ಶುಕ್ರವಾರ, ಅಕ್ಟೋಬರ್ 2, 2020
21 °C
ಶಹಾಪುರ- ದೇವದುರ್ಗ ರಸ್ತೆ ಸಂಚಾರ ಸ್ಥಗಿತ

ಯಾದಗಿರಿ | 23 ಹಳ್ಳಿಗಳಲ್ಲಿ ಮತ್ತಷ್ಟು ಆತಂಕ

ಟಿ.ನಾಗೇಂದ್ರ/ ದೇವಿಂದ್ರ ಕ್ಯಾತನಾಳ Updated:

ಅಕ್ಷರ ಗಾತ್ರ : | |

Prajavani

ಶಹಾಪುರ/ ವಡಗೇರಾ: ಬಸವಸಾಗರದಿಂದ ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ಕೃಷ್ಣಾ ನದಿ ದಂಡೆಯ 23 ಹಳ್ಳಿಗಳ ನಿವಾಸಿಗಳಿಗೆ ಶನಿವಾರ ಮತ್ತಷ್ಟು ಆತಂಕ ಹೆಚ್ಚಿದೆ.

ಕೊಳ್ಳೂರ ಸೇತುವೆ ನದಿ ತಟದಿಂದ ಕೆಳಗಡೆಯಿದೆ. ತುಸು ಹೆಚ್ಚಿನ ನೀರು ಬಂದರೆ ಮುಳುಗಡೆಯಾಗುವುದು ನಾವು ಪ್ರತಿ ಬಾರಿ ಕಾಣುತ್ತೇವೆ. ಆದರೆ ಗೇಟ್ ಎತ್ತರಿಸುವ ಬಗ್ಗೆ ಯಾವುದೇ ಅಧಿಕಾರಿ ಹಾಗೂ ಜನಪ್ರತಿನಿಧಿಗಳು ಗಮನ ಹರಿಸುತ್ತಿಲ್ಲ. ಪ್ರವಾಹದ ಸಂದರ್ಭದಲ್ಲಿ ಭೇಟಿ ನೀಡುವುದು ಕಾಯಕವಾಗಿದೆ. ಸಮಸ್ಯೆ ಪರಿಹಾರಕ್ಕೆ ಯಾರೂ ಮುಂದಾಗುತ್ತಿಲ್ಲ ಎಂದು ಕೃಷ್ಣಾ ನದಿ ದಂಡೆಯ ಜನತೆ ಆರೋಪಿಸಿದ್ದಾರೆ.

ನಾರಾಯಣಪುರ ಬಸವಸಾಗರದಿಂದ 2.20 ಲಕ್ಷ ಕ್ಯುಸೆಕ್‌ ನೀರು ಕೃಷ್ಣಾ ನದಿಗೆ ಬಿಡಲಾಗಿದೆ. ತಾಲ್ಲೂಕಿನ ಕೊಳ್ಳೂರ(ಎಂ) ಗ್ರಾಮದ ಬಳಿ ಸೇತುವೆ ಮುಳುಗಡೆಯ ಭೀತಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಶಹಾಪುರ- ದೇವದುರ್ಗ ರಾಜ್ಯ ಹೆದ್ದಾರಿಯಲ್ಲಿ ಸಂಚಾರವನ್ನು ಸ್ಥಗಿತಗೊಳಿಸಿದೆ ಎಂದು ಶಹಾಪುರ ಸಾರಿಗೆ ಘಟಕದ ವ್ಯವಸ್ಥಾಪಕ ಅಶೋಕ ಭೋವಿ ತಿಳಿಸಿದ್ದಾರೆ.

ಶಹಾಪುರ-ರಾಯಚೂರಿಗೆ ರಸ್ತೆ ಮೂಲಕ ತೆರಳಲು ಪರ್ಯಾಯವಾಗಿ ಗೂಗಲ್ ಬ್ಯಾರೇಜ್ ಮೂಲಕ ಗೊಬ್ಬುರದಿಂದ ರಾಯಚೂರಿಗೆ ಬಸ್ ಸಂಚರಿಸುತ್ತಿವೆ. ಆದರೆ ದೇವದುರ್ಗ ತಾಲ್ಲೂಕಿಗೆ ಸುರಪುರ ತಾಲ್ಲೂಕಿನ ತಿಂಥಣಿ ಬ್ರಿಜ್ ಮೂಲಕ ಸಂಚರಿಸುವಂತೆ ಆಗಿದೆ. ಇದರಿಂದ 45 ಕಿ.ಮೀ ಸುತ್ತುವರಿಯುವ ಸ್ಥಿತಿ ಬಂದಿದೆ. ನಮ್ಮ ವಹಿವಾಟು ದೇವದುರ್ಗ ತಾಲ್ಲೂಕಿಗೆ ಇದೆ. ಪ್ರಯಾಣಿಕರು ಪರದಾಡುವಂತೆ ಆಗಿದೆ. ಸೇತುವೆ ಕೆಳಗಡೆ ನೀರು ಹರಿಯುತ್ತಿದ್ದರೂ ಸಂಚಾರ ಬಂದ್ ಮಾಡಿದ್ದಾರೆ ಎಂದು ಕೊಳ್ಳೂರ(ಎಂ) ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನದಿ ಬಳಿ ಬ್ಯಾರಿಕೇಡ್: ತಾಲ್ಲೂಕಿನ ಕೊಳ್ಳೂರ(ಎಂ) ಸೇತುವೆ ಬಳಿ ಶಹಾಪುರ ಠಾಣೆಯ ಪೊಲೀಸರು ಸೂಕ್ತ ಪೊಲೀಸ್ ಬಂದೋಬಸ್ತ್‌ ವ್ಯವಸ್ಥೆ ಮಾಡಿ ಬ್ಯಾರಿಕೇಡ್ ಅಳವಡಿಸಿದ್ದಾರೆ. ಸೇತುವೆ ಮೇಲೆ ತೆರಳದಂತೆ ಕಟ್ಟಿಗೆ ಹಾಕಿದ್ದಾರೆ. ಅಲ್ಲದೆ ಹತ್ತಿಗೂಡೂರ ಕ್ರಾಸ್ ಬಳಿ ಮತ್ತೊಂದು ಬ್ಯಾರಿಕೇಡ್ ಹಾಕಿದ್ದು ರಾತ್ರಿ ಸಮಯದಲ್ಲಿ ಭಾರಿ ವಾಹನ ಸಂಚಾರವನ್ನು ನಿಷೇಧಿಸಿದೆ ಎಂದು ಶಹಾಪುರ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಹನುಮರಡ್ಡೆಪ್ಪ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು