಭತ್ತದ ಗದ್ದೆಗಳು ನೀರು ಇಲ್ಲದೆ ಒಣಗಿ ಬಿರುಕು ಬಿಟ್ಟಿವೆ.

‘ಒಣಗಿ ಹೋಗೊಕೆ ಕಾರಣ ಕೇಳಿದ್ರೆ ಅಚ್ಚರಿಯಾಗುತ್ತದೆ. ಅಚ್ಚರಿ ಅನ್ನೋದಕ್ಕಿಂತ ಅಧಿಕಾರಿಗಳ ದಿವ್ಯ ನಿರ್ಲಕ್ಷ ನೋಡಿದ್ರೆ ಇವರೆಂತಹ ಅಧಿಕಾರಿಗಳು’ ಎಂದು ರೈತರು ತಮ್ಮ ಗೋಳನ್ನು ತೋಡಿಕೊಳ್ಳುತ್ತಾರೆ.

ಒಣಗಿ ಹೋಗುತ್ತಿರುವ ಭತ್ತದ ಬೆಳೆಯ ಮಧ್ಯದಲ್ಲಿ ಕುಳಿತು ಆಕಾಶವೇ ತಲೆ ಮೇಲೆ ಬಿದ್ದಂತೆ ಕುಳಿತಿರೊ ರೈತರು. ಬಾಯಿ ತೆರೆದು ನಿಂತಿರೋ ಭೂಮಿ, ಇವೆಲ್ಲ ದೃಶ್ಯಗಳನ್ನು ನೋಡಿದ್ರೆ ಬರಗಾಲ ಪರಿಸ್ಥಿತಿ ನಿರ್ಮಾಣ ಆಗಿರುವಂತಹ ಭಾವನೆ ಮೂಡುತ್ತದೆ. ಇಲ್ಲಿ ಬರಗಾಲದಂತಹ ಪರಿಸ್ಥಿತಿ ಕಂಡುಬರಲು ಜೆಸ್ಕಾಂ ಅಧಿಕಾರಿಗಳೇ ಮುಖ್ಯ ಕಾರಣ ಎನ್ನುತ್ತಾರೆ ರೈತರು.

ಎರಡು ವಾರಗಳ ಹಿಂದೆ ಮಳೆಯಾದಾಗ ಇಲ್ಲಿನ ರೈತರೆಲ್ಲ ಒಂದು ಎಕರೆಗೆ ಸುಮಾರು 8 ಸಾವಿರ ರೂಪಾಯಿ ಖರ್ಚು ಮಾಡಿ ಭತ್ತ ನಾಟಿ ಮಾಡಿದ್ದಾರೆ. ಭತ್ತ ನಾಟಿ ಮಾಡಿ ಹದಿನೈದು ದಿನ ಕಳೆದಿವೆ.

‘ಭೂಮಿ ಒಣಗಿ ಬಾಯಿ ಬಿಡ್ತಾಯಿದೆ. ಕರೆಂಟ್ ಕೊಡಿ, ನಮ್ಮ ಬೆಳೆಗೆ ನೀರು ಹಾಯಿಸಬೇಕು’ ಅಂತ ಇಲ್ಲಿನ ರೈತರು ಅಂಗಲಾಚಿದರೂ ಜೆಸ್ಕಾಂ ಅಧಿಕಾರಿಗಳು ಮಾತ್ರ ಇವರ ಬೇಡಿಕೆ ಈಡೇರಿಸುತ್ತಿಲ್ಲ. ಪಕ್ಕದಲ್ಲಿ ಭೀಮಾ ನದಿ ತುಂಬಿ ಹರಿಯುತ್ತಿದ್ದರೂ ಪ್ರತಿ ಗ್ರಾಮದಲ್ಲಿ 150 ರಿಂದ 200 ಎಕರೆಯಷ್ಟು ಬೆಳೆ ಒಣಗಿ ಹೋಗುತ್ತಿದೆ.

‘ವಿದ್ಯುತ್ ಬಗ್ಗೆ ವಿಚಾರಿಸೋಕೆ ಫೋನ್ ಮಾಡಿದರೆ ಜೆಸ್ಕಾಂ ಅಧಿಕಾರಿಗಳ ಫೋನ್ ಸ್ವಿಚ್‌ಆಫ್‌ ಆಗಿರುತ್ತವೆ. ವಡಗೇರಾ ಕಚೇರಿಗೆ ಹೋಗಿ ಕೇಳಿದರೆ, ಹೊರಗೆ ನಿಲ್ಲಿಸಿ ನಮಗೇನೂ ಗೊತ್ತಿಲ್ಲ. ನೀವು ಏನಾದರೂ ಮಾಡಿಕೊಳ್ಳಿ. ಬೇಕಾದರೆ ಅರ್ಜಿ ಕೊಟ್ಟು ನಮ್ಮನ್ನು ಸಸ್ಪೆಂಡ್ ಮಾಡಿಸಿ ಎಂದು ಹೇಳುತ್ತಾರೆ. ಹೀಗಾದರೆ ನಾವೆಲ್ಲ ಬದುಕೋದು ಹೇಗೆ’ ಎಂದು ರೈತ ಮಲ್ಲಯ್ಯ ಪೂಜಾರಿ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

’ವಡಗೇರಾ ವಿಭಾಗೀಯ ಕೇಂದ್ರ ದಲ್ಲಿ ಲೈನ್‌ಮೆನ್ ಸಿಬ್ಬಂದಿ ಕೊರತೆ ಇದೆ. ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಇನ್ನೂ ಸ್ವಲ್ಪ ದಿನದಲ್ಲಿ ಲೈನ್‌ಮೆನ್‌ಗಳನ್ನು ನೇಮಿಸಿ ಸಮಸ್ಯೆ ಪರಿಹರಿಸಲಾಗುತ್ತದೆ‘ ಎಂದು ಶಹಾಪುರ ಎಇಇ ಶಾಂತಪ್ಪ ಪೂಜಾರಿ ಹೇಳಿದರು.

’ವಿದ್ಯುತ್ ಪೂರೈಕೆ ಸಮಸ್ಯೆಯಿಂದ ಭತ್ತದ ಗದ್ದೆಗಳು ಒಣಗುತ್ತಿರುವುದು ನಮ್ಮ ಗಮನಕ್ಕೆ ಬಂದಲ್ಲಿ ಅದರ ಬಗ್ಗೆ ವಿವರಣೆ ಪಡೆದು ಜೆಸ್ಕಾಂ ಅಧಿಕಾರಿಗಳಿಗೆ ಹೇಳುತ್ತೇನೆ’ ಎಂದು ವಡಗೇರಾ ತಹಶೀಲ್ದಾರ್ ಸುರೇಶ ಅಂಕಲಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT