ಯಾದಗಿರಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅನುದಾನವನ್ನು ನಿಯಮನುಸಾರ ಟೆಂಡರ್ ಕರೆಯದೆ ನೇರವಾಗಿ ಕೆಆರ್‌ಐಡಿಎಲ್ ಮತ್ತು ನಿರ್ಮಿತ ಕೇಂದ್ರಕ್ಕೆ ನೀಡುತ್ತಿರುವುದನ್ನು ತಡೆ ಹಿಡಿದು ಟೆಂಡರ್ ಮೂಲಕ ಗುತ್ತಿಗೆದಾರರಿಗೆ ಅವಕಾಶ ಮಾಡಿ ಕೊಡಬೇಕು ಎಂದು ಜಿಲ್ಲಾ ನೋಂದಾಯಿತ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಸುದರ್ಶನ ನಾಯಕ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಮನವಿ ಪತ್ರ ಸಲ್ಲಿಸಿ ಮಾತನಾಡಿದ ಸುದರ್ಶನ ನಾಯಕ, ಜಿಲ್ಲೆಯ ಶಾಸಕರು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನವನ್ನು ನೇರವಾಗಿ ಕೆಆರ್‌ಐಡಿಎಲ್ ಮತ್ತು ನಿರ್ಮಿತಿ ಕೇಂದ್ರಕ್ಕೆ ನೀಡುತ್ತಿದ್ದು, ಈಗಾಗಲೇ 2024-25 ನೇ ಸಾಲಿನ ಅನುದಾನ ಕೂಡ ಈ ನಿಗಮಗಳಿಗೆ ನೀಡಲಾಗಿದೆ ಎಂದು ಹೇಳಿದರು.
ಕೆಆರ್‌ಐಡಿಎಲ್ ಮತ್ತು ನಿರ್ಮಿತ ಕೇಂದ್ರ ಇಲಾಖೆಯಲ್ಲಿ ಡಾಂಬರ್ ಪ್ಲಾಂಟ್ ಮತ್ತು ಮಷಿನರಿ ಇಲ್ಲ. ಈ ಹಿಂದೆ ಕೊಟ್ಟಿರುವ ಕಾಮಗಾರಿಗಳು ಇಲ್ಲಿಯವರೆಗೆ ಪೂರ್ಣಗೊಂಡಿಲ್ಲ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ ಅತಿ ಹೆಚ್ಚು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಗುತ್ತಿಗೆದಾರರು ಇದ್ದು, ನಾವುಗಳು ಬ್ಯಾಂಕ್ ಮೂಲಕ ಸಾಲ ಮಾಡಿ ಟಿಪ್ಪರ್‌ಗಳು, ಮಷಿನ್, ಡಾಂಬರ್ ಪ್ಲಾಂಟ್ ಖರೀದಿ ಮಾಡಿ, ಬ್ಯಾಂಕ್ ಸಾಲದ ಕಂತುಗಳು ಕಟ್ಟಲಾಗದೇ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ಮುಂದೆ ತಮ್ಮ ಗೋಳು ತೊಡಿಕೊಂಡರು.
ಲೋಕೋಪಯೋಗಿ ಇಲಾಖೆ ಮತ್ತು ಪಂಚಾಯತ್ ರಾಜ್ ಎಂಜಿನಿಯರ್ ಇಲಾಖೆಯಲ್ಲಿ 3054 ಮತ್ತು 5054 ಹಾಗೂ ಅಪೆಂಡಿಕ್ಸ್-ಇ ಈ ಯೋಜನೆಯಡಿ ಅನುದಾನವಿಲ್ಲದೇ ಇದ್ದರೂ ಕೂಡಾ ಗುತ್ತಿಗೆದಾರರಿಗೆ ಕಾಮಗಾರಿಗಳು ಉಳಿಸಿಕೊಂಡಿಲ್ಲ . ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಯನ್ನು ಅವಧಿಯ ಮುಂಚಿತವಾಗಿಯೇ ಸರ್ಕಾರಕ್ಕೆ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಮಾಡಿಕೊಟ್ಟಿದ್ದೇವೆ. ನಿಯಮಾನುಸಾರವಾಗಿ ನಿರ್ಮಿತಿ ಕೇಂದ್ರ ಹಾಗೂ ಕೆಆರ್‌ಐಡಿಎಲ್ ನಿಗಮಕ್ಕೆ ಕೆಕೆಆರ್‌ಡಿಬಿಯ ಅನುದಾನದಲ್ಲಿ ಶೇ 10 ಮಾತ್ರ ಹಣ ನೀಡಬೇಕು ಎಂದು ಸರ್ಕಾರದ ಆದೇಶವಿರುತ್ತದೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅನುದಾನವನ್ನು ಈಗಾಗಲೇ ಕೆಆರ್‌ಐಡಿಎಲ್ ಮತ್ತು ನಿರ್ಮಿತ ಕೇಂದ್ರಕ್ಕೆ ಯಾದಗಿರಿ ಜಿಲ್ಲೆಯ ಶಾಸಕರು ತಮ್ಮ ಅನುಕೂಲಕ್ಕಾಗಿ ನೀಡುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಈಗಾಗಲೇ ಕೊಟ್ಟಿರುವ ಅನುದಾನವನ್ನು ರದ್ದುಪಡಿಸಿ ಲೋಕೋಪಯೋಗಿ ಇಲಾಖೆ ಮತ್ತು ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಗೆ ವಹಿಸಿಕೊಟ್ಟು ಟೆಂಡರ್ ಮೂಲಕ ಕಾಮಗಾರಿಗಳನ್ನು ವಹಿಸಿ ಕೊಡಲು ಜಿಲ್ಲಾ ನೋಂದಾಯಿತ ಗುತ್ತಿಗೆದಾರರ ಸಂಘದ ಎಲ್ಲಾ ಪದಾಧಿಕಾರಿಗಳು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗುತ್ತಿಗೆದಾರರಾದ ಚಿದಾನಂದಪ್ಪ ಕಾಳೆಬಳಗುಂದಿ, ಬಸವರಾಜಪ್ಪ ಗೌಡ ದಳಪತಿ, ಚಂದ್ರಯ್ಯ ಗೌಡ ಗೋಗಿ, ದುರ್ಗಪ್ಪ ಅರಿಕೇರಿ, ಯಂಕಪ್ಪ ವಡಗೇರಾ, ಭೀಮಾಶಂಕರ ಆಲ್ದಾಳ, ಶರಣಪ್ಪ ಹುಲಕಲ್, ಬನ್ನಪ್ಪ ಮೈಲಾಪುರ, ಅಯ್ಯಪ್ಪ ಹಾಲಗೇರ. ಮಲ್ಲಿಕಾರ್ಜುನ ಹೆಡಗಿಮದ್ರಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.