ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ | ಜಿಟಿಟಿಸಿ ಕಾಲೇಜು: ವಿದ್ಯಾರ್ಥಿಗಳ ನಡುವೆ ಘರ್ಷಣೆ

Published 19 ಆಗಸ್ಟ್ 2023, 6:18 IST
Last Updated 19 ಆಗಸ್ಟ್ 2023, 6:18 IST
ಅಕ್ಷರ ಗಾತ್ರ

ಯಾದಗಿರಿ: ತಾಲ್ಲೂಕಿನ ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ಕಾಲೇಜು ವಿದ್ಯಾರ್ಥಿಗಳ ನಡುವೆ ನಾಲ್ಕೈದು ದಿನಗಳಿಂದ ಜಗಳ ತೀವ್ರಗೊಂಡು ಎರಡು ಕೋಮುಗಳ ನಡುವಿನ ಸಂಘರ್ಷಕ್ಕೆ ಕಾರಣವಾಗಿದ್ದು, ಪೊಲೀಸರು ಮಧ್ಯ ಪ್ರವೇಶಿಸಿ ಸಂಧಾನ ಮಾಡಿದ್ದಾರೆ.

ಕಾಲೇಜಿನ ಎರಡು ಗುಂಪಿನ ವಿದ್ಯಾರ್ಥಿಗಳ ಮಧ್ಯೆ ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಮೂಡಿದ್ದು, ಜಗಳಕ್ಕೆ ದಾರಿ ಮಾಡಿಕೊಟ್ಟಿತ್ತು. ಹೊಸದಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳಲ್ಲಿ ಗಲಾಟೆ ನಡೆದಿದ್ದು, ಇದು ಗ್ರಾಮಸ್ಥರನ್ನು ಕರೆಸಿಕೊಂಡು ಜಗಳ ಮಾಡಿಸುವಷ್ಟು ಆಗಿದೆ.

ಈ ಬಗ್ಗೆ ಕಾಲೇಜಿನ ಸಿಬ್ಬಂದಿ ಬುಧವಾರ ಬುದ್ದಿವಾದ ಹೇಳಿ ಶಮನಗೊಳಿಸಿದ್ದಾರೆ. ಆದರೆ, ಬೂದಿ ಮುಚ್ಚಿದ ಕೆಂಡದಂತೆ ಆಗಿ ಗುರುವಾರ ಮತ್ತೆ ಜಗಳ ನಡೆದಿದೆ. ಇದರಿಂದ ಕೆಲ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಗಲಾಟೆ ವಿಷಯ ತಿಳಿದು ಪೊಲೀಸರು ಭೇಟಿ ನೀಡಿದ್ದಾರೆ. ಪೊಲೀಸರ ಎದುರೇ ಜಗಳವಾಗಿದೆ ಎನ್ನಲಾಗಿದೆ. ಇದಾದ ನಂತರ ಸ್ಥಳಕ್ಕೆ ಯಾದಗಿರಿ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಭೇಟಿ ನೀಡಿದ್ದಾರೆ.

ಗಲಾಟೆ ಹಿನ್ನಲೆ ಶಾಂತಿ ಸಭೆ

ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಸದಾ ಸಿದ್ಧವಾಗಿದ್ದು, ಸಮಾಜದಲ್ಲಿ ಶಾಂತಿಗೆ ಭಂಗ ತರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಹೇಳಿದ್ದಾರೆ.

ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಗುರುವಾರ ನಡೆದ ಜಿಟಿಟಿಸಿ ಕಾಲೇಜು ವಿದ್ಯಾರ್ಥಿಗಳ ನಡುವಿನ ಗಲಾಟೆ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ಸೈದಾಪುರ, ಕಡೇಚೂರು ಮತ್ತು ಜೆಟಿಟಿಸಿ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ ಶಾಂತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಈ ಭಾಗದಲ್ಲಿ ಶಾಂತಿ ಕಾಪಾಡಲು ಇಲಾಖೆಯೊಂದಿಗೆ ನಾಗರಿಕರು ಕೈ ಜೋಡಿಸಬೇಕು. ಯಾವುದೇ ಸಮಸ್ಯೆಗಳಿದ್ದರೂ ಮುಕ್ತವಾಗಿ ನಮ್ಮನ್ನು ಸಂಪರ್ಕಿಸಬಹುದು. ಆದರೆ, ಕಾನೂನನ್ನು ಕೈಗೆತ್ತಿಕೊಳ್ಳುವುದು, ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಪ್ರಚೋದಿತ ಸಂದೇಶಗಳನ್ನು ಹರಿಬಿಡುವ ಮೂಲಕ ಕೋಮು ಸೌಹಾರ್ದತೆ ಕೆಡಿಸಿದರೆ ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

‘ಜಿಟಿಟಿಸಿ ಕಾಲೇಜಿನಲ್ಲಿ ಮುಂದೆ ಈ ರೀತಿ ಘಟನೆಗಳು ಆಗಬಾರದು ಎಂದರೆ ಆಡಳಿತ ಮಂಡಳಿ ಕಡ್ಡಾಯವಾಗಿ ಸಮವಸ್ತ್ರವನ್ನು ಪಾಲಿಸಬೇಕು. ಎಂದು ಜಿಲ್ಲಾ ವಿಶ್ವಹಿಂದೂ ಪರಿಷತ್‌ ಪ್ರಮುಖ ನರಸಿಂಹ ಮಂಥನಗೌಡ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT