ಮಂಗಳವಾರ, ಜೂನ್ 22, 2021
27 °C
ವಾಡಿಕೆಗಿಂತ ಹೆಚ್ಚಿನ ಮಳೆ; ನೀರಿನ ಸಮಸ್ಯೆ ಇಳಿಮುಖ

ಗುರುಮಠಕಲ್‌: ಪಟ್ಟಣದಲ್ಲಿ ಸದ್ಯಕ್ಕಿಲ್ಲ ನೀರಿನ ಸಮಸ್ಯೆ

ಎಂ.ಪಿ.ಚಪೆಟ್ಲಾ Updated:

ಅಕ್ಷರ ಗಾತ್ರ : | |

Prajavani

ಗುರುಮಠಕಲ್: ಪಟ್ಟಣದ ಜನತೆಯ ನೀರಿನ ಅವಶ್ಯಕತೆಯನ್ನು ಪೂರೈಸಲು ಪುರಸಭೆ ಸಿಬ್ಬಂದಿ ತಯಾರಿ ಮಾಡಿಕೊಂಡಿದ್ದು, ಸದ್ಯಕ್ಕೆ ದಿನಕ್ಕೆ 8 ವಾರ್ಡುಗಳಂತೆ 23 ವಾರ್ಡುಗಳಿಗೆ ಮೂರು ದಿನಗಳಲ್ಲಿ ಬೇಡಿಕೆಯಷ್ಟು ನೀರು ಪುರೈಕೆ ಮಾಡಲಾಗುತ್ತಿದ್ದೆ.

ವಾಡಿಕೆಗಿಂತಲೂ ಹೆಚ್ಚಿನ ಮಳೆ ಸುರಿದಿದ್ದರಿಂದ ಅಂತರ್ಜಲ ಮಟ್ಟ ಹೆಚ್ಚಿದೆ. ಅದರಿಂದಾಗಿ ನೀರಿನ ಸಮಸ್ಯೆಯಲ್ಲಿ ಇಳಿಮುಖವಾಗಿದೆ. ಈಗ ನೀರಿನ ಸಮಸ್ಯೆಯಿಲ್ಲವಾದರೂ ಮುಂದಿನ ದಿನಗಳಲ್ಲಿಯೂ ನೀರಿನ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಿದರೆ ಒಳ್ಳೆಯದು ಎಂದು ಸಾರ್ವಜನಿಕರು ಹೇಳುತ್ತಾರೆ.

ಪಟ್ಟಣದ 23 ವಾರ್ಡ್‌ಗಳ 25 ಸಾವಿರ ಜನಸಂಖ್ಯೆಗೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗದಂತೆ, ಪಟ್ಟಣದ ನೀರಿನ ಬೇಡಿಕೆಯನ್ನು ಪೂರೈಸಲು ಹಾಗೂ ಬೇಸಿಗೆಯಲ್ಲೂ ನೀರು ಸರಬರಾಜಿನಲ್ಲಿ ಸಮಸ್ಯೆಯಾಗದಂತೆ ಪುರಸಭೆ ಸಿಬ್ಬಂದಿ 3 ದಿನಗಳಿಗೊಮ್ಮೆ ನೀರು ಸರಬರಾಜು ಮಾಡುತ್ತಿದ್ದಾರೆ. ‘ಈಗಾಗಲೇ ಪುರಸಭೆ ವ್ಯಾಪ್ತಿಯ ಎಲ್ಲಾ ಕೊಳವೆ ಬಾವಿಗಳ ನೀರೆತ್ತುವ ಮೋಟಾರುಗಳ ಸ್ಥಿತಿಯನ್ನು ಕುರಿತು ತಪಾಸಣೆ ಮಾಡಲಾಗಿದ್ದು, ಸಮಸ್ಯೆ ಎದುರಾಗದಂತೆ ನಾವು ಸಂಪೂರ್ಣ ತಯಾರಿಯೊಡನೆ ಸನ್ನದ್ಧವಾಗಿದ್ದೇವೆ’ ಎಂದು ಪುರಸಭೆ ಸಿಬ್ಬಂದಿ ಹೇಳಿದರು.

ಪಟ್ಟಣದ ವಿವಿಧ ಬಡಾವಣೆಗಳಲ್ಲಿರುವ ಒಟ್ಟು 88 ಕೊಳವೆಬಾವಿಗಳ ಪಕ್ಕದಲ್ಲಿಯೇ ನೀರು ಸಂಗ್ರಹದ ಟ್ಯಾಂಕ್ ನಿರ್ಮಿಸಿ ವಿದ್ಯುತ್ ಸರಬರಾಜು ಇರುವಾಗಲೆಲ್ಲಾ ಟ್ಯಾಂಕ್ ತುಂಬಿಸಿ ನೀರು ಪಡೆಯಬಹುದಾದ 'ಮಿನಿ ವಾಟರ್ ಸಪ್ಲೈ' ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ. ಯಾದಗಿರಿಯ ಭೀಮಾನದಿಯ ಜಾಕ್ ವೇಲ್‌ನಿಂದ ದಿನಕ್ಕೆ 3.5 ಮಿಲಿಯನ್ ಲೀಟರ್ ನೀರು ಪೂರೈಕೆಯಾಗುತ್ತಿದೆ. ಭೀಮಾ ನದಿಯ ನೀರು ಸರಬರಾಜಿನಲ್ಲಿ ವ್ಯತ್ಯವಾದರೆ ಪುರಸಭೆ ವ್ಯಾಪ್ತಿಯ ನಲ್ಲಚೆರು ಕೆರೆಯಲ್ಲಿನ 10 ಕೊಳವೆಬಾವಿಗಳಿಂದ ಅವಶ್ಯಕ ನೀರನ್ನು ಸಂಗ್ರಹಿಸಿ ವಿತರಿಸಲು ಬೇಕಾದ ತಯಾರಿಯನ್ನು ಮಾಡಿಕೊಂಡಿದ್ದಾರೆ.

ಈವರೆಗೂ ನೀರಿನ ಸರಬರಾಜಿನಲ್ಲಿ ದೊಡ್ಡ ಸಮಸ್ಯೆಯಾಗಿಲ್ಲ. ಎರಡು ದಿನಕ್ಕೆ ಒಮ್ಮೆ ನಳದಲ್ಲಿ ನೀರು ಬರುತ್ತಿದೆ. ಜೊತೆಗೆ ಗುಮ್ಮಿಯಿಂದಲೂ (ಚಿಕ್ಕ ನೀರಿನ ಟ್ಯಾಂಕ್) ನೀರು ಪಡೆಯಬಹುದಾಗಿದೆ. ಆದ್ದರಿಂದ ಯಾವ ಸಮಸ್ಯೆಯೂ ಆಗಿಲ್ಲ. ಮುಂದಿನ ದಿನಗಳಲ್ಲಿಯೂ ಇದೇ ರೀತಿ ನಿರ್ವಹಿಸಿದರೆ ಬೇಸಿಗೆಯ ಸಮಯದಲ್ಲಿ ಸಮಸ್ಯೆಯಾಗದು. ನಿರ್ಲಕ್ಷ ವಹಿಸದೆ ಸಂಬಂಧಿತರು ಬೇಸಿಗೆಗಾಗಿ ಮುಂಜಾಗ್ರತೆ ವಹಿಸಿಕೊಳ್ಳಲಿ ಎನ್ನುವುದು ನಾಣಾಪುರ ಬಡಾವಣೆ ನಿವಾಸಿಗಳ ಮಾತು.

ಪಟ್ಟಣದ ವ್ಯಾಪ್ತಿಯಲ್ಲಿ ಬೇಸಿಗೆಯ ಸಮಯದಲ್ಲಿ ನೀರು ಪೂರೈಕೆಯಲ್ಲಿ ಸಮಸ್ಯೆಯಾಗದಂತೆ ಪುರಸಭೆಯಿಂದ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಮಾಡಿಕೊಂಡಿದ್ದು, ಸಧ್ಯ ನೀರಿನ ಸಮಸ್ಯೆಯಿಲ್ಲ. ಮುಂದಿನ ದಿನಗಳಲ್ಲಿಯೂ ಸೂಕ್ತ ನಿರ್ವಹಣೆ ಮಾಡಿ ಸಮಸ್ಯೆಯಾಗದಂತೆ ನೋಡಿಕೊಳ್ಳಲಿ ಎನ್ನುವುದು ಸಾರ್ವಜನಿಕರ ಆಶಯ.

***

ಪ್ರಸ್ತುತ ನೀರು ಸರಬರಾಜಿನಲ್ಲಿ ಸಮಸ್ಯೆಯಾಗಿಲ್ಲ. ಮುಂದಿನ ದಿನಗಳಲ್ಲಿಯೂ ಸಮಸ್ಯೆಯಾಗದಂತೆ ಎಚ್ಚರವಹಿಸಿದರೆ ಉತ್ತಮ.
- ಅಂಜನೇಯುಲು, ಬೀಡ್ಕಿಕಟ್ಟ ನಿವಾಸಿ

***

ಭೀಮ ನದಿ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾದರೂ ಸಹ ಪಟ್ಟಣದ ನಲ್ಲಚೆರು ಕೆರೆಯ ಬೋರ್‌ವೇಲ್‌ಗಳಿಂದ ನೀರಿನ ಬೇಡಿಕೆಯನ್ನು ಪೂರೈಸುವ ತಯಾರಿ ಮಾಡಿಕೊಳ್ಳಲಾಗಿದೆ.
-ಶರಣಪ್ಪ ಮಡಿವಾಳ, ಪುರಸಭೆ ಮುಖ್ಯಾಧಿಕಾರಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು