ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಳಿ ಜಾತ್ರೆ: ಭೀಮಾ ನದಿಯಲ್ಲಿ ಮಿಂದೆದ್ದ ಭಕ್ತರು

ಸಂಕ್ರಾಂತಿ ಸರ್ವರಿಗೂ ಸಮೃದ್ಧಿ ತರಲಿ: ಗಂಗಾಧರ ಶ್ರೀ
Last Updated 16 ಜನವರಿ 2020, 9:52 IST
ಅಕ್ಷರ ಗಾತ್ರ

ಯಾದಗಿರಿ: ಸಂಕ್ರಾಂತಿ ಹಬ್ಬವು ಎಲ್ಲ ಸಮುದಾಯದವರಿಗೆ ಸಮೃದ್ಧಿಯನ್ನು ತರಲಿ ಎಂದು ಅಬ್ಬೆತುಮಕೂರಿನ ಪೀಠಾಧಿಪತಿ ಡಾ.ಗಂಗಾಧರ ಸ್ವಾಮೀಜಿ ಹಾರೈಸಿದರು.

ಮಕರ ಸಂಕ್ರಾಂತಿ ಹಬ್ಬದ ನಿಮಿತ್ತ ಮಠದ ವತಿಯಿಂದ ಅಬ್ಬೆತುಮಕೂರಿನ ಸೀಮಾಂತರದ ಭೀಮಾ ನದಿಯ ತಟದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹೊಳಿ ಜಾತ್ರೆಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ರೈತ ಉತ್ತಿ ಬಿತ್ತಿ ಬೆಳೆದ ಫಸಲನ್ನು ರಾಶಿ ಮಾಡಿಕೊಳ್ಳುವ ಸಂದರ್ಭದಲ್ಲಿ ಬರುವ ಸಂಕ್ರಾಂತಿ ವಿಶೇಷ ಮಹತ್ವವನ್ನು ಪಡೆದಿದೆ. ಇದು ರೈತರಿಗೆ ಸಮೃದ್ಧಿಯನ್ನು ತರುವ ಹಬ್ಬವಾಗಿದೆ ಎಂದರು.

ಇದಕ್ಕೂಮುನ್ನ ಭಕ್ತರು ಶ್ರೀಗಳ ಪಾದುಕೆಗೆ ನಮಸ್ಕರಿಸಿ ನದಿಯ ನೀರನ್ನು ಪ್ರೋಕ್ಷಣೆ ಮಾಡಿಕೊಳ್ಳಲು ಸಾಲುಗಟ್ಟಿ ನಿಂತಿದ್ದರು. ಇದಾದ ನಂತರಹೂವಿನಿಂದ ಅಲಂಕೃತವಾದ ತೆಪ್ಪದಲ್ಲಿ ಶ್ರೀಗಳು ಭೀಮಾ ನದಿಯ ಮಧ್ಯಭಾಗಕ್ಕೆ ತೆರಳಿ ಪುಣ್ಯ ಸ್ನಾನ ಮಾಡಿ ನಾಡಿಗೆ ಒಳಿತಾಗಲಿ ಎಂದು ಪ್ರಾರ್ಥಿಸಿ ಗಂಗಾದೇವಿಗೆ ವಿಶೇಷ ಪೂಜೆ ನೆರವೇರಿಸಿದರು. ಈ ವೇಳೆ ನದಿಯ ಮಧ್ಯದಲ್ಲಿ ಬಾಣ ಬಿರುಸು ಭಕ್ತರನ್ನು ಆಕರ್ಷಿಸಿದವು. ಡ್ರೋಣ್‌ ಕ್ಯಾಮೆರಾ ಮೂಲಕ ಚಿತ್ರೀಕರಣ ಮಾಡಿದ್ದು ವಿಶೇಷವಾಗಿತ್ತು.

ಶ್ರೀಗಳು ದಡಕ್ಕೆ ಆಗಮಿಸಿದ ಬಳಿಕ ಭಕ್ತರು ಪಾದಪೂಜೆ ನೆರವೇರಿಸಿದರು. ನಂತರ ಶ್ರೀಗಳು ಗಂಗಾ ಮಾತೆಗೆ ಸೀರೆ ಉಡಿಸುವುದರ ಮೂಲಕ ಉಡಿ ತುಂಬುವ ಕಾರ್ಯಕ್ರಮ ನಡೆಸಿಕೊಟ್ಟರು.

ದೋರನಹಳ್ಳಿ ವೀರಮಹಾಂತ ಶಿವಾಚಾರ್ಯರು, ದೇವಾಪುರದ ಶ್ರೀಗಳು, ಪ್ರಮುಖರಾದ ಎಸ್.ಎನ್ ಮಿಂಚನಾಳ, ರಾಮಶೆಟ್ಟೆಪ್ಪ ಹುಗ್ಗಿ, ಹನುಮಾನ ಸೇಠ ಸುರಪುರ, ಡಾ.ಶರಣಬಸವ ಎಲ್ಹೇರಿ ಉಪಸ್ಥಿತರಿದ್ದರು. ಕಲಬುರ್ಗಿ, ಸೇಡಂ, ಚಿತ್ತಾಪುರ, ವಿಜಯಪುರ, ಸಿಂದಗಿ, ಮಾನ್ವಿ, ಸಿಂಧನೂರು, ರಾಯಚೂರು, ತೆಲಾಂಗಣ, ಮಹಾರಾಷ್ಟ್ರದಿಂದಲೂ ಅನೇಕ ಭಕ್ತರುಆಗಮಿಸಿದ್ದರು.

ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.ಸಜ್ಜೆ ರೊಟ್ಟಿ, ಶೆಂಗಾ ಹೋಳಿಗೆ, ವಿವಿಧ ಕಾಳುಗಳ ಪಲ್ಯ, ಶೇಂಗಾ ಹಿಂಡಿ, ಬಜ್ಜಿ, ಜಿಲೇಬಿ ಪಲಾವ್‌, ಸುಸಲಾ ಹೀಗೆ ವಿವಿಧ ಬಗೆಯ ಭಕ್ಷ್ಯ ಸವಿದರು.

***

ದೇಶ ಸರ್ವಧರ್ಮಗಳ ನಾಡು.ರೈತರುಚೆನ್ನಾಗಿದ್ದರೆ ನಾಡೆಲ್ಲ ಚೆನ್ನಾಗಿರುತ್ತದೆ. ಆತನ ಬದುಕಿನ ಬೆಳಕಾಗಿ ಈ ಹಬ್ಬ ಸಂಭ್ರಮವನ್ನು ತರುವಂತಾಗಲಿ. ಈ ಹಬ್ಬ ರೈತ ಸಮುದಾಯಕ್ಕೆ ಒಳಿತು ಮಾಡಲಿ.
ಗಂಗಾಧರ ಸ್ವಾಮೀಜಿ, ಅಬ್ಬೆತುಮಕೂರಿನ ಪೀಠಾಧಿಪತಿ

ಸೂರ್ಯ ಮಕರ ರಾಶಿಯನ್ನು ಪ್ರವೇಶಿಸುವ ಸಂದರ್ಭದಲ್ಲಿ ಸಂಕ್ರಾಂತಿ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಅಬ್ಬೆತುಮಕೂರು ಮಠದಿಂದ ಭೀಮಾ ನದಿ ತಟದಲ್ಲಿ ವಿಶೇವವಾಗಿ ಆಚರಿಸಲಾಗುತ್ತಿದೆ.

- ಡಾ. ಸುಭಾಶ್ಚಂದ್ರ ಕೌಲಗಿ, ಮಠದ ಮಾಧ್ಯಮ ವಕ್ತಾರ‌

****

ನಾನು ಪ್ರತಿವರ್ಷದಂತೆ ಈ ವರ್ಷವೂ ಜಾತ್ರೆಗೆ ಬಂದಿದ್ದೇನೆ. ಭೀಮಾನದಿಯಲ್ಲಿ ಪುಣ್ಯ ಸ್ಥಾನ ಮಾಡಿ ಶ್ರೀಗಳ ದರ್ಶನ ಮಾಡಿಕೊಂಡಿದ್ದೇವೆ. ಇದೊಂದು ವಿಶಿಷ್ಟ ಜಾತ್ರೆಯಾಗಿದೆ.

- ಸುಮಂಗಲಾ ಶಾಬಾದಿ, ಭಕ್ತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT