ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂಆರ್‌ ತಂಡ ಭೇಟಿಗಾಗಿ ‘ಆಸ್ಪತ್ರೆಗಳಿಗೆ ಸಿಂಗಾರ’

ಡಿಎಚ್‌ಒ ಕಚೇರಿಯಲ್ಲಿ ನೂತನ ನಾಮಫಲಕ ಅಳವಡಿಕೆ, ಆಸ್ಪತ್ರೆಗಳಲ್ಲಿ ಬಣ್ಣದ ತೇಪೆ
Last Updated 12 ನವೆಂಬರ್ 2021, 3:59 IST
ಅಕ್ಷರ ಗಾತ್ರ

ಯಾದಗಿರಿ: ಕಾಮನ್‌ ರೀವಿವ್‌ ಮಿಷನ್‌ (ಸಿಆರ್‌ಎಂ) ಕೇಂದ್ರ ತಂಡ ಜಿಲ್ಲೆಗೆ ಶುಕ್ರವಾರ ಆಗಮಿಸಲಿದ್ದು, ಆಸ್ಪತ್ರೆಗಳು ಅಧಿಕಾರಿಗಳ ಬರುವಿಕೆಗಾಗಿ ಸಿಂಗಾರಗೊಂಡಿವೆ.

ಜಿಲ್ಲೆಯೂ ಮಹತ್ವಾಕಾಂಕ್ಷಿ ಜಿಲ್ಲೆಯಾಗಿದ್ದರಿಂದ ಕೇಂದ್ರದಿಂದ ಅನುದಾನ ಬಂದಿದೆ. ಸಮರ್ಪಕವಾಗಿ ಅನುದಾನ ಬಳಕೆಯಾಗುತ್ತಿದೆಯೇ ಎನ್ನುವುದು ಸೇರಿದಂತೆ ವಿವಿಧ ಆಯಾಮಗಳಲ್ಲಿ ಪರಿಶೀಲನೆ ಮಾಡಲಾಗುತ್ತಿದೆ ಎನ್ನಲಾಗಿದೆ.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ, ಔಷಧಿ ಉಗ್ರಾಣ, ಹಳೆ ಜಿಲ್ಲಾಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳನ್ನು ಸುಣ್ಣ ಬಣ್ಣ ಬಳಿದು ಸಿಂಗಾರಗೊಳಿಸಲಾಗಿದೆ. ಆಸನಗಳನ್ನು ಸಿದ್ಧ ಮಾಡಲಾಗುತ್ತಿದೆ. ಇದು ಸಾರ್ವಜನಿಕರ ಆಕ್ಷೇಪಕ್ಕೆ ಕಾರಣವಾಗಿದೆ.

‘ಅಧಿಕಾರಿಗಳ ತಂಡ ಬರುತ್ತದೆ ಎನ್ನುವ ಕಾರಣಕ್ಕಾಗಿ ಆಸ್ಪತ್ರೆಗಳನ್ನು ಶುಚಿಗೊಳಿಸಲಾಗಿದೆ. ಸುಣ್ಣ ಬಣ್ಣ, ವಿವಿಧ ಕಾಮಗಾರಿ ಭರದಿಂದ ಮಾಡಲಾಗುತ್ತಿದೆ. ಪಾಳುಬಿದ್ದ ಕಟ್ಟಡಗಳು ಈಗ ಲಕಲಕ ಹೊಳೆಯುವಂತೆ ಆಗಿದೆ. ಅಧಿಕಾರಿಗಳು ಬರುತ್ತಾರೆಂದ ಮಾತ್ರಕ್ಕೆ ಯಾಕೆ ಈ ರೀತಿ ಮಾಡಲಾಗುತ್ತಿದೆ’ ಎಂದು ನಗರ ನಿವಾಸಿ ಬಸವರಾಜ ಪಾಟೀಲ ಪ್ರಶ್ನಿಸಿದ್ದಾರೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಬಳಿ ಔಷಧಿ ಉಗ್ರಾಣದ ಹೆಸರು ಬ್ಯಾನರ್‌ ಅಳವಡಿಕೆ ಮಾಡಲಾಗಿದೆ. ಒಳಗಡೆ ರ್‍ಯಾಕ್‌ ಸೇರಿದಂತೆ ಸುಸಜ್ಜಿತವಾಗಿ ಮಾಡಲಾಗಿದೆ. ಔಷಧಿಗಳನ್ನು ಒಪ್ಪ ಓರಣವಾಗಿ ಇಡಲಾಗಿದೆ. ಈ ಹಿಂದೆ ಎಲ್ಲಿ ಬೇಕೊ ಅಲ್ಲಿ ಬಿಸಾಡಲಾಗಿತ್ತು. ಆವರಣದೊಳಗೆ ವಿವಿಧ ಜಾತಿಯ ಸಸಿಗಳನ್ನು ನೆಡಲಾಗಿದೆ. ಇವೆಲ್ಲ ತೋರಿಕೆಗಾಗಿ ಮಾಡಲಾಗುತ್ತಿದೆ. ತಂಡ ಬರುವಿಕೆಗಾಗಿ ಇದೆಲ್ಲ ಮಾಡಲಾಗಿದೆ ಎನ್ನುವ ಆಪಾದನೆ ಕೇಳಿ ಬಂದಿದೆ.

ಇನ್ನೂ ಜಿಲ್ಲಾಸ್ಪತ್ರೆಯಲ್ಲಿಯೂ ಆವರಣದಲ್ಲಿ ಸ್ವಚ್ಛತೆ ಕಾಪಾಡಲಾಗಿದೆ. ಕಸ ಗುಡಿಸಿ ಸ್ವಚ್ಛವಾಗಿ ಇಟ್ಟುಕೊಳ್ಳಲಾಗಿದೆ. ಅಲ್ಲಲ್ಲಿ ಬಣ್ಣ ಬಳಿಯುವ ಮೂಲಕ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ.

ಡಿ ಗ್ರೂಪ್‌ ನೌಕರರು ಬಿಳಿ ಸಮವಸ್ತ್ರ, ಕುತ್ತಿಗೆಯಲ್ಲಿ ಗುರುತಿನ ಚೀಟಿ ಹಾಕಿಕೊಂಡು ತಿರುಗಾಡುತ್ತಿದ್ದಾರೆ. ಮುಂಚೆ ಸಮವಸ್ತ್ರ ಇಲ್ಲದೇ ಕೆಲಸ ಮಾಡುತ್ತಿದ್ದರು. ಅಲ್ಲದೇ ಇಂಥ ಆಸ್ಪತ್ರೆಗಳಿಗೆ ಅಧಿಕಾರಿಗಳು ಭೇಟಿ ನೀಡಲು ಗುರುತು ಮಾಡಲಾಗಿದೆ ಎನ್ನಲಾಗಿದೆ.

ಕ್ಷೇಮ ಕೇಂದ್ರಗಳಿಗೆ ಭೇಟಿ ನೀಡಲಿ:

ಕೇಂದ್ರದ ಅಧಿಕಾರಿಗಳು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು. ಹಲವಾರು ಆಸ್ಪತ್ರೆಗಳಲ್ಲಿ ಮೂಲ ಸೌಕರ್ಯಗಳೇ ಇಲ್ಲ. ಅಂಥವುಗಳನ್ನು ಪರಿಶೀಲನೆ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶಂಕ್ರಣ್ಣ ವಣಿಕ್ಯಾಳ ಆಗ್ರಹಿಸಿದ್ದಾರೆ.

***

ಅಧಿಕಾರಿಗಳ ತಂಡ ಭೇಟಿ ನೀಡುತ್ತದೆ ಎನ್ನುವ ಕಾರಣಕ್ಕೆ ಸ್ವಚ್ಛತೆ ಮಾಡುತ್ತಿಲ್ಲ. ಕೋವಿಡ್‌ ನಂತರ ಈಗ ಎಲ್ಲ ಕಡೆ ಸ್ವಚ್ಛತೆ ಕಾಪಾಡಲಾಗುತ್ತಿದೆ
ಡಾ.ಇಂದುಮತಿ ಕಾಮಶೆಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

***

ಸಿಆರ್‌ಎಂ ತಂಡ ಅಧಿಕಾರಿಗಳು ಹೋಬಳಿ, ತಾಲ್ಲೂಕು ಕೇಂದ್ರಗಳಲ್ಲಿರುವ ಆಸ್ಪತ್ರೆಗಳಿಗೆ ಭೇಟಿ ನೀಡದೇ ಗ್ರಾಮಾಂತರ ಭಾಗದ ಆಸ್ಪತ್ರೆಗಳನ್ನು ಪರಿಶೀಲನೆ ಮಾಡಬೇಕು
ಶಂಕ್ರಣ್ಣ ವಣಿಕ್ಯಾಳ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT