ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ನಿರ್ವಹಣೆಯಿಲ್ಲದೇ ಅಂದಗೆಟ್ಟ ಉದ್ಯಾನಗಳು

ಉದ್ಯಾನ ಜಾಗ ಒತ್ತುವರಿ; ನಿರ್ವಹಣೆ ಮರೆತ ಸ್ಥಳೀಯ ಸಂಸ್ಥೆ ಅಧಿಕಾರಿಗಳು
Published 5 ಫೆಬ್ರುವರಿ 2024, 7:02 IST
Last Updated 5 ಫೆಬ್ರುವರಿ 2024, 7:02 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯಾನಗಳ ಕೊರತೆ ಇದೆ. ಉದ್ಯಾನಕ್ಕಾಗಿಯೇ ಸಾಕಷ್ಟು ಅನುದಾನ ಬರುತ್ತಿದ್ದರೂ ಅದನ್ನು ಬೇರೆ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಗಳು ಇವೆ. ಇದು ಉದ್ಯಾನವೋ ಅಥವಾ ತ್ಯಾಜ್ಯ ಸುರಿಯುವ ತಾಣವೋ ಎನ್ನುವಷ್ಟರ ಮಟ್ಟಿಗೆ ಉದ್ಯಾನಗಳು ಹಾಳಾಗಿವೆ ಎನ್ನುವುದು ನಗರ ನಿವಾಸಿಗಳ ದೂರಾಗಿದೆ.

ನಗರದ ಪ್ರತಿಯೊಂದು ಬಡಾವಣೆಯಲ್ಲಿ ಉದ್ಯಾನಕ್ಕಾಗಿ ಜಾಗ ಮೀಸಲೀಡಬೇಕು. ಆದರೆ, ಮೀಸಲಿಟ್ಟ ಜಾಗದಲ್ಲಿ ಉದ್ಯಾನ ನಿರ್ಮಾಣವಾಗಿದಿಯೇ ಹೊರತು ಹಸಿರು ಮಾತ್ರವಿಲ್ಲ.

ನಾಮಕಾವಸ್ತೆ ನಿರ್ಮಾಣ: ಹೊಸ ಬಡಾವಣೆ ಉದಯಿಸುವಾಗ ಲೇ ಔಟ್ ನಕ್ಷೆ ಅನುಮೋದನೆ ಪಡೆಯಲು ಇಂತಿಷ್ಟು ಜಾಗವನ್ನು ಉದ್ಯಾನಕ್ಕಾಗಿ ಮೀಸಲಿಡಲಾಗಿದೆ ಎಂದು ನಮೂದಿಸಿ ನಿವೇಶನಗಳ ಮಾರಾಟದ ಪರವಾನಗಿ ಪಡೆದುಕೊಳ್ಳುತ್ತಾರೆ. ನಂತರದ ದಿನಗಳಲ್ಲಿ ಅದಕ್ಕೆ ಬೈ ನಂಬರ್‌ ನೀಡಿ ಅಕ್ರಮವಾಗಿ ಮಾರಾಟ ಮಾಡುವುದು ಸಾಮಾನ್ಯವಾಗಿದೆ. ಇದನ್ನು ಪ್ರಶ್ನಿಸಿದರೆ ಉಲ್ಟಾ ಧಮ್ಕಿ ಹಾಕಿ ಬಿಡುತ್ತಾರೆ. ಇದರಿಂದ ಉದ್ಯಾನ ಉಳ್ಳವರ ಪಾಲು ಆಗುತ್ತಲಿವೆ. ಸಾರ್ವಜನಿಕ ಉದ್ದೇಶ ಎಂಬುವುದು ನಾಮಕಾವಸ್ತೆಯಾಗಿದೆ ಎನ್ನುತ್ತಾರೆ ನಗರದ ಜನರು.

2015ರ ನವೆಂಬರ್ 22ರಂದು ಉದ್ಘಾಟನೆಗೊಂಡ ಯಾದಗಿರಿ ನಗರದ ಲುಂಬಿನಿ ಉದ್ಯಾನ ಮೂಲ ಸ್ವರೂಪವನ್ನು ಕಳೆದುಕೊಂಡಿದೆ. ಪಾಥ್‌ ವೇ, ವಾಕಿಂಗ್‌ ವೇ, ಅಲಂಕಾರಿಕ ಗಿಡಗಳು ಹಾಳಾಗಿದ್ದು, ಈಗ ಎಲ್ಲ ಕಡೆ ಕಳೆ– ಸಸ್ಯಗಳು ಬೆಳೆದು ನಿಂತಿವೆ. 52 ಎಕರೆ ಪ್ರದೇಶದಲ್ಲಿ ವಿಶಾಲವಾಗಿ ಹರಡಿಕೊಂಡಿರುವ ಉದ್ಯಾನದಲ್ಲಿ ಮಹಿಳಾ ಶೌಚಾಲಯವೂ ಹಾಳಾಗಿದ್ದು, ಶೌಚಕ್ಕೆ ಪರದಾಡಬೇಕಾಗಿದೆ.

ಆಯಾ ನಗರದ ಪ್ರದೇಶದ ಪುರಸಭೆ, ನಗರಸಭೆ, ಪಟ್ಟಣ ಪಂಚಾಯಿತಿ ಪ್ರದೇಶದಲ್ಲಿ ಉದ್ಯಾನ ಜಾಗದ ಬಗ್ಗೆ ಅಧಿಕಾರಿಗಳಿಗೆ ಸಂಪೂರ್ಣವಾಗಿ ಮಾಹಿತಿ ಇರುತ್ತದೆ. ಆದರೆ, ನಂತರದ ದಿನಗಳಲ್ಲಿ ಆಯಾ ಅಧಿಕಾರಿಗಳ ನೆರಳಿನ ಅಡಿಯಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಾರೆ.

ಯಾದಗಿರಿ ನಗರದ ಕನಕ ವೃತ್ತದ ಬಳಿಯ ಉದ್ಯಾನ ನಿರ್ವಹಣೆ ಇಲ್ಲದೇ ಬಳಲುತ್ತಿರುವುದು
ಯಾದಗಿರಿ ನಗರದ ಕನಕ ವೃತ್ತದ ಬಳಿಯ ಉದ್ಯಾನ ನಿರ್ವಹಣೆ ಇಲ್ಲದೇ ಬಳಲುತ್ತಿರುವುದು

ಕೆಲವು ಕಡೆ ಉದ್ಯಾನದಲ್ಲೇ ಶಾಲೆ ಆವರಣ ನಿರ್ಮಿಸಿರುವ ಉದಾಹರಣೆಗಳು ಇವೆ. ಯಾದಗಿರಿ ನಗರಸಭೆ ವ್ಯಾಪ್ತಿಯಲ್ಲಿ 374 ಉದ್ಯಾನಗಳಿವೆ ಎಂಬ ಮಾಹಿತಿ ದಾಖಲೆಗಳಲ್ಲಿದೆ. ಆದರೆ, ಸಮಪರ್ಕವಾಗಿ ಸರ್ವೆ ಮಾಡಿದರೆ ಉದ್ಯಾನಗಳ ನಿಜಬಣ್ಣ ಬಯಲಾಗುತ್ತದೆ.

ಶಹಾಪುರ ನಗರದಲ್ಲಿ ಸುಮಾರು 207 ಉದ್ಯಾನಗಳಿವೆ. ಅದರಲ್ಲಿ ಕೆಲವೊಂದು ಮಾತ್ರ ಸಾರ್ವಜನಿಕ ಉಪಯೋಗಕ್ಕೆ ಇವೆ. ಇನ್ನುಳಿದ ಜಾಗದಲ್ಲಿ ಶಾಲೆ, ದೇಗುಲ, ಆಸ್ಪತ್ರೆ, ಚರ್ಚ್, ಮಸೀದಿ, ಶಾದಿ ಮಹಲ್ ನಿರ್ಮಾಣಗೊಂಡಿವೆ.

ಯಾದಗಿರಿ ನಗರದ ನಜರಾತ್‌ ಕಾಲೊನಿಯ ಉದ್ಯಾನದಲ್ಲಿ ತ್ಯಾಜ್ಯ ಗಿಡಗಳು ಬೆಳೆದಿರುವುದು
ಯಾದಗಿರಿ ನಗರದ ನಜರಾತ್‌ ಕಾಲೊನಿಯ ಉದ್ಯಾನದಲ್ಲಿ ತ್ಯಾಜ್ಯ ಗಿಡಗಳು ಬೆಳೆದಿರುವುದು

‘ತೆರವುಗೊಳಿಸಲು ಮುಂದಾದರೆ ಆಯಾ ಸಮುದಾಯದವರು ಪ್ರತಿಭಟನೆ ಮಾಡಿ ತಡೆದು ನಿಲ್ಲಿಸುತ್ತಾರೆ. ಹಿರಿಯ ಅಧಿಕಾರಿಗಳಿಗೆ ದೂರು ನೀಡಿದರೆ ಯಾವುದೇ ಕ್ರಮ ತೆಗೆದುಕೊಳ್ಳದೆ ಮೌನವಹಿಸುತ್ತಾರೆ. ಅಷ್ಟರಲ್ಲಿ ಸ್ಥಳೀಯ ರಾಜಕೀಯ ಮುಖಂಡರು ಒತ್ತಡ ಹಾಕಿ ಉದ್ಯಾನ ಜಾಗಕ್ಕೆ ಅಡ್ಡಗಾಲು ಹಾಕಿಬಿಡುತ್ತಾರೆ. ಇದರಿಂದ ಉದ್ಯಾನ ಜಾಗ ದಾಖಲೆಯ ನಕ್ಷೆಯಲ್ಲಿ ಮಾತ್ರ ಉಳಿದುಕೊಂಡಿದೆ’ ಎನ್ನುತ್ತಾರೆ ರೈತ ಮುಖಂಡ ಅಶೋಕ ಮಲ್ಲಾಬಾದಿ.

‘ಆಯಾ ನಗರಸಭೆಯ ವ್ಯಾಪ್ತಿಯ ಅಧಿಕಾರಿಗಳು ಸಾರ್ವಜನಿಕ ಆಸ್ತಿ ಸಂರಕ್ಷಣೆಗಾಗಿ ಉದ್ಯಾನದ ಜಾಗದ ಸುತ್ತಲೂ ಕಂಪೌಂಡ್‌ ನಿರ್ಮಿಸುವುದು. ಅದರ ಉದ್ದ ಹಾಗೂ ಅಗಲದ ಬಗ್ಗೆ ಮಾಹಿತಿಯನ್ನು ಒಳಗೊಂಡ ನಾಮಫಲಕ ಹಾಕುವುದು ಅಗತ್ಯವಾಗಿದೆ. ಅಲ್ಲದೆ ಉದ್ಯಾನ ಜಾಗದ ಸುತ್ತಲಿನ ನಿವಾಸಿಗರು ಅದರ ಸಂರಕ್ಷಣೆಗೆ ಮುಂದಾಗಿ ಸಸಿಗಳನ್ನು ನೆಡುವ ಕಾರ್ಯಕ್ಕೆ ಮುಂದಾಗಬೇಕು. ಇದರಿಂದ ಬೇಸಿಗೆ ಸಮಯದಲ್ಲಿ ಹಾಗೂ ವಾಯು ವಿಹಾರಕ್ಕೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ಪರಿಸರ ಪ್ರೇಮಿ ಸೈಯದ್‌ ಇಬ್ರಾಹಿಂಸಾಬ್ ಜಮದಾರ್‌.

ಪೂರಕ ವರದಿ: ಟಿ. ನಾಗೇಂದ್ರ, ಅಶೋಕ ಸಾಲವಾಡಗಿ, ಭೀಮಶೇನರಾವ ಕುಲಕರ್ಣಿ, ಎಂ.ಪಿ.ಚಪೆಟ್ಲಾ

ಯಾದಗಿರಿ ನಗರದ ನಜರಾತ್‌ ಕಾಲೊನಿಯ ಉದ್ಯಾನದಲ್ಲಿ ತ್ಯಾಜ್ಯ ಗಿಡಗಳು ಬೆಳೆದಿರುವುದು
ಯಾದಗಿರಿ ನಗರದ ನಜರಾತ್‌ ಕಾಲೊನಿಯ ಉದ್ಯಾನದಲ್ಲಿ ತ್ಯಾಜ್ಯ ಗಿಡಗಳು ಬೆಳೆದಿರುವುದು
ಟೇಲರ್ ಸೀಟ್ ಪ್ರದೇಶದಲ್ಲಿ ನಗರಸಭೆ ವತಿಯಿಂದ ಸುಂದರ ಉದ್ಯಾನ ನಿರ್ಮಿಸಲಾಗುತ್ತಿದೆ. ಶೀಘ್ರದಲ್ಲಿ ಕಾಮಗಾರಿ ಆರಂಭಿಸಲಾಗುವುದು
ಜೀವನ ಕಟ್ಟಿಮನಿ ಪೌರಾಯುಕ್ತ ನಗರಸಭೆ ಸುರಪುರ
ಕುಟುಂಬದೊಂದಿಗೆ ಪಿಕ್‌ನಿಕ್ ಹೋಗಲು ವಾಯುವಿಹಾರ ಮಾಡಲು ಮಕ್ಕಳನ್ನು ಆಡಿಸಲು ಆಟಿಕೆಗಳುಳ್ಳ ಸುಸಜ್ಜಿತ ಉದ್ಯಾನ ನಿರ್ಮಾಣದ ಅಗತ್ಯ ಇದೆ
ಉಸ್ತಾದ ವಜಾಹತ್ ಹುಸೇನ್ ಜೆಡಿಎಸ್ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ
ಉದ್ಯಾನವನ ಪಕ್ಕದಲ್ಲಿನ ಚರಂಡಿಯಲ್ಲೇ ಹೋಟೆಲ್‌ ತ್ಯಾಜ್ಯ ಸುರಿಯುವುದರಿಂದ ದುರ್ನಾತ ತುಂಬಿದೆ. ವಾಕಿಂಗ್‌ ಅಥವಾ ಮಕ್ಕಳನ್ನು ಆಡಿಸಲು ಕರೆತಂದರೆ ವಾಸನೆಯಿಂದಾಗಿ ನಿಲ್ಲಲಾಗದು
ಮಹಾಲಕ್ಷ್ಮೀ ಗೃಹಿಣಿ ಗುರುಮಠಕಲ್‌
ನಮ್ಮಲ್ಲಿನ ಉದ್ಯಾನಗಳು ಮಳೆಗಾಲದಲ್ಲಿ ಕೆಸರು ಬೇಸಿಗೆಗೆ ಬರಡಾಗಿರುತ್ತವೆ. ಸೂಕ್ತ ನಿರ್ವಹಣೆಯಿಲ್ಲ‍ದ್ದಕ್ಕೆ ಹೀಗೆ. 'ಲೆಕ್ಕಕ್ಕಿವೆ ಆದರೆ ಆಟಕ್ಕಿಲ್ಲ' ನಮ್ಮೂರ ಉದ್ಯಾನಗಳು
ಸಂಜು ಅಳೆಗಾರ ಸಾಮಾಜಿಕ ಕಾರ್ಯಕರ್ತ ಗುರುಮಠಕಲ್
ಜಿಲ್ಲೆಯ ವಿವಿಧ ನಗರ ಹಾಗೂ ಪಟ್ಟಣಗಳಲ್ಲಿ ಉದ್ಯಾನವನಕ್ಕಾಗಿ ನಿಗದಿಯಾಗಿರುವ ಸ್ಥಳದಲ್ಲಿ ಉದ್ಯಾನವನ್ನು ಅಭಿವೃದ್ಧಿಪಡಿಸುವ ಜೊತೆಯಲ್ಲಿ ಸಾರ್ವಜನಿಕರಿಗೆ ಸೂಕ್ತ ಸೌಲಭ್ಯವನ್ನು ಕಲ್ಪಿಸಲು ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ
ಮಹಾದೇವಿ ಬೇನಾಳಮಠ ರಾಜ್ಯ ರೈತ ಸಂಘದ ರಾಜ್ಯ ಸದಸ್ಯ
ವಿವಿಧ ವಾರ್ಡ್‌ನ ಹೊಸ ಲೇಔಟ್‌ಗಳಲ್ಲಿ ಉದ್ಯಾನಕ್ಕಾಗಿ ಸ್ಥಳ ಕಾಯ್ದಿರಿಸಲಾಗುತ್ತದೆ. ಅವುಗಳಲ್ಲಿ ಲಭ್ಯವಿರುವ ಸ್ಥಳವನ್ನು ಅಧಿಕಾರಿಗಳು ತಂತಿ ಬೇಲಿ ಹಾಕಿ ಸೂಕ್ತ ರಕ್ಷಣೆ ಮಾಡಬೇಕು
ಬಸವರಾಜ ಮೇಲಿನಮನಿ ನಿವಾಸಿ
ಉದ್ಯಾನ ಸಾರ್ವಜನಿಕರ ಆಸ್ತಿ
ಶಹಾಪುರ: ಆಯಾ ಬಡಾವಣೆಯಲ್ಲಿ ಲೇ ಔಟ್ ನಕ್ಷೆ ಸಿದ್ಧಪಡಿಸುವಾಗ ಉದ್ಯಾನ ಜಾಗಕ್ಕಾಗಿ ಮೀಸಲಿಟ್ಟ ಜಾಗವು ಅದು ಸಾರ್ವಜನಿಕ ಆಸ್ತಿಯಾಗಿರುತ್ತದೆ. ಯಾವುದೇ ಕಾರಣಕ್ಕೂ ಅಲ್ಲಿ ಯಾವುದೇ ಕಟ್ಟಡ ದೇಗುಲ ಮಸೀದಿ ನಿರ್ಮಿಸುವಂತಿಲ್ಲ. ಉದ್ಯಾಗ ಜಾಗ ಸಂರಕ್ಷಣೆ ಕಾಯ್ದೆ ಜಾರಿಯಲ್ಲಿ ಇದೆ. ಹೆಚ್ಚಿನ ಜನರಿಗೆ ಇದರ ಅರಿವು ಇಲ್ಲ ಎನ್ನುತ್ತಾರೆ ವಕೀಲ ಯೂಸೂಫ್ ಸಿದ್ದಕಿ. ಉದ್ಯಾನ ಜಾಗವನ್ನು ಮಾರಾಟ ಇಲ್ಲವೆ ಪರಭಾರೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಹೊಸದಾಗಿ ನಿರ್ಮಾಣಗೊಂಡಿರುವ ಲೇ ಔಟ್ ನಕ್ಷೆಯನ್ನು ಅಲ್ಲಿನ ನಿವಾಸಿಗರು ಪಡೆದುಕೊಂಡು ಕಾನೂನು ಸಮ್ಮತವಾಗಿ ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಿಟ್ಟರುವ ಉದ್ಯಾನ ಜಾಗವನ್ನು ಜನರ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಬೇಕು ಎಂಬ ಸಲಹೆಯನ್ನು ಅವರು ನೀಡುತ್ತಾರೆ.
ಸುರಪುರದ ಮಹಿಬೂಬ ಸುಬಾನಿ ದರ್ಗಾ ಏರಿಯಾ ಬಡಾವಣೆಯಲ್ಲಿರುವ ಉದ್ಯಾನದ ನಿರ್ವಹಣೆ ಇಲ್ಲ
ಸುರಪುರದ ಮಹಿಬೂಬ ಸುಬಾನಿ ದರ್ಗಾ ಏರಿಯಾ ಬಡಾವಣೆಯಲ್ಲಿರುವ ಉದ್ಯಾನದ ನಿರ್ವಹಣೆ ಇಲ್ಲ
ನಿರ್ವಹಣೆ ಕೊರತೆ
ಸುರಪುರ: ನಗರಸಭೆ ವ್ಯಾಪ್ತಿಯಲ್ಲಿ 15 ಉದ್ಯಾನಗಳಿವೆ. ಅದರಲ್ಲಿ 9 ಉದ್ಯಾನಗಳು ಪರವಾಗಿಲ್ಲ ಎಂಬಂತೆ ಜೀವಂತವಾಗಿವೆ. ಉಳಿದ 6 ಉದ್ಯಾನಗಳು ಲೆಕ್ಕಕ್ಕೆ ಇಲ್ಲ. ಕೆಲ ಉದ್ಯಾನಗಳಲ್ಲಿ ಕೊಳವೆಬಾವಿ ಹಾಕಿಸಿಲ್ಲ. ಒಟ್ಟು 23 ಲೇಔಟ್‌ಗಳು ಇವೆ. ನಿಯಮದ ಪ್ರಕಾರ ಅಲ್ಲಿ ಉದ್ಯಾನಕ್ಕೆ ಸ್ಥಳ ಬಿಡಲಾಗಿದೆ. ಬಹುತೇಕ ಕಡೆ ಉದ್ಯಾನ ಮಾಡಿಲ್ಲ. ಅರಣ್ಯ ಇಲಾಖೆಯ ಎಬಿಸಿಡಿ ಉದ್ಯಾನ ಉತ್ತಮ ನಿರ್ವಹಣೆ ಹೊಂದಿದ್ದು ಮಕ್ಕಳು ಆಟವಾಡಲು ಆಟಿಕೆಗಳು ಪಿಕ್‌ನಿಕ್‌ಗೆ ವ್ಯವಸ್ಥೆ ಕಲ್ಪಿಸಲಾಗಿದೆ.

‘ಉದ್ಯಾನಗಳ ನಿರ್ವಹಣೆಯಾಗಲಿ’

ಹುಣಸಗಿ: ಪಟ್ಟಣದ ಯುಕೆಪಿ ಕ್ಯಾಂಪ್‌ನಲ್ಲಿರುವ ಉದ್ಯಾನವನ ನಿರ್ವಹಣೆಯ ಜೊತೆಯಲ್ಲಿ ನಿತ್ಯ ಪಟ್ಟಣದ ಜನರಿಗೆ ಅನುಕೂಲವಾಗುವಂತೆ ನಿರ್ವಹಿಸಬೇಕು ಎಂದು ಕ್ಯಾಂಪ್ ನಿವಾಸಿಗಳು ಹೇಳುತ್ತಾರೆ. ಸುಮಾರು 30 ವರ್ಷಗಳಿಂದಲೂ ಯುಕೆಪಿ ಕ್ಯಾಂಪ್‌ನಲ್ಲಿ ಉದ್ಯಾನವಿದ್ದು ನಿರ್ವಹಣೆ ಇರಲಿಲ್ಲ. ಕೆಲವು ವರ್ಷಗಳ ಹಿಂದೆ ಅಂದಾಜು ₹20 ಲಕ್ಷ ವೆಚ್ಚದಲ್ಲಿ ತಂತಿಬೇಲಿ ಅಳವಡಿಸುವ ಜೊತೆಯಲ್ಲಿ ವಾಯು ವಿಹಾರಕ್ಕೆ ಇಲ್ಲಿನ ಜನರಿಗೆ ಸೌಲಭ್ಯ ಕಲ್ಪಿಸಲಾಗಿದೆ. ಇಲ್ಲಿ ಸಾಕಷ್ಟು ಮರ ಗಿಡಗಳು ಹಾಗೂ ಹೂವಿನ ಗಿಡಗಳನ್ನು ಹಚ್ಚಲಾಗಿದ್ದು ಆದರೆ ನಿರ್ವಹಣೆ ಕೊರತೆಯಿಂದ ಕಸ ಎಲ್ಲೆಂದರಲ್ಲಿ ಬೀಳುತ್ತಿದೆ. ಸೂಕ್ತ ನಿರ್ವಹಿಸುವ ಜೊತೆಯಲ್ಲಿ ಇಲ್ಲಿನ ಯುಕೆಪಿ ಕ್ಯಾಂಪ್ ಅಧಿಕಾರಿಗಳು ಕೂಡ ಯುವಕರೊಂದಿಗೆ ಶ್ರಮದಾನದ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡುವುದು ಅಗತ್ಯ ಎಂದು ಅರುಣ ಮಲಗಲದಿನ್ನಿ ಹೇಳಿದರು. ‘ಪಟ್ಟಣದಲ್ಲಿ 2022-23ನೇ ಸಾಲಿನ ಅನುದಾನದಲ್ಲಿ 3 ಸಾವಿರ ಚದರ ಅಡಿ ಉದ್ಯಾನ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಿದ್ರಾಮೇಶ್ವರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT