ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಜಿಲ್ಲೆಯಾದ್ಯಂತ ಉತ್ತಮ ವರ್ಷಧಾರೆ

ಕೃಷ್ಣಾ, ಭೀಮಾ ನದಿಗಳಿಗೆ ಹೆಚ್ಚಿದ ಒಳಹರಿವು, ರಸ್ತೆ ಮೇಲೆ ಹರಿದಾಡಿದ ಮಳೆ ನೀರು
Published 4 ಸೆಪ್ಟೆಂಬರ್ 2023, 15:33 IST
Last Updated 4 ಸೆಪ್ಟೆಂಬರ್ 2023, 15:33 IST
ಅಕ್ಷರ ಗಾತ್ರ

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸೋಮವಾರ ಉತ್ತಮ ವರ್ಷಧಾರೆಯಾಗಿದೆ.

ಆಗಸ್ಟ್‌ ತಿಂಗಳಲ್ಲಿ ವಾಡಿಕೆಗಿಂತ ಮಳೆ ಕಡಿಮೆಯಾಗಿದ್ದು, ಸೆಪ್ಟೆಂಬರ್‌ ಮೊದಲ ವಾರದಲ್ಲೇ ಉತ್ತಮ ಮಳೆಯಾಗಿದ್ದರಿಂದ ರೈತರಿಗೆ ಮುಖದಲ್ಲಿ ಸಂತಸ ಉಂಟು ಮಾಡಿದೆ. ಸೋಮವಾರ ಬೆಳಿಗ್ಗೆಯಿಂದ ಜಿಲ್ಲೆಯಲ್ಲಿ ಜಿಟಿಜಿಟಿ ಮಳೆಯಾಗಿದ್ದು, ಜನ ಜೀವನ ಅಸ್ತವ್ಯಸ್ತವಾಯಿತು. ವ್ಯಾಪಾರಿಗಳು, ಪಾದಚಾರಿಗಳು ಮಳೆಯಲ್ಲಿ ಪರದಾಡಿದರು.

ತಾಲ್ಲೂಕು ವ್ಯಾಪ್ತಿಯಲ್ಲಿ ಸುರಿದ ಮಳೆಗೆ 4 ಮನೆಗಳಿಗೆ ಹಾನಿಯಾಗಿದೆ. ದೋರನಹಳ್ಳಿಯಲ್ಲಿ ಮನೆ ಗೋಡೆ ಕುಸಿದಿದೆ.

ರಸ್ತೆ ಮೇಲೆ ಹರಿದ ನೀರು:

ನಗರದ ವಿವಿಧ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ರಸ್ತೆ ಮೇಲೆ ಹರಿದಾಡಿತು. ಲಾಲ್‌ ಬಹದ್ದೂರ್‌ ಶಾಸ್ತ್ರಿ ವೃತ್ತ ಸಮೀಪದ ಅವೈಜ್ಞಾನಿಕ ಕಾಮಗಾರಿಯಿಂದ ರಸ್ತೆ ಮೇಲೆ ನೀರು ನಿಂತುಕೊಳ್ಳುತ್ತಿದೆ. ಸಿಸಿ ರಸ್ತೆಯ ಕಾಮಗಾರಿ ಎತ್ತರಿಸಿದ್ದು, ಇದರಿಂದ ನೀರು ಹರಿಯದೇ ರಸ್ತೆಯಲ್ಲಿಯೇ ನಿಲ್ಲುತ್ತಿದೆ.

ಜಿಲ್ಲೆಯ ವಿವಿಧೆಡೆ ಮಳೆ:

ಸುರಪುರದಲ್ಲಿ ಸೋಮವಾರ ಬೆಳಿಗ್ಗೆ 8 ಗಂಟೆಯಿಂದ 9 ಗಂಟೆಯವರೆಗೆ ಉತ್ತಮ ಮಳೆಯಾಗಿದೆ.

ಶಹಾಪುರ, ಹುಣಸಗಿಯಲ್ಲಿ ಜಿಟಿಜಿಟಿ ಮಳೆಯಾಗಿದೆ.

ಸೋಮವಾರ ಬೆಳಿಗ್ಗೆಯಿಂದ ಸಂಜೆ 7 ಗಂಟೆ ವರೆಗಿನ ಹವಮಾನ ಇಲಾಖೆಯ ಮಾಹಿತಿಯಂತೆ ಯಾದಗಿರಿಯಲ್ಲಿ 6 ಮಿಲಿಮೀಟರ್‌ (ಎಂಎಂ), ಹತ್ತಿಕುಣಿ 4 ಎಂಎಂ, ಶಹಾಪುರ ನಗರದಲ್ಲಿ 22 ಎಂಎಂ, ದೋರನಹಳ್ಳಿಯಲ್ಲಿ 11 ಎಂಎಂಮ ಹುಣಸಗಿಯಲ್ಲಿ 17 ಎಂಎಂ ಮಳೆಯಾಗಿದೆ.

ಎರಡು ನದಿಗಳಿಗೆ ಹೆಚ್ಚಿದ ಒಳಹರಿವು:

ಕೃಷ್ಣಾ ಮತ್ತು ಭೀಮಾ ನದಿಗೆ ಒಳಹರಿವು ಹೆಚ್ಚಳವಾಗಿದ್ದು, ಹೊರಹರಿವು ಹೆಚ್ಚಳವಾಗಿದೆ.

ಯಾದಗಿರಿ– ಗುರುಸಣಗಿ ಬ್ರಿಜ್‌ ಕಂ ಬ್ಯಾರೇಜ್‌ನಿಂದ ಭೀಮಾ ನದಿಗೆ 12,000 ಕ್ಯುಸೆಕ್‌ ನೀರು ಹರಿಸಲಾಗುತ್ತಿದೆ. ಅಲ್ಲದೇ ಒಳಹರಿವು 15,000 ಕ್ಯುಸೆಕ್‌ ಇದೆ.

ಹುಣಸಗಿ ತಾಲ್ಲೂಕಿನ ನಾರಾಯಣಪುರ ಬಸವಸಾಗರ ಜಲಾಶಯಕ್ಕೆ 17,433 ಕ್ಯುಸೆಕ್‌ ನೀರು ಒಳಹರಿವಿದ್ದರೆ, 7,865 ಕ್ಯುಸೆಕ್‌ ನೀರು ಹರಿಸಲಾಗುತ್ತಿದೆ.

ಬೆಳೆಗಳಿಗೆ ಆಸರೆ:

ಕಳೆದ ಎರಡು ದಿನಗಳಿಂದ ಸುರಿದ ಮಳೆ ವಿವಿಧ ಬೆಳೆಗಳಿಗೆ ಆಸರೆಯಾಗಿದೆ. ಹತ್ತಿ, ತೊಗರಿ, ಮೆಣಸಿನಕಾಯಿ ಬೆಳೆಗಳು ಮಳೆಯಿಲ್ಲದೇ ಒಣಗಲು ಆರಂಭಿಸಿದ್ದವು. ಆದರೆ, ಜಿಟಿಜಿಟಿ ಮಳೆಯಿಂದ ಸ್ವಲ್ಪಮಟ್ಟಿಗೆ ಅನುಕೂಲವಾಗಿದೆ.

ಯಾದಗಿರಿಯಲ್ಲಿ ಸುರಿದ ಮಳೆಗೆ ಯುವತಿಯರು ಕೊಡೆ ಹಿಡಿದು ಸಾಗಿದರು
ಯಾದಗಿರಿಯಲ್ಲಿ ಸುರಿದ ಮಳೆಗೆ ಯುವತಿಯರು ಕೊಡೆ ಹಿಡಿದು ಸಾಗಿದರು
ಯಾದಗಿರಿಯಲ್ಲಿ ತಳ್ಳುಗಾಡಿ ವ್ಯಾಪಾರಿಗಳು ಮಳೆಯಿಂದ ರಕ್ಷಣೆಪಡೆಯಲು ತಾಡಪತ್ರಿ ಮೊರೆ ಹೋದರು
ಯಾದಗಿರಿಯಲ್ಲಿ ತಳ್ಳುಗಾಡಿ ವ್ಯಾಪಾರಿಗಳು ಮಳೆಯಿಂದ ರಕ್ಷಣೆಪಡೆಯಲು ತಾಡಪತ್ರಿ ಮೊರೆ ಹೋದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT