ಸೋಮವಾರ, ಜನವರಿ 18, 2021
27 °C

ಗುರುಮಠಕಲ್: ಪುರಸಭೆಯ ಸಾಮಾನ್ಯ ಸಭೆ–ಸ್ವಚ್ಛತೆ ಕಾಪಾಡಲು ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುರುಮಠಕಲ್: ಪಟ್ಟಣದ ಸ್ವಚ್ಛತೆ ಹಾಗೂ ಮೂಲ ಸೌಲಭ್ಯ ಒದಗಿಸಲು ಆದ್ಯತೆ ನೀಡಬೇಕು. ಜನರ ಅವಶ್ಯಕತೆ ಹಾಗೂ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ. ಸ್ವಚ್ಛತೆಯ ವಿಷಯದಲ್ಲಿ ಸಾಧ್ಯವಾದಷ್ಟು ಹೆಚ್ಚಿನ ಗಮನ ಹರಿಸಿದರೆ ಉತ್ತಮ ಎಂದು ಪುರಸಭೆ ಅಧ್ಯಕ್ಷ ಪಾಪಣ್ಣ ಮನ್ನೆ ಸೂಚಿಸಿದರು.

ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ಬುಧವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ಸದಸ್ಯರಾದ ನವಾಜರೆಡ್ಡಿ ಹಾಗೂ ಸಿರಾಜ್ ಅವರು ‘ಪಟ್ಟಣದ ವಿವಿಧ ವಾರ್ಡುಗಳ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯದಲ್ಲಿ ಸಮಸ್ಯೆಯಾಗಿದೆ. ಪೌರ ಕಾರ್ಮಿಕರನ್ನು ಕಳುಹಿಸುವ ಜೊತೆಗೆ ಪುರಸಭೆಯ ಅಧಿಕಾರಿಯು ಅವರೊಡನೆ ಹೋಗಬೇಕು. ಸ್ವಚ್ಛತೆಯ ವಿಷಯದಲ್ಲಿ ಜನ ಪ್ರತಿದಿನವೂ ಸದಸ್ಯರಿಗೆ ಕೇಳುತ್ತಿದ್ದು ಅಧಿಕಾರಿಗಳು ಹೆಚ್ಚಿನ ಗಮನ ನೀಡಬೇಕು’ ಎಂಬ ಪ್ರಸ್ತಾವನೆಗೆ ಅಧ್ಯಕ್ಷರು ಪ್ರತಿಕ್ರಿಯಿಸಿದರು.

ತರಕಾರಿ ಮಾರುಕಟ್ಟೆ, ಟೋಲ್ ಟ್ಯಾಕ್ಸ್ ಹಾಗೂ ಕಸಾಯಿ ಖಾನೆಗಳ ಹರಾಜಿನ ಕುರಿತು ಪುರಸಭೆ ಮುಖ್ಯಾಧಿಕಾರಿ ಶರಣಪ್ಪ ಮಡಿವಾಳ ಸಭೆಯ ಗಮನ ಸೆಳೆದಾಗ, ಪ್ರಸ್ತುತ ಹರಾಜಿಗೆ ನಿಗದಿ ಪಡಿಸಲಾದ ಕನಿಷ್ಠ ಮೊತ್ತ ₹1.75 ಲಕ್ಷ ಹೆಚ್ಚಿನದಾಗಿದೆ. ಲಾಕ್ ಡೌನ್ ಅವಧಿಯಲ್ಲಿ ಕೆಲಸದಿಂದ ಹಿಂದಿರುಗಿದವರು ತಾತ್ಕಾಲಿಕವಾಗಿ ತರಕಾರಿ ಮಾರಾಟ ಮಾಡುತ್ತಿದ್ದಾರೆ. ನಂತರ ಅವರು ಮತ್ತೆ ತಮ್ಮ ಕೆಲಸಗಳಿಗೆ ಹಿಂದಿರುಗುತ್ತಾರೆ. ಆದ್ದರಿಂದ, ನಿರಂತರವಾಗಿ ತರಕಾರಿ ಮಾರಾಟ ಮಾಡುವವರನ್ನು ಪಟ್ಟಿ ಮಾಡಿಕೊಂಡು ಅದಕ್ಕೆ ತಕ್ಕಂತೆ ಹರಾಜಿನ ಮೊತ್ತವನ್ನು ನಿಗದಿ ಮಾಡಬೇಕು ಎಂದು ಬಾಲಪ್ಪ ದಾಸರಿ ಅವರು ಮನವಿ ಮಾಡಿದ್ದಕ್ಕೆ, ಮೊದಲಿನಿಂದ ತರಕಾರಿ ಮಾರಾಟ ಮಾಡುವವರ ಸಂಖ್ಯೆ ಹಾಗೂ ಈ ಹಿಂದೆ ಬಂದ ವರಮಾನವನ್ನು ಗಮನಿಸಿ ಹಣವನ್ನು ನಿಗದಿ ಮಾಡಲಾಗಿದೆ. ಆದರೂ ಮತ್ತೊಮ್ಮೆ ಸಮೀಕ್ಷೆ ಮಾಡುವುದಾಗಿ ತಿಳಿಸಿದರು.

ಪಟ್ಟಣದ ಸಾರ್ವಜನಿಕ ಹಾಗೂ ಸಮುದಾಯ ಶೌಚಾಲಯಗಳ ನಿರ್ವಹಣೆಗೆ ಸಂಬಂಧಿಸಿದಂತೆ ಚರ್ಚಿಸಲಾಯಿತು. ಶೌಚಾಲಯಗಳ ಸ್ವಚ್ಛತೆಗಾಗಿ ‘ಜೆಟ್ಟಿಂಗ್ ಅಂಡ್ ಸಕಿಂಗ್ ಮೆಷಿನ್’ ಖರೀದಿಗೆ ಸಿದ್ಧತೆ ನಡೆದಿರುವ ಕುರಿತು ಅಧಿಕಾರಿಗಳು ಮಾಹಿತಿ ನೀಡಿದರು.

ಪಟ್ಟಣದಲ್ಲಿ ಒಳ ಚರಂಡಿ ಕಾಮಗಾರಿ ಮಾಡುತ್ತಿರುವ ಸಂಸ್ಥೆಯಿಂದ ರಸ್ತೆಗಳು ಹದಗೆಟ್ಟಿವೆ. ಮತ್ತು ಅಲ್ಲಲ್ಲಿ ಒಳ ಚರಂಡಿಗಳಿಂದ ನೀರು ಹೊರ ಹರಿಯುತ್ತಿವೆ. ಸಂಬಂಧಿಸಿದವರಿಗೆ ಕರೆ ಮಾಡಿದರೆ ಸ್ವೀಕರಿಸುತ್ತಿಲ್ಲ. ಸಂಸ್ಥೆಯು ಒಳಚರಂಡಿ ಕಾಮಗಾರಿಯನ್ನು ಪೂರ್ಣಗೊಳಿಸಿ ಪುರಸಭೆಗೆ ವಹಿಸಿಕೊಡುವಂತೆ ಅವರಿಗೆ ನೋಟಿಸ್ ನೀಡಲು ಸದಸ್ಯರು ಆಗ್ರಹಿಸಿದರು.

ಉಪಾಧ್ಯಕ್ಷೆ ಭೀಮಮ್ಮ, ನರ್ಮದಾ, ಪವಿತ್ರಮ್ಮ, ಪ್ರೀತಿಬಾಯಿ ಜೀತ್ರಿ, ಜಯಶ್ರೀ, ನವಿತಾ, ಲಕ್ಷ್ಮೀಬಾಯಿ ಚೌದರಿ, ಪುರಸಭೆಯ ವ್ಯವಸ್ಥಾಪಕ ಮಲ್ಲಿಕಾರ್ಜುನ, ನೈರ್ಮಲ್ಯಾಧಿಕಾರಿಗಳಾದ ರಾಮುಲು, ಬಸವರಾಜ, ಪ್ರಶಾಮತ ಸೂರ್ಯವಂಶಿ, ಲೆಕ್ಕಾಧಿಕಾರಿ ಅನೀಲ್ ಯರಗಲ್, ವೀರಭದ್ರಪ್ಪ ಸೆರಿದಂತೆ ಪುರಸಭೆಯ ಸಿಬ್ಬಂದಿ
ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು